ತಳಿಸೂತ್ರದಲ್ಲಿ ಅಡಗಿರುವ ಜೀನ್ ತನ್ನ ಸ್ವಾರ್ಥಕ್ಕಾಗಿ ನಮ್ಮನ್ನು ಹೇಗೆಲ್ಲ ಆಡಿಸುತ್ತದೆ ಎಂದು ವಿವರಿಸಿದ ‘The Selfish Gene’ ಎಂಬ ಜಗದ್ವಿಖ್ಯಾತ ಕೃತಿಗೆ ಇದು 50ನೇ ವರ್ಷ. ಜೀವವಿಜ್ಞಾನಿಗಳೂ ಮೆಚ್ಚುವಂತೆ, ಆದರೆ ಆಕ್ಷೇಪಣೆಯನ್ನೂ ಎತ್ತುವಂತೆ ಮಾಡುತ್ತ ಬಂದ ಈ ಗ್ರಂಥ ಈಗಲೂ ಅತ್ಯಂತ ಜನಪ್ರಿಯ ಆಗುಳಿದಿದ್ದು ಹೇಗೆ? ಈ ಲೇಖನ ಓದಿ… ಮೀಮ್
– ನಾಗೇಶ ಹೆಗಡೆ
ಆಕಾಶದಲ್ಲಿ ಮುಂಗಾರು ಮೋಡಗಳ ಸೂಚನೆ ಬರುತ್ತಲೇ ನೆಲದ ಮೇಲೆ ನವಿಲಿನ ನಾಟ್ಯವೂ ಆರಂಭವಾಗುತ್ತದೆ. ಮುಂಗಾರು ಮಳೆಗೂ ನವಿಲುಗಳ ಮಿಲನಕ್ಕೂ ಇರುವ ಸಂಬಂಧ ತೀರ ಸರಳವಾಗಿದೆ. ಮಳೆ ಬೀಳುತ್ತಲೇ ಹುಲ್ಲು ಸಸ್ಯಗಳ ನಡುವೆ ಕೀಟಪತಂಗಗಳ ಸಂಖ್ಯೆಯೂ ಹೆಚ್ಚುತ್ತದೆ. ನವಿಲಿನ ಮರಿಗಳಿಗೆ ಸಮೃದ್ಧ ಆಹಾರ ಸಿಗುತ್ತದೆ.
ನಿಸರ್ಗವೇ ಹೀಗೆ ಎಲ್ಲವನ್ನೂ ಲೆಕ್ಕಾಚಾರ ಹಾಕಿ, ಅಚ್ಚುಕಟ್ಟಾಗಿ ಜೋಡಿಸಿ ಇಟ್ಟಿದೆ. ಆದರೆ ಗಂಡು ನವಿಲಿಗೇಕೆ ಗರಿಗಳ ಹೆಚ್ಚುವರಿ ಹೊರೆ? ಮಾರುದ್ದದ ಗರಿಗಳನ್ನು ಎಳೆಯುತ್ತ ನೆಲದ ಮೇಲೆ ಚಲಿಸುವುದೇ ಕಷ್ಟ; ಇನ್ನು ತೋಳ, ಚಿರತೆಗಳು ಬೆನ್ನಟ್ಟಿ ಬಂದರೆ ರೆಕ್ಕೆ ಬಿಚ್ಚಿ ಹಾರಿ ಮರದ ಕೊಂಬೆಯನ್ನು ಏರುವುದು ಇನ್ನೂ ಕಷ್ಟ. ಹೆಣ್ಣನ್ನು ಓಲೈಸಲು ಹೋಗಿ ಜೀವವನ್ನೇ ಬಲಿಕೊಡಬೇಕಾದ ದುರ್ಭರ ಗರಿ ಅದಕ್ಕೆ ಏಕೆ?
