ಭ್ರಷ್ಟಾಚಾರ ತಡೆಯಲು ನೇಮಕಾತಿ; ವರ್ಗಾವಣೆಗೆ ಕೌನ್ಸಿಲಿಂಗ್‌ ಪದ್ಧತಿ ಅಳವಡಿಕೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮೊದಲಿಗಿಂತಲೂ ಇತ್ತೀಚೆಗೆ ಭ್ರಷ್ಟಾಚಾರ ಹೆಚ್ಚಾಗಿದೆ. ವರ್ಗಾವಣೆ ಮಾಡಿಸಲು ಏಜೆಂಟರು ಶುರುವಾಗಿದ್ದಾರೆ ಎಂದು ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಹುದ್ದೆಗಳಿಗೆ ನೇಮಕಾತಿ ಹೊಂದಿದವರಿಗೆ ನೇಮಕಾತಿ ಆದೇಶ ನೀಡುವ ಅಭಯ ಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ತಮ್ಮ ಸರ್ಕಾರ ನೇಮಕಾತಿ ಮತ್ತು ವರ್ಗಾವಣೆಗೆ ಕೌನ್ಸಿಲಿಂಗ್‌ ಪದ್ಧತಿಯನ್ನು ಅಳವಡಿಸಿದೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವೈದ್ಯರು ಸೇರಿದಂತೆ 5700 ಹುದ್ದೆಗಳಿಗೆ ಕೌನ್ಸಲಿಂಗ್‌ ಮೂಲಕ ವರ್ಗಾವಣೆ ಮಾಡಲಾಗಿದೆ. ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯಬಾರದು. ಯಾರು ಕೂಡ ಶಿಫಾರಸು ಮಾಡಿಸಲು ಬೇರೆಯವರ ಬಳಿ ಹೋಗಬೇಡಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಶಿಕ್ಷಣದ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ ನ 30% ಹಣವನ್ನು ಮೀಸಲಿಡಿ – ಬಸವರಾಜ ಎಸ್

ನಮಲ್ಲಿ ವರ್ಗಾವಣೆಗೆ ಏಜೆಂಟ್‌ಗಳು ಶುರುವಾಗಿದ್ದಾರೆ. ಯಾರಿಗೆ ಯಾರು ಹತ್ತಿರ ಇದ್ದಾರೆ ಎಂಬುವವರನ್ನೇ ಹುಡುಕುತ್ತಾರೆ. ಅವರ ಮೂಲಕ ವರ್ಗಾವಣೆ ಮಾಡಿಸಲು ಯತ್ನಿಸುತ್ತಾರೆ. ಇಂತಹ ಸಂದರ್ಭದಲ್ಲಿ ವರ್ಗಾವಣೆ ಮಾಡಿಸಿಕೊಳ್ಳಬೇಕಾದವರು ಏಜೆಂಟರಿಗೆ ಮತ್ತು ಪ್ರಭಾವಿಗಳಿಗೆ ಹಣ ನೀಡುವ ಪರಿಸ್ಥಿತಿ ಬರುತ್ತದೆ. ನಾನು 40 ವರ್ಷ ಶಾಸಕನಾಗಿ, ಸಚಿವನಾಗಿ ಮತ್ತು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಈ ಮೊದಲೆಲ್ಲಾ ಅಷ್ಟೊಂದು ಭ್ರಷ್ಟಾಚಾರ ಇರಲಿಲ್ಲ. ಈಗ ಹೆಚ್ಚಾಗುತ್ತಿದೆ ಎಂದು ಹೇಳಿದರು.

ವೈದ್ಯಕೀಯ ಸೇವೆಯಲ್ಲಿರುವವರು ಮಾನವೀಯತೆಯಿಂದ ನಡೆದುಕೊಳ್ಳಬೇಕು. ರೋಗಿಗಳನ್ನು ಕರುಣೆಯಿಂದ ನೋಡಬೇಕು. ಆಸ್ಪತ್ರೆಗಳಲ್ಲಿ ಒಳ್ಳೆಯ ಚಿಕಿತ್ಸೆ ಸಿಕ್ಕರೆ ಸರ್ಕಾರಕ್ಕೆ ಮತ್ತು ವೈದ್ಯರಿಗೆ ಒಳ್ಳೆಯ ಹೆಸರು ಬರಲಿದೆ. ಆರೋಗ್ಯ ಇಲಾಖೆಯ ನೇಮಕಾತಿಯನ್ನು ಒಂದು ವೃತ್ತಿಯನ್ನಾಗಿ ಮಾತ್ರ ನೋಡಬೇಡಿ. ಇದು ಮಹತ್ವದ ಜವಾಬ್ದಾರಿ. ಜನರ ಜೀವ ಉಳಿಸುವ ಕೆಲಸ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಿ ಎಂದರು.

