‘ಟೀಚರ್’ ಮಾಸಪತ್ರಿಕೆಯ ರಜತ ಮಹೋತ್ಸವ: ಹಾಸನದಲ್ಲಿ ವೈಚಾರಿಕ ಒಡನಾಟದ ಓದುಗರ ಸಮಾವೇಶ ಯಶಸ್ವಿ

ಹಾಸನ: “ಕಾರ್ಪೊರೇಟ್ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವ ಇಂದಿನ ಮಾಧ್ಯಮ ರಂಗದ ಮಧ್ಯೆ, ಯಾವುದೇ ವಾಣಿಜ್ಯ ಜಾಹೀರಾತುಗಳಿಲ್ಲದೆ, ಕೇವಲ ಓದುಗರ ಪ್ರೀತಿ-ಬೆಂಬಲವನ್ನೇ ಬಂಡವಾಳವಾಗಿಸಿಕೊಂಡು ಕಾಲು ಶತಮಾನ ಪೂರೈಸಿರುವ ‘ಟೀಚರ್’ ಪತ್ರಿಕೆ ಕೇವಲ ಪ್ರಕಟಣೆಯಲ್ಲ; ಅದು ಸಮಾಜದ ಪ್ರಜಾಸತ್ತಾತ್ಮಕ ಆಶಯಗಳನ್ನು ಜಾಗೃತಗೊಳಿಸುವ ಜೈವಿಕ ಸ್ಮೃತಿ,” ಎಂದು ‘ಟೀಚರ್’ ಮಾಸಪತ್ರಿಕೆಯ ಸಂಪಾದಕ ಉದಯ್ ಗಾಂವ್ಕರ್ ಅವರು ಮಾರ್ಮಿಕವಾಗಿ ನುಡಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿ (BGVS) ಹಾಸನ ಜಿಲ್ಲಾ ಸಮಿತಿಯ ವತಿಯಿಂದ ನಗರದ ಐ.ಎ.ಪಿ ಭವನದಲ್ಲಿ ಆಯೋಜಿಸಲಾಗಿದ್ದ ‘ಟೀಚರ್’ ಪತ್ರಿಕೆಯ 25ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ಓದುಗರ-ಚಂದಾದಾರರ-ಹಿತೈಷಿಗಳ ಸಮಾವೇಶ”ದಲ್ಲಿ ಅವರು ಪ್ರಧಾನ (ಸಂಪಾದಕೀಯ) ಭಾಷಣ ಮಾಡುತ್ತಿದ್ದರು.

ಪ್ರಧಾನ ಭಾಷಣ: “ಸಮಾಜದ ಕಷ್ಟಗಳಿಗೆ ಧ್ವನಿಯಾಗುವ ಅಪಾಯ ಎದುರಿಸುವುದೇ ‘ಟೀಚರ್’ ನಡೆ” – ಉದಯ್ ಗಾಂವ್ಕರ್

ತಮ್ಮ ಸುದೀರ್ಘ ಹಾಗೂ ಪ್ರಭಾವಿ ಭಾಷಣದಲ್ಲಿ ಪತ್ರಿಕೆಯ ಆಂತರಿಕ ಒಡಲಾಳವನ್ನು ತೆರೆದಿಟ್ಟ ಸಂಪಾದಕ ಉದಯ್ ಗಾಂವ್ಕರ್, “ಕನ್ನಡದಲ್ಲಿ ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೀರ್ಘಕಾಲ ನಡೆದುಬಂದಿರುವ ಏಕೈಕ ಜನಪರ ಪತ್ರಿಕೆ ನಮ್ಮದು. ಪ್ರಿಂಟ್ ಮಾಧ್ಯಮಗಳು ಇಂದು ಕೇವಲ ಓದುಗರ ಚಂದಾದಿಂದ ನಡೆಯುವುದು ಕಟು ವಾಸ್ತವ. ಈ ಪತ್ರಿಕೆಯ ಪ್ರತಿ ಪ್ರತಿಯೂ ನಿಮ್ಮ ಕೈ ಸೇರುವಾಗ ನಮಗೆ ಕನಿಷ್ಠ 20 ರೂಪಾಯಿಗಳ ನಷ್ಟವಾಗುತ್ತದೆ. ಆ ಹೊರೆಯನ್ನು ಸೈದೂಗಿಸಲಾಗದೆ 22 ಅಥವಾ 23ನೇ ವರ್ಷದಲ್ಲಿ ಪತ್ರಿಕೆಯನ್ನೇ ನಿಲ್ಲಿಸಿಬಿಡುವ ಆಲೋಚನೆ ನಡೆದಿತ್ತು. ಆದರೆ, ಹಾಸನದಲ್ಲಿ ನಡೆದ ಆ ನಿರ್ಣಾಯಕ ಸಭೆಯಲ್ಲೇ ಕಾಲದ ಅನಿವಾರ್ಯತೆಯಾಗಿ ನಾನು ‘ಆಕಸ್ಮಿಕ ಸಂಪಾದಕ’ (Accidental Editor) ನಾದೆ,” ಎಂದು ನೆನಪಿಸಿಕೊಂಡರು.

