ದುರ್ಬಲ ಮುಂಗಾರು ನಡುವೆಯೂ ವಿದ್ಯುತ್ ಕೊರತೆ ಇಲ್ಲ: ಕೆ.ಜೆ. ಜಾರ್ಜ್

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿದ್ದರೂ, ವಿದ್ಯುತ್ ಕೊರತೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ದುರ್ಬಲ

ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಪ್ರದರ್ಶನದ ರೋಡ್‌ಶೋ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳ ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಇಂಧನ ಇಲಾಖೆಗೆ ಸಮಗ್ರ ಯೋಜನೆ ಸಿದ್ಧಪಡಿಸುವಂತೆ ಸೂಚಿಸಲಾಗಿದೆ ಎಂದರು.

ಕಳೆದ ಬೇಸಿಗೆಯಲ್ಲಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಂದ ವಿದ್ಯುತ್ ವಿನಿಮಯ ಒಪ್ಪಂದದಡಿ ಹೆಚ್ಚುವರಿ ವಿದ್ಯುತ್ ಖರೀದಿಸಲಾಗಿತ್ತು. ಇದೇ ರೀತಿಯಲ್ಲಿ ಮುಂದಿನ ದಿನಗಳಲ್ಲೂ ಹೆಚ್ಚುವರಿ ವಿದ್ಯುತ್ ಪಡೆಯಲಾಗುವುದು. ಅಗತ್ಯಬಿದ್ದರೆ ಮುಕ್ತ ಮಾರುಕಟ್ಟೆಯಿಂದಲೂ ವಿದ್ಯುತ್ ಖರೀದಿಸಲು ಸರ್ಕಾರ ಸಿದ್ಧವಿದ್ದು, ಇದಕ್ಕಾಗಿ ಎಷ್ಟೇ ವೆಚ್ಚವಾದರೂ ಭರಿಸಲು ಸರ್ಕಾರ ಸಿದ್ಧವಿದೆ ಎಂದು ಜಾರ್ಜ್ ಹೇಳಿದರು.

ನವೀಕರಿಸಬಹುದಾದ ಇಂಧನಕ್ಕೆ ಒತ್ತು

ರಾಜ್ಯವು ಸಾಂಪ್ರದಾಯಿಕ ವಿದ್ಯುತ್ ಉತ್ಪಾದನಾ ಮೂಲಗಳ ಜೊತೆಗೆ ಸೌರ ಮತ್ತು ಪವನ ವಿದ್ಯುತ್, ಬ್ಯಾಟರಿ ಸಂಗ್ರಹ ವ್ಯವಸ್ಥೆ, ಪಂಪ್ಡ್‌ ಸ್ಟೋರೇಜ್, ಹಸಿರು ಹೈಡ್ರೋಜನ್ ಸೇರಿದಂತೆ ಹೊಸ ತಂತ್ರಜ್ಞಾನಗಳತ್ತ ಗಮನ ಹರಿಸುತ್ತಿದೆ ಎಂದು ಸಚಿವರು ಹೇಳಿದರು.

