ಗ್ರಾಮಸಭೆಯ ಆಕ್ರೋಶಕ್ಕೆ ಅಧಿಕಾರಿಗಳ ಸ್ಪಂದನೆ; ಬರೆಮೇಲು, ಬಜಕ್ರೆಸಾಲು ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

ಲಾಯಿಲ: ಗ್ರಾಮಸಭೆಯಲ್ಲಿ ದಲಿತ ಕುಟುಂಬಗಳ ಮೂಲಸೌಕರ್ಯ ಸಮಸ್ಯೆಗಳ ಕುರಿತು ವ್ಯಕ್ತವಾದ ತೀವ್ರ ಆಕ್ರೋಶಕ್ಕೆ ಸ್ಪಂದಿಸಿದ ಅಧಿಕಾರಿಗಳ ತಂಡ ಜುಲೈ 23ರಂದು ಬರೆಮೇಲು ನಡುಗುಡ್ಡೆ ಕಾಲುಸಂಕ ಪ್ರದೇಶ ಹಾಗೂ ರಸ್ತೆ ಸಂಪರ್ಕವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಬಜಕ್ರೆಸಾಲು ದಲಿತ ಕಾಲನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.

ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ಜುಲೈ 22ರಂದು ನಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿಶೇಷ ಗ್ರಾಮಸಭೆಯಲ್ಲಿ ಬರೆಮೇಲು ನಡುಗುಡ್ಡೆ ಪ್ರದೇಶದಲ್ಲಿ ಕಾಲುಸಂಕ ನಿರ್ಮಾಣವಾಗದಿರುವುದು ಮತ್ತು ಬಜಕ್ರೆಸಾಲು ಪ್ರದೇಶದ 8 ರಿಂದ 10 ಪರಿಶಿಷ್ಟ ಜಾತಿ ಕುಟುಂಬಗಳು ಇಂದಿಗೂ ರಸ್ತೆ ಸಂಪರ್ಕದಿಂದ ವಂಚಿತವಾಗಿರುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಗ್ರಾಮಸಭೆಯಲ್ಲಿ ಹೋರಾಟಗಾರ ಶೇಖರ್ ಲಾಯಿಲ, ಶಾಲಾ ಮಕ್ಕಳು ಅಪಾಯದ ನಡುವೆಯೇ ಕಾಲುಸಂಕವಿಲ್ಲದೆ ಸಂಚರಿಸುತ್ತಿರುವ ಚಿತ್ರಗಳು ಹಾಗೂ ಮೂರು ವರ್ಷಗಳ ಹಿಂದೆ ಆಯಿಲ ಸಂಪರ್ಕ ರಸ್ತೆಯಲ್ಲಿ ಸಂಭವಿಸಿದ ಭೂಕುಸಿತದ ಚಿತ್ರಗಳನ್ನು ಅಧಿಕಾರಿಗಳ ಮುಂದೆ ಪ್ರದರ್ಶಿಸಿ ಸಮಸ್ಯೆಯ ಗಂಭೀರತೆಯನ್ನು ವಿವರಿಸಿದರು. ಜೊತೆಗೆ, ರಸ್ತೆ ಸಂಪರ್ಕವಿಲ್ಲದೆ ಬದುಕುತ್ತಿರುವ ಬಜಕ್ರೆಸಾಲು ದಲಿತ ಕುಟುಂಬಗಳ ಸ್ಥಿತಿಯನ್ನು ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ವಿದ್ಯಾರ್ಥಿ, ಯುವಜನರ ಬೇಡಿಕೆಗಳ ನಿರ್ಲಕ್ಷ್ಯ ದೇಶಕ್ಕೆ ಮಾರಕ – ಬಿ.ಕೆ ಇಮ್ತಿಯಾಜ್

ಈ ವೇಳೆ ಕವಿ ಸಿದ್ದಲಿಂಗಯ್ಯ ಅವರ “ಯಾರಿಗೆ ಬಂತು, ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ?” ಎಂಬ ಹಾಡಿನ ಸಾಲುಗಳನ್ನು ಉಲ್ಲೇಖಿಸಿದ ಶೇಖರ್ ಲಾಯಿಲ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 79 ವರ್ಷಗಳು ಕಳೆದರೂ ದಲಿತ ಮತ್ತು ಆದಿವಾಸಿ ಸಮುದಾಯಗಳಿಗೆ ಮೂಲಭೂತ ಸೌಲಭ್ಯಗಳೇ ದೊರೆಯದಿರುವುದು ವಿಷಾದನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸಭೆಯಲ್ಲಿನ ಈ ಚರ್ಚೆಯ ಬೆನ್ನಲ್ಲೇ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗದ ಇಂಜಿನಿಯರ್ ಸಂದೀಪ್ ಶೆಟ್ಟಿ ಮಂದರ್ಸ, ಸಮಾಜ ಕಲ್ಯಾಣ ಇಲಾಖೆಯ ಧೀರಾಜ್ ಕುಮಾರ್, ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ್, ಸಹಾಯಕ ಲೆಕ್ಕಾಧಿಕಾರಿ ಸುಪ್ರೀತಾ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ ಹಾಗೂ ಪಂಚಾಯತ್ ಸಿಬ್ಬಂದಿ ಪ್ರದೀಪ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆ ಬಳಿಕ ಅಧಿಕಾರಿಗಳು ಮಾತನಾಡಿ, ಬಜಕ್ರೆಸಾಲು ದಲಿತ ಕಾಲನಿಗೆ ಸರ್ಕಾರಿ ಜಮೀನಿನ ಮೂಲಕ ರಸ್ತೆ ನಿರ್ಮಿಸಲು ಕಂದಾಯ ಇಲಾಖೆಯ ಅನುಮತಿ ಅಗತ್ಯವಿದ್ದು, ಈ ಸಂಬಂಧ ತಹಶೀಲ್ದಾರರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬರೆಮೇಲು ನಡುಗುಡ್ಡೆ ಪ್ರದೇಶದಲ್ಲಿ ಕಾಲುಸಂಕ ನಿರ್ಮಾಣಕ್ಕಾಗಿ ಅಗತ್ಯ ಅಂದಾಜು ವೆಚ್ಚ ಹಾಗೂ ನೀಲನಕ್ಷೆ ಸಿದ್ಧಪಡಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಗ್ರಾಮಸಭೆಯಲ್ಲಿ ಎದ್ದ ಜನಧ್ವನಿಗೆ ಅಧಿಕಾರಿಗಳ ಸ್ಥಳ ಪರಿಶೀಲನೆ ಮೊದಲ ಪ್ರತಿಕ್ರಿಯೆಯಾಗಿದ್ದು, ಇದೀಗ ಭರವಸೆಗಳು ಕಾರ್ಯರೂಪಕ್ಕೆ ಬರುತ್ತವೆಯೇ ಎಂಬುದನ್ನು ಸ್ಥಳೀಯರು ಕಾತರದಿಂದ ಎದುರು ನೋಡುತ್ತಿದ್ದಾರೆ.

ಇದನ್ನೂ ನೋಡಿ: ನೀಟ್ ಹಗರಣಕ್ಕೆ ದೇಶಾದ್ಯಂತ ಆಕ್ರೋಶ! ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *