ವೇತನ ಪರಿಷ್ಕರಣೆ: ಗಾರ್ಮೆಂಟ್ ಸೇರಿ 19 ಕ್ಷೇತ್ರ ಹೊರಗಿಟ್ಟಿದ್ದಕ್ಕೆ ವಿರೋಧ

ಬೆಂಗಳೂರು: ಗಾರ್ಮೆಂಟ್ ಮತ್ತು ಟೆಕ್ಸ್ಟೈಲ್ ಕಾರ್ಮಿಕರ ಸಂಘ (GATWU) ರಾಜ್ಯ ಸರ್ಕಾರವು ಮೇ 22ರಂದು ಪ್ರಕಟಿಸಿದ ಪರಿಷ್ಕೃತ ಕನಿಷ್ಠ ವೇತನ ಅಧಿಸೂಚನೆಯಲ್ಲಿ ಗಾರ್ಮೆಂಟ್ ಸೇರಿದಂತೆ 19 ಕಾರ್ಮಿಕಾಧಾರಿತ ಕೈಗಾರಿಕೆಗಳನ್ನು ಹೊರಗಿಟ್ಟಿರುವುದನ್ನು ತೀವ್ರವಾಗಿ ಟೀಕಿಸಿದೆ. ಈ ಕ್ರಮದಿಂದ ಲಕ್ಷಾಂತರ ಕಾರ್ಮಿಕರಿಗೆ, ವಿಶೇಷವಾಗಿ ಕಡಿಮೆ ವೇತನ ಪಡೆಯುವ ಮಹಿಳಾ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ಸಂಘ ಹೇಳಿದೆ.

ಸಂಘವು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಈ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿ, ಈ ಕ್ಷೇತ್ರಗಳಲ್ಲಿ ವೇತನ ಪರಿಷ್ಕರಣೆಗಾಗಿ ಯಾವುದೇ ಕಾಲಾವಧಿಯನ್ನು ಸರ್ಕಾರ ಸೂಚಿಸಿಲ್ಲ ಎಂದು ತಿಳಿಸಿದೆ. ಹೊರತಪ್ಪಿದ ಕೈಗಾರಿಕೆಗಳಲ್ಲಿ ಹೆಚ್ಚಿನವರು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರೇ ಎಂದು ಸಂಘ ಉಲ್ಲೇಖಿಸಿದೆ.

ಸರ್ಕಾರವು ಅನೇಕ ನಿಯೋಜಿತ ಕೈಗಾರಿಕೆಗಳಿಗೆ ಏಕೀಕೃತ ದರದಲ್ಲಿ ಕನಿಷ್ಠ ವೇತನ ಪರಿಷ್ಕರಣೆ ಮಾಡಿ, ಎಲ್ಲ ವರ್ಗದ ಕಾರ್ಮಿಕರಿಗೆ ಸಮಾನ ವೇತನ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿರುವುದಾಗಿ ಅಂತಿಮ ಅಧಿಸೂಚನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮನೆ ಕೆಲಸದ ವೇಳೆ ಹೆಡ್-ಕ್ಯಾಮೆರಾ ಚಿತ್ರೀಕರಣ: ಪ್ರಾಂಟೋ ವಿರುದ್ಧ ಆಕ್ರೋಶ

