ಬಾಲಕಾರ್ಮಿಕ ಮುಕ್ತ ಭಾರತ: ಕನಸಲ್ಲ, ಸಾಕಾರಗೊಳ್ಳಬೇಕಾದ ಗುರಿ

ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಪ್ರತಿವರ್ಷ ಜೂನ್ 12ರಂದು ಆಚರಿಸಲಾಗುತ್ತದೆ. ಈ ದಿನವನ್ನು 2002ರಲ್ಲಿ International Labor Organization ಅಂದ್ರೆ ILO ಆರಂಭಿಸಿತು. ಬಾಲಕಾರ್ಮಿಕತೆಯ ವಿರುದ್ಧ ಜಾಗೃತಿ ಮೂಡಿಸುವುದು, ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ಅಗತ್ಯವನ್ನು ಒತ್ತಿಹೇಳುವುದು ಇದರ ಉದ್ದೇಶವಾಗಿದೆ. ಭಾರತ

– ಗುರುರಾಜ ದೇಸಾಯಿ

ಮಕ್ಕಳಿಗೆ ಶಿಕ್ಷಣ, ಆಟ, ಆರೋಗ್ಯಕರ ಬೆಳವಣಿಗೆ ಮತ್ತು ಸುರಕ್ಷಿತ ಬಾಲ್ಯ ದೊರೆಯುವುದು ಅವರ ಮೂಲಭೂತ ಹಕ್ಕು. ಆದರೆ ಇಂದಿಗೂ ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ದೂರವಾಗಿ ದುಡಿಮೆಗೆ ತಳ್ಳಲ್ಪಡುತ್ತಿದ್ದಾರೆ. ಈ ಪರಿಸ್ಥಿತಿಯನ್ನೇ “ಬಾಲಕಾರ್ಮಿಕ ಪದ್ಧತಿ” ಎಂದು ಕರೆಯಲಾಗುತ್ತದೆ. ಬಾಲಕಾರ್ಮಿಕತೆ ಮಕ್ಕಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಕುಂಠಿತಗೊಳಿಸುವ ಗಂಭೀರ ಸಮಸ್ಯೆಯಾಗಿದೆ.

2011ರ ಜನಗಣತಿಯ ಪ್ರಕಾರ, 5 ರಿಂದ 14 ವರ್ಷದೊಳಗಿನ ಸುಮಾರು 25.96 ಕೋಟಿ ಮಕ್ಕಳ ಪೈಕಿ 1.01 ಕೋಟಿ ಮಕ್ಕಳು (10.1 ಮಿಲಿಯನ್) ಯಾವುದೋ ಒಂದು ರೀತಿಯ ಕೆಲಸದಲ್ಲಿ ತೊಡಗಿಕೊಂಡಿದ್ದರು. ಇವರಲ್ಲಿ ಕೆಲವರು ಪೂರ್ಣಾವಧಿ ಕಾರ್ಮಿಕರಾಗಿದ್ದರೆ, ಇನ್ನೂ ಕೆಲವರು ಅರೆಕಾಲಿಕ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ, ಇಟ್ಟಿಗೆ ಕಾರ್ಖಾನೆ, ಗೃಹಕಾರ್ಯ, ಸಣ್ಣ ಕೈಗಾರಿಕೆಗಳು ಮತ್ತು ನಗರ ಪ್ರದೇಶಗಳಲ್ಲಿ ಹೋಟೆಲ್, ಗ್ಯಾರೇಜ್, ಅಂಗಡಿಗಳು ಹಾಗೂ ನಿರ್ಮಾಣ ಕ್ಷೇತ್ರಗಳಲ್ಲಿ ಬಾಲಕಾರ್ಮಿಕರನ್ನು ಹೆಚ್ಚಾಗಿ ಕಾಣಬಹುದು. ಭಾರತ

ಇದನ್ನೂ ಓದಿ: ಕೋಲಾರ ತೇರಹಳ್ಳಿಯಲ್ಲಿ ‘ಗ್ರಾಮ ಬೆಳಕು’ ಸಂಸ್ಥೆ ಉದ್ಘಾಟನೆ

ಕರ್ನಾಟಕದಲ್ಲಿ ಬಾಲಕಾರ್ಮಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ವಲಸೆ ಕಾರ್ಮಿಕರ ಕುಟುಂಬಗಳು, ಇಟ್ಟಿಗೆ ಭಟ್ಟಿಗಳು, ಕೃಷಿ ಕ್ಷೇತ್ರ, ಚಹಾ ಅಂಗಡಿಗಳು, ಹೋಟೆಲ್‌ಗಳು ಹಾಗೂ ಗೃಹಕಾರ್ಯಗಳಲ್ಲಿ ಮಕ್ಕಳ ದುಡಿಮೆ ಇನ್ನೂ ಕಂಡುಬರುತ್ತಿದೆ. ಭಾರತ

ಲಭ್ಯವಿರುವ ಜನಗಣತಿ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಸುಮಾರು 7 ರಿಂದ 8 ಲಕ್ಷ ಮಕ್ಕಳನ್ನು ವಿವಿಧ ರೀತಿಯ ಬಾಲಕಾರ್ಮಿಕ ವರ್ಗದಲ್ಲಿ ಗುರುತಿಸಲಾಗಿದೆ ಎಂದು ವಿವಿಧ ಸರ್ಕಾರಿ ಮತ್ತು ಸ್ವಯಂಸೇವಾ ಸಂಸ್ಥೆಗಳ ವರದಿಗಳು ಉಲ್ಲೇಖಿಸಿವೆ. ಆದರೆ ತಜ್ಞರ ಪ್ರಕಾರ, ಅಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಕ್ಕಳ ಸಂಖ್ಯೆ ಅಧಿಕೃತ ಅಂಕಿಅಂಶಗಳಿಗಿಂತ ಹೆಚ್ಚಿರಬಹುದು. ಭಾರತ

ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿದರೆ ಏನು ಶಿಕ್ಷೆ?

2016ರ ತಿದ್ದುಪಡಿ ಬಳಿಕ ಜಾರಿಯಲ್ಲಿರುವ ಬಾಲ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಪ್ರಕಾರ:

• 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ಯಾವುದೇ ಉದ್ಯೋಗದಲ್ಲಿ ಕೆಲಸಕ್ಕೆ ನೇಮಿಸುವುದು ಅಪರಾಧ.

• 14 ರಿಂದ 18 ವರ್ಷದ ಕಿಶೋರರನ್ನು ಅಪಾಯಕಾರಿ ಉದ್ಯೋಗಗಳಲ್ಲಿ ಕೆಲಸಕ್ಕೆ ನೇಮಿಸುವುದೂ ಅಪರಾಧ.

ಶಿಕ್ಷೆ ಏನು ಎಂಬುದನ್ನು ನೋಡುವುದಾದರೆ..

• ಕನಿಷ್ಠ 6 ತಿಂಗಳಿಂದ ಗರಿಷ್ಠ 2 ವರ್ಷಗಳವರೆಗೆ ಜೈಲು ಶಿಕ್ಷೆ.

• ₹20,000 ರಿಂದ ₹50,000 ವರೆಗೆ ದಂಡ.

• ಅಥವಾ ಎರಡೂ ವಿಧಿಸಬಹುದು.

ಮರು ಅಪರಾಧ ಮಾಡಿದರೆ, ಕನಿಷ್ಠ 1 ವರ್ಷದಿಂದ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.

ಕರ್ನಾಟಕದಲ್ಲಿ ಈ ರೀತಿಯ ಕ್ರಮಗಳು ನಡೆದಿವೆ, ಎಲ್ಲಿ ಎಂದು ನೋಡುವುದಾದರೆ.., ಮೈಸೂರು ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಕಳೆದ ಮೂರು ವರ್ಷಗಳಲ್ಲಿ ನಡೆಸಿದ 3,500ಕ್ಕೂ ಹೆಚ್ಚು ದಾಳಿಗಳ ಮೂಲಕ 152 ಬಾಲಕಾರ್ಮಿಕರನ್ನು ರಕ್ಷಿಸಿದೆ. ಈ ಸಂಬಂಧ 123 ನ್ಯಾಯಾಲಯ ಪ್ರಕರಣಗಳನ್ನು ದಾಖಲಿಸಲಾಗಿದ್ದು, 15 ಉದ್ಯೋಗದಾತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಲವು ಪ್ರಕರಣಗಳಲ್ಲಿ ದಂಡವೂ ವಸೂಲಾಗಿದೆ. ಭಾರತ

ಬಾಲಕಾರ್ಮಿಕರ ವಿರುದ್ಧ ದಾಳಿ ನಡೆಸುವಾಗ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಕಲ್ಯಾಣ ಸಮಿತಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತವೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಶಾಲೆಗಳಿಗೆ ಸೇರಿಸುವುದು, ಪುನರ್ವಸತಿ ಕೇಂದ್ರಗಳಿಗೆ ಕಳುಹಿಸುವುದು ಮತ್ತು ಕುಟುಂಬಗಳಿಗೆ ನೆರವು ಒದಗಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಭಾರತ

ದೇಶದಲ್ಲಿ ಈ ರೀತಿಯ ಕ್ರಮಗಳು ನಡೆದಿವೆ, ಎಲ್ಲಿ ಎಂದು ನೋಡುವುದಾದರೆ ಮಧ್ಯಪ್ರದೇಶದ ಒಂದು ಡಿಸ್ಟಿಲರಿಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ಕೆಲಸ ಮಾಡುತ್ತಿರುವುದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಮಕ್ಕಳ ಕೈಗಳು ರಾಸಾಯನಿಕಗಳ ಸಂಪರ್ಕದಿಂದ ಸುಟ್ಟಿರುವುದೂ ಪತ್ತೆಯಾಗಿತ್ತು. ನಂತರ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಯಿತು.

ಇತ್ತೀಚಿನ ವರ್ಷಗಳಲ್ಲಿ ದೆಹಲಿ, ತೆಲಂಗಾಣ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ನೂರಾರು ಬಾಲಕಾರ್ಮಿಕರನ್ನು ರಕ್ಷಿಸಿ ಉದ್ಯೋಗದಾತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿರುವ ಉದಾಹರಣೆಗಳಿವೆ.