ಇದನ್ನೂ ಓದಿ: ಕನಿಷ್ಟ ವೇತನ ತಕ್ಷಣ ಜಾರಿಗಾಗಿ, ಖಾಯಂಗಾಗಿ ಮತ್ತು ಕೆಲಸದ ಭದ್ರತೆಗಾಗಿ ಒತ್ತಾಯಿಸಿ ಹೋರಾಟ

ಚಾರ್ಲ್ಸ್ ಡಾರ್ವಿನ್ ಅವರ ಜೀವವೈವಿಧ್ಯದ ಸಿದ್ಧಾಂತದ ‘ಮಾರ್ಮೊಸೆಟ್’ ಮಂಗಗಳ ಉದಾಹರಣೆಯನ್ನು ನೀಡುತ್ತಾ, “ತಂಡದ ಉಳಿವಿಗೆ ಒಂಟಿ ಮಂಗ ಅಪಾಯದ ಎಚ್ಚರಿಕೆ (Alarm Call) ನೀಡಿ ತನ್ನ ಪ್ರಾಣ ತ್ಯಾಗ ಮಾಡುವಂತೆ, ‘ಟೀಚರ್’ ಪತ್ರಿಕೆಯು ಸಮಾಜದ ತಳಮಟ್ಟದ ಬಡವರ ಬದುಕನ್ನು ರಕ್ಷಿಸಲು, ಪ್ರಜಾಪ್ರಭುತ್ವದ ಆಶಯಗಳನ್ನು ಜಾಗೃತಗೊಳಿಸಲು ಅಪಾಯವನ್ನು ಮೈಮೇಲೆ ಎಳೆದುಕೊಂಡು ಕೆಲಸ ಮಾಡುತ್ತಿದೆ. ಇಂದಿನ ವ್ಯವಸ್ಥೆಯು ಅನ್ನ-ನೀರಿಗಿಂತ ‘ಓಟಿಪಿ’ ಮುಖ್ಯ ಎನ್ನುವ ಮಟ್ಟಿಗೆ ಬಡವರ ಬದುಕನ್ನು ಬದಲಾಯಿಸಿದೆ. ಸರ್ಕಾರಗಳು ಕೇವಲ ಮೇಲ್ಮೈ ಬದಲಾವಣೆಯ (Optical Governance) ಭ್ರಮೆ ಸೃಷ್ಟಿಸುತ್ತಿರುವಾಗ, ಇಂತಹ ಜ್ವಲಂತ ಸಮಸ್ಯೆಗಳನ್ನು ಜನರ ಸ್ಮೃತಿಯಲ್ಲಿ ಉಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ,” ಎಂದರು.

ಸಸ್ಯಶಾಸ್ತ್ರದ ‘ಎಪಿಜೆನೆಟಿಕ್ ಮೆಮೊರಿ’ (Epigenetic Memory) ಪರಿಕಲ್ಪನೆಯನ್ನು ಪ್ರಸ್ತಾಪಿಸಿದ ಅವರು, “ಕಷ್ಟಗಳನ್ನು ತನ್ನ ಜೀವಕೋಶಗಳಲ್ಲಿ ನೆನಪಿಟ್ಟುಕೊಳ್ಳುವ ಸಸ್ಯಗಳಂತೆ, ನಮ್ಮ ಪತ್ರಿಕೆಯೂ ಸಮಾಜದ ನೋವುಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಮುಂದಿನ ತಲೆಮಾರನ್ನು ಬದಲಾಯಿಸುವ ಸಂಚಿತ ಸ್ಮೃತಿಯಾಗಬೇಕು. ಚಾಟ್ ಜಿಪಿಟಿಯಂತಹ ಎಐ ತಂತ್ರಜ್ಞಾನಗಳು ಮಾಹಿತಿಯನ್ನು ನೀಡಬಲ್ಲವೇ ಹೊರತು, ಮನುಷ್ಯನ ನೈಜ ಅನುಭವಗಳನ್ನು (Human Experience) ಸೃಷ್ಟಿಸಲು ಅದಕ್ಕೆ ಸಾಧ್ಯವಿಲ್ಲ. ಮಣ್ಣಿನ ಪ್ರಜ್ಞೆ ಇರುವ ಬರಹಗಾರರ ನೈಜ ಅನುಭವಗಳೇ ನಮ್ಮ ಪತ್ರಿಕೆಯ ಜೀವಾಳ,” ಎಂದು ಪ್ರತಿಪಾದಿಸಿದರು.

ಉದ್ಘಾಟನಾ ನುಡಿ: “ಸ್ವಾರ್ಥವಿಲ್ಲದ ವೈಚಾರಿಕ ಜಾಗೃತಿ ಬಿಜೆವಿಎಸ್ನ ಶಕ್ತಿ” – ಕೆ.ಎಂ. ಶ್ರೀನಿವಾಸ್

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ.ಎಂ. ಶ್ರೀನಿವಾಸ್ ಅವರು, “ಬಿಜಿವಿಎಸ್ ಸಮಾಜದಲ್ಲಿ ಮರೆತು ಮಲಗಿರುವ ಜನಸಾಮಾನ್ಯರ ಪ್ರಜ್ಞೆಯನ್ನು ಬಡಿದೆಬ್ಬಿಸುವ ಮಹತ್ತರ ಕೆಲಸ ಮಾಡುತ್ತಿದೆ. ನಮ್ಮ ವೈಚಾರಿಕ ಸಿದ್ಧಾಂತದಿಂದ ನಮಗೆ ಯಾವುದೇ ವೈಯಕ್ತಿಕ ಅಥವಾ ಆರ್ಥಿಕ ಲಾಭ ಬೇಕಾಗಿಲ್ಲ; ಜನರ ಮನಸ್ಥಿತಿಯನ್ನು ಸರಿಪಡಿಸುವುದಷ್ಟೇ ನಮ್ಮ ಗುರಿ. ಶಿಕ್ಷಕನಾದವನು ಕೇವಲ ತರಗತಿಯ ಕೋಣೆಗೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು,” ಎಂದು ಕರೆ ನೀಡಿದರು.

“ಅಕ್ಷರ ತಿದ್ದುವ ಸೂಕ್ಷ್ಮ ದೃಷ್ಟಿ ಕಲಿಸಿದ್ದೇ ಪತ್ರಿಕೆ” – ಟಿ.ಎ. ಪ್ರಶಾಂತಬಾಬು

ಬಿಜಿವಿಎಸ್ ರಾಜ್ಯ ಕಾರ್ಯದರ್ಶಿ ಟಿ.ಎ. ಪ್ರಶಾಂತಬಾಬು ಮಾತನಾಡಿ, “ನಾವು ಕೇವಲ ವೇದಿಕೆಯ ಒಂದು ಬದಿಯಲ್ಲಿ ಮಾತನಾಡುವವರಾಗಬಾರದು, ಓದುಗರಾಗಬೇಕು. ಪತ್ರಿಕೆಯ ಲೋಪದೋಷಗಳನ್ನು ಮುಕ್ತವಾಗಿ ವಿಮರ್ಶಿಸಬೇಕು. ಪತ್ರಿಕೆಯ ಆರಂಭದ ದಿನಗಳಲ್ಲಿ ನಾವು ಮಾಡುತ್ತಿದ್ದ ಪ್ರೂಫ್ ರೀಡಿಂಗ್ ಕೆಲಸವೇ ಇಂದು ನನ್ನಲ್ಲಿ ಯಾವುದೇ ಕರಪತ್ರದಲ್ಲೂ ತಪ್ಪುಗಳನ್ನು ಗುರುತಿಸಿ ತಿದ್ದುವ ಸೂಕ್ಷ್ಮ ದೃಷ್ಟಿಯನ್ನು ಅಂತರ್ಗತಗೊಳಿಸಿದೆ. ಹೊಸ ಬರಹಗಾರರ ಬರವಣಿಗೆಯ ಶೈಲಿಯನ್ನು ಸುಧಾರಿಸಲು ಪತ್ರಿಕೆ ಸದಾ ಮುಕ್ತ ಅವಕಾಶ ಮಾಡಿಕೊಟ್ಟಿದೆ,” ಎಂದರು.