ಇದನ್ನೂ ಓದಿ: ಮಹಾರಾಷ್ಟ್ರ| ರೈತರ ಆಕ್ರೋಶ ತೀವ್ರ: ದೇವಸ್ಥಾನ ಭೂಮಿ ಮಸೂದೆ ಸ್ಥಗಿತದ ವಿರುದ್ಧ AIKS ಹೋರಾಟ
ಈ ಪ್ರಶ್ನೆಗೂ ಡಾರ್ವಿನ್ ತನ್ನ ವಿಕಾಸ ಸಿದ್ಧಾಂತದಲ್ಲಿ ಉತ್ತರವನ್ನು ನೀಡಿದ್ದಾನೆ. ಎತ್ತರಕ್ಕೆ ಹಾರಿ ವೈರಿಯಿಂದ ಬಚಾವಾಗಲಾರದ ದುರ್ಬಲ ನವಿಲು ಚಿರತೆಗೆ ಆಹಾರವಾಗುತ್ತದೆ (ಅದಕ್ಕೂ ಊಟ ಬೇಕಲ್ಲ?) ಇತ್ತ ಗರಿಯ ಹೊರೆ ಹೊತ್ತುಕೊಂಡೇ ಭರ್ರೆಂದು ಮೇಲಕ್ಕೆ ಜಿಗಿದು ಬಚಾವಾಗಿ ಬಂದು, ಹೆಣ್ಣಿನೆದುರು ಎದೆ ಸೆಟೆದು ಕುಣಿಯಬಲ್ಲ ನವಿಲೇ ತನ್ನ ತಳಿಯನ್ನು ಮುಂದುವರೆಸುತ್ತದೆ.
‘ಬಲಿಷ್ಠವಾದುದೇ ಬದುಕುಳಿಯುತ್ತದೆ’ ಎಂಬುದು ವಿಕಾಸವಾದದ ಮೂಲ ಸಿದ್ಧಾಂತ ತಾನೆ?
ಚಾರ್ಲ್ಸ್ ಡಾರ್ವಿನ್1859ರಲ್ಲಿ ಪ್ರಕಟಿಸಿದ ‘ಜೀವ ಸಂಕುಲಗಳ ಉಗಮ’ (‘ಆನ್ ದಿ ಒರಿಜಿನ್ ಆಫ್ ಸ್ಪೀಶೀಸ್’) ಎಂಬ ಕೃತಿ ಜೀವವಿಜ್ಞಾನದ ಅತ್ಯಂತ ಮಹತ್ವದ ಗ್ರಂಥವೆಂದು ಜಾಗತಿಕ ಮಾನ್ಯತೆ ಪಡೆದಿದೆ. ಆದರೆ ವಿಕಾಸವಾದದ ಮಹತ್ವವನ್ನು ಜನರಿಗೆ ತಲುಪಿಸುವಲ್ಲಿ ಡಾರ್ವಿನ್ನ ಗ್ರಂಥವನ್ನೂ ಮೀರಿಸಿದ ಇನ್ನೊಂದು ಗ್ರಂಥವಿದೆ. ಅದರ ಹೆಸರು ‘ದಿ ಸೆಲ್ಫಿಶ್ ಜೀನ್’ (ಸ್ವಾರ್ಥಿ ಜೀನ್). ಇನ್ನೊಬ್ಬ ಬ್ರಿಟಿಷ್ ಜೀವವಿಜ್ಞಾನಿ ರಿಚರ್ಡ್ ಡಾವ್ಕಿನ್ಸ್ (Dawkins) 1976ರಲ್ಲಿ ಬರೆದ ಈ ಗ್ರಂಥ ಇದೀಗ 50ನೇ ವರ್ಷಕ್ಕೆ ಕಾಲಿಟ್ಟಿದ್ದು, ವಿದ್ವತ್ ವಲಯದಲ್ಲಿ ಸಂಚಲನವನ್ನು ಮೂಡಿಸುತ್ತಲೇ ಇದೆ.
ಜಗತ್ತಿನ ಎಲ್ಲ ಜೀವಿಗಳ ತಳಿಸೂತ್ರದಲ್ಲಿ ʻಜೀನ್‘ (ಗುಣಾಣು) ಎಂಬ ವಂಶವಾಹಿ ಕಣ ಸುರುಳಿಸುತ್ತಿ ಕೂತಿದೆಯಲ್ಲ? ಅದೇ ಜೀವಲೋಕದ ಎಲ್ಲ ಆಗುಹೋಗುಗಳನ್ನು ನಿರ್ಧರಿಸುವ ಪ್ರಧಾನ ಸೂತ್ರಧಾರ ಎಂಬುದು ಡಾವ್ಕಿನ್ಸ್ ಪ್ರತಿಪಾದನೆ.
ಇದರ ಮುಖ್ಯಾಂಶ ಹೀಗಿದೆ: ಈ ಜೀನ್ ತನ್ನ ಅಸ್ತಿತ್ವವನ್ನು ಉಳಿಸಿ ಬೆಳೆಸಲೆಂದೇ ಎಲ್ಲ ಜೀವಿಗಳನ್ನೂ ಮನುಷ್ಯರನ್ನೂ ರೋಬಾಟ್ಗಳಂತೆ ಬಳಸಿಕೊಳ್ಳುತ್ತದೆ. ಇದು ತನ್ನ ಸ್ವಾರ್ಥಕ್ಕೆಂದೇ ಮೀನುಗಳನ್ನು ನೀರಿನಲ್ಲಿಯೂ ಇಲಿಗಳನ್ನು ಬಿಲದಲ್ಲೂ ಮಂಗಗಳನ್ನು ಮರದ ಮೇಲೂ ಇಟ್ಟಿದೆ. ವಿಕಾಸದ ಮೆಟ್ಟಿಲಿನ ತುದಿಗೇರಿದ ಮನುಷ್ಯನ ಕೈಗೆ ಟೆಲಿಸ್ಕೋಪ್ ಕೊಟ್ಟು ಬ್ರಹ್ಮಾಂಡವನ್ನು ತೋರಿಸುತ್ತದೆ.
ಭೂಮಂಡಲದ ಆಚಿನ ಆ ನಿರ್ಜೀವ ಲೋಕದಲ್ಲೂ ಕಾಲೂರುವ ಆಸೆ ಅದಕ್ಕೆ. ಅದಕ್ಕೇ ನಮ್ಮ ಕೈಗೆ ಮೈಕ್ರೊಸ್ಕೋಪ್ ಕೊಟ್ಟು ತನ್ನನ್ನೇ ಬಿಚ್ಚಿ ತೋರಿಸುತ್ತದೆ,
ಹೀಗೆ, ಡಾರ್ವಿನ್ ಸಿದ್ಧಾಂತಕ್ಕೇ ಕೈಕಾಲು ಬಾಲ ಹಚ್ಚಿ, ಜೀನ್ನ ವಿಶ್ವರೂಪವನ್ನು ’ಸೆಲ್ಫಿಶ್ ಜೀನ್‘ ಮೂಲಕ ಡಾವ್ಕಿನ್ಸ್ ತೋರಿಸಿದಾಗ ವಿಜ್ಞಾನಲೋಕವೂ ಈ ಮೋಹಕ ಪ್ರತಿಮಾಶಿಲ್ಪಕ್ಕೆ ತಲೆದೂಗಿತು.

ಜನಸಾಮಾನ್ಯರ ಪಾಲಿಗಂತೂ ಇದು ಅಚ್ಚುಮೆಚ್ಚಿನ ಕೃತಿ ಎನಿಸಿತು. ಡಾರ್ವಿನ್ ಸಿದ್ಧಾಂತವನ್ನು ಇಷ್ಟು ಸರಳವಾಗಿ, ರೂಪಕಗಳ ಭಾಷೆಯಲ್ಲಿ ಅದುವರೆಗೆ ಯಾರೂ ಹೇಳಿರಲಿಲ್ಲ. ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ ಮೂಲಕ ಪ್ರಕಟವಾದ ಈ ಗ್ರಂಥ ಜಗತ್ತಿನ 30ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಯಾಗಿ ಮತ್ತೆ ಮತ್ತೆ ಹೊಸ ಹೊಸ ಅಧ್ಯಾಯಗಳನ್ನು ಸೇರಿಸಿಕೊಳ್ಳುತ್ತ ಇದೀಗ ಐದನೆಯ ಆವೃತ್ತಿಯಲ್ಲಿ ಮತ್ತೆ ಪ್ರಕಟವಾಗಿದೆ.
