ಮಂಡ್ಯ: ಸರ್ಕಾರಿ ಬಾಲಕಿಯರ ವಸತಿ ನಿಲಯಗಳಲ್ಲಿ ಮೂಲಸೌಕರ್ಯದ ಕೊರತೆ, ಅಸ್ವಚ್ಛ ಪರಿಸ್ಥಿತಿ ಮತ್ತು ನಿರ್ಲಕ್ಷ್ಯವು ಗಂಭೀರ ಮಟ್ಟಕ್ಕೆ ತಲುಪಿರುವುದು ಉಪ ಲೋಕಾಯುಕ್ತರ ದಿಢೀರ್ ಪರಿಶೀಲನೆಯಲ್ಲಿ ಬಹಿರಂಗವಾಗಿದೆ. ಮಂಡ್ಯ
ಹರಿದ ಹಾಸಿಗೆಗಳು, ಬಾಗಿಲಿಲ್ಲದ ಶೌಚಾಲಯಗಳು, ಕಳಪೆ ಗುಣಮಟ್ಟದ ಆಹಾರ ಹಾಗೂ ಕಳೆದ ಎರಡು ತಿಂಗಳಿಂದ ಸ್ಯಾನಿಟರಿ ಪ್ಯಾಡ್ಗಳ ವಿತರಣೆ ಇಲ್ಲದಿರುವುದು ವಿದ್ಯಾರ್ಥಿನಿಯರ ದಿನನಿತ್ಯದ ಕಷ್ಟವನ್ನು ಹೆಚ್ಚಿಸಿದೆ. ಉತ್ತಮ ಶಿಕ್ಷಣದ ಆಶಯದಿಂದ ವಸತಿ ನಿಲಯಗಳಲ್ಲಿ ನೆಲೆಸಿರುವ ವಿದ್ಯಾರ್ಥಿನಿಯರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಮಂಡ್ಯದ ನಾಲ್ಕು ಸರ್ಕಾರಿ ಬಾಲಕಿಯರ ಹಾಸ್ಟೆಲ್ಗಳಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ನಡೆಸಿದ ಅಚಾನಕ್ ಭೇಟಿ ವೇಳೆ ಹಲವು ಅಕ್ರಮಗಳು ಮತ್ತು ನಿರ್ಲಕ್ಷ್ಯದ ಚಿತ್ರಣ ಬೆಳಕಿಗೆ ಬಂದಿದೆ. ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದ ಬಳಿಕ ಸ್ವಯಂಪ್ರೇರಿತವಾಗಿ (suo motu) ಅವರು ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ: 16 ಗಂಟೆಗಳ ಬಲವಂತದ ಕೆಲಸ, ಹಿಂಸೆ: ಗುರುಗ್ರಾಮ ಫ್ಲ್ಯಾಟ್ನಿಂದ ಮಹಿಳೆ ರಕ್ಷಣೆ
ಪರಿಶೀಲನೆಯ ವೇಳೆ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಗತ್ಯ ಪುಸ್ತಕಗಳ ಕೊರತೆ ಕಂಡುಬಂದಿದೆ. ಜೊತೆಗೆ ನಿಗದಿತ ಪೌಷ್ಟಿಕ ಆಹಾರ ಮಾನದಂಡಗಳ ಅನುಸರಣೆ ಇಲ್ಲದೆ ಆಹಾರ ಪೂರೈಕೆ ನಡೆಯುತ್ತಿರುವುದಾಗಿ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ಅತಿಯಾದ ದುರ್ವ್ಯವಸ್ಥೆ ಶೌಚಾಲಯಗಳಲ್ಲಿ ಕಂಡುಬಂದಿದ್ದು, ಹಲವು ಶೌಚಾಲಯಗಳ ಬಾಗಿಲುಗಳು ಹಾಳಾಗಿದ್ದು, ಕಿಟಕಿಗಳಿಗೂ ಸರಿಯಾದ ಜಾಲರಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಕೆಲವು ಕಟ್ಟಡಗಳು ವಾಸಕ್ಕೆ ಯೋಗ್ಯವೇ ಅಲ್ಲ ಎಂಬ ನಿರ್ಣಯಕ್ಕೂ ಉಪ ಲೋಕಾಯುಕ್ತರು ಬಂದಿದ್ದಾರೆ.
ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರನ್ನು ಸೀಮಿತ ಸೌಲಭ್ಯಗಳಿರುವ ಹಾಸ್ಟೆಲ್ಗಳಲ್ಲಿ ಇರಿಸಲಾಗಿದ್ದು, ಉದಾಹರಣೆಗೆ 100 ವಿದ್ಯಾರ್ಥಿನಿಯರ ಸಾಮರ್ಥ್ಯದ ಹಾಸ್ಟೆಲ್ನಲ್ಲಿ 144 ಮಂದಿ ವಾಸವಿದ್ದಾರೆ. ಆದರೆ ಸೌರ ಬಿಸಿನೀರು ಘಟಕ ಮತ್ತು ಮೂಲ ಸೌಲಭ್ಯಗಳು ಮಾತ್ರ ಅತ್ಯಂತ ಕಡಿಮೆ ಮಟ್ಟದಲ್ಲಿವೆ.
ಮಹರ್ಷಿ ವಾಲ್ಮೀಕಿ ಎಸ್ಟಿ ವಸತಿ ನಿಲಯದಲ್ಲಿ ಗಾಳಿ-ಬೆಳಕಿನ ಕೊರತೆ ಹಾಗೂ ಅಸುರಕ್ಷಿತ ಪರಿಸ್ಥಿತಿಯು ಸ್ಪಷ್ಟವಾಗಿ ಕಂಡುಬಂದಿದೆ. ಕೆಲವು ವಿದ್ಯಾರ್ಥಿನಿಯರು ಪ್ರತಿಆರು ತಿಂಗಳಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂದು ತಿಳಿಸಿದ್ದಾರೆ. ಹಾಲಿನಲ್ಲಿ ನೀರು ಮಿಶ್ರಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಇದರ ಜೊತೆಗೆ ‘ಕವಿತಾ’ ಎಂಬ ವ್ಯಕ್ತಿಯೊಬ್ಬರು ಹಾಜರಾತಿ ದಾಖಲೆಗಳನ್ನು ತಿದ್ದುಪಡಿ ಮಾಡುತ್ತಾರೆ ಎಂಬ ಆರೋಪವೂ ವಿದ್ಯಾರ್ಥಿನಿಯರಿಂದ ವ್ಯಕ್ತವಾಗಿದೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದ ಉಪ ಲೋಕಾಯುಕ್ತರು ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ತಕ್ಷಣ ಸಮಸ್ಯೆಗಳನ್ನು ಸರಿಪಡಿಸಲು ಸೂಚನೆ ನೀಡಿದ್ದಾರೆ. ಜೊತೆಗೆ ವಾಸಕ್ಕೆ ಅಯೋಗ್ಯ ಕಟ್ಟಡಗಳನ್ನು ಬದಲಿಸಿ ಉತ್ತಮ ಸೌಲಭ್ಯ ಇರುವ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಆದೇಶಿಸಿದ್ದಾರೆ.
ವಿದ್ಯಾರ್ಥಿನಿಯರಿಗೆ ಉತ್ತಮ ಆಹಾರ, ನಿಯಮಿತ ವೈದ್ಯಕೀಯ ತಪಾಸಣೆ ಹಾಗೂ ಮೂಲಸೌಕರ್ಯ ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇದನ್ನೂ ನೋಡಿ: ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕೇ ಹೊರತು ಕೆಲಸದ ಉಪಕರಣಗಳಲ್ಲ Janashakthi Media