ತಮ ಸರ್ಕಾರ ಅಧಿಕಾರಕ್ಕೆ ಬರುವಾಗ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಅದನ್ನು ಈಡೇರಿಸುತಿದ್ದೇವೆ. ಅಧಿಕಾರಿಗಳು ಸರ್ಕಾರ ಮತ್ತು ಸಮಾಜದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಾರೆ. ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್‌‍ ಇಲಾಖೆಗಳು ಅಗತ್ಯ ಸೇವೆಗಳಾಗಿವೆ. ಇದರಲ್ಲಿ ಹುದ್ದೆಗಳು ಖಾಲಿ ಇರಬಾರದು. ಅದಕ್ಕಾಗಿ ನೇಮಕಾತಿಯಲ್ಲಿ ಆದ್ಯತೆ ನೀಡಲಾಗಿದೆ ಎಂದರು.

ಒಳ ಮೀಸಲಾತಿಯಿಂದಾಗಿ ನೇಮಕಾತಿ ವಿಳಂಬವಾಗಿದೆ. ಎಲ್ಲಾ ಇಲಾಖೆಗಳಲ್ಲಿ ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳಿಗೆ ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ವಿವರಿಸಿದರು.ಆರೋಗ್ಯ ಇಲಾಖೆಗೆ ಸೇರಿದವರಿಗೆ ಮಾನವೀಯತೆ ಬಹಳ ಮುಖ್ಯ. ಜಾತಿ, ಧರ್ಮದ ತಾರತಮ್ಯ ಇರಬಾರದು. ಕಾಯಿಲೆ ಬಂದಾಗ ಯಾವುದೇ ಜಾತಿ ಇರುವುದಿಲ್ಲ. ಗುಣಮುಖರಾದಾಗ ಬಳಿಕ ಮತ್ತೆ ಜಾತಿ ಕೇಳುತ್ತಾರೆ. ಶಸ್ತ್ರ ಚಿಕಿತ್ಸೆಗೆ ಒಳಗಾಗುವಾಗ ಅಗತ್ಯ ಇರುವ ರಕ್ತ ಪಡೆಯಲು ಧರ್ಮ, ಜಾತಿ ನೋಡುವುದಿಲ್ಲ. ಮುಸ್ಲಿಂ, ಕ್ರೈಸ್ತ ಯಾರಾದರೂ ಸರಿ ಅವರಿಂದ ರಕ್ತ ಪಡೆದು ನಮ ದೇಹದ ಒಳಗೆ ಸೇರಿಸಿಕೊಳ್ಳುತ್ತೇವೆ. ಆ ಸಂದರ್ಭದಲ್ಲಿ ಧರ್ಮ ನೋಡುವುದಿಲ್ಲ. ಗುಣಮುಖರಾಗುತ್ತಿದ್ದಂತೆ ಮತ್ತೆ ಯಾವ ಜಾತಿ ಎಂದು ಕೇಳಲಾರಂಭಿಸುತ್ತಾರೆ ಎಂದರು.

ಜಾತಿ ಧರ್ಮ ವೈಯಕ್ತಿಕವಾದದ್ದು. ಅದನ್ನು ಮನೆಯಲ್ಲೇ ಬಿಟ್ಟು ಬನ್ನಿ ಎಂದು ಸಲಹೆ ನೀಡಿದ ಅವರು, ಚಿಕಿತ್ಸೆಗಿಂತಲೂ ಮುಂಜಾಗ್ರತೆ ಬಹಳ ಮುಖ್ಯ. ಆರೋಗ್ಯ ಇಲಾಖೆಗೆ ಸೇರ್ಪಡೆಯಾಗಿರುವ ಇತರ ಹುದ್ದೆಯವರು ವೈದ್ಯರಷ್ಟೇ ಮುಖ್ಯರಾಗಿರುತ್ತಾರೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ನೋಡಿ: “ಏನಿದು ‘ಕೆಂಪು ಪುಸ್ತಕ’? ಅದರ ವಿಶೇಷವೇನು?” – ಡಾ. ಕೆ.ಪ್ರಕಾಶ್‌ | ಯು.ಎಸ್‌. ಸಾಮ್ರಾಜ್ಯಶಾಹಿ Janashakthi Media

Donate Janashakthi Media

Leave a Reply

Your email address will not be published. Required fields are marked *