ಜನರನ್ನು ವಿಜ್ಞಾನದತ್ತ ಸೆಳೆಯುವಲ್ಲಿ ಕಾರ್ಲ್ ಸೇಗನ್ನ ’ಕಾಸ್ಮೋಸ್‘, ಸ್ಟೀಫನ್ ಹಾಕಿಂಗ್ನ ’ಎ ಬ್ರೀಫ್ ಹಿಸ್ಟರಿ ಆಫ್ ಟೈಮ್‘, ರೇಚೆಲ್ ಕಾರ್ಸನ್ಳ ’ಸೈಲೆಂಟ್ ಸ್ಪ್ರಿಂಗ್‘ ಮುಂತಾದ ಅತಿ ಮಹತ್ವದ ಗ್ರಂಥಗಳ ಸಾಲಿಗೆ ‘ಸೆಲ್ಫಿಶ್ ಜೀನ್’ ಸೇರಿದೆಯಾದರೂ ಇದಕ್ಕೊಂದು ವಿಶೇಷ ಇದೆ. ವಿಜ್ಞಾನಿಗಳಲ್ಲೂ ಕೆಲವರು ತಲೆ ತೂಗುವಂತೆ, ಇನ್ನು ಕೆಲವರ ತಲೆ ತಿನ್ನುವಂತೆ ಮಾಡಿ, ಅವರೊಂದಿಗೆ ಜಗಳ ಕಾಯುತ್ತಲೇ ಸ್ವಾರ್ಥಿ ಜೀನ್ ಥರಾ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡೇ ಈಗಲೂ ಈ ಕೃತಿ ವಿಕಾಸವಾಗುತ್ತಲೇ ಇದೆ.
ವಿಜ್ಞಾನದಲ್ಲಷ್ಟೇ ಅಲ್ಲ, ಸಾಹಿತ್ಯ ಕ್ಷೇತ್ರದಲ್ಲೂ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಗ್ರಂಥಕರ್ತ ಡಾವ್ಕಿನ್ಸ್ ಇಂದಿಗೂ ಜೀವವಿಜ್ಞಾನದ ಚರ್ಚೆಗಳಲ್ಲಿ ಅತ್ಯಂತ ಸಕ್ರಿಯರಾಗಿದ್ದಾರೆ. ವಿಕಾಸ ವಿಜ್ಞಾನದಲ್ಲಿ ದೇವರಿಗೆ ಸ್ಥಾನವೇ ಇಲ್ಲದ್ದರಿಂದ ನಿರೀಶ್ವರವಾದದ ಅತಿ ಪ್ರಮುಖ ವಕ್ತಾರರೆನಿಸಿದ್ದಾರೆ.
[ http://richarddawkins.com ನಲ್ಲಿ ಇವರ ಎಲ್ಲ ಚಟುವಟಿಕೆಗಳನ್ನೂ ನೋಡಬಹುದು. ದೇವರ ಅಸ್ತಿತ್ವವನ್ನು ನಿರಾಕರಿಸುವ ಪ್ರಮುಖರಿಗೆ ‘ಡಾವ್ಕಿನ್ಸ್ ಪ್ರಶಸ್ತಿ’ ನೀಡಲಾಗುತ್ತದೆ. ನಮ್ಮ ದೇಶದಲ್ಲಿ ಕವಿ ಜಾವೇದ್ ಅಖ್ತರ್ಗೆ ಈ ಪ್ರಶಸ್ತಿ ಲಭಿಸಿದೆ].
‘ಸ್ವಾರ್ಥಿ ಜೀನ್’ನ ಅತಿ ಪ್ರಮುಖ ಅಂಶಗಳು ಹೀಗಿವೆ: 1. ಜೀನ್ ದೃಷ್ಟಿಯಲ್ಲಿ ಜೀವಿಯ ಶರೀರವೆಂದರೆ ಕೇವಲ ತನ್ನನ್ನು ಕಾಪಿಟ್ಟುಕೊಳ್ಳುವ ಒಂದು ಯಂತ್ರ ಅಷ್ಟೆ. ನಾವು-ನೀವೆಲ್ಲ ಅದರ ಅತ್ಯಾಧುನಿಕ ಕಾರು! 2. ಜೀವಿಗಳಲ್ಲಿ ದಯೆ, ಕ್ರೌರ್ಯ, ಪರೋಪಕಾರ ಬುದ್ಧಿಗಳೆಂದರೆ ಮತ್ತೇನಲ್ಲ; ಜೀನ್ನ ಬದುಕುಳಿಯುವ ಉಪಾಯವೇ ಆಗಿರುತ್ತದೆ. ವಾಂಪೈರ್ ಬಾವಲಿಗಳು ತಾವು ಹೀರಿ ತಂದ ರಕ್ತವನ್ನು ಹಸಿದ ಬೇರೊಂದು ಬಾವಲಿಯ ಬಾಯಿಗೆ ಉಗುಳುವುದು; ಸಿಂಹಿಣಿಯ ಎಳೇ ಮರಿಗಳನ್ನು ಬಲಿಷ್ಠ ಸಿಂಹವೊಂದು ಕೊಂದು ಭಕ್ಷಿಸುವುದು -ಇಂಥವೆಲ್ಲ ಕೃತ್ಯಗಳ ಹಿಂದೆ ಸ್ವಾರ್ಥಿ ಜೀನ್ ಕೆಲಸ ಮಾಡುತ್ತಿರುತ್ತದೆ. ಮನುಷ್ಯಕುಲದ ಮಟ್ಟಿಗಂತೂ ಪಾಪ-ಪುಣ್ಯ, ಸ್ವರ್ಗ-ನರಕ, ಕರ್ಮಫಲದಂಥ ಧಾರ್ಮಿಕಮೂಲದ ಪರಿಕಲ್ಪನೆಗಳಿಗೆ ಸ್ಥಾನವೇ ಇಲ್ಲ.
ತನ್ನ ಉಳಿವಿಗಾಗಿ ಇಷ್ಟೆಲ್ಲ, ಏನೆಲ್ಲ ಮಾಡಬಲ್ಲ ಜೀನ್ ಅದೇಕೆ ಪ್ರಾಣಿ ಪ್ರಪಂಚದಲ್ಲಿ ಸಲಿಂಗ ರತಿಯನ್ನು ಉಳಿಸಿಕೊಂಡಿದೆ? ಮನುಷ್ಯರಲ್ಲಂತೂ ಸಲಿಂಗರತಿ ಅಷ್ಟೇ ಅಲ್ಲ, ಬ್ರಹ್ಮಚರ್ಯೆ, ಸನ್ಯಾಸ ಇವೆಲ್ಲ ಏಕಿವೆ? ಜೀನ್ಗಳ ಮಟ್ಟಿಗೆ ಇದು ಆತ್ಮಘಾತುಕ ಅಲ್ಲವೆ? ಡಾವ್ಕಿನ್ಸ್ ವಿವರಣೆಯ ಪ್ರಕಾರ ಅಂಥ ಕೆಲವು ಜೀವಿಗಳು ತಮ್ಮ ಸ್ವಂತದ ವಂಶೋದ್ಧಾರವನ್ನು ಬದಿಗೊತ್ತಿ ಅದೇ ವಂಶದ ಇತರ ಬಂಧುಗಳಲ್ಲಿನ ಜೀನ್ ಸುಭದ್ರವಾಗಿರುವಂತೆ ನೆರವು, ರಕ್ಷಣೆ ನೀಡುತ್ತವೆ.
ವಾನರಗಳಲ್ಲಿ ಬಲಿಷ್ಠನ ಜೀನ್ಗಳೇ ಪ್ರಸಾರವಾಗುವಂತೆ ಕೆಲವು ಸದಸ್ಯರು ವಂಶೋದ್ಧಾರದ ಪೈಪೋಟಿಯಿಂದ ದೂರವಿದ್ದು ಸಲಿಂಗರತಿಯಲ್ಲಿ ತೊಡಗುತ್ತವೆ. ಮನುಷ್ಯನೂ ಸೇರಿದಂತೆ ಉನ್ನತ ಜೀವಿಗಳ ಮಿದುಳಲ್ಲಿ ಜೀನ್ಗಳನ್ನೇ ಹೋಲುವ ’ಮೀಮ್‘ಗಳು ಕ್ರಿಯಾಶೀಲವಾಗಿರುತ್ತವೆ.
ಶರೀರಕ್ಕೆ ಜೀನ್ ಇದ್ದಂತೆ ಮನಸ್ಸಿಗೆ ‘ಮೀಮ್’ Meme ಇರುತ್ತದೆ ಎಂಬ ಪರಿಕಲ್ಪನೆ ಡಾವ್ಕಿನ್ಸ್ನ ‘ಸೆಲ್ಫಿಶ್ ಜೀನ್’ ಕೃತಿಯಲ್ಲಿ ಮೊದಲು ಪ್ರಕಟವಾಯಿತು.

