ಬೆಂಗಳೂರು: ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ದಲಿತ ಎಡಗೈ ಸಮುದಾಯಕ್ಕೆ ಶೇ. 5.25, ಬಲಗೈ ಸಮುದಾಯಕ್ಕೆ ಶೇ 5.25 ಹಾಗೂ ಇತರರಿಗೆ ಶೇ 4.5 ರಂತೆ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಇದಕ್ಕೆ ಸಚಿವ ಸಂಪುಟ ಸಭೆ ಯಾವುದೇ ಅಪಸ್ವರ ಇಲ್ಲದೆ ಒಪ್ಪಿಗೆ ನೀಡಿದೆ.
ಶುಕ್ರವಾರ ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಒಳ ಮೀಸಲಾತಿಗೆ ಸಂಬಂಧಿಸಿದಂತೆ ತಾಂತ್ರಿಕ ಸಮಿತಿ ಮಾಡಬೇಕೆಂದು ಕಳೆದ ಸಂಪುಟ ಸಭೆಯಲ್ಲಿ ತೀರ್ಮಾನ ಆಗಿತ್ತು. ಆ ಸಮಿತಿ ಶುಕ್ರವಾರ ವರದಿ ನೀಡಿದೆ. ಇದೀಗ ಶೇ 15 ಪ್ರಮಾಣದಂತೆ ದಲಿತ ಎಡಗೈ ಸಮುದಾಯಕ್ಕೆ 5.3, ಎಡಗೈ ಸಮುದಾಯಕ್ಕೆ 5.3 ಹಾಗೂ 4.4 ಹಂಚಿಕೆ ಮಾಡುವಂತೆ ವರದಿ ನೀಡಿತ್ತು. ಆದರೆ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದ ಬಳಿಕ ಮೀಸಲಾತಿ ಪ್ರಮಾಣವನ್ನು 5.25, 5.25 ಹಾಗೂ 4.5 ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಸಮಗ್ರ ಪುಸ್ತಕ ನೀತಿ ರೂಪಿಸಲು ಆಗ್ರಹ: ಗ್ರಂಥಾಲಯ ಇಲಾಖೆಯ ವಿರುದ್ಧ ಪ್ರಕಾಶಕರ ಆಕ್ರೋಶ
ಒಳ ಮೀಸಲಾತಿಗೆ ಹೋರಾಟ ನಡೆಯುತ್ತಿತ್ತು. ಈ ನಡುವೆ ಚಿತ್ರದುರ್ಗದಲ್ಲಿ ಡಾ. ಜಿ ಪರಮೇಶ್ವರ್ ನೇತೃತ್ವದಲ್ಲಿ ಸಮಾವೇಶ ಮಾಡಲಾಗಿತ್ತು. ಅಲ್ಲಿ, ಒಳ ಮೀಸಲಾತಿ ಮಾಡಲು ಎಸ್ ಸಿ ಸಮುದಾಯದ 101 ಜಾತಿಗಳು ಭಾಗಿಯಾಗಿ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿಯ ಭರವಸೆ ನೀಡಲಾಗಿದೆ. 2024 ರಲ್ಲಿ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಒಳಮೀಸಲಾತಿ ಮಾಡಬಹುದು ಎಂದು ತೀರ್ಪು ನೀಡಿತ್ತು. ಇದಕ್ಕೆ ಸಂವಿಧಾನದ ವಿರೋಧ ಇಲ್ಲ ಎಂದಿತ್ತು.
ಬಳಿಕ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಅಯೋಗ ರಚನೆ ಮಾಡಿದ್ದೆವು. ಅವರು ನೀಡಿದ ವರದಿಯನ್ನು ಸಂಪುಟ ಅಂಗೀಕಾರ ಮಾಡಿತ್ತು. 6,5,4,1,1 ಹಂಚಿಕೆ ಮಾಡಲಾಗಿತ್ತು. ಅದರೆ ಸಂಪುಟದಲ್ಲಿ ಎಡಗೈಗೆ 6 ಬಲಗೈಗೆ 6 ಹಾಗೂ ಇತರೇ 5 ಹಂಚಿಕೆ ಮಾಡಿದ್ದೆವು. ಬಳಿಕ ಕಾನೂನು ಮಾಡಲಾಗಿತ್ತು. ಆದರೆ ರೋಸ್ಟರ್ ಬಿಂದುವಿನಲ್ಲಿ ಗೊಂದಲ ನಿರ್ಮಾಣ ಆಗಿತ್ತು. ಅಲೆಮಾರಿ ಸಮುದಾಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಮೀಸಲಾತಿ ಪ್ರಮಾಣ ಶೇ 50 ಮೀರಬಾರದು ಎಂದು ನ್ಯಾಯಾಲಯ ಸೂಚಿಸಿತ್ತು ಎಂದು ತಿಳಿಸಿದರು.
ನಾಗಮೋಹನ್ ದಾಸ್ ಆಯೋಗ ಎಸ್ ಸಿ ಎಸ್ ಟಿ ಮೀಸಲಾತಿ ಪ್ರಮಾಣವನ್ನು 24% ನೀಡಿತ್ತು. ಹೀಗಾಗಿ ಮೀಸಲಾತಿ ಪ್ರಮಾಣ ಶೇ. 56 ಕ್ಕೆ ಏರಿಕೆ ಅಗಿತ್ತು. ಹೀಗಾಗಿ ಶೇ 50 ಸೀಲಿಂಗ್ ಮೀರಬಾರದು ಎಂದು ಕೋರ್ಟ್ ಆದೇಶ ನೀಡಿತ್ತು. ಇಂದಿರಾ ಸಹಾನಿ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಹೈಕೋರ್ಟ್ ಪುನರುಚ್ಚಾರ ಮಾಡಿತ್ತು. ರೋಸ್ಟರ್ ಬಿಂದು ಸರಿಯಾಗಿಲ್ಲ ಎಂಬ ಕಾರಣ ನೀಡಿ ಪ್ರತಿಭಟನೆಗಳು ನಡೆಯುತ್ತಿದ್ದವು. ಕಳೆದ ತಿಂಗಳು ವಿಶೇಷ ಸಚಿವ ಸಂಪುಟ ಸಭೆ ಮಾಡಲು ತೀರ್ಮಾನ ಮಾಡಿದ್ದೆವು. ನೀತಿ ಸಂಹಿತೆ ಕಾರಣಕ್ಕಾಗಿ ಸಂಪುಟ ಸಭೆ ಮಾಡಿಲ್ಲ ಎಂದು ವಿವರಿಸಿದರು.
ಇದನ್ನೂ ನೋಡಿ : “ಮಹಿಳಾ ಮೀಸಲಾತಿ ಮಸೂದೆ- ಮೂರು ದಶಕಗಳು:ಅವಲೋಕನ”
