ಲಖನೌ: ಅಯೋಧ್ಯೆಯ ರಾಮಮಂದಿರದ ಕೋಟ್ಯಂತರ ರೂಪಾಯಿ ದೇಣಿಗೆ ದುರ್ಬಳಕೆ ಪ್ರಕರಣದ ತನಿಖೆಯಲ್ಲಿ ಹೊಸ ಮಾಹಿತಿಗಳು ಬೆಳಕಿಗೆ ಬಂದಿವೆ. ಬಂಧಿತ ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ ವಿಚಾರಣೆ ವೇಳೆ ದೇಣಿಗೆ ಎಣಿಕೆ ಕೇಂದ್ರದಿಂದ ಹಣವನ್ನು ಕಳವು ಮಾಡಿ ಮೊದಲು ದೇವಾಲಯದ ಆವರಣದಲ್ಲಿರುವ ಶೌಚಾಲಯದಲ್ಲಿ ಅಡಗಿಸಲಾಗುತ್ತಿತ್ತು. ಬಳಿಕ ಅವಕಾಶ ಸಿಕ್ಕಾಗ ಅದನ್ನು ಹೊರಗೆ ಸಾಗಿಸಲಾಗುತ್ತಿತ್ತು ಎಂದು ಒಪ್ಪಿಕೊಂಡಿರುವುದಾಗಿ ತನಿಖಾ ಮೂಲಗಳು ತಿಳಿಸಿವೆ.
ಪೊಲೀಸರ ಮಾಹಿತಿ ಪ್ರಕಾರ, ನ್ಯಾಯಾಲಯದ ಅನುಮತಿ ಪಡೆದು ಸುಮಾರು ಎರಡು ಗಂಟೆಗಳ ಕಾಲ ಅವಿನಾಶ್ ಶುಕ್ಲಾ ಅವರನ್ನು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ದೇಣಿಗೆ ಹಣ ದುರ್ಬಳಕೆ ನಡೆದಿರುವುದನ್ನು ಒಪ್ಪಿಕೊಂಡಿರುವುದಲ್ಲದೆ, ಇಡೀ ಜಾಲ ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬುದರ ಕುರಿತು ವಿವರ ನೀಡಿದ್ದಾನೆ ಎಂದು ಹೇಳಲಾಗಿದೆ.
ಈ ಅಕ್ರಮವು ಬಹಳ ದಿನಗಳಿಂದ ನಡೆಯುತ್ತಿದ್ದು, ದೇಣಿಗೆ ಎಣಿಕೆ ಕೇಂದ್ರದಲ್ಲಿದ್ದ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಬಳಸಿಕೊಂಡು ಹಣವನ್ನು ಹೊರಗೆ ಸಾಗಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ವಿಚಾರಣೆ ವೇಳೆ ರಾಮಮಂದಿರ ಟ್ರಸ್ಟ್‌ನ ಟ್ರಸ್ಟಿ ಅನಿಲ್ ಮಿಶ್ರಾ ಅವರ ಹೆಸರನ್ನೂ ಅವಿನಾಶ್ ಉಲ್ಲೇಖಿಸಿದ್ದಾನೆ ಎಂದು ತನಿಖಾ ಮೂಲಗಳು ಹೇಳಿವೆ. ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಅವರ ಪಾತ್ರವಿತ್ತು ಎಂದು ಆರೋಪಿಸಲಾಗಿದೆ. ಇದೇ ವೇಳೆ ದೇಣಿಗೆ ನಿರ್ವಹಣೆ ಕುರಿತು ಪ್ರಶ್ನೆಗಳು ಎದ್ದ ಬಳಿಕ ಟ್ರಸ್ಟಿ ಅನಿಲ್ ಮಿಶ್ರಾ ಹಾಗೂ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ :₹37,370 ಕೋಟಿ ಬಾಕಿ ಬಿಲ್‌ಗಳು: ಗುತ್ತಿಗೆದಾರರಿಗೆ 3 ತಿಂಗಳಲ್ಲಿ ಪಾವತಿ ಭರವಸೆ ನೀಡಿದ ಸಿಎಂ ಡಿಕೆಶಿ
ಈ ಪ್ರಕರಣದಲ್ಲಿ ಅವಿನಾಶ್ ಶುಕ್ಲಾ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ರಾಮಶಂಕರ್ ಅಲಿಯಾಸ್ ಟಿನ್ನು ಯಾದವ್, ದೇಣಿಗೆ ಎಣಿಕೆ ಮೇಲ್ವಿಚಾರಕ ಸುಭಾಷ್ ಶ್ರೀವಾಸ್ತವ್, ಅನೂಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ರಾಮ್ ಶಂಕರ್ ಮಿಶ್ರಾ ಹಾಗೂ ಕರುಣೇಶ್ ಪಾಂಡೆ ಸೇರಿದ್ದಾರೆ.
