ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸ್ ಹಿಂಸಾಚಾರ-ಸಿಪಿಐ(ಎಂ) ಪೊಲಿಟ್‌ಬ್ಯುರೊ ಖಂಡನೆ

ಮೋದಿ ಸರ್ಕಾರ ಸರ್ವಾಧಿಕಾರಿ ಧೋರಣೆಗೆ ವಿದ್ಯಾರ್ಥಿ-ಯುವಜನರು  ತಕ್ಕ ಉತ್ತರವನ್ನು ನೀಡಿದ್ದಾರೆ”

ಜಂತರ್‌ ಮಂತರ್‌ ನಲ್ಲಿ ಕಾಕ್ರೋಚ್ ಜನತಾ ಪಕ್ಷದ ಕರೆಯ ಮೇರೆಗೆ ಮತ್ತು ವಿದ್ಯಾರ್ಥಿ ಸಂಘಟನೆಗಳ ಬೆಂಬಲದೊಂದಿಗೆ ಸಂಸತ್ತಿಗೆ ಒಂದು ಐತಿಹಾಸಿಕ ಮೆರವಣಿಗೆಗಾಗಿ ಒಟ್ಟುಗೂಡಿದ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಜನರನ್ನು ಅಭಿನಂದಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಹೋರಾಟಕ್ಕೆ ಮೋದಿ ಸರ್ಕಾರ ತೋರಿರುವ ಸರ್ವಾಧಿಕಾರಿ ಧೋರಣೆಗೆ ಈ ಬೃಹತ್ ಸಭೆ ತಕ್ಕ ಉತ್ತರವನ್ನು ನೀಡಿದೆ ಎಂದು ಹೇಳಿದೆ.

ದಿಲ್ಲಿಯ ಜಂತರ್ ಮಂತರ್ ಮತ್ತು ಸುತ್ತಮುತ್ತ ನೆರೆದಿದ್ದ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಕ್ರೂರ ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗ ನಡೆಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ.

ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಉಗ್ರ ದಾಳಿಯಿಂದಾಗಿ ಹಲವಾರು ವಿದ್ಯಾರ್ಥಿಗಳು, ಯುವಕರು ಮತ್ತು ಇತರರು ಗಾಯಗೊಂಡಿದ್ದಾರೆ, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋಲ್ ಮಾರ್ಕೆಟ್‌ನಲ್ಲಿರುವ ಸಿಪಿಐ(ಎಂ) ಪ್ರಧಾನ ಕಚೇರಿಯ ಮುಂದೆಯೂ ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗ ನಡೆಯಿತು.

ಪ್ರಶ್ನೆ ಪತ್ರಿಕೆ ಸೋರಿಕೆಗೆ ಹೊಣೆ ಯಾರೆಂಬುದನ್ನು ಗೊತ್ತುಮಾಡಲು  ಮತ್ತು ನೀಟ್ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ವಿಸರ್ಜಿಸಲು ಮೋದಿ ಸರ್ಕಾರ ಹಠದಿಂದ  ನಿರಾಕರಿಸಿದ ಹಿನ್ನೆಲೆಯಲ್ಲಿ, ಸಂಸತ್‌ ಚಲೋ ಕರೆಯ ಮೇರೆಗೆ ಜನರು, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ದೇಶಾದ್ಯಂತ ಒಂದು ತಿಂಗಳ ಕಾಲ ವಿವಿಧ ಜನವಿಭಾಗಗಳು ಅಪಾರ ಪ್ರಮಾಣದಲ್ಲಿ  ಭಾಗವಹಿಸಿದ ಪ್ರತಿಭಟನೆಗಳಲ್ಲಿ , ಬೆಂಬಲ ಮತ್ತು ಸೌಹಾರ್ದ ಕಾರ್ಯಾಚರಣೆಗಳಲ್ಲಿ   ಎತ್ತಿದ ಬೇಡಿಕೆಗಳನ್ನು ಗಮನಿಸಲು ಬಿಜೆಪಿ ಸರಕಾರ ನಿರಾಕರಿಸಿದೆ.

ಉಪವಾಸ ಮುಷ್ಕರ ಮತ್ತು ಜುಲೈ ೨೦ರ ಪೊಲೀಸ್ ಕ್ರಮವು ದೇಶಾದ್ಯಂತ ಪ್ರತಿಭಟನಾ ಕಾರ್ಯಾಚರಣೆಗಳಿಗೆ ಪ್ರಚೋದನೆಯಾಗಿ ಕೆಲಸ ಮಾಡಿವೆ. ಮತಿಭ್ರಮಣೆಯಾದಂತಿರುವ ಸರಕಾರ ಶಿಕ್ಷಣದಲ್ಲಿ ಹೆಚ್ಚುತ್ತಿರುವ ಅವ್ಯವಸ್ಥೆ ಮತ್ತು ನಿರುದ್ಯೋಗದ ದಯನೀಯ ಪರಿಸ್ಥಿತಿಗೆ ಉತ್ತರದಾಯಿಯಾಗುವ ಬದಲು, ಪ್ರತಿಭಟನಾಕಾರರೊಂದಿಗೆ ಸಂವಾದ ನಡೆಸಲು ನಿರಾಕರಿಸಿದೆ.

ಇಂತಹ ದಮನಕಾರಿ ಕ್ರಮಗಳು ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧ ಜನರಲ್ಲಿ, ವಿಶೇಷವಾಗಿ ಯುವಜನರಲ್ಲಿ ಹೆಚ್ಚುತ್ತಿರುವ ಕೋಪ ಮತ್ತು ಹತಾಶೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಬಯಸುತ್ತದೆ ಎಂದಿರುವ ಪೊಲಿಟ್‌ಬ್ಯುರೊ ಅವರ ಬೇಡಿಕೆಗಳನ್ನು ತಕ್ಷಣವೇ ಒಪ್ಪಿಕೊಳ್ಳಬೇಕೆಂದು ಆಗ್ರಹಿಸಿದೆ. ಧರ್ಮೇಂದ್ರ ಪ್ರಧಾನ್ ಹೋಗಲೇಬೇಕು, ಎನ್‌ಟಿಎಯನ್ನು ವಿಸರ್ಜಿಸಬೇಕು ಮತ್ತು  ಪೋಲೀಸರು ಬಂಧಿಸಿರುವ  ಎಲ್ಲರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಅದು ಆಗ್ರಹಿಸಿದೆ.

ಜುಲೈ ೨೦ರ ರಾತ್ರಿ ವಿದ್ಯಾರ್ಥಿಗಳು ಜಂತರ್‌ ಮಂತರ್‌ನಲ್ಲಿ ತಮ್ಮ ಪ್ರತಿಭಟನೆಯನ್ನು
ಮುಂದುವರೆಸಿದ್ದು, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ ಮತ್ತು ಅವರ ಪಕ್ಷದ
ಸಂಸದರಾದ ವಿ.ಶಿವದಾಸನ್‌ ಮತ್ತು ಕೆ.ರಾಧಾಕೃಷ್ಣನ್‌ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದರು

 

Donate Janashakthi Media

Leave a Reply

Your email address will not be published. Required fields are marked *