ಮೀಮ್ ಎಂದರೆ ಜೀನ್ನ ʻಸಾಂಸ್ಕೃತಿಕ ರೂಪ’ವಾಗಿದ್ದು ಇದನ್ನು ಯಾವ ಸೂಕ್ಷ್ಮ ದರ್ಶಕದಲ್ಲೂ ಕಾಣಲು ಸಾಧ್ಯವಿಲ್ಲ. ಇದು ಒಂದು ಮಿದುಳಿನಿಂದ ಇನ್ನೊಂದು ಮಿದುಳಿಗೆ, ಅಲ್ಲಿಂದ ಕೋಟ್ಯಂತರ ಮಿದುಳುಗಳಿಗೆ ಸಾಗುತ್ತ, ವಿಕಾಸವಾಗುತ್ತ ಅಥವಾ ಕೆಲವು ಬಾರಿ ಅಲ್ಲಲ್ಲೇ ನಶಿಸುತ್ತ ಹೋಗುತ್ತದೆ. ಅದೊಂಥರಾ ಮಿದುಳಿನ ವೈರಸ್ ಇದ್ದಂತೆ. ವೈರಸ್ಗಳಲ್ಲಿ ಒಳ್ಳೆಯವೂ ಕೆಟ್ಟವೂ ಕ್ಷಣಿಕವೂ ಚಿರಾಯುವೂ ಇರುವ ಹಾಗೆ ಮೀಮ್ನಲ್ಲೂ ವೈವಿಧ್ಯಮಯ ರೂಪಗಳಿವೆ.
ಡಾರ್ವೀನಿಯನ್ ವಿಕಾಸವಾದಕ್ಕೆ ಪೂರಕವಾಗಿ ಬಂದ ಮೀಮ್ ಪರಿಕಲ್ಪನೆ ‘ಸೆಲ್ಫಿಶ್ ಜೀನ್’ ಗ್ರಂಥದ ಅತ್ಯಂತ ಪ್ರಬಲ ಅಧ್ಯಾಯವೆನಿಸಿದೆ. ಈಚಿನ ವರ್ಷಗಳಲ್ಲಿ ಅದು ʻಮೆಮೆಟಿಕ್ಸ್‘ ಹೆಸರಿನಲ್ಲಿ ಫಿಲಾಸಫಿ, ಸಮಾಜ ವಿಜ್ಞಾನ ಮತ್ತು ಮನೋವಿಜ್ಞಾನದಲ್ಲೂ ಅನೇಕ ಹೊಸ ಜ್ಞಾನಶಾಖೆಗಳಿಗೆ ಮೂಲ ಆಕರವಾಗಿದೆ.
ದೇವರ ಪರಿಕಲ್ಪನೆ, ಧರ್ಮಗಳ ಉಗಮ ಮತ್ತು ವಿಕಾಸ ಅಷ್ಟೇ ಅಲ್ಲ ಮಾನವ ಕುಲದ ಎಲ್ಲ ಬಗೆಯ ಉತ್ಕರ್ಷ ಮತ್ತು ಅಪಸವ್ಯಗಳನ್ನು ಮೀಮ್ಗಳ ಮೂಲಕವೇ ನಿರ್ವಚಿಸಲು ಸಾಧ್ಯವಿದೆ. ಈಗಂತೂ ಅದರಿಂದ ಹೊಮ್ಮಿದ ’ವೈರಲ್‘ ಎಂಬ ಪದ ಎಲ್ಲ ಭಾಷೆಗಳಲ್ಲೂ ಹಬ್ಬಿದೆ.
ಜೀನ್ಗಳ ವಿಕಾಸಕ್ಕೆ ಜೀವಿಗಳು ಬೇಕು. ಹಾಗೆಯೇ ಮೀಮ್ಗಳ ಓಡಾಟಕ್ಕೆ ಮಾಧ್ಯಮಗಳು ಬೇಕೇ ಬೇಕು. ಮಗು ಹುಟ್ಟುತ್ತಲೇ ಅಮ್ಮನ ಮಾತಿನ ಮೂಲಕ ಮಾತು, ದೇವರನಾಮ, ಹಾಡುಹಸೆ ಏನೆಲ್ಲವನ್ನೂ ತನ್ನೊಳಗೆ ತುಂಬಿಕೊಳ್ಳುತ್ತ ಬೆಳೆಯುತ್ತದೆ. ಮರಿ ಹುಟ್ಟಿದ ಹೊಸದರಲ್ಲಿ ಅದರ ಕರುಳಿನಲ್ಲಿ ಜೀವಪೋಷಕ ಏಕಾಣುಜೀವಿಗಳು ಬೆಳೆಯಲೆಂದು ತಾಯಿ ಆನೆ ತನ್ನ ಕೊಂಚ ಮಲವನ್ನು ಮರಿಗೆ ತಿನ್ನಿಸುತ್ತದೆ. ಜೀನ್ ವರ್ಗಾವಣೆಯ ಅದೇ ಮಾದರಿಯನ್ನು ಮೀಮ್ ವರ್ಗಾವಣೆಯಲ್ಲೂ ಕಾಣಬಹುದು.
