ಬ್ಯಾಡಗಿ: ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವನ್ನು ಖಾಸಗಿ ಕಾಲೇಜಿನಲ್ಲಿ ನಡೆಸುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲೇ ಕಾರ್ಯಕ್ರಮ ಆಯೋಜಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಖಾಸಗಿ
ಬ್ಯಾಡಗಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಎದುರು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಪ್ರಾಂಶುಪಾಲರ ಮೂಲಕ ಕುಲಪತಿ ಪ್ರೊ. ಸುರೇಶ್ ಹೆಚ್. ಜಂಗಮಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಿದ್ಯಾರ್ಥಿಗಳ ಅಭಿಪ್ರಾಯದ ಪ್ರಕಾರ, ಘಟಿಕೋತ್ಸವವನ್ನು ಹಾವೇರಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲೇ ನಡೆಸಿದರೆ, ರಾಜ್ಯಪಾಲರು ಮತ್ತು ಜನಪ್ರತಿನಿಧಿಗಳಿಗೆ ವಿಶ್ವವಿದ್ಯಾಲಯದ ಮೂಲಸೌಕರ್ಯ ಸಮಸ್ಯೆಗಳು ಸ್ಪಷ್ಟವಾಗುತ್ತವೆ. ಇದರಿಂದ ರಸ್ತೆ, ಬಸ್ ವ್ಯವಸ್ಥೆ, ಕುಡಿಯುವ ನೀರು, ವಸತಿ ನಿಲಯ, ಆಟದ ಮೈದಾನ, ಶಾಶ್ವತ ಉಪನ್ಯಾಸಕರ ಹಾಗೂ ಸಿಬ್ಬಂದಿಗಳ ಕೊರತೆ ಸೇರಿದಂತೆ ಅನೇಕ ಮೂಲಭೂತ ಅಗತ್ಯಗಳತ್ತ ಸರ್ಕಾರದ ಗಮನ ಸೆಳೆಯಬಹುದು ಎಂದು ಅವರು ಹೇಳಿದರು.
ಇದನ್ನೂ ಓದಿ : ಕೊಳ್ಳಂ: ವಾಟ್ಸಾಪ್ ಮೂಲಕ ಪ್ರಚಾರ ದೂಷಣೆ ಆರೋಪ – ಎಲ್‌ಡಿಎಫ್ ದೂರು
ಹಾವೇರಿ ಜಿಲ್ಲೆಯ ಹೆಮ್ಮೆಯ ಕ್ಷಣವಾದ ಮೊದಲ ಘಟಿಕೋತ್ಸವವನ್ನು ವಿಶ್ವವಿದ್ಯಾಲಯದ ಆವರಣದಲ್ಲಿಯೇ ನಡೆಸಬೇಕೆಂದು ವಿದ್ಯಾರ್ಥಿ ಸಮುದಾಯದ ಜೊತೆಗೆ ವಿವಿಧ ಸಂಘಟನೆಗಳು, ಶಿಕ್ಷಣ ಪ್ರೇಮಿಗಳು ಮತ್ತು ಜಿಲ್ಲೆಯ ಜನತೆ ಪರವಾಗಿ ಮನವಿ ಮಾಡಲಾಗಿದೆ.
ಯಾವುದೇ ಕಾರಣಕ್ಕೂ ಘಟಿಕೋತ್ಸವವನ್ನು ಕ್ಯಾಂಪಸ್ ಹೊರತಾಗಿ ಬೇರೆಡೆ ನಡೆಸುವ ಯೋಜನೆ ಕೈಗೊಳ್ಳಬಾರದು. ಮನವಿಗೆ ಸ್ಪಂದಿಸದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಮುಖಂಡ ಅರುಣ್ ಕುಮಾರ್ ನಾಗವತ್, ಮಲ್ಲಿಕಾರ್ಜುನ್ ಲಮಾಣಿ, ನಾಗಮ್ಮ ಎಸ್., ರೇಣುಕಾ ತೀರ್ಕನಗೌಡ್ರು, ಯಶೋದ ಮಡಿವಾಳರ, ಆದಿತ್ಯ ಹಾಲಮ್ಮನವರ್, ಕಾಂತೇಶ್ ತಳವಾರ್, ಚೇತನ್ ಲಮಾಣಿ, ಪುಟ್ಟಪ್ಪ ಎಲ್., ಲಕ್ಷ್ಮೀ ಹೆಚ್., ಅಕ್ಷತಾ ರಾವಜಿ, ಸಂಗೀತ ದೊಡ್ಡಮನಿ, ಪವಿತ್ರ ಹೋನ್ನತ್ತಿ, ಕವನಾ ಜಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ನೋಡಿ : ಕರ್ನಾಟಕದ ಮತದಾರರ ಪಟ್ಟಿ ಪರಿಶೀಲನೆ – ಮ್ಯಾಪಿಂಗ್ ಆಗದ ಮತದಾರರು ಎಷ್ಟು? Janashakthi Media
