ಧಾರವಾಡ : ಚುನಾವಣೆ ವ್ಯವಸ್ಥೆಯು ದೋಷಪೂರಿತವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಲವರ್ಧನೆಯಾಗಲು ಪ್ರಮಾಣಾತ್ಮಕ ಪ್ರಾತಿನಿಧ್ಯ ಚುನಾವಣಾ ವ್ಯವಸ್ಥೆ ಜಾರಿಗೆ ತರುವುದು ಅಗತ್ಯವಾಗಿದೆ ಎಂದು ಚಿಂತಕ ಡಾ. ಕೆ ಪ್ರಕಾಶ್ ಹೇಳಿದರು. ಧಾರವಾಡ
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ಅಖಿಲ ಭಾರತ ವಕೀಲರ ಒಕ್ಕೂಟ (ಎಐಎಲ್‌ಯು), ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾಗೂ ಸಮುದಾಯ, ಧಾರವಾಡ ಸಂಘಟನೆಗಳು ಜಂಟಿಯಾಗಿ ಸ್ವಾತಂತ್ರ‍್ಯ ಹೋರಾಟಗಾರ ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ “ಪ್ರಜಾಪ್ರಭುತ್ವ ಬಲವರ್ಧನೆಗಾಗಿ ಅಗತ್ಯವಿರುವ ಚುನಾವಣಾ ಸುಧಾರಣೆಗಳು ಒಂದು ಚರ್ಚೆ ಹಾಗೂ ಸಂವಾದ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಧಾರವಾಡ
ಇದನ್ನೂ ಓದಿ : ರಸ್ತೆಗಳಲ್ಲಿ ಗುಂಡಿ ಉಳಿದರೆ ಆಯುಕ್ತರು, ಎಂಜಿನಿಯರ್‌ಗಳ ಮೇಲೆ ಕ್ರಮ: ಸೆಎಂ ಸಿದ್ದರಾಮಯ್ಯ
ಈಗಿರುವ ಚುನಾವಣೆ ವ್ಯವಸ್ಥೆಯಲ್ಲಿ ಬಹು ಸಂಖ್ಯೆಯ ಜನರ ಮತಕ್ಕೆ ವಿರುದ್ಧವಾಗಿ ಕಡಿಮೆ ಮತ ಪಡೆದು ಅಧಿಕಾರ ದಕ್ಕಿಸಿಕೊಡುವಂತಹ ಚುನಾವಣೆ ವ್ಯವಸ್ಥೆ ಹೊಂದಿದೆ. ಬಹುಸಂಖ್ಯಾತ ಮತದಾರರ ಅಭಿಪ್ರಾಯಗಳಿಗೆ ಮಾನ್ಯತೆ ಸಿಗುತ್ತಿಲ್ಲ. ಚುನಾವಣಾ ಅಕ್ರಮಗಳು, ಭ್ರಷ್ಟಾಚಾರ, ಜಾತಿ, ವ್ಯಕ್ತಿ ಪ್ರಭಾವ ಹೋಗಲಾಡಿಸಲು ಚುನಾವಣಾ ವ್ಯವಸ್ಥೆಯ ಅಮೂಲಾಗ್ರವಾದ ಬದಲಾವಣೆಗಾಗಿ ಪ್ರಮಾಣಾತ್ಮಕ ಪ್ರಾತಿನಿಧ್ಯ ಪದ್ಧತಿಯನ್ನು ಚುನಾವಣಾ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು. ಧಾರವಾಡ
ಕೇಂದ್ರ ಚುನಾವಣಾ ಆಯೋಗ ಇದೀಗ ಎಸ್‌ಐಆರ್ ಬಿಹಾರದಲ್ಲಿ ಹೊಸ ಮತದಾರ ಪಟ್ಟಿ ತಯರಿಸುವಾಗ ಏನೇನು ಅವಘಡ ನಡೆಸುತ್ತಿರುವುದು ನಮ್ಮ ಕಣ್ಣು ಮುಂದಿದೆ. ಎಸ್‌ಐಆರ್ ವಿಷಯ ಇದೀಗ ಸುಪ್ರೀಂ ಕೋರ್ಟ್ ನಲ್ಲಿದೆ. ಚುನಾವಣೆ ಆಯೋಗವು ಪೌರತ್ವದ ಪರಿಶೀಲನೆ ಮೂಲಕ ಹೊಸ ಮತದಾರರ ಪಟ್ಟಿ ತಯಾರಿಸಲು ಮುಂದಾಗಿದ್ದು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸುವುದರ ಹಿಂದೆ ಬಿಜೆಪಿಯ ಹಿಡೆನ್ ಅಜೆಂಡಾ ಅಡಗಿದೆ. ಎಂದು ಆರೋಪಿಸಿದರು.
