ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದು ಮಹಿಳಾ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ, ಈ ನಡೆಯನ್ನು ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷೆ ಚಂದ್ರಕುಮಾರಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬ ಮಹಿಳಾ ಶಾಸಕರಿಗೂ ಸಚಿವ ಸ್ಥಾನ ನೀಡದೆ ಸಂಪುಟ ರಚಿಸಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಮಹಿಳೆಯರೇ ಇಲ್ಲದ ಸಚಿವ ಸಂಪುಟದ ರಚನೆ ಮಹಿಳಾ ವಿರೋಧಿ ಮನೋಭಾವವನ್ನಷ್ಟೇ ಅಲ್ಲ, ಸಂವಿಧಾನಬದ್ಧ ಸಮಾನತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ಕ್ರಮವಾಗಿದೆ ಎಂದರು.
ರಾಜ್ಯದ ಒಟ್ಟು ಮತದಾರರಲ್ಲಿ ಶೇ.52ರಷ್ಟು ಮಹಿಳೆಯರಿದ್ದಾರೆ. ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಸರ್ಕಾರಗಳ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ, ಆಹಾರ ಭದ್ರತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಕೊಡುಗೆ ಮಹತ್ವದ್ದಾಗಿದೆ.
ಇದನ್ನೂ ಓದಿ: ಕರಾವಳಿಯ ಸಾಂಸ್ಕೃತಿಕ ರಾಜಕಾರಣದ ಸುತ್ತ ಒಂದು ಚರ್ಚೆ; ಸಂವಾದ
ಇಂತಹ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಅವಕಾಶ ನೀಡದಿರುವುದು ಮಹಿಳೆಯರ ಸಾಮರ್ಥ್ಯವನ್ನು ಕಡೆಗಣಿಸುವುದಲ್ಲದೆ, ರಾಜಕೀಯ ನಿರ್ಧಾರ ಪ್ರಕ್ರಿಯೆಯಿಂದ ಅವರನ್ನು ಉದ್ದೇಶಪೂರ್ವಕವಾಗಿ ಹೊರಗಿಡುವ ಧೋರಣೆಯನ್ನು ಪ್ರತಿಬಿಂಬಿಸುತ್ತದೆ.
2023 ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಆಯ್ಕೆಯಾಗಿರುವ ಮಹಿಳಾ MLA ಗಳ ಸಂಖ್ಯೆ10 ಅದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು 4 ಮಹಿಳೆಯರಿಗೆ ಅವಕಾಶ ನಿರಾಕರಣೆಗೆ ಈ ಸಂಖ್ಯೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕರ್ನಾಟಕ ಸಚಿವ ಸಂಪುಟದ ರಚನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಮಹಿಳೆಯರಿಗೆ ಸಚಿವ ಸ್ಥಾನ ನೀಡದಿರುವುದು ಅದರ ಮಹಿಳಾ ಸಮಾನತೆಯ ಬದ್ಧತೆಯ ಮೇಲೆಯೇ ಪ್ರಶ್ನೆಗಳನ್ನು ಎಬ್ಬಿಸಿದೆ. ಇದು ಪುರುಷ ಪ್ರಧಾನ ರಾಜಕೀಯ ಮನೋಭಾವ ಇನ್ನೂ ಮುಂದುವರಿದಿರುವುದಕ್ಕೆ ಸ್ಪಷ್ಟಉದಾಹರಣೆಯಾಗಿದೆ.
ಭಾರತದ ಸಂವಿಧಾನವು ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಖಾತರಿಪಡಿಸಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ ಪರಿಣಾಮ ಲಕ್ಷಾಂತರ ಮಹಿಳೆಯರು ಯಶಸ್ವಿಯಾಗಿ ಜನಪ್ರತಿನಿಧಿಗಳಾಗಿ ಹಾಗೂ ಆಡಳಿತಗಾರರಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ದೇಶ ಕಂಡಿದೆ ಎಂದು ತಿಳಿಸಿದರು.
ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕೆಂದು ದೇಶಾದ್ಯಂತ ಮಹಿಳಾ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ, ಕರ್ನಾಟಕ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಸ್ಥಾನ ನೀಡದಿರುವುದು ಮಹಿಳಾ ರಾಜಕೀಯ ಸಬಲೀಕರಣಕ್ಕೆ ವಿರುದ್ಧವಾದ ಕ್ರಮವಾಗಿದೆ ಎಂದರು.
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಕಾಯ್ದೆಗೆ ಬೆಂಬಲ ವ್ಯಕ್ತಪಡಿಸುವ ಕಾಂಗ್ರೆಸ್ ಪಕ್ಷ, ತನ್ನದೇ ಆಡಳಿತವಿರುವ ರಾಜ್ಯದಲ್ಲಿ ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಅವಕಾಶ ನಿರಾಕರಿಸಿರುವುದು ತೀವ್ರ ವಿರೋಧಾಭಾಸವಾಗಿದೆ.
ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರ ಮತಗಳನ್ನು ಪಡೆಯಲು ಅವರ ಕೊಡುಗೆಯನ್ನು ಹೊಗಳುವ ರಾಜಕೀಯ ಪಕ್ಷಗಳು, ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸುವುದು ದ್ವಂದ್ವ ನೀತಿಯಾಗಿದೆ. ಮಹಿಳೆಯರು ಕೇವಲ ಮತದಾರರಲ್ಲ, ಅವರು ಸಮರ್ಥ ಜನಪ್ರತಿನಿಧಿಗಳು, ಆಡಳಿತಗಾರರು ಮತ್ತು ನೀತಿ ರೂಪಿಸುವ ನಾಯಕರೂ ಆಗಿದ್ದಾರೆ ಎಂಬುದನ್ನು ಸರ್ಕಾರ ಅರಿಯಬೇಕು ಎಂದು ಹೇಳಿದರು.
ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್ ಕೂಡಲೇ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಮತ್ತು ನ್ಯಾಯಯುತ ಪ್ರಾತಿನಿಧ್ಯ ನೀಡಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸುತ್ತದೆ. ಮಹಿಳೆಯರನ್ನು ಅಧಿಕಾರದ ಕೇಂದ್ರದಿಂದ ದೂರವಿಡುವ ಯಾವುದೇ ಕ್ರಮವನ್ನು ಸಂಘಟನೆ ಬಲವಾಗಿ ವಿರೋಧಿಸುತ್ತಿದೆ ಎಂದರು.
ಇದನ್ನೂ ನೋಡಿ: NEET ಹೋರಾಟದ ಒಳನೋಟ | ಗೋದಿ ಮೀಡಿಯಾ ನ್ಯೂಸ್ರೂಮ್ನಲ್ಲಿ ಸ್ಕ್ರಿಪ್ಟ್ ಹೇಗೆ ರೂಪುಗೊಳ್ಳುತ್ತಿತ್ತು? | ಗುರುರಾಜ