ಸಮಾರೋಪ ಭಾಷಣ: “ಇದು ಗೆಳೆಯರ ಬಳಗದ ಜಂಟಿ ಶ್ರಮದ ಸಾಹಸ” – ಎಫ್.ಸಿ. ಚೇಗರೆಡ್ಡಿ

ಸಮಾರೋಪ ಭಾಷಣ ಮಾಡಿದ ಪತ್ರಿಕೆಯ ಸಹ-ಸಂಪಾದಕ ಎಫ್.ಸಿ. ಚೇಗರೆಡ್ಡಿ ಅವರು, ಸಾಕ್ಷರತಾ ಆಂದೋಲನದ ದಿನಗಳಿಂದ ನಡೆದುಬಂದ ಪತ್ರಿಕೆಯ ಭಾವನಾತ್ಮಕ ಜರ್ನಿಯನ್ನು ಹಂಚಿಕೊಂಡರು.

“10-12 ಅಡಿಯ ಸಣ್ಣ ಕೋಣೆಯಲ್ಲಿ, ಹಗಲಿರುಳು ಕುಳಿತು, ಕೈಯಲ್ಲೇ ಪುಟ ವಿನ್ಯಾಸ (Layout) ಗೆರೆ ಎಳೆದು ಪತ್ರಿಕೆ ಕಟ್ಟಿದ ನೆನಪುಗಳು ರೋಮಾಂಚನ ತರುತ್ತವೆ. ತೀವ್ರ ಆರ್ಥಿಕ ಸಂಕಷ್ಟದಿಂದ ಪತ್ರಿಕೆ ನಿಲ್ಲಿಸಲು ಹೊರಟಾಗ ಕೈಹಿಡಿದಿದ್ದು ಓದುಗರ ಪ್ರೀತಿಯ ಮಾತುಗಳು. ಹಿಂದೆ ‘ಟೀಚರ್’ ಜೊತೆಗೆ ‘ಗಾಳಿಪಟ’ ಮತ್ತು ‘ಜನಾರೋಗ್ಯ’ ಪತ್ರಿಕೆಗಳನ್ನು ತಂದ ಸೃಜನಶೀಲ ಸಾಹಸ ನಮ್ಮದು. ನಾವ್ಯಾರೂ ಒಂಟಿ ಪಯಣಿಗರಲ್ಲ, ಸಹಪಯಣಿಗರು. ಪತ್ರಿಕೆಯನ್ನು ಉಳಿಸಿಕೊಳ್ಳುವ ಸಾಮಾಜಿಕ ಕಾಳಜಿ ನಮ್ಮೆಲ್ಲರ ಮೇಲಿದೆ,” ಎಂದರು.

ಅಧ್ಯಕ್ಷೀಯ ನುಡಿ: “ಮುಂದಿನ ಪೀಳಿಗೆಯ ಭವಿಷ್ಯದ ಆತಂಕಕ್ಕೆ ಕನ್ನಡಿ” – ಸಿ. ಸೌಭಾಗ್ಯ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ಜಿಲ್ಲಾ ಅಧ್ಯಕ್ಷರಾದ ಸಿ. ಸೌಭಾಗ್ಯ ಅವರು ಮಾತನಾಡಿ, “ಪರಿಸರ, ಮಹಿಳಾ ಸಮಾನತೆ, ವಿಜ್ಞಾನ ಹಾಗೂ ಶಿಕ್ಷಣದ ಸವಾಲುಗಳನ್ನು ಕಣ್ಣಿಗೆ ಕಟ್ಟುವಂತೆ ಇಡುವ ಏಕೈಕ ಪತ್ರಿಕೆ ‘ಟೀಚರ್’. ಪತ್ರಿಕೆಯಲ್ಲಿ ಕೆ.ಎಸ್. ರವಿಕುಮಾರ್ ಅವರ ಲೇಖನಗಳನ್ನು ಓದುವಾಗ ಭೂಮಿಯ ಇಂದಿನ ಪರಿಸ್ಥಿತಿ ಮತ್ತು ಮುಂದಿನ ಜನಾಂಗದ ಭವಿಷ್ಯದ ಬಗ್ಗೆ ಆತಂಕವಾಗುತ್ತದೆ. ಇಂದಿನ ತಲೆಮಾರಿಗೆ ವಿಜ್ಞಾನಿಗಳು ತಮ್ಮ ಸಂಶೋಧನೆಯ ಹಾದಿಯಲ್ಲಿ ಅನುಭವಿಸಿದ ಅಪಾರ ನೋವು ಹಾಗೂ ಇತಿಹಾಸ ತಿಳಿಸುವ ಸರಣಿ ಲೇಖನಗಳು ಪತ್ರಿಕೆಯಲ್ಲಿ ಇನ್ನು ಹೆಚ್ಚು ಮೂಡಿಬರಬೇಕು,” ಎಂದು ಆಶಿಸಿದರು.

