ಜಂತರ್‌ ಮಂತರ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗೆ ₹5 ಲಕ್ಷ ಬಾಂಡ್ ನೋಟಿಸ್; ಬಳಿಕ ಹಿಂಪಡೆದ ಪೊಲೀಸರು

ನೊಯ್ಡಾ: ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗೌತಮ ಬುದ್ಧ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರಿಗೆ ಶಾಂತಿ ಕಾಪಾಡುವಂತೆ ₹5 ಲಕ್ಷ ವೈಯಕ್ತಿಕ ಬಾಂಡ್‌ ನೀಡುವಂತೆ ನೀಡಿದ್ದ ನೋಟಿಸ್‌ ಅನ್ನು ಪೊಲೀಸರು ಬಳಿಕ ಹಿಂಪಡೆದಿದ್ದಾರೆ. ಜಂತರ್‌

ಗೌತಮ ಬುದ್ಧ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅಕ್ಷತ್ ತ್ರಿಪಾಠಿ ಅವರಿಗೆ ಗ್ರೇಟರ್‌ ನೊಯ್ಡಾದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ಸೆ.4ರಂದು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್‌ 130ರ ಅಡಿ ನೋಟಿಸ್‌ ನೀಡಿದ್ದರು. ಆರು ತಿಂಗಳ ಕಾಲ ಶಾಂತಿ ಕಾಪಾಡುವ ಬಾಂಡ್‌ ನೀಡಬೇಕು ಹಾಗೂ ತಲಾ ₹5 ಲಕ್ಷ ಮೊತ್ತದ ಇಬ್ಬರು ಜಾಮೀನುದಾರರನ್ನು ಒದಗಿಸಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿತ್ತು. ಸೆ.5ರಂದು ವಿಚಾರಣೆಯನ್ನೂ ನಿಗದಿಪಡಿಸಲಾಗಿತ್ತು.

ಪೊಲೀಸರ ವರದಿಯ ಪ್ರಕಾರ, ತ್ರಿಪಾಠಿ ಇತರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ರಾಜಕೀಯ ಪಕ್ಷವೊಂದು ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದರು ಮತ್ತು ಸರ್ಕಾರದ ವಿರುದ್ಧ ದಾರಿ ತಪ್ಪಿಸುವ ಮಾಹಿತಿಗಳನ್ನು ಹರಡುತ್ತಿದ್ದರು. ಇದರಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುವ ಹಾಗೂ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಆರೋಪಿಸಿದ್ದರು. ಜಂತರ್‌

ಇದನ್ನೂ ಓದಿ : ಇನ್ನೂ 25 ತಾಲ್ಲೂಕುಗಳು ಬರಪೀಡಿತ: ಶೀಘ್ರದಲ್ಲೇ ಘೋಷಣೆ – ಜಿ. ಪರಮೇಶ್ವರ್

ಆದರೆ ಆರೋಪಗಳನ್ನು ತ್ರಿಪಾಠಿ ನಿರಾಕರಿಸಿದ್ದಾರೆ. ತಾವು ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಭಾಗವಹಿಸಿದ್ದಾಗಿ ಹಾಗೂ ಆ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ತರಗತಿಗಳಿಗೆ ಹಾಜರಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಸುಮಾರು ಮೂರು ತಿಂಗಳಿನಿಂದ ವಿಶ್ವವಿದ್ಯಾಲಯ ಮುಚ್ಚಿತ್ತು ಎಂದು ಅವರು ತಿಳಿಸಿದ್ದಾರೆ. ಜುಲೈ 20ರಂದು ಸಂಸತ್‌ ಭವನದತ್ತ ಪ್ರತಿಭಟನಾಕಾರರು ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ದೆಹಲಿ ಪೊಲೀಸರು ಕೈಗೊಂಡ ಕ್ರಮದಲ್ಲಿ ತಮಗೆ ಗಾಯವಾಗಿತ್ತು ಎಂದೂ ಅವರು ಹೇಳಿದ್ದಾರೆ.

ಈ ನಡುವೆ, ಸೆ.4ರಂದೇ ನೋಟಿಸ್‌ ಹಿಂಪಡೆಯಲಾಗಿತ್ತು ಎಂದು ಎಕೋಟೆಕ್‌-1 ಠಾಣೆಯ ಪೊಲೀಸರು ತಿಳಿಸಿದ್ದಾರೆ. ವಿಷಯ ತಮ್ಮ ಗಮನಕ್ಕೆ ಬಂದ ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ವಿದ್ಯಾರ್ಥಿಗೆ ನೀಡಿದ್ದ ನೋಟಿಸ್‌ ಕ್ರಮವನ್ನು ಎಸ್‌ಎಫ್‌ಐ ಖಂಡಿಸಿದೆ. ವಿದ್ಯಾರ್ಥಿಯ ವಿರುದ್ಧದ ಕ್ರಮವನ್ನು ದಮನಕಾರಿ ಎಂದು ಟೀಕಿಸಿರುವ ಸಂಘಟನೆ, ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರ ಕ್ರಮವನ್ನು ಪ್ರಶ್ನಿಸಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿಜೆಪಿ ಸಹ ಸಂಚಾಲಕ ಸೌರವ್‌ ದಾಸ್‌ ಅವರು ಸುಪ್ರೀಂ ಕೋರ್ಟ್‌ನ ಸೆ.1ರ ತೀರ್ಪನ್ನು ಉಲ್ಲೇಖಿಸಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಮಾತ್ರ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಸೆ.1ರಂದು ಸುಪ್ರೀಂ ಕೋರ್ಟ್‌ ಸಿಜೆಪಿ ನೇತೃತ್ವದ ಪ್ರತಿಭಟನೆಗಳಿಗೆ ಸಂಬಂಧಿಸಿದ ಹಲವು ಎಫ್‌ಐಆರ್‌ಗಳನ್ನು ರದ್ದುಗೊಳಿಸಿ, ಪ್ರತಿಭಟನೆಯಲ್ಲಿ ಭಾಗವಹಿಸುವುದು ಮಾತ್ರವೇ ಅಪರಾಧವಾಗುವುದಿಲ್ಲ ಎಂದು ಹೇಳಿತ್ತು.

ಇದನ್ನೂ ನೋಡಿ : 32 ಸಾವಿರದಿಂದ 12 ಸಾವಿರಕ್ಕೆ ಸಂಬಳ ಇಳಿಕೆ? ಹಾಸ್ಟೆಲ್‌ ನೌಕರರಿಂದ ಸರ್ಕಾರಕ್ಕೆ ಬಿಗ್ ವಾರ್ನಿಂಗ್!

Donate Janashakthi Media

Leave a Reply

Your email address will not be published. Required fields are marked *