ವಿಜಯನಗರ | ತುಂಗಭದ್ರಾ ಜಲಾಶಯಕ್ಕೆ 2 ಲಕ್ಷ ಕ್ಯೂಸೆಕ್‌ನಷ್ಟು ಒಳಹರಿವು 75 ಟಿಎಂಸಿ ಅಡಿ ತಡೆ

ವಿಜಯನಗರ:  ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೆ ಭರ್ಜರಿಯಾಗಿಯೇ ನೀರು ಹರಿದುಬರುತ್ತಿದ್ದು, ಆರು ಕ್ರೆಸ್ಟ್‌ ಗೇಟ್‌ಗಳು ನಿಶ್ಚಿಲವಾಗಿರುವುದರಿಂದ ಅಣೆಕಟ್ಟೆಯಲ್ಲಿ ನೀರಿನ ನಿರ್ವಹಣೆಗೆ ತುಂಗಭದ್ರಾ ಮಂಡಳಿ ಈ ಬಾರಿ ಸ್ವಲ್ಪ ಹೆಚ್ಚು ಸಾಹಸ ಮಾಡುತ್ತಿದೆ.

ತಜ್ಞರ ಸಲಹೆಯಂತೆ ಜಲಾಶಯದಲ್ಲಿ 80 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹಿಸಿ ಇಟ್ಟುಕೊಳ್ಳುವ ಅನಿವಾರ್ಯತೆ ಇದೆ. ಇದೀಗ ಅಧಿಕ ಒಳಹರಿವು ಇರುವ ಕಾರಣ ನೀರಿನ ಸಂಗ್ರಹವನ್ನು 75 ಟಿಎಂಸಿ ಅಡಿಯಷ್ಟು ತಗ್ಗಿಸಲಾಗಿದೆ. ಒಂದು ವೇಳೆ ಏಕಾಏಕಿ ಅಧಿಕ ಪ್ರಮಾಣದಲ್ಲಿ ನೀರು ಹರಿದುಬಂದರೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆಗೆ ‘INDIA’ ಕೂಟದ ಅಭ್ಯರ್ಥಿಯಾಗಿ ಸುಪ್ರೀಂಕೋರ್ಟ್ ನಿವೃತ್ತ ಜಡ್ಜ್ ಸುದರ್ಶನ್ ರೆಡ್ಡಿ ಆಯ್ಕೆ.!

ಮಲೆನಾಡು ಭಾಗದಲ್ಲಿ ಅಧಿಕ ಮಳೆ ಆಗುತ್ತಿರುವುದರಿಂದ ಒಳಹರಿವಿನಷ್ಟೇ ಹೊರಹರಿವನ್ನೂ ಕಾಯ್ದುಕೊಳ್ಳುವ ಪ್ರಯತ್ನದಲ್ಲಿ ಮಂಡಳಿಯ ಅಧಿಕಾರಿಗಳು ನಿರತರಾಗಿದ್ದಾರೆ. 2 ಲಕ್ಷ ಕ್ಯೂಸೆಕ್‌ನಷ್ಟು ಒಳಹರಿವು ಇದ್ದರೂ 26 ಗೇಟ್‌ಗಳಿಂದಲೇ ಅಷ್ಟೂ ನೀರನ್ನು ಹೊರಗೆ ಕಳುಹಿಸಬಹುದು ಎಂದು ಮಂಡಳಿಯ ಕಾರ್ಯದರ್ಶಿ ಒ.ಆರ್‌.ಕೆ.ರೆಡ್ಡಿ ತಿಳಿಸಿದ್ದಾರೆ. ಅದರಂತೆ ಸದ್ಯ 1.13 ಲಕ್ಷ ಕ್ಯೂಸೆಕ್‌ನಷ್ಟು ಒಳಹರಿವಿದ್ದು, 1.07 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ, ಕಾಲುವೆಗಳಿಗೆ ಹರಿಯುವ ನೀರು ಸೇರಿದಂತೆ ಒಟ್ಟು 1.22 ಲಕ್ಷ ಕ್ಯೂಸೆಕ್‌ ನೀರು ಅಣೆಕಟ್ಟೆಯಿಂದ ಹೊರಗೆ ಹರಿಯುತ್ತಿದೆ.

ವಿಜಯನಗರ | ತುಂಗಭದ್ರಾ ಜಲಾಶಯಕ್ಕೆ 2 ಲಕ್ಷ ಕ್ಯೂಸೆಕ್‌ನಷ್ಟು ಒಳಹರಿವು 75 ಟಿಎಂಸಿ ಅಡಿ ತಡೆ

ಹಂಪಿಯಲ್ಲಿ ಪುರಂದರ ಮಂಟಪ ತುಂಗಭದ್ರಾ ನದಿಯಲ್ಲೇ ಇದ್ದು, 25 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದರೂ ಅದು ಬಹುತೇಕ ಮುಳುಗಿಬಿಡುತ್ತದೆ. ಇತರ ಸ್ಮಾರಕಗಳಿಗೆ ಅಂತಹ ಮುಳುಗಡೆ ಭೀತಿ ಇಲ್ಲ. 1.25 ಲಕ್ಷ ಕ್ಯೂಸೆಕ್‌ನಷ್ಟು ನೀರು ಹರಿದಾಗ ಹಂಪಿ ವಿರೂಪಾಕ್ಷ ದೇವಸ್ಥಾನ ಸಮೀಪದ ಸ್ನಾನಘಟ್ಟದಲ್ಲಿ ಅನುಷ್ಠಾನ ಮಂಟಪಗಳು ಬಹುತೇಕ ಮುಳುಗಡೆಯಾಗುತ್ತವೆ. ಸದ್ಯ ಅಂತಹ ಸ್ಥಿತಿ ಇದೆ. ಚಕ್ರತೀರ್ಥದಲ್ಲಿರುವ ಕೋದಂಡರಾಮ ದೇವಸ್ಥಾನಕ್ಕೆ ಮೆಟ್ಟಿಲ ತನಕ ನೀರು ಬಂದರೂ, 1.80 ಲಕ್ಷ ಕ್ಯೂಸೆಕ್‌ಗಿಂತ ಅಧಿಕ ನೀರು ಹರಿದರೆ ಮಾತ್ರ ಕೋದಂಡರಾಮ ದೇವಸ್ಥಾನದ ಒಳಗೆ ನೀರು ನುಗ್ಗಿ ತುಂಗಭದ್ರೆ ಶ್ರೀರಾಮನ ವಿಗ್ರಹದ ಪಾದಸ್ಪರ್ಶ ಮಾಡುತ್ತಾಳೆ ಎಂದು ಸ್ಥಳೀಯ ಪ್ರವಾಸಿ ಮಾರ್ಗದರ್ಶಿಗಳು ಹಾಗೂ ಅರ್ಚಕರು ಹೇಳಿದ್ದಾರೆ.

ಇದನ್ನೂ ನೋಡಿ: ಚುನಾವಣಾ ಆಯೋಗ ಮತ್ತು ವಿಶ್ವಾಸಾರ್ಹತೆ ದೂರ ಬಲು ದೂರ…‌ Janashakthi Media

Donate Janashakthi Media

Leave a Reply

Your email address will not be published. Required fields are marked *