ಕಾರ್ಕಳ: ರಾಜ್ಯದ ಪರವಾನಗಿ ಹೊಂದಿದ ಭೂಮಾಪಕರ ನಿರಂತರ ಮುಷ್ಕರದಿಂದ ಭೂಮಾಪನ ಸೇವೆಗಳು ಕಳೆದ ಹಲವು ವಾರಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಜಮೀನು ಸಂಬಂಧಿತ ವ್ಯವಹಾರಗಳು ಅಸ್ತವ್ಯಸ್ತಗೊಂಡಿವೆ. ಖಾಯಂ ನೇಮಕಾತಿ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನದ ಬೇಡಿಕೆಯನ್ನು ಮುಂದಿಟ್ಟು ಭೂಮಾಪಕರು ಪ್ರತಿಭಟನೆ ಮುಂದುವರಿಸುತ್ತಿದ್ದಾರೆ. ಭೂಮಾಪಕರ
ಕಾರ್ಕಳ ತಾಲೂಕಿನಲ್ಲಿ ಆಲಿನೇಷನ್, ಹದ್ದುಬಸ್ತು, ತತ್ಕಾಲ್ ಪೋಡಿ ಸೇರಿದಂತೆ 700ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ. ಹೆಬ್ರಿ ಭಾಗದಲ್ಲಿಯೇ ನೂರಕ್ಕೂ ಹೆಚ್ಚು ಅರ್ಜಿಗಳು ನಿರ್ವಹಣೆಯಾಗದೆ ಉಳಿದಿರುವುದರಿಂದ ಜನರು ದಿನಂಪ್ರತಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿಭಟನೆಯ ಪರಿಣಾಮ ಜಮೀನು ನೋಂದಣಿ, ಖರೀದಿ–ಮಾರಾಟ, ದಾನಪತ್ರ, ಖಾತೆ ಬದಲಾವಣೆ, ಗಡಿ ಗುರುತು ಹಾಗೂ ಭೂಮಾಪನದ ಇತರೆ ಪ್ರಕ್ರಿಯೆಗಳು ಸಂಪೂರ್ಣ ನಿಂತಿವೆ. ಮನೆ ನಿರ್ಮಾಣಕ್ಕೆ ಸಾಲ ಪಡೆಯಲು ಯೋಚಿಸಿದ್ದವರು, ಜಮೀನು ಖರೀದಿಗೆ ಮುಂಗಡ ನೀಡಿದ್ದವರು ಹಾಗೂ ಕೃಷಿ ವಿಸ್ತರಣೆಗೆ ಮುಂದಾದ ರೈತರು ಗಂಭೀರ ತೊಂದರೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ : ಮಣಿಪುರ ಹಿಂಸಾಚಾರ | ವದಂತಿಗಳ ಹಾವಳಿಯಲ್ಲಿ ಉರಿದ ಜನಾಂಗೀಯ ಸಂಘರ್ಷ
ವಿದೇಶಗಳಿಂದ ಅಥವಾ ಇತರ ರಾಜ್ಯಗಳಿಂದ ಸ್ವಗ್ರಾಮಕ್ಕೆ ಬಂದಿರುವ ಅನೇಕರು ತಮ್ಮ ಜಮೀನು ನೋಂದಣಿ ಹಾಗೂ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದೆ ಆರ್ಥಿಕ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಸಮಯದ ಅಭಾವದಿಂದ ಮತ್ತೆ ಹಿಂತಿರುಗಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.
ರೈತ ವರ್ಗಕ್ಕೂ ಇದು ದೊಡ್ಡ ಹೊಡೆತವಾಗಿದೆ. ಹದ್ದುಬಸ್ತು, ಪೋಡಿ ಹಾಗೂ ಆಲಿನೇಷನ್ ಪ್ರಕ್ರಿಯೆಗಳು ನಿಲ್ಲುವುದರಿಂದ ಗಡಿ ವಿವಾದಗಳು ಬಗೆಹರಿಯುತ್ತಿಲ್ಲ. ಕೃಷಿ ಸಾಲ ಪಡೆಯಲು ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಲಾಭಾರ್ಥಿಗಳಿಗೂ ಆಡಳಿತಾತ್ಮಕ ತೊಂದರೆ ಹೆಚ್ಚಾಗಿದೆ.
ಭೂಮಾಪಕರ ಹೇಳಿಕೆಯ ಪ್ರಕಾರ, ಸರ್ಕಾರ ನಿಗದಿಪಡಿಸಿರುವ ಸೇವಾ ಶುಲ್ಕ ಅತ್ಯಂತ ಕಡಿಮೆ. ದೂರದ ಗ್ರಾಮಗಳಿಗೆ ತೆರಳಿ ಕೆಲಸ ನಿರ್ವಹಿಸಬೇಕಾದರೂ ಸಿಗುವ ಮೊತ್ತ ಪ್ರಯಾಣ ವೆಚ್ಚಕ್ಕೂ ಸಾಕಾಗುತ್ತಿಲ್ಲ. ಜೊತೆಗೆ ಸಹಾಯಕ ಸಿಬ್ಬಂದಿ, ಭದ್ರತೆ ಹಾಗೂ ಉದ್ಯೋಗ ಸ್ಥಿರತೆ ಇಲ್ಲದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಹಲವು ವರ್ಷಗಳಿಂದ ಸೇವೆ ಸಲ್ಲಿಸಿದರೂ ಖಾಯಂ ಹುದ್ದೆ ನೀಡದಿರುವುದನ್ನು ವಿರೋಧಿಸಿ ಅವರು ಹೋರಾಟ ತೀವ್ರಗೊಳಿಸಿದ್ದಾರೆ.
ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿದ್ದು, ಜನಪ್ರತಿನಿಧಿಗಳು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಭೂಮಾಪನ ಸೇವೆಗಳನ್ನು ಶೀಘ್ರ ಪುನರಾರಂಭಿಸುವಂತೆ ಆಗ್ರಹ ಹೆಚ್ಚಾಗಿದೆ.
ಇದನ್ನೂ ನೋಡಿ : ಡಿಲಿಮಿಟೇಶನ್: ನ್ಯಾಯದ ಮುಖವಾಡದಲ್ಲಿ ಪ್ರಾಬಲ್ಯದ ರಾಜಕಾರಣ! Janashakthi Media
