ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದ ಬಂಡಾಯ ಸಂಸದರ ಎನ್ಡಿಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ) ಜೊತೆಗಿನ ರಾಜಕೀಯ ನಂಟು ಮತ್ತಷ್ಟು ಬಲಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಮುಂದಿನ ವಾರದಿಂದ ಈ ಬಂಡಾಯ ಸಂಸದರು ಎನ್ಡಿಎ ಸಂಸದೀಯ ಪಕ್ಷದ ಸಭೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಟಿಎಂಸಿಯಿಂದ ಬೇರ್ಪಟ್ಟ ಸುಮಾರು 20 ಲೋಕಸಭಾ ಸಂಸದರು ಈಗಾಗಲೇ ಹೊಸ ರಾಜಕೀಯ ವೇದಿಕೆಯಾಗಿ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್ಸಿಪಿಐ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಸರ್ವಪಕ್ಷ ಸಭೆಗೂ ಇವರಿಗೆ ಆಹ್ವಾನ ನೀಡಲಾಗಿದ್ದು, ಇದಕ್ಕೆ ಇಂಡಿಯಾ ಮೈತ್ರಿಕೂಟದ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.
ಇದನ್ನೂ ಓದಿ : ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸ್ ಹಿಂಸಾಚಾರ-ಸಿಪಿಐ(ಎಂ) ಪೊಲಿಟ್ಬ್ಯುರೊ ಖಂಡನೆ
ಬಂಡಾಯ ಸಂಸದರ ನಾಯಕತ್ವ ವಹಿಸಿರುವ ಕಾಕೋಲಿ ಘೋಷ್ ದಸ್ತಿದಾರ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದೊಂದಿಗೆ ಕೆಲಸ ಮಾಡಲು ತಾವು ನಿರ್ಧರಿಸಿದ್ದೇವೆ ಎಂದು ಈಗಾಗಲೇ ಘೋಷಿಸಿದ್ದಾರೆ. ಲೋಕಸಭೆಯಲ್ಲಿ ಎನ್ಡಿಎಗೆ ಬೆಂಬಲ ನೀಡುವ ನಿಲುವನ್ನೂ ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ, ಲೋಕಸಭಾಧ್ಯಕ್ಷರಿಂದ ಎನ್ಸಿಪಿಐಗೆ ಸಂಬಂಧಿಸಿದ ಕೆಲವು ಸಂಸದೀಯ ಔಪಚಾರಿಕತೆಗಳು ಪೂರ್ಣಗೊಳ್ಳಬೇಕಿರುವುದರಿಂದ, ಈ ವಾರದ ಸಭೆಗಳಿಗೆ ಬದಲಾಗಿ ಮುಂದಿನ ವಾರದಿಂದ ಎನ್ಡಿಎ ಸಭೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಟಿಎಂಸಿಯಲ್ಲಿನ ಈ ಬಂಡಾಯವು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದ್ದು, ಮುಂಬರುವ ಸಂಸತ್ ಅಧಿವೇಶನದಲ್ಲಿ ಇದರ ಪರಿಣಾಮ ಎನ್ಡಿಎ ಹಾಗೂ ಪ್ರತಿಪಕ್ಷಗಳ ರಾಜಕೀಯ ತಂತ್ರಗಳ ಮೇಲೂ ಬೀಳುವ ಸಾಧ್ಯತೆ ಇದೆ.
ಇದನ್ನೂ ನೋಡಿ : ನೀಟ್ ಹೋರಾಟಕ್ಕೆ ಕಲೆಯ ಧ್ವನಿ! ಸೋನಂ ವಾಂಗ್ಚುಕ್ ಬೆಂಬಲಕ್ಕೆ ಚಿತ್ರ ಬಿಡಿಸಿದ ಬಿ.ಎಸ್. ದೇಸಾಯಿ Janashakthi Media
