ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು ಸಾಧ್ಯತೆ; ಅಧಿಸೂಚನೆಗೆ ಸಿದ್ಧತೆ

ಬೆಂಗಳೂರು: ಏಪ್ರಿಲ್‌ 21ರಂದು ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್‌ ಗೌಡರ ಹತ್ಯೆ ಪ್ರಕರಣದಲ್ಲಿ ದೋಷಿಯಾಗಿರುವ ಶಾಸಕ ವಿನಯ್‌ ಕುಲಕರ್ಣಿ ಅವರ ಶಾಸಕ ಸ್ಥಾನ ರದ್ದತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ.

ಸಿಬಿಐ ತನಿಖೆ ನಡೆಸಿದ್ದ ಈ ಗಂಭೀರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಳೆದ ಏಪ್ರಿಲ್ 15 ರಂದು ವಿನಯ್ ಕುಲಕರ್ಣಿ ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ತದನಂತರ ಏಪ್ರಿಲ್ 17 ರಂದು ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಲಾಗಿತ್ತು.

ಭಾರತೀಯ ಪ್ರಜಾಪ್ರತಿನಿಧಿ ಕಾಯ್ದೆಯ ನಿಯಮಗಳ ಪ್ರಕಾರ, ಯಾವುದೇ ಶಾಸಕರಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆಯಾದಲ್ಲಿ ಅವರ ಸದಸ್ಯತ್ವವು ತಕ್ಷಣದಿಂದಲೇ ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಧಾನಸಭಾ ಸಚಿವಾಲಯವು ಅಧಿಕೃತ ಆದೇಶ ಹೊರಡಿಸಲು ಸಜ್ಜಾಗಿದೆ.

ಇದನ್ನೂ ಓದಿ: ಗಾಂಧೀಜಿ ಪುತ್ಥಳಿ ಭಗ್ನ; ಸ್ವಯಂಪ್ರೇರಿತ ಪ್ರಕರಣ ದಾಖಲು

ಕಳೆದ ಶುಕ್ರವಾರವೇ ನ್ಯಾಯಾಲಯದ ತೀರ್ಪು ಪ್ರಕಟವಾಗಿದ್ದರೂ, ಶನಿವಾರ ಮತ್ತು ಭಾನುವಾರದ ರಜೆ ಹಾಗೂ ಸೋಮವಾರ ಬಸವ ಜಯಂತಿಯ ಸರ್ಕಾರಿ ರಜೆ ಇದ್ದ ಕಾರಣ ಅಧಿಸೂಚನೆ ಹೊರಡಿಸುವುದು ವಿಳಂಬವಾಗಿತ್ತು.

ಇಂದು ನ್ಯಾಯಾಲಯದ ಅಧಿಕೃತ ತೀರ್ಪಿನ ಪ್ರತಿಯನ್ನು ಪಡೆದ ನಂತರ ಅಥವಾ ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆದೇಶದ ಪ್ರತಿಯನ್ನು ಆಧರಿಸಿ ವಿಧಾನಸಭಾ ಸಚಿವಾಲಯವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ. ಈ ಮೂಲಕ ಧಾರವಾಡ ಕ್ಷೇತ್ರವು ಶಾಸಕರಿಲ್ಲದೆ ಖಾಲಿ ಇದೆ ಎಂಬ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ರವಾನಿಸಲಾಗುತ್ತದೆ.

ಮತ್ತೊಂದೆಡೆ, ವಿನಯ್ ಕುಲಕರ್ಣಿ ಅವರ ಪರ ವಕೀಲರು ಈ ಶಿಕ್ಷೆಯನ್ನು ಪ್ರಶ್ನಿಸಿ ಮತ್ತು ಕೆಳ ಹಂತದ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ಕೋರಿ ಇಂದು ಹೈಕೋರ್ಟ್ ಮೆಟ್ಟಿಲೇರಲಿದ್ದಾರೆ ಎಂದು ತಿಳಿದುಬಂದಿದೆ.

ಸಚಿವಾಲಯವು ಅಧಿಸೂಚನೆ ಹೊರಡಿಸುವ ಮೊದಲೇ ಹೈಕೋರ್ಟ್ ಈ ತೀರ್ಪಿಗೆ ತಡೆಯಾಜ್ಞೆ ನೀಡಿದರೆ ಮಾತ್ರ ಅವರ ಶಾಸಕ ಸ್ಥಾನ ಉಳಿಯುವ ಸಾಧ್ಯತೆಯಿದೆ. ಒಂದು ವೇಳೆ ಸದಸ್ಯತ್ವ ರದ್ದಾದ ನಂತರ ತಡೆಯಾಜ್ಞೆ ಸಿಕ್ಕರೆ, ಆಗ ಅವರ ಸದಸ್ಯತ್ವವನ್ನು ಪುನಃಸ್ಥಾಪಿಸಲಾಗುತ್ತದೆ. ಈ ಇಡೀ ಪ್ರಕ್ರಿಯೆಯು ಕಾನೂನುಬದ್ಧವಾಗಿ ನಡೆಯಬೇಕಿರುವುದರಿಂದ ಸ್ಪೀಕರ್ ಯು.ಟಿ. ಖಾದರ್ ಅವರು ಅಡ್ವೋಕೇಟ್ ಜನರಲ್ ಅವರ ಸಲಹೆಯ ಮೇರೆಗೆ ಮುಂದಿನ ಹೆಜ್ಜೆ ಇಡಲಿದ್ದಾರೆ.

ಇದನ್ನೂ ನೋಡಿ: ಬಗೆದಷ್ಟೂ..ಮುಗಿಯದ SIR ಬಗ್ಗಡ : ದೇಶದ ಜನರನ್ನೇ ಪರದೇಶಿಗಳನ್ನಾಗಿಸುತ್ತಿದೆ Janashakthi Media

Donate Janashakthi Media

Leave a Reply

Your email address will not be published. Required fields are marked *