ಆಗಸ್ಟ್ 13: ಟ್ರಂಪ್‍ ಸುಂಕ ಬೆದರಿಕೆ, ಯು.ಕೆ. ವ್ಯಾಪಾರ ಒಪ್ಪಂದ ವಿರುದ್ಧ ಪ್ರತಿಭಟನೆ

“ಮತ್ತೆ ಭಾರತ ಬಿಟ್ಟು ತೊಲಗಿ ಎಂದು ಭಾರತದ ಜನತೆ ಒಕ್ಕೊರಲಿನಿಂದ ಹೇಳುತ್ತಾರೆ”

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ ಸುಂಕ ಬೆದರಿಕೆಗಳು ಮತ್ತು ಇತ್ತೀಚೆಗೆ ಕೇಂದ್ರ ಸರ್ಕಾರ ಸಹಿ ಮಾಡಿದ ಕಾರ್ಪೊರೇಟ್ ಪರ ಭಾರತ-ಯುಕೆ ಸಮಗ್ರ ಆರ್ಥಿಕ ವ್ಯಾಪಾರ ಒಪ್ಪಂದ (ಸಿಇಟಿಎ)ವನ್ನು ತೀವ್ರವಾಗಿ ವಿರೋಧಿಸಿ, ಹತ್ತು ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಜಂಟಿಯಾಗಿ ಆಗಸ್ಟ್ 13, 2025 ರಂದು ದೇಶಾದ್ಯಂತ ಬೃಹತ್ ಪ್ರತಿಭಟನೆಗಳಿಗೆ ಕರೆ ನೀಡಿವೆ. ಸುಂಕ

ಈ ಪ್ರತಿಭಟನೆಯು ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಭಾರತ ಹೆಚ್ಚೆಚ್ಚಾಗಿ ಅಡಿಯಾಳಾಗುತ್ತಿದೆ ಎಂಬ ಬಗ್ಗೆ ಎಚ್ಚರಿಕೆಯನ್ನು ಮೂಡಿಸುತ್ತದೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಜನರ ಜೀವನೋಪಾಯಕ್ಕೆ ಧಕ್ಕೆ ತರುವ ಎಲ್ಲಾ ವ್ಯಾಪಾರ ಮಾತುಕತೆಗಳನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತದೆ ಎಂದು ಈ ಕುರಿತು ಪ್ರಕಟಿಸಿರುವ ಜಂಟಿ ಹೇಳಿಕೆ ತಿಳಿಸಿದೆ. ಸುಂಕ

ಭಾರತೀಯ ಸರಕುಗಳ ಮೇಲೆ 25% ಸುಂಕಗಳನ್ನು ವಿಧಿಸುವ ಮತ್ತು ರಷ್ಯಾದೊಂದಿಗೆ ತೈಲ ವ್ಯಾಪಾರದ ಮೇಲೆ ದಂಡನಾತ್ಮಕ ತೆರಿಗೆಯನ್ನು ವಿಧಿಸುವ ಟ್ರಂಪ್ ಬೆದರಿಕೆಯನ್ನು ಆರ್ಥಿಕ ದಬ್ಬಾಳಿಕೆಯ ಒಂದು ನಗ್ನ ಕೃತ್ಯವೆಂದು ಹೇಳಿರುವ ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಎಸ್‍ಕೆಎಂ, ಈ ಕ್ರಮಗಳ ಉದ್ದೇಶ ಭಾರತ ಸ್ವತಂತ್ರ ವ್ಯಾಪಾರ ಸಂಬಂಧಗಳನ್ನು, ವಿಶೇಷವಾಗಿ ರಷ್ಯಾದೊಂದಿಗೆ, ತ್ಯಜಿಸುವಂತೆ ಬಲವಂತ  ಹೇರುವುದಾಗಿದ್ದು,  ಭಾರತ ಸರ್ಕಾರವು ಅಂತಹ ಬೆದರಿಕೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಮತ್ತು ವಿದೇಶಿ ಹಸ್ತಕ್ಷೇಪವಿಲ್ಲದೆ ಯಾವುದೇ ದೇಶದೊಂದಿಗೆ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವ ತನ್ನ ಸಾರ್ವಭೌಮ ಹಕ್ಕನ್ನು ಪ್ರತಿಪಾದಿಸಬೇಕು ಎಂದು ಒತ್ತಾಯಿಸಿವೆ. ಸುಂಕ