ಬಾಲಕಾರ್ಮಿಕತೆಯ ಮೂಲ ಕಾರಣಗಳು

• ಬಡತನ

• ಶಾಲೆಯಿಂದ ಹೊರ ಉಳಿಯುವುದು

• ವಲಸೆ ಕಾರ್ಮಿಕರ ಜೊತೆ ಅವರ ಮಕ್ಕಳು ವಲಸೆ ಹೋಗುತ್ತಾರೆ, ಮಕ್ಕಳು ಅವರ ಜತೆ ಕೆಲಸಕ್ಕೆ ಹೋಗುವ ಸಾಧ್ಯತೆಗಳು ಹೆಚ್ಚಾಗಿರುವುದು.

• ಮಕ್ಕಳ ಹಕ್ಕುಗಳ ಬಗ್ಗೆ ಅರಿವಿನ ಕೊರತೆ ಇರುವ ಕಾರಣವೂ ಬಾಲ ಕಾರ್ಮಿಕತೆಗೆ ಪ್ರಮುಖ ಕಾರಣ ಆಗಿದೆ.

• ಸಾಲದ ಹೊರೆ ಮತ್ತು ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಮಕ್ಕಳು ಬಾಲಕರಿರುವಾಗಲೇ ದುಡಿಯಲು ಹೋಗುತ್ತಾರೆ… ಇವು ಮಕ್ಕಳನ್ನು ಶಾಲೆಯಿಂದ ಕೆಲಸದ ಸ್ಥಳಕ್ಕೆ ತಳ್ಳುವ ಪ್ರಮುಖ ಕಾರಣಗಳಾಗಿವೆ.

ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವುದು ಅತ್ಯಂತ ಮುಖ್ಯ. ಮಕ್ಕಳ ಹಕ್ಕುಗಳ ಕಾಯ್ದೆ ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ 6 ರಿಂದ 14 ವರ್ಷದೊಳಗಿನ ಪ್ರತಿಯೊಬ್ಬ ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕಿದೆ. ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿಯಾಗಿದೆ. ಆದರೆ ಕಾನೂನು ಮತ್ತು ನಿಯಮಗಳನ್ನು ರೂಪಿಸುವುದಷ್ಟೇ ಸಾಕಾಗುವುದಿಲ್ಲ; ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತಾತ್ಮಕ ಬದ್ಧತೆಯೂ ಅಗತ್ಯವಾಗಿದೆ. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ತರುವ ನಿರಂತರ ಪ್ರಯತ್ನಗಳು ನಡೆಯಬೇಕು.

ಇದೇ ವೇಳೆ ಬಾಲಕಾರ್ಮಿಕತೆಯ ಮೂಲ ಕಾರಣವಾದ ಬಡತನವನ್ನು ನಿವಾರಿಸುವ ದಿಸೆಯಲ್ಲಿಯೂ ಸರ್ಕಾರಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಬಾಲಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವುದು, ಸ್ವಯಂ ಉದ್ಯೋಗ ಯೋಜನೆಗಳು, ಕೌಶಲ್ಯಾಭಿವೃದ್ಧಿ ತರಬೇತಿಗಳು, ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಆದಾಯ ವೃದ್ಧಿ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಭದ್ರತಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದು ಅಗತ್ಯವಾಗಿದೆ. ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿದಾಗ ಮಕ್ಕಳನ್ನು ದುಡಿಮೆಗೆ ಕಳುಹಿಸುವ ಅನಿವಾರ್ಯತೆ ಕಡಿಮೆಯಾಗುತ್ತದೆ. ಶಿಕ್ಷಣ, ಆರ್ಥಿಕ ಸಬಲೀಕರಣ ಮತ್ತು ಕಾನೂನು ಜಾರಿ ಎಂಬ ಮೂರು ಅಂಶಗಳು ಸಮನ್ವಯವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಬಾಲಕಾರ್ಮಿಕ ಪದ್ಧತಿಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ.

ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕೇ ಹೊರತು ಕೆಲಸದ ಉಪಕರಣಗಳಲ್ಲ. ಬಾಲ್ಯದ ಕನಸುಗಳನ್ನು ಕಸಿದುಕೊಳ್ಳುವ ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಸಮಾಜ ಒಗ್ಗಟ್ಟಾಗಿ ಹೋರಾಡಬೇಕು, ಆಳುವ ಸರಕಾರಗಳು ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು, ಆ ಮಕ್ಕಳು ಶಾಲೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು.

ಇದನ್ನೂ ನೋಡಿ: ಪಿಟಿಸಿಎಲ್ ಕಾಯ್ದೆ ಜಾರಿಯಲ್ಲಿ ವೈಫಲ್ಯ? ದಲಿತ ಭೂಹಕ್ಕುಗಳ ಬಗ್ಗೆ ಹೆಚ್ಚಿದ ಆತಂಕ | ಜಸ್ಟೀಸ್‌ ವಿ.ಗೋಪಾಲಗೌಡ

Donate Janashakthi Media

Leave a Reply

Your email address will not be published. Required fields are marked *