ವಿದ್ಯಾರ್ಥಿಗಳ ಸಮಸ್ಯೆ, ಶಿಕ್ಷಣ ಸುಧಾರಣೆಗೆ ಸಚಿವ ಸಂಪುಟ ಉಪಸಮಿತಿ ರಚನೆ: ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿ, ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ಶಿಫಾರಸು ಮಾಡಲು ಕರ್ನಾಟಕ ಸರ್ಕಾರ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಸಮಿತಿಯು ರಾಜ್ಯದ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಮಾಲೋಚನೆ ನಡೆಸಿ, ಅವರ ಸಮಸ್ಯೆಗಳು, ಅಗತ್ಯಗಳು ಹಾಗೂ ಭವಿಷ್ಯದ ನಿರೀಕ್ಷೆಗಳನ್ನು ಅರ್ಥಮಾಡಿಕೊಂಡು ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಲಿದೆ. ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ಸಚಿವರಾದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಸಮಿತಿಯ ಸದಸ್ಯರಾಗಿದ್ದಾರೆ.

ಪರೀಕ್ಷಾ ಅಕ್ರಮ, ನೇಮಕಾತಿ ಪ್ರಕ್ರಿಯೆಗೂ ಒತ್ತು

ವಿದ್ಯಾರ್ಥಿಗಳ ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕುವುದು ಸಮಿತಿಯ ಪ್ರಮುಖ ಆದ್ಯತೆಗಳಾಗಿವೆ. ಪರೀಕ್ಷೆ ಮತ್ತು ನೇಮಕಾತಿಗೆ ನಿಗದಿತ ಹಾಗೂ ಕಾಲಮಿತಿಯ ವೇಳಾಪಟ್ಟಿ ರೂಪಿಸುವ ಬಗ್ಗೆಯೂ ಸಮಿತಿ ಪರಿಶೀಲನೆ ನಡೆಸಲಿದೆ.

ಇದರ ಜೊತೆಗೆ ಶಿಕ್ಷಣದ ವೆಚ್ಚ, ಶುಲ್ಕ ನಿಯಂತ್ರಣ ಮತ್ತು ಕೋಚಿಂಗ್ ಸಂಸ್ಥೆಗಳ ನಿಯಂತ್ರಣ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಹಾಗೂ ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಕುರಿತು ಸಮಿತಿ ಶಿಫಾರಸುಗಳನ್ನು ನೀಡಲಿದೆ.

ಪಠ್ಯಕ್ರಮವನ್ನು ಬದಲಾದ ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ಹೊಂದಿಸುವುದು, ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡುವುದು ಹಾಗೂ ಶಿಕ್ಷಣ ಮತ್ತು ಉದ್ಯೋಗದ ನಡುವಿನ ಸಂಪರ್ಕ ಬಲಪಡಿಸುವ ಬಗ್ಗೆಯೂ ಗಮನ ಹರಿಸಲಾಗುತ್ತದೆ.

ಇದನ್ನೂ ಓದಿ : ನೇಪಾಳ ಪ್ರವಾಹದ ಆತಂಕ: ಬಿಹಾರ, ಉತ್ತರ ಪ್ರದೇಶ ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕೂ ಆದ್ಯತೆ

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಕಲ್ಯಾಣ, ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣಾವಕಾಶ, ಸರ್ಕಾರಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಮೂಲಸೌಕರ್ಯ ಹಾಗೂ ಗುಣಮಟ್ಟದ ಕುರಿತು ಕೂಡ ಸಮಿತಿ ಪರಿಶೀಲನೆ ನಡೆಸಲಿದೆ. ಶಿಕ್ಷಕರ ಕೊರತೆ, ಪ್ರಯೋಗಾಲಯ, ಗ್ರಂಥಾಲಯ, ವಿದ್ಯಾರ್ಥಿ ನಿಲಯ ಸೇರಿದಂತೆ ಅಗತ್ಯ ಸೌಲಭ್ಯಗಳ ಬಗ್ಗೆಯೂ ಪರಿಶೀಲನೆ ನಡೆಯಲಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ವಿದ್ಯಾರ್ಥಿ ಆಂದೋಲನದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಗಳ ಅಗತ್ಯವನ್ನು ಪ್ರಸ್ತಾಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಉಪಸಮಿತಿ ರಚನೆ ಮಹತ್ವ ಪಡೆದಿದೆ.

ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಶಿಕ್ಷಣ ಸುಧಾರಣೆಗೆ ಸಂಬಂಧಿಸಿದ ತಮ್ಮ ಸಲಹೆಗಳನ್ನು ನೀಡುವಂತೆ ಸರ್ಕಾರ ಮನವಿ ಮಾಡಿದೆ. ರಾಜ್ಯದ ಯುವಜನರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ ಶಿಕ್ಷಣ, ಅಗತ್ಯ ಮೂಲಸೌಕರ್ಯ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಇದನ್ನೂ ನೋಡಿ : 1 ಕೋಟಿ ಮತದಾರರ ಮೇಲೆ SIR ತೂಗುಕತ್ತಿ: Form-8 ಬದಲು Form-6 ಏಕೆ? ವಿಶ್ಲೇಷಣೆ : ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *