ಸೂರತ್: ಪ್ರವಾಹ ಪರಿಸ್ಥಿತಿಯಿಂದ ಸೂರತ್ನಲ್ಲಿ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿದೆ. ಪರಿಹಾರ ಕಾರ್ಯಗಳಲ್ಲಿ ವಿಫಲವಾಗಿದೆ ಎಂಬ ಆರೋಪದ ಹಿನ್ನೆಲೆ, ಸ್ಥಳೀಯರು ಬಿಜೆಪಿ ನಾಯಕರನ್ನು ಎದುರಿಸಿ ಪ್ರಶ್ನಿಸಿದ್ದಾರೆ.
ಕಾಪೋದ್ರಾ ಪ್ರದೇಶದಲ್ಲಿ ಬಿಜೆಪಿ ಕಾರ್ಪೊರೇಟರ್ ಹಂಸಾ ಗಜೇರಾ ಅವರನ್ನು ಮಹಿಳೆಯರು ಸುತ್ತುವರಿದು ಕುಡಿಯುವ ನೀರಿನ ಕೊರತೆಯನ್ನು ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡರು. ಸಂಕಷ್ಟದ ಸಮಯದಲ್ಲಿ ಜನರನ್ನು ಕೈಬಿಟ್ಟಿದ್ದೀರಿ ಎಂದು ಅವರು ಆರೋಪಿಸಿದರು.
ಪಾಂಡೆಸರಾ ಕೈಗಾರಿಕಾ ಪ್ರದೇಶದಲ್ಲಿಯೂ ಇದೇ ರೀತಿಯ ಪ್ರತಿಭಟನೆ ನಡೆದಿದ್ದು, ಬಿಜೆಪಿ ಶಾಸಕ ಮನು ಪಟೇಲ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ಆಡಳಿತದ ಪ್ರತಿಕ್ರಿಯೆ ತಡವಾಗಿದೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ಕ್ರೌರ್ಯಕ್ಕೆ ಮಿತಿಯಿಲ್ಲ ಹಿಂಸೆಗೆ ಕೊನೆಯಿಲ್ಲ
ಪರ್ವತ್ ಪಟಿಯಾ ಪ್ರದೇಶದಲ್ಲಿ ಸ್ಥಳೀಯರು ಅಧಿಕಾರಿಗಳನ್ನು ಪ್ರವಾಹ ನೀರಿನೊಳಗೆ ನಡೆದು ಪರಿಸ್ಥಿತಿ ನೋಡಲು ಬಲವಂತಪಡಿಸಿದರು. ಈ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಡಳಿತದ ಮೇಲೆ ಒತ್ತಡ ಹೆಚ್ಚಿಸಿದೆ.
ಬಿಜೆಪಿ ಕಚೇರಿಯಲ್ಲಿ ಮೊಬೈಲ್ ನಿಯಮ: ಒಳಗೊಂದು ಗೊಂದಲ
ಗಾಂಧಿನಗರದ ಶ್ರೀ ಕಮಲಂ ಬಿಜೆಪಿ ಕಚೇರಿಯಲ್ಲಿ ಹೊಸ ನಿಯಮ ಜಾರಿಗೆ ಬಂದಿದ್ದು, ಪ್ರಮುಖ ಸಭೆಗಳಿಗೆ ಹಾಜರಾಗುವ ನಾಯಕರು ತಮ್ಮ ಮೊಬೈಲ್ ಫೋನ್ಗಳನ್ನು ಮುಂಚಿತವಾಗಿ ಜಮಾ ಮಾಡಬೇಕಾಗಿದೆ.
ಪಕ್ಷದ ನಾಯಕರು, ಶಾಸಕರು, ಸಂಸದರು ಮತ್ತು ಪದಾಧಿಕಾರಿಗಳು ಸಭೆಗೆ ಮುನ್ನ ನೋಂದಣಿ ಮಾಡಿಕೊಂಡು ಫೋನ್ಗಳನ್ನು ಒಪ್ಪಿಸಬೇಕಾಗಿದೆ. ಈ ಕ್ರಮವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಪಕ್ಷದ ಒಳಗಿನ ಮಾಹಿತಿಯ ಪ್ರಕಾರ, ಗುಪ್ತ ಚರ್ಚೆಗಳು ಮತ್ತು ಆಡಿಯೋ-ವೀಡಿಯೋ ಸೋರಿಕೆಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ವಿರೋಧ ಪಕ್ಷಗಳು ಇದನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದು, ಬಿಜೆಪಿ ತನ್ನದೇ ನಾಯಕರ ಮೇಲೆ ನಂಬಿಕೆ ಕಳೆದುಕೊಂಡಿದೆಯೇ ಎಂದು ಪ್ರಶ್ನಿಸುತ್ತಿವೆ.
ಐಪಿಎಸ್ ವರ್ಗಾವಣೆ: ಇನ್ನೂ ಅನಿಶ್ಚಿತತೆ
ಗುಜರಾತ್ ಪೊಲೀಸ್ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಕುರಿತು ಅನಿಶ್ಚಿತತೆ ಮುಂದುವರಿದಿದೆ. ಈ ಬದಲಾವಣೆಗಳು ಯಾವಾಗ ಜಾರಿಗೆ ಬರಲಿವೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ರಥಯಾತ್ರೆಯ ನಂತರವೇ ಅಥವಾ ಜುಲೈ 30ರಂದು ನಡೆಯಲಿರುವ ವಡೋದರದ ಮಂಜಲ್ಪುರ ಉಪಚುನಾವಣೆಯ ಬಳಿಕವೇ ವರ್ಗಾವಣೆ ನಡೆಯಲಿದೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಸೂರತ್ ಪೊಲೀಸ್ ಆಯುಕ್ತರಂತಹ ಪ್ರಮುಖ ಹುದ್ದೆಗಳು ಇನ್ನೂ ಖಾಲಿ ಇರುವುದರಿಂದ, ವರ್ಗಾವಣೆಯ ಕಡತ ಸಿದ್ಧವಾಗಿದ್ದರೂ ಅಂತಿಮ ನಿರ್ಧಾರ ರಾಜಕೀಯ ಮಟ್ಟದಲ್ಲಿ ತೆಗೆದುಕೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿವೆ.
ಕಚ್ ಗಡಿ ಪ್ರದೇಶ, ಸೂರತ್ ಮತ್ತು ವಡೋದರ ಪೊಲೀಸ್ ವಲಯಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳ ಸಾಧ್ಯತೆ ಇದ್ದು, ಜುಲೈ ಕೊನೆಯ ವೇಳೆಗೆ ಐಪಿಎಸ್ ಅಧಿಕಾರಿಗಳ ಭಾರೀ ಮಟ್ಟದ ವರ್ಗಾವಣೆ ನಡೆಯುವ ನಿರೀಕ್ಷೆ ಇದೆ.
ಇದನ್ನೂ ನೋಡಿ: “ವೋಟ್ ಬೇಕಾದಾಗ ನಾವು ಬೇಕು, ವ್ಯಾಪಾರಕ್ಕೆ ಜಾಗ ಕೇಳಿದರೆ ಬೇಡವೇ?” Janashakthi Media
