ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದಲ್ಲಿ ಮೂವರು ಶಂಕಿತ ಬೇಟೆಗಾರರು ಅರಣ್ಯ ಸಿಬ್ಬಂದಿಯ ಗುಂಡಿನ ದಾಳಿಯಲ್ಲಿ ಮೃತಪಟ್ಟ ಪ್ರಕರಣ ವಿಧಾನಸಭೆಯಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ತಮ್ಮ ಹೊಣೆಗಾರಿಕೆ ಸಾಬೀತಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಹನೂರು
ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ಪ್ರಕರಣಕ್ಕೆ ನ್ಯಾಯಾಂಗ ತನಿಖೆ ನಡೆಸಬೇಕು, ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಹಾಗೂ ಅರಣ್ಯ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಪ್ರಕರಣದ ಕುರಿತು ಈಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ತನಿಖಾ ವರದಿ ಮೂರು ದಿನಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದ್ದು, ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು. ಅಧಿಕಾರಿಗಳಿಂದ ತಪ್ಪಾಗಿರುವುದು ತನಿಖೆಯಲ್ಲಿ ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಹನೂರು
‘ಸ್ವಯಂರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ’
ಆಗಸ್ಟ್ 14ರಂದು ರಾತ್ರಿ ಸುಮಾರು 8 ಗಂಟೆಗೆ ಅರಣ್ಯದಲ್ಲಿ ಬೇಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಬಳಿಕ ಎರಡು ಅರಣ್ಯ ತಂಡಗಳನ್ನು ಶಂಕಿತರ ಪತ್ತೆಗೆ ಕಳುಹಿಸಲಾಗಿತ್ತು. ಬೆಳಗಿನ ಜಾವ ಸುಮಾರು 5 ಗಂಟೆಗೆ ಶಂಕಿತರನ್ನು ಪತ್ತೆಹಚ್ಚಲಾಯಿತು ಎಂದು ಸಚಿವರು ವಿಧಾನಸಭೆಗೆ ವಿವರಿಸಿದರು.
ಅರಣ್ಯ ಸಿಬ್ಬಂದಿಯ ಮೇಲೆ ಶಂಕಿತರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸ್ವಯಂರಕ್ಷಣೆಗಾಗಿ ಗುಂಡು ಹಾರಿಸಲಾಯಿತು ಎಂದು ಸಚಿವರು ಹೇಳಿದ್ದಾರೆ. ಅರಣ್ಯ ಸಿಬ್ಬಂದಿ ಸಣ್ಣ ಗುಂಡುಗಳನ್ನು ಹೊಂದಿರುವ ಸ್ಲೈಡ್-ಆಕ್ಷನ್ ಬಂದೂಕುಗಳನ್ನು ಬಳಸಿದ್ದರು. ಗುಂಡುಗಳು ದೇಹದ ವಿವಿಧ ಭಾಗಗಳಿಗೆ ತಗುಲಿದ್ದವು ಎಂದು ಅವರು ವಿವರಿಸಿದ್ದಾರೆ.
ಗುಂಡಿನ ದಾಳಿಯ ಬಳಿಕ ಮೂವರು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಲಭ್ಯವಿರದ ಕಾರಣ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಆಸ್ಪತ್ರೆಗೆ ತಲುಪುವ ವೇಳೆಗೆ ಮೂವರೂ ಮೃತಪಟ್ಟಿದ್ದರು ಎಂದು ಸಚಿವರು ತಿಳಿಸಿದ್ದಾರೆ. ಬಳಿಕ ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ : ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ: ಚಿಕ್ಕಮಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ; 40 ಮಂದಿಯ ವಿರುದ್ಧ ಎಫ್‌ಐಆರ್

‘ಮೃತರು ಜಾನುವಾರು ಹುಡುಕಲು ಹೋಗಿದ್ದರು’ ಎಂಬ ವಾದಕ್ಕೆ ಸಚಿವರ ಆಕ್ಷೇಪ
ಮೃತರು ಕಾಡಿನಲ್ಲಿ ಕಾಣೆಯಾಗಿದ್ದ ಜಾನುವಾರುಗಳನ್ನು ಹುಡುಕಲು ಹೋಗಿದ್ದರು ಎಂಬ ಗ್ರಾಮಸ್ಥರ ಹೇಳಿಕೆಯನ್ನು ಸಚಿವರು ತಳ್ಳಿಹಾಕಿದ್ದಾರೆ. ಅರಣ್ಯ ಸಿಬ್ಬಂದಿ ಸ್ಥಳದಿಂದ ಎರಡು ನಾಡಬಂದೂಕುಗಳು, ಅಡುಗೆಗೆ ಬಳಸುವ ಸಾಮಗ್ರಿಗಳು, ತರಕಾರಿಗಳು, ಚಾಕುಗಳು, ಮಸಾಲೆ ಪದಾರ್ಥಗಳು ಮತ್ತು ಮಾಂಸ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಘಟನೆ ಬಳಿಕ ಅರಣ್ಯ ಇಲಾಖೆಯ ಆಸ್ತಿಗೆ ಹಾನಿ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಹನೂರು ಶೂಟೌಟ್ ಪ್ರಕರಣ ವಿಧಾನಸಭೆಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪ್ರಕರಣದ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಪ್ರಶ್ನೋತ್ತರ ಕಲಾಪವೂ ಅಸ್ತವ್ಯಸ್ತಗೊಂಡಿತು.
