ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಮತ್ತೊಂದು ಹೊಡೆತವಾಗಿ, ರಾಜ್ಯಸಭಾ ಸದಸ್ಯ ಪ್ರಕಾಶ್ ಚಿಕ್ ಬರಾಯಿಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆಯೊಂದಿಗೆ ಈ ವಾರದಲ್ಲಿ ಟಿಎಂಸಿ ಮೂವರು ರಾಜ್ಯಸಭಾ ಸದಸ್ಯರನ್ನು ಕಳೆದುಕೊಂಡಂತಾಗಿದ್ದು, ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಪಕ್ಷದ ಒಳಗಿನ ಅಸ್ಥಿರತೆ ಕುರಿತು ಚರ್ಚೆ ಹೆಚ್ಚಿಸಿದೆ.
ಬರಾಯಿಕ್ ಅವರು ರಾಜ್ಯಸಭಾ ಸಭಾಪತಿ ಹಾಗೂ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೇಂದ್ರ ಸಂಪುಟದಲ್ಲಿ ಶೀಘ್ರ ಪುನರ್‌ರಚನೆ ಸಾಧ್ಯತೆ: ಬಿಜೆಪಿ ವಲಯದಲ್ಲಿ ಚರ್ಚೆ
ತಮ್ಮ ಪತ್ರದಲ್ಲಿ ಅವರು, “ರಾಜ್ಯಸಭಾ ಸದಸ್ಯತ್ವದಿಂದ ನಾನು ಸ್ವಯಂ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಇದನ್ನು ತಕ್ಷಣದಿಂದ ಜಾರಿಗೆ ತರಬೇಕು” ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಬುಡಕಟ್ಟು ಸಮುದಾಯದ ಪ್ರತಿನಿಧಿಯಾಗಿದ್ದ ಬರಾಯಿಕ್ ಅವರು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಮಿತಿ ಹಾಗೂ ಬುಡಕಟ್ಟು ವ್ಯವಹಾರಗಳ ಸಲಹಾ ಸಮಿತಿಗಳಲ್ಲಿಯೂ ಸದಸ್ಯರಾಗಿದ್ದರು.
ಇತ್ತೀಚಿನ ದಿನಗಳಲ್ಲಿ ಟಿಎಂಸಿಯಲ್ಲಿ ಸರಣಿ ರಾಜೀನಾಮೆಗಳು ನಡೆಯುತ್ತಿದ್ದು, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಕುರಿತು ಊಹಾಪೋಹಗಳು ಹೆಚ್ಚಿವೆ.
ಈ ವಾರದ ಆರಂಭದಲ್ಲಿ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರಾಯ್ ರಾಜೀನಾಮೆ ನೀಡಿದ್ದರು. ನಂತರ ಬುಧವಾರ ಮತ್ತೊಬ್ಬ ಸಂಸದೆ ಸುಶ್ಮಿತಾ ದೇವ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರನಡೆದಿದ್ದರು.
ಇದನ್ನೂ ನೋಡಿ: ಹಾಸನ | ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಮೋದಿ ಪ್ರತಿಕೃತಿ ದಹನ Janashakthi Media