ಸಂವಾದ ಮತ್ತು ಸಲಹೆಗಳು:

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಾರತೀಯ ಶಿಶು ತಜ್ಞರ ಸಂಘದ ಹಾಸನ ಜಿಲ್ಲಾ ಕಾರ್ಯದರ್ಶಿ ವೇಣುಗೋಪಾಲ್, ಬಿಜಿವಿಎಸ್ ಹಾಸನ ತಾಲ್ಲೂಕು ಅಧ್ಯಕ್ಷ ಡಾ. ಎಚ್.ಜಿ. ಮಂಜುನಾಥ್ ಹಾಗೂ ವಿಜ್ಞಾನ ಬರಹಗಾರ ಕೆ.ಎಸ್. ರವಿಕುಮಾರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಪತ್ರಿಕೆಯ ಉನ್ನತೀಕರಣದ ಕುರಿತು ಓದುಗರು ಹಾಗೂ ಚಿಂತಕರಾದ ರೈತಸಂಘದ ನವೀನ್ ಕುಮಾರ್, ರಾಧಾಕೃಷ್ಣ, ಬ್ರೈನ್ ಚೈಲ್ಡ್ ಇನೋವೇಟಿವ್ ಸಂಸ್ಥೆಯ ನಿರ್ದೇಶಕಿ ಸಂಗೀತ ಶಣೈ, ‘ಇಸ್ಕೋಲ್ ಗೇ ರಜೆಷಕೊಡಿ’ ಸಂಸ್ಥೆಯ ಗ್ರಹಿತ್, ಶಿಕ್ಷಕಿ ಇಂದಿರಾ ಬಾರಂಗಿ, ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನ ಪ್ರೊ. ಉಮಾ, ಆಲೂರಿನ ಬಿ.ಆರ್.ಪಿ ಪ್ರಮೀಳ, ನಿವೃತ್ತ ಶಿಕ್ಷಕ ಧರ್ಮರಾಜ್, ಬೇಲೂರಿನ ಬಿಜಿವಿಎಸ್ ತಾಲ್ಲೂಕು ಅಧ್ಯಕ್ಷ ಚಂದ್ರು, ಶಿಕ್ಷಕ ಕುಮಾರಸ್ವಾಮಿ ಹಾಗೂ ವಿಜಯಶಾಲೆಯ ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಂಡು, ಪತ್ರಿಕೆಯು ಸಮಾಜದ ವೈಜ್ಞಾನಿಕ ಹಾದಿಯ ದಿಕ್ಸೂಚಿಯಾಗಿ ಬಲಗೊಳ್ಳಲು ಅಮೂಲ್ಯ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮದ ನಿರ್ವಹಣೆ:

ಸಮತ-ಬಿಜಿವಿಎಸ್ ಜಿಲ್ಲಾ ಸಂಚಾಲಕಿ ಮಮತಾ ಶಿವು ಕಾರ್ಯಕ್ರಮ ನಿರೂಪಿಸಿದರು. ಪ್ರಕಟಣೆ ಉಪಸಮಿತಿ ಸಂಚಾಲಕಿ ಮೋನಿಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷೆ ಪ್ರಮೀಳ ಮತ್ತು ಸಂಗಡಿಗರು ವಿಜ್ಞಾನ ಗೀತೆಯನ್ನು ಹಾಡಿದರು.

ಬಿಜಿವಿಎಸ್ ಹಾಸನ ತಾಲ್ಲೂಕು ಕಾರ್ಯದರ್ಶಿ ಬಿ.ಕೆ. ಲೋಲಾಕ್ಷಿ ಸ್ವಾಗತಿಸಿದರೆ, ಜಿಲ್ಲಾ ಉಪಾಧ್ಯಕ್ಷ ಧರ್ಮರಾಜ್ ವಂದಿಸಿದರು. ಬಿಜಿವಿಎಸ್ ಸದಸ್ಯರಾದ ಅರ್ಜುನ್ ಶೆಟ್ಟಿ ಮತ್ತು ಕವಿತಾ ಅವರು ಹೊಸ ಚಂದಾ ನೋಂದಣಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಇದನ್ನೂ ನೋಡಿ: ಭಾರತದ ಪ್ರಜಾಪ್ರಭುತ್ವ ಮತ್ತು ನಾರ್ವೆ ಪತ್ರಕರ್ತರು:ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕೆ? Janashakthi Media

Donate Janashakthi Media

Leave a Reply

Your email address will not be published. Required fields are marked *