ತನಿಖೆಯ ಪ್ರಕಾರ, ದೇಣಿಗೆ ಎಣಿಕೆ ಕೊಠಡಿಯ ಎರಡು ಕೀಲಿಗಳಲ್ಲಿ ಒಂದು ಟಿನ್ನು ಯಾದವ್ ಬಳಿ ಹಾಗೂ ಇನ್ನೊಂದು ಬ್ಯಾಂಕ್ ಸಿಬ್ಬಂದಿ ಬಳಿ ಇತ್ತು. ಹಣ ಕಳವು ಮಾಡುವಾಗ ಉಳಿದವರು ಮಾನವ ಸರಪಳಿಯಂತೆ ಸುತ್ತುವರಿದು ಮತ್ತೊಬ್ಬನನ್ನು ಮರೆಮಾಚುತ್ತಿದ್ದರು ಎಂದು ಆರೋಪಿಸಲಾಗಿದೆ.
ದೇವಾಲಯದ ಸಿಸಿಟಿವಿ ಕ್ಯಾಮೆರಾಗಳ ವ್ಯಾಪ್ತಿಯಲ್ಲಿನ ‘ಬ್ಲೈಂಡ್ ಸ್ಪಾಟ್’ಗಳನ್ನು ಬಳಸಿಕೊಂಡು ಮೊದಲು ಹಣವನ್ನು ಶೌಚಾಲಯದಲ್ಲಿ ಅಡಗಿಸಿ ನಂತರ ಹೊರಗೆ ಸಾಗಿಸಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಆರೋಪಿಗಳು ಟ್ರಸ್ಟ್‌ನ ಪ್ರಭಾವಿ ವ್ಯಕ್ತಿಗಳ ಆಪ್ತರಾಗಿದ್ದ ಕಾರಣ ಅವರ ಮೇಲೆ ಹೆಚ್ಚಿನ ಅನುಮಾನ ವ್ಯಕ್ತವಾಗಿರಲಿಲ್ಲ ಎನ್ನಲಾಗಿದೆ.
ಪೊಲೀಸರ ಪ್ರಕಾರ, ದೇವಾಲಯದಲ್ಲಿ ಸಾಕಷ್ಟು ಸಿಸಿಟಿವಿ ಹಾಗೂ ನಿಯಂತ್ರಣ ಕೊಠಡಿಯಿಂದ ನಿಗಾ ವ್ಯವಸ್ಥೆ ಇದ್ದರೂ, ಭದ್ರತಾ ಸಿಬ್ಬಂದಿ ಆರೋಪಿಗಳ ಚಟುವಟಿಕೆಗಳ ಮೇಲೆ ಸಮರ್ಪಕ ನಿಗಾ ಇಟ್ಟಿರಲಿಲ್ಲ. ದುರ್ಬಳಕೆಯಾದ ಹಣದಿಂದ ಭೂಮಿ ಹಾಗೂ ಮನೆಗಳನ್ನು ಖರೀದಿಸಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಪ್ರಸ್ತುತ ಆರೋಪಿಗಳ ಬ್ಯಾಂಕ್ ಖಾತೆಗಳು, ಹಣಕಾಸು ವ್ಯವಹಾರಗಳು ಹಾಗೂ ಸ್ಥಿರ-ಚರ ಆಸ್ತಿಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದ ಹಣದ ದುರ್ಬಳಕೆ ಇಷ್ಟು ದಿನ ಪತ್ತೆಯಾಗದೇ ಉಳಿದಿದ್ದು ಹೇಗೆ ಹಾಗೂ ಇದರ ಹಿಂದೆ ಇನ್ನೂ ಪ್ರಭಾವಿ ವ್ಯಕ್ತಿಗಳು ಇದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಹಣಕಾಸು ಅಕ್ರಮದ ಆರೋಪಗಳು ಬಹಿರಂಗವಾದ ಬಳಿಕ ಉತ್ತರ ಪ್ರದೇಶ ಸರ್ಕಾರವು ಜೂನ್ 13ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು.
ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಎಫ್‌ಐಆರ್ ದಾಖಲೆಯಾಗುವ ಮೊದಲೇ, ಜೂನ್ 5ರಂದು ಅವಿನಾಶ್ ಶುಕ್ಲಾ ಅವರ ಮನೆಯಿಂದ ಟ್ರಸ್ಟ್ ವತಿಯಿಂದ ₹58 ಲಕ್ಷ ಹಣ ವಶಪಡಿಸಿಕೊಳ್ಳಲಾಗಿತ್ತು ಎನ್ನಲಾಗಿದೆ. ಬಳಿಕ ಜೂನ್ 5ರಿಂದ 8ರ ನಡುವೆ ಉಳಿದ ಹಣವನ್ನು ಬ್ಯಾಂಕ್ ವರ್ಗಾವಣೆಯ ಮೂಲಕ ಹಿಂದಿರುಗಿಸಲಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಇದನ್ನೂ ನೋಡಿ : ಒಂದು ಕೋಟಿ ಕುಟುಂಬಗಳ ಬದುಕಿನ ಮೇಲೆ ಹೊಡೆತ; ಕನಿಷ್ಠ ವೇತನ ಹಿಂಪಡೆದರೆ ಬೀದಿಗಿಳಿಯುತ್ತೇವೆ: ಕಾರ್ಮಿಕ ಸಂಘಟನೆಗಳು