ಆದರೆ, 19 ಕೈಗಾರಿಕೆಗಳನ್ನು ಹೊರಗಿಟ್ಟಿರುವುದರಿಂದ ಸಮಾನತೆ ಸಾಧಿಸುವ ಸರ್ಕಾರದ ಹೇಳಿಕೆಗೆ ವಿರುದ್ಧವಾಗಿದೆ ಎಂದು GATWU ವಾದಿಸಿದೆ. ಈ ಕೈಗಾರಿಕೆಗಳಲ್ಲಿ ಕೆಲಸದ ಸ್ವರೂಪ ಪೀಸ್‌ವರ್ಕ್ ಹಾಗೂ ಕಾರ್ಮಿಕಾಧಾರಿತವಾಗಿರುವುದರಿಂದ, ವೇತನವನ್ನು ವೇತನ ಸಂಹಿತೆ-2019ರಡಿ ಸಮಿತಿ ವಿಧಾನದಲ್ಲಿ ಪ್ರತ್ಯೇಕವಾಗಿ ಪರಿಷ್ಕರಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಈ ಕ್ಷೇತ್ರಗಳ ಮಹಿಳಾ ಕಾರ್ಮಿಕರು ಈಗಾಗಲೇ ಇತರ ಕೈಗಾರಿಕೆಗಳಿಗಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂದು ಸಂಘ ಹೇಳಿ, ವೇತನ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಈ ಕೈಗಾರಿಕೆಗಳಿಗೆ ಆದ್ಯತೆ ನೀಡಬೇಕಾಗಿತ್ತು ಎಂದು ಒತ್ತಾಯಿಸಿದೆ. ಮಹಿಳಾ ಸಬಲೀಕರಣವನ್ನು ಪ್ರಚಾರ ಮಾಡುವ ಸರ್ಕಾರವೇ ಕನಿಷ್ಠ ವೇತನ ನಿಗಧಿಯಲ್ಲಿ ಲಿಂಗ ಭೇದಭಾವದ ನಿಲುವು ತಾಳುತ್ತಿದೆ ಎಂದು ಸಂಘ ಆರೋಪಿಸಿದೆ.

ಸಂಘವು ವಿಶೇಷವಾಗಿ ಗಾರ್ಮೆಂಟ್ ಕ್ಷೇತ್ರವನ್ನು ಉಲ್ಲೇಖಿಸಿ, ಕಳೆದ ಸುಮಾರು 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕನಿಷ್ಠ ವೇತನ ಪರಿಷ್ಕರಣೆ ನ್ಯಾಯಸಮ್ಮತವಾಗಿಲ್ಲ ಎಂದು ಹೇಳಿದೆ. ಕರ್ನಾಟಕದಲ್ಲಿ ಸುಮಾರು 4 ಲಕ್ಷ ಗಾರ್ಮೆಂಟ್ ಕಾರ್ಮಿಕರು ಪ್ರಸ್ತುತ ತಿಂಗಳಿಗೆ ಅಂದಾಜು ₹13,000 ಕನಿಷ್ಠ ವೇತನ ಪಡೆಯುತ್ತಿದ್ದು, ಇದು ಇತರ ಕೈಗಾರಿಕೆಗಳಿಗಿಂತ ಸುಮಾರು 30 ಶೇಕಡಾ ಕಡಿಮೆ ಎಂದು ತಿಳಿಸಿದೆ.

ಇತರ ಕ್ಷೇತ್ರಗಳಲ್ಲಿ ಕನಿಷ್ಠ ವೇತನವನ್ನು 60 ಶೇಕಡಾ ಹೆಚ್ಚಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿದರೂ, ಮಹಿಳಾ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕೈಗಾರಿಕೆಗಳನ್ನು ಹೊರಗಿಟ್ಟಿರುವುದು ಸಮಾನ ವೇತನದ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.

ಗಾರ್ಮೆಂಟ್ ಸೇರಿದಂತೆ ಉಳಿದ ಕೈಗಾರಿಕೆಗಳಿಗೆ ತಕ್ಷಣವೇ ಪರಿಷ್ಕೃತ ಕನಿಷ್ಠ ವೇತನವನ್ನು ಅನ್ವಯಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ.

ಇದನ್ನೂ ನೋಡಿ: ಯುವಜನರನ್ನು “ಕಾಕ್ರೋಚ್” ಎಂದವರ ವಿರುದ್ಧ ಡಿಜಿಟಲ್‌ ಚಳವಳಿ! – ಕಾಕ್ರೋಚ್ ಜನತಾ ಪಾರ್ಟಿ Janashakthi Media

Donate Janashakthi Media

Leave a Reply

Your email address will not be published. Required fields are marked *