ವಿದ್ಯುತ್ ಮೂಲಸೌಕರ್ಯ ಬಲಪಡಿಸುವ ಭಾಗವಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 12 ವಿದ್ಯುತ್ ಉಪಕೇಂದ್ರಗಳ ನಿರ್ಮಾಣ ನಡೆಯುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ 400ಕ್ಕೂ ಹೆಚ್ಚು ಹೊಸ ಉಪಕೇಂದ್ರಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ನವೀಕರಿಸಬಹುದಾದ ಇಂಧನ ಘಟಕಗಳನ್ನು ಸ್ಥಾಪಿಸಲು 18ರಿಂದ 24 ತಿಂಗಳು ಬೇಕಾಗಬಹುದು. ಆದರೆ ಅದಕ್ಕೆ ಅಗತ್ಯವಿರುವ ಪ್ರಸರಣ ಮೂಲಸೌಕರ್ಯ ನಿರ್ಮಾಣಕ್ಕೆ 3ರಿಂದ 5 ವರ್ಷಗಳವರೆಗೆ ಸಮಯ ಬೇಕಾಗುತ್ತದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ ಹೇಳಿದರು. 2031ರ ವೇಳೆಗೆ ಭಾರತಕ್ಕೆ ಸುಮಾರು 239 ಗಿಗಾವ್ಯಾಟ್-ಗಂಟೆ ಬ್ಯಾಟರಿ ವಿದ್ಯುತ್ ಸಂಗ್ರಹ ಸಾಮರ್ಥ್ಯ ಅಗತ್ಯವಿದ್ದು, ಗರಿಷ್ಠ ಬೇಡಿಕೆಯ ಸಂದರ್ಭದಲ್ಲಿ ಬ್ಯಾಟರಿ ಸಂಗ್ರಹ ವ್ಯವಸ್ಥೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು. ದುರ್ಬಲ

ಇದನ್ನೂ ಓದಿ : ಜಂತರ್‌ ಮಂತರ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗೆ ₹5 ಲಕ್ಷ ಬಾಂಡ್ ನೋಟಿಸ್; ಬಳಿಕ ಹಿಂಪಡೆದ ಪೊಲೀಸರು

ಶಿವಮೊಗ್ಗ ಪಂಪ್ಡ್‌ ಸ್ಟೋರೇಜ್ ಯೋಜನೆಗೆ ಅನುಮತಿ ಕಡ್ಡಾಯ

ಶಿವಮೊಗ್ಗದ ಪಂಪ್ಡ್‌ ಸ್ಟೋರೇಜ್ ಯೋಜನೆ ಕುರಿತು ಪ್ರತಿಕ್ರಿಯಿಸಿದ ಜಾರ್ಜ್, ಪರಿಸರ, ಅರಣ್ಯ ಮತ್ತು ವನ್ಯಜೀವಿ ಸೇರಿದಂತೆ ಅಗತ್ಯ ಅನುಮತಿಗಳು ದೊರೆತ ಬಳಿಕವೇ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು. ಅನುಮತಿ ಸಿಗದಿದ್ದರೆ ಯೋಜನೆಯನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಗಲಿನಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್‌ ಅನ್ನು ಸಂಗ್ರಹಿಸಿ ಗರಿಷ್ಠ ಬೇಡಿಕೆಯ ಸಮಯದಲ್ಲಿ ಬಳಸುವ ಉದ್ದೇಶದಿಂದ ಪಂಪ್ಡ್‌ ಸ್ಟೋರೇಜ್ ಯೋಜನೆಗಳನ್ನು ಸರ್ಕಾರ ಪರಿಗಣಿಸುತ್ತಿದೆ. ರಾಜ್ಯದ ಪ್ರಸ್ತುತ ವಿದ್ಯುತ್ ಬೇಡಿಕೆ ಸುಮಾರು 18,000 ಮೆಗಾವ್ಯಾಟ್ ಇದ್ದು, ಅದರಲ್ಲಿ ಸುಮಾರು 70ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಿಂದ ಬರುತ್ತಿದೆ ಎಂದು ಸಚಿವರು ತಿಳಿಸಿದರು.

ಇದೇ ವೇಳೆ, ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆ ಪರಿಶೀಲನೆ ಕುರಿತು ಮಾತನಾಡಿದ ಸಚಿವರು, ಯೋಜನೆಯ ಪ್ರಯೋಜನ ಪಡೆಯಲು ಇಚ್ಛಿಸದವರು ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಅರ್ಹ ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ದುರ್ಬಲ

ಇದನ್ನೂ ನೋಡಿ : CITU ನಿಂದ ಕಾರ್ಮಿಕರ ವಿಧಾನಸೌದ ಚಲೋ | ಸೆಪ್ಟೆಂಬರ್ 08, 2026

Donate Janashakthi Media

Leave a Reply

Your email address will not be published. Required fields are marked *