ಕಠ್ಮಂಡು: ನೇಪಾಳ–ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ತಿಳಿಸಿದ್ದಾರೆ. ನಾಪತ್ತೆಯಾದವರಲ್ಲಿ ಹೆಚ್ಚಿನವರು ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಭಾರತೀಯರು ಎಂದು ಅವರು ಹೇಳಿದ್ದಾರೆ. ನೇಪಾಳ
ನೇಪಾಳದ ರಸುುವಾ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಭೀಕರ ಪ್ರವಾಹದಿಂದ ವ್ಯಾಪಕ ಹಾನಿಯಾಗಿದ್ದು, ಸಾವಿರಾರು ಮಂದಿ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ದುರಂತದ ಸಂಪೂರ್ಣ ಪ್ರಮಾಣವನ್ನು ಅಂದಾಜಿಸಲು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಖನಾಲ್ ತಿಳಿಸಿದ್ದಾರೆ.
ಬೋಟೆಕೋಶಿ ನದಿಯಲ್ಲಿ ಪ್ರವಾಹ
ಚೀನಾ ಗಡಿಯ ರಸುವಾಗಢಿ ಸಮೀಪದ ಟಿಮುರೆ ಪ್ರದೇಶದಲ್ಲಿ ಬೋಟೆಕೋಶಿ ನದಿಯ ಉಪನದಿ ಲ್ಹೆಂಡೆ ನದಿಯ ಹರಿವಿಗೆ ಹಿಮಪಾತದಿಂದ ಅಡ್ಡಿಯುಂಟಾದ ಬಳಿಕ ಏಕಾಏಕಿ ನೀರು ಉಕ್ಕಿ ಹರಿದಿದೆ. ಪ್ರವಾಹದ ನೀರು ಮತ್ತು ಕೆಸರು ಅಪಾರ ಪ್ರಮಾಣದಲ್ಲಿ ಹರಿದು ಬಂದು ರಸ್ತೆ, ಸೇತುವೆ, ಮನೆಗಳು ಹಾಗೂ ಇತರ ಮೂಲಸೌಕರ್ಯಗಳಿಗೆ ಹಾನಿಯಾಗಿದೆ.
ಪ್ರವಾಹದ ತೀವ್ರತೆಗೆ ನೇಪಾಳದಲ್ಲಿ 160ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಂಪರ್ಕ ವ್ಯವಸ್ಥೆ ಹದಗೆಟ್ಟಿರುವುದರಿಂದ ನಾಪತ್ತೆಯಾದವರ ನಿಖರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳುವುದು ಸವಾಲಾಗಿದೆ. ನೇಪಾಳ
ಇದನ್ನೂ ಓದಿ : ಸಿಜೆಐ ಸೂರ್ಯಕಾಂತ್ ಆಹ್ವಾನಕ್ಕೆ ವಿರೋಧ: ಬೆಂಗಳೂರಿನ ಎನ್ಎಲ್ಎಸ್ಐಯು ಘಟಿಕೋತ್ಸವ ರದ್ದು
ಭಾರತೀಯರ ರಕ್ಷಣೆಗೆ ತುರ್ತು ಕ್ರಮ
ನಾಪತ್ತೆಯಾಗಿರುವ ಭಾರತೀಯರ ಕುರಿತು ಮಾಹಿತಿ ಸಂಗ್ರಹಿಸಲು ಮತ್ತು ರಕ್ಷಣಾ ಕಾರ್ಯಾಚರಣೆಗೆ ಭಾರತ ಹಾಗೂ ನೇಪಾಳದ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದ್ದು, ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಭಾರತೀಯರ ಕುಟುಂಬಗಳು ಸಂಪರ್ಕಿಸುವಂತೆ ಸೂಚಿಸಿದೆ.
ಕೈಲಾಸ ಮಾನಸ ಸರೋವರ ಯಾತ್ರೆಯ ಪ್ರಮುಖ ಮಾರ್ಗದ ಸಮೀಪದಲ್ಲೇ ದುರಂತ ಸಂಭವಿಸಿರುವುದರಿಂದ ಯಾತ್ರಿಕರ ಸುರಕ್ಷತೆ ಕುರಿತು ಆತಂಕ ಮತ್ತಷ್ಟು ಹೆಚ್ಚಿದೆ. ಹಲವು ಭಾರತೀಯ ಯಾತ್ರಿಕರ ಕುಟುಂಬಸ್ಥರು ತಮ್ಮವರ ಕುರಿತು ಮಾಹಿತಿ ಪಡೆಯಲು ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದಾರೆ.
ಏತನ್ಮಧ್ಯೆ, ಪ್ರವಾಹದ ನೀರು ನೇಪಾಳದ ಹಲವು ಪ್ರದೇಶಗಳಿಗೆ ಹರಿದುಬಂದಿದ್ದು, ಭಾರತದಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿಹಾರ ಮತ್ತು ಉತ್ತರ ಪ್ರದೇಶದ ಗಡಿ ಜಿಲ್ಲೆಗಳಲ್ಲಿ ನದಿಗಳ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
ಇದನ್ನೂ ನೋಡಿ : ಬೀದಿ ವ್ಯಾಪಾರಿಗಳ ಬದುಕು ಕಟ್ಟಿಕೊಡುವವರು ಯಾರು? ಸುಪ್ರೀಂ ಕೋರ್ಟ್ ಹೇಳಿರುವುದು ಏನು? Janashakthi Media