ಈ ನಡುವೆ, ಅರಣ್ಯ ಸಿಬ್ಬಂದಿಯ ಗುಂಡಿನ ದಾಳಿ ನಿಜವಾಗಿಯೂ ಆತ್ಮರಕ್ಷಣೆಯ ಕ್ರಮವಾಗಿತ್ತೇ ಅಥವಾ ನಿಯಮ ಮೀರಿ ನಡೆದಿತ್ತೇ? ಎಂಬ ಪ್ರಶ್ನೆಗೆ ಮ್ಯಾಜಿಸ್ಟ್ರೇಟ್ ತನಿಖೆಯ ವರದಿ ಉತ್ತರ ನೀಡಬೇಕಿದೆ. ಮೃತರು ನಿಜವಾಗಿಯೂ ಬೇಟೆಯಲ್ಲಿ ತೊಡಗಿದ್ದರೇ, ಗುಂಡಿನ ದಾಳಿ ನಡೆಸುವ ಅನಿವಾರ್ಯತೆ ಇತ್ತೇ, ಬಳಸಲಾದ ಶಸ್ತ್ರಾಸ್ತ್ರ ಮತ್ತು ಗುಂಡಿನ ಪ್ರಮಾಣ ನಿಯಮಾನುಸಾರವಾಗಿತ್ತೇ ಎಂಬ ಅಂಶಗಳು ತನಿಖೆಯಲ್ಲಿ ನಿರ್ಣಾಯಕವಾಗಲಿವೆ ಎಂದು ಹೇಳಲಾಗುತ್ತಿದೆ.
ಸಂಘಟನೆಗಳಿಂದ ಪ್ರತಿಭಟನೆ :ಚಿಕ್ಕಲ್ಲೂರು ಮೀಸಲು ಅರಣ್ಯದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮೃತರು ಅಮಾಯಕರು, ಗುಂಡಿನ ದಾಳಿ ನಿಯಮಬಾಹಿರವಾಗಿ ನಡೆದಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಘಟನೆ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು, ದಲಿತ ಸಂಘಟನೆಗಳು ಹಾಗೂ ವಿವಿಧ ಜನಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿದ್ದವು. ತಪ್ಪಿತಸ್ಥ ಅರಣ್ಯ ಸಿಬ್ಬಂದಿಯನ್ನು ಬಂಧಿಸಬೇಕು, ಕೊಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.
ಇದರ ನಡುವೆ ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಸಹ ಕಾರ್ಯದರ್ಶಿ ಡಿ. ರವೀಂದ್ರನ್, ಕೆಪಿಆರ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ. ಹಾಗೂ ಸಿಐಟಿಯು ಚಾಮರಾಜನಗರ ಜಿಲ್ಲಾ ನಾಯಕಿ ಶಾಂತಾ ನೇತೃತ್ವದ ನಿಯೋಗ ಮೃತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿತ್ತು.
ಇದನ್ನೂ ನೋಡಿ : ಕ್ಯಾಸ್ಟ್ರೋ 100 | ಕ್ಯೂಬಾ ಆರೋಗ್ಯ–ಶಿಕ್ಷಣದಲ್ಲಿ ಜಗತ್ತಿಗೆ ಮಾದರಿಯಾಗಿದ್ದು ಹೇಗೆ? | ಭಾರತ ಏನು ಕಲಿಯಬೇಕು?