ಇದನ್ನೂ ಓದಿ: ಕೊರಟಗೆರೆ| ಕೊಲೆಯಾದ ಮಹಿಳೆಯ ಗುರುತು ಪತ್ತೆ

ಭಾರತವನ್ನು ದಬಾಯಿಸುವ ಅಮೆರಿಕದ ನಡೆಗಳ ಎದುರು ಕೇಂದ್ರ ಸರ್ಕಾರದ ಮೌನವಾಗಿದೆ ಎಂದು ಬಲವಾಗಿ ಟೀಕಿಸಿರುವ ಜಂಟಿ ಹೇಳಿಕೆ ಇದನ್ನು ಸಾಮ್ರಾಜ್ಯಶಾಹಿ ಆದೇಶಗಳಿಗೆ  ಉದ್ದೇಶಪೂರ್ವಕ ಶರಣಾಗತಿ ಎಂದು ಬಣ್ಣಿಸಿದೆ. ಈ ಅಡಿಯಾಳುತನವನ್ನು ಈಗ ಭಾರತ-ಯುಕೆ ಸಿಇಟಿಎಯಂತಹ ಹಿಂಬಾಗಿಲಿನ ವ್ಯಾಪಾರ ಒಪ್ಪಂದಗಳ ಮೂಲಕ ಔಪಚಾರಿಕಗೊಳಿಸಲಾಗುತ್ತಿದೆ. ಸುಂಕ

ಇದನ್ನು ಸರ್ಕಾರವು ಸಂಸತ್ತಿನ ಪರಿಶೀಲನೆ ಅಥವಾ ಸಾರ್ವಜನಿಕ ಸಮಾಲೋಚನೆ ಇಲ್ಲದೆ ಮುಂದಕ್ಕೊತ್ತುತ್ತಿದೆ. ಈ ಒಪ್ಪಂದವು ಬ್ರಿಟಿಷ್ ಕೃಷಿ ವ್ಯಾಪಾರ ಕಾರ್ಪೊರೇಟ್‍ ಗಳು ಭಾರತೀಯ ಮಾರುಕಟ್ಟೆಗಳಲ್ಲಿ ಅಗ್ಗದ ಹೈನು, ಗೋಧಿ ಮತ್ತು ಮಾಂಸವನ್ನ ತಂದು ಸುರಿಯಲು ಅನುವು ಮಾಡಿಕೊಡುತ್ತದೆ, ಇದು ಕೇರಳದಲ್ಲಿ ಭಾರತ-ಆಸಿಯಾನ್ ಎಫ್‌ಟಿಎಯಿಂದ ರಬ್ಬರ್ ಬೆಲೆಗಳು 70% ರಷ್ಟು ಕುಸಿದು ಉಂಟಾದ ನಾಶವನ್ನು ಪುನರಾವರ್ತಿಸುತ್ತದೆ, ಭಾರತದ ರೈತರ ಜೀವನೋಪಾಯವನ್ನು ಧ್ವಂಸಗೊಳಿಸುತ್ತದೆ ಎಂದು  ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ರೈತಸಂಘಗಳ ಜಂಟಿ ಹೇಳಿಕೆ ಹೇಳುತ್ತದೆ.