1950 ಪ್ರಜಾ ಪ್ರಾತಿನಿಧ್ಯ ಕಾಯಿದೆಯು ಒಂದು ಪ್ರದೇಶದಲ್ಲಿ ವಾಸವಿರುವ ಹಾಗೂ ಹದಿನೆಂಟು ವರ್ಷ ವಯಸ್ಸಾಗಿರುವ ಯಾವುದೇ ಜಾತಿ, ಲಿಂಗ, ಧರ್ಮ, ಪ್ರದೇಶ ತಾರತಮ್ಯವಾಗದೇ ಮತದಾರ ಪಟ್ಟಿಗೆ ಸೇರಿಸಲು ಅವಕಾಶ ಕಲ್ಪಿಸಿತ್ತು. ಆದರೆ ಇದೀಗ ಚುನಾವಣಾ ಆಯೋಗವು ಪೌರತ್ವ ಪರಿಶೀಲನೆಯೊಂದಿಗೆ ಹೊಸ ಮತದಾರರನ್ನು ಸೇರ್ಪಡೆ ಮಾಡುತ್ತಿರುವುದು ಬಿಜೆಪಿಯ ಒಂದು ದೇಶ ಒಂದು ಚುನಾವಣೆಯ ಘೋಷಣೆಯ ಮುಂದುವರೆದ ಭಾಗವಾಗಿದೆ. ದೇಶದ ಜನತೆ ಇದಕ್ಕೆ ಅವಕಾಶ ಕೊಡಬಾರದು ಎಂದು ತಿಳಿಸಿದರು.
ಭಾರತದ ಚುನಾವಣೆ ವ್ಯವಸ್ಥೆಯು ಜನರಿಂದ ದೂರವಾಗುತ್ತ, ಹಣವಂತರ, ಕಾರ್ಪೋರೇಟ್ ಬಂಡವಾಳಿಗರ ಸ್ನೇಹಿಯಾಗಿ ಚುನಾವಣೆ ಆಯೋಗ ವರ್ತಿಸುತ್ತಿರುವಂತೆ ಭಾಸವಾಗುತ್ತಿದೆ. ಎಸ್‌ಐಆರ್ ನಲ್ಲಿ ತಂದೆ ತಾಯಿಗಳ ಜನ್ಮ ದಾಖಲೆ ಪಡೆದುಕೊಳ್ಳಲು ಮುಂದಾಗಿರುವುದು ದೊಡ್ಡ ಜನಸಮುದಾಯವನ್ನು ಚುನಾವಣೆಯಿಂದ ಹೊರಗಿಡುವ ಹುನ್ನಾರ ಹೊಂದಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ಶಿವಾನಂದ ಶೆಟ್ಟರ, ಕಾರ್ಮಿಕ ಮುಖಂಡರಾದ ಎಂ.ಬಿ. ಕಟ್ಟಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಮಾತನಾಡಿದರು. ನಂತರ ನಡೆದ ಸಂವಾದದಲ್ಲಿ ಬಿ.ಎಸ್ ಸೊಪ್ಪಿನ, ಮಹೇಶ ಪತ್ತಾರ ಬಿ.ಎನ್ ಪೂಜಾರ, ಎಂ.ಎಸ್ ಹಡಪದ, ಬಸವರಾಜ ಪೂಜಾರ, ಗಣೇಶ ರಾಠೋಡ, ಡಾ. ರಾಘವೇಂದ್ರ ಪಾಟೀಲ ಮುಂತಾದವರು ಭಾಗವಹಿಸಿ ಪ್ರತಿಕ್ರಿಯೆ ನೀಡಿದರು.
ಅಖಿಲ ಭಾರತ ವಕೀಲರ ಒಕ್ಕೂಟ ರಾಜ್ಯ ಅಧ್ಯಕ್ಷರಾದ ಹರೀಂದ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆ ಮೇಲೆ ಸಮುದಾಯ ಜಿಲ್ಲಾಧ್ಯಕ್ಷರಾದ ಬಿ.ಐ ಈಳಗೇರ, ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷರಾದ ಬಸವರಾಜ್ ಎಸ್, ವಕೀಲೆ ಸವಿತಾ ಪಾಟೀಲ, ಮಂಜುಳಾ ಪವಾರ ಇದ್ದರು. ಬಿ.ವಿ ಕೋರಿಮಠ ನಿರ್ವಹಿಸಿ ವಂದಿಸಿದರು.
ಇದನ್ನೂ ನೋಡಿ : ವಚನಾನುಭವ 33 | ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ Janashakthi Media
