ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ರಾಜ್ಯದಲ್ಲಿ ಶೀಘ್ರವೇ ಸಮಾನ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂದು ಜೂನ್ 1ರಂದು ಘೋಷಿಸಿ, ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹೊಸ ಆನ್ಲೈನ್ ಸಲಹಾ ಪೋರ್ಟಲ್ ಅನ್ನು ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಮಧ್ಯಪ್ರದೇಶ
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಅವರು, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಂಜನಾ ಪ್ರಸಾದ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಆರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು. ಈ ಸಮಿತಿ ವಿವಿಧ ಧಾರ್ಮಿಕ ನಾಯಕರು ಹಾಗೂ ಸಮುದಾಯ ಪ್ರತಿನಿಧಿಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸುವ ಕಾರ್ಯವನ್ನು ಕೈಗೊಳ್ಳಲಿದೆ.
“ಇಂದಿನ ದಿನದಲ್ಲಿ ಧಾರ್ಮಿಕ, ಸಾಮಾಜಿಕ ಅಥವಾ ಕುಟುಂಬ ಆಧಾರಿತ ಭೇದಭಾವಕ್ಕೆ ಅಗತ್ಯವಿಲ್ಲ. ಯುಸಿಸಿ ಕಡೆಗೆ ಸಾಗಬೇಕಾದ ಅವಶ್ಯಕತೆ ಇದೆ. ಸಾರ್ವಜನಿಕರು ವೆಬ್ಸೈಟ್ ಮೂಲಕ ತಮ್ಮ ಸಲಹೆಗಳನ್ನು ಹಂಚಿಕೊಳ್ಳಬೇಕು,” ಎಂದು ಯಾದವ್ ಮನವಿ ಮಾಡಿದರು.
ಇದನ್ನೂ ಓದಿ: NEET ಪೇಪರ್ ಲೀಕ್ : NTA ರದ್ದು, ಶಿಕ್ಷಣ ಸಚಿವ ರಾಜೀನಾಮೆಗೆ SFI ಆಗ್ರಹ – ಪ್ರತಿಭಟನೆಕಾರರ ಬಂಧನ
ವಿವಾಹ ವಿಚ್ಛೇದನ ಪ್ರಕರಣಗಳು, ಕುಟುಂಬ ಪರಂಪರೆಗಳು ಹಾಗೂ ವಿವಿಧ ಧಾರ್ಮಿಕ ಆಚರಣೆಗಳ ವಿಷಯದಲ್ಲಿಯೂ ಕಾನೂನು ಮತ್ತು ಸಾಮಾಜಿಕ ವ್ಯತ್ಯಾಸ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಉತ್ತರಾಖಂಡ್ ಮತ್ತು ಗುಜರಾತ್ ರಾಜ್ಯಗಳು ಈಗಾಗಲೇ ಯುಸಿಸಿ ಜಾರಿಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಂಡಿರುವುದನ್ನು ಉಲ್ಲೇಖಿಸಿದ ಅವರು, ಮಧ್ಯಪ್ರದೇಶವೂ ಅದೇ ದಾರಿಯಲ್ಲಿ ಮುಂದುವರಿಯಲಿದೆ ಎಂದು ಹೇಳಿದರು.
ಈಗಾಗಲೇ ಸಮಿತಿ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಎಲ್ಲಾ ಸಮುದಾಯಗಳ ಹಿತಾಸಕ್ತಿದಾರರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ವರದಿ ಸಿದ್ಧವಾದ ಬಳಿಕ ಕರಡು ಮಸೂದೆಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.
“ಸಮಿತಿಯ ವರದಿ ಬಂದ ಕೂಡಲೇ ಕರಡು ವಿಧೇಯಕ ಸಿದ್ಧಪಡಿಸಿ, ಸಾಧ್ಯವಾದಷ್ಟು ಬೇಗ ಯುಸಿಸಿ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ,” ಎಂದು ಅವರು ಹೇಳಿದರು.
ಸಾಮಾಜಿಕ ಸಂಘಟನೆಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. “ಯುಸಿಸಿ ಕುರಿತಾಗಿ ವೆಬ್ಸೈಟ್ ಆರಂಭಿಸಲಾಗಿದೆ. ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು,” ಎಂದು ಅವರು ಪುನರುಚ್ಚರಿಸಿದರು.
ಇದನ್ನೂ ನೋಡಿ: ಯುವಜನರಿಗೆ ಮೌಲ್ಯ ಬೇಕಿದೆ, ಅದಕ್ಕಾಗಿ ದೊರೆಸ್ವಾಮಿಯರನ್ನು ಓದಬೇಕು – ಸಿದ್ದನಗೌಡ ಪಾಟೀಲ್ Janashakthi Media