ಸಿಇಟಿಎ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಪೊರೇಟ್ ಕಬಳಿಕೆಗೆ ಅನುವು ಮಾಡಿಕೊಡುತ್ತದೆ, ಸಾರ್ವಜನಿಕ ಆಸ್ಪತ್ರೆಗಳ ಖಾಸಗೀಕರಣವನ್ನು ತ್ವರಿತಗೊಳಿಸುತ್ತದೆ ಮತ್ತು ಔಷಧೀಯ ಏಕಸ್ವಾಮ್ಯವನ್ನು ಬಲಪಡಿಸುತ್ತದೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಎಸ್‌ಕೆಎಂ ಎಚ್ಚರಿಸಿವೆ. ಇದು ಔಷಧಿ ಬೆಲೆಗಳು ಏರಿಕೆಯಾಗಲು ಮತ್ತು ಸಾಮಾನ್ಯ ಜನರಿಗೆ ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗದಂತೆ ಮಾಡುತ್ತದೆ. ಪ್ರಸ್ತಾವಿತ ಭಾರತ-ಯುಎಸ್ ವ್ಯಾಪಾರ ಒಪ್ಪಂದ ಸೇರಿದಂತೆ ಎಲ್ಲಾ ಇಂತಹ ಗುಟ್ಟಿನ ವ್ಯಾಪಾರ ಮಾತುಕತೆಗಳನ್ನು ಸರ್ಕಾರ ತಕ್ಷಣವೇ ನಿಲ್ಲಿಸಬೇಕು. ಈ ಒಪ್ಪಂದವು ಭಾರತದ ಡೈರಿ ಮತ್ತು ಕೃಷಿ ವಲಯಗಳನ್ನು ಕಾರ್ಗಿಲ್‌ನಂತಹ ದೈತ್ಯ ಅಮೇರಿಕನ್ ಕಾರ್ಪೊರೇಟ್‍ಗಳಿಗೆ ತೆರೆಯುವ ನಿರೀಕ್ಷೆಯಿದೆ, ಇದು ಸ್ಥಳೀಯ ಬೆಲೆಗಳಲ್ಲಿ ಕುಸಿತ ಮತ್ತು ಭಾರಿ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ.

ಜುಲೈ 9, 2025 ರಂದು ಕಾರ್ಮಿಕರು ಮತ್ತು ರೈತರು ನಡೆಸಿದ ಯಶಸ್ವಿ ರಾಷ್ಟ್ರವ್ಯಾಪಿ ಮುಷ್ಕರದ ಹೊರತಾಗಿಯೂ, ಸರ್ಕಾರವು ತನ್ನ ಜನವಿರೋಧಿ ನೀತಿಗಳನ್ನು ಹಿಂತೆಗೆದುಕೊಂಡಿಲ್ಲ ಎಂದಿರುವ  ಜಂಟಿ ಹೇಳಿಕೆಯು ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳಿಗೆ ವಿರೋಧವನ್ನು ಪುನರುಚ್ಚರಿಸಿತು, C2+50% ನಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿಯನ್ನು ಕೊಡಲು ಮತ್ತು ಕೃಷಿ ಸಾಲ ಮನ್ನಾ ಮಾಡಲು ಸರಕಾರ ನಿರಾಕರಿಸುತ್ತಲೇ ಇದೆ. ‘ಜಲ್, ಜಂಗಲ್, ಜಮೀನ್’ (ನೀರು, ಅರಣ್ಯ, ಭೂಮಿ)ಮೇಲೆ ನಡೆಯುತ್ತಿರುವ ದಾಳಿಯನ್ನು ಅವರು ಖಂಡಿಸುತ್ತ, ಅಭಿವೃದ್ಧಿಯ ಸುಳ್ಳು ನೆಪದಲ್ಲಿ, ವಸಾಹತುಶಾಹಿ ಯುಗದ ಭೂ ಕಾನೂನುಗಳನ್ನು ಅನ್ವಯಿಸುವ ಮೂಲಕವೂ, ಕಾರ್ಪೊರೇಟ್ ಭೂ ಕಬಳಿಕೆಯನ್ನು ನಡೆಸಲಾಗುತ್ತಿದೆ ಎಂದು ಕಾರ್ಮಿಕ ಮತ್ತು ರೈತ ಸಂಘಗಳು  ಹೇಳಿವೆ.

ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಅಗತ್ಯ ಸಾರ್ವಜನಿಕ ಸೇವೆಗಳ ನಿರಂತರ ಖಾಸಗೀಕರಣ, ರಾಷ್ಟ್ರೀಯ ಸ್ವತ್ತುಗಳನ್ನು ಮಾರಾಟ ಮಾಡಲು ಒತ್ತಡ ಮತ್ತು ವಿದೇಶಿ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಬಹಿರಂಗ ಉತ್ತೇಜನೆ ಭಾರತದ ಪ್ರಜಾಪ್ರಭುತ್ವ ಮತ್ತು ಆರ್ಥಿಕ ಅಡಿಪಾಯಗಳಿಗೆ ಬಗೆಯುವ ವಿಶ್ವಾಸಘಾತ. ಅದನ್ನು ಪ್ರತಿರೋಧಿಸಬೇಕು, ದೇಶ ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯಗಳು ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಕಾಪಾಡಿಕೊಳ್ಳಬೇಕು ಎಂದು ಈ ಸಂಘಟನೆಗಳು  ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಯುವಕರು ಮತ್ತು ಎಲ್ಲಾ ಪ್ರಜಾಪ್ರಭುತ್ವ ಶಕ್ತಿಗಳಿಗೆ ಕರೆ ನೀಡಿವೆ.

ಆಗಸ್ಟ್ 13 ರ ಪ್ರತಿಭಟನೆಯಲ್ಲಿ ದೇಶಾದ್ಯಂತ ಟ್ರ್ಯಾಕ್ಟರ್ ಮತ್ತು ಮೋಟಾರ್ ಸೈಕಲ್ ರ್ಯಾಲಿಗಳು, ಪ್ರತಿಭಟನಾ ಮೆರವಣಿಗೆಗಳು, ಸಾರ್ವಜನಿಕ ಸಭೆಗಳು ಮತ್ತು ಇತರ ಸಂಘಟಿತ ಕ್ರಮಗಳು ಸೇರಿವೆ. “ಈಸ್ಟ್ ಇಂಡಿಯಾ ಕಂಪನಿ ವ್ಯಾಪಾರದ ಮೂಲಕ ಪ್ರವೇಶಿಸಿ ಭಾರತವನ್ನು ವಸಾಹತುವನ್ನಾಗಿ ಮಾಡಿತು. ಇಂದು, ಅದೇ ಪ್ರಕ್ರಿಯೆಯನ್ನು ಯುಕೆಯೊಂದಿಗೆ ಸಿಇಟಿಎ ಮತ್ತು ಯುಎಸ್‍ ನೊಂದಿಗೆ ವ್ಯಾಪಾರ ಒಪ್ಪಂದಗಳ ಮೂಲಕ ಪುನರಾವರ್ತಿಸಲಾಗುತ್ತಿದೆ. ಆಗಸ್ಟ್ 13 ರಂದು, ಭಾರತದ ಜನತೆ ‘ಮತ್ತೆ ಭಾರತ ಬಿಟ್ಟು ತೊಲಗಿ’ ಎಂದು ಒಕ್ಕೊರಲಿನಿಂದ ಹೇಳುತ್ತಾರೆ” ಎಂದು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಸಂಯುಕ್ತ ಕಿಸಾನ್‍ ಮಂಚ್‍ ಹೇಳಿವೆ.

ಇದನ್ನೂ ನೋಡಿ: ಸ್ವತಂತ್ರ ಪತ್ರಕರ್ತರ ಮೇಲೆ ಹಲ್ಲೆ | ಸ್ಥಳದಲ್ಲಿ ನಡೆದ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ರಜತ್​ ಕಿಶನ್ |Janashakthi

Donate Janashakthi Media

Leave a Reply

Your email address will not be published. Required fields are marked *