ಮುಂದೆ ಮಗು ಬೆಳೆದಂತೆ ಏನೆಲ್ಲ ಬಗೆಯ ಮೀಮ್ಗಳನ್ನು ಅದು ತನ್ನ ತಲೆಯಲ್ಲಿ ತುಂಬಿಕೊಳ್ಳುತ್ತ ಹೋಗುತ್ತದೆ. ಹಿಂದೆಲ್ಲ ಒಂದು ಮಿದುಳಲ್ಲಿ ಜನಿಸಿದ ಐಡಿಯಾ ಇತರರ ತಲೆಯಲ್ಲಿ ಹೋಗಲು ತುಂಬ ಸಮಯ ಬೇಕಾಗುತ್ತಿತ್ತು. ಧರ್ಮ ಪ್ರಸಾರ, ಧರ್ಮವಿರೋಧಿ ಹಿಂಸಾಕೃತ್ಯ, ಮಾರ್ಕ್ಸ್ವಾದ, ಹಿಂದೂತ್ವ ಪ್ರಚಾರ ಇವಕ್ಕೆಲ್ಲ ದಶಕಗಳೇ ಬೇಕಾಗುತ್ತಿತ್ತು.
’ಗಣೇಶ ಹಾಲು ಕುಡಿದ‘ ಎಂಬ ಸಂಗತಿ 1995ರಲ್ಲಿ ನಾಲ್ಕಾರು ಪೋನ್ ಕಾಲ್ಗಳ ಮೂಲಕ ಒಂದರ್ಧ ಗಂಟೆಯಲ್ಲೇ ಇಡೀ ದೇಶಕ್ಕೆ ಹಬ್ಬಿ ಮೂಢನಂಬಿಕೆಯ ಸುನಾಮಿಯನ್ನು ಎಬ್ಬಿಸಿದ್ದೇ ಒಂದು ಪವಾಡವೆನಿಸಿತ್ತು. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಆಂದೋಲನ, ಕ್ರೂರ ಅತ್ಯಾಚಾರಿಗಳ ವಿರುದ್ಧ ನಿರ್ಭಯಾ ಆಂದೋಲನ ಇವೆಲ್ಲವೂ ಇತಿಹಾಸವನ್ನೇ ಸೃಷ್ಟಿಸಿ ಮಾಯವಾಗಿವೆ.
ಈಗ ಜೀನ್ ಮತ್ತು ಮೀಮ್ ಎರಡಕ್ಕೂ ಮಿಂಚಿನ ವೇಗ ಸಿಕ್ಕಿಬಿಟ್ಟಿದೆ ; ಅಸಲೀ ವೈರಾಣುಗಳ ಜೀನ್ಗಳೇ ಬುಲೆಟ್ ಟ್ರೇನ್ ಮೂಲಕ, ಜೆಟ್ ವಿಮಾನಗಳ ಮೂಲಕ ಹೇಗೆ ಏಕಾಏಕಿ ಜಗತ್ತಿಗೆಲ್ಲ ಪಸರಿಸುತ್ತಿವೆ ಎಂಬುದನ್ನು ನಾವು ಕೋವಿಡ್ ಕಾಲದಲ್ಲಿ ನೋಡಿದೆವು. ಮೀಮ್ಗಳಿಗಂತೂ ಈಗ ಸಾಮಾಜಿಕ ಮಾಧ್ಯಮವೇ ಸಿಕ್ಕಿದೆ. ಹೊಸ ಫ್ಯಾಶನ್ನು, ಐಪಿಎಲ್, ಅಂಧಭಕ್ತಿ, ದ್ವೇಷಸಂದೇಶ, ಪರಿಸರ ಪ್ರೇಮ, ವಾಸ್ತುವಿಚಾರ, ’ಕೊಕ್ರೋಚ್ ಜನತಾ ಪಾರ್ಟಿ‘ಯಂಥ ಹೊಸ ರಾಜಕೀಯ ಪ್ರಣಾಳಿಕೆ (ಈಗ ಫೀಫಾ) ಹೀಗೆ ಏನೆಲ್ಲ ಚಿಮ್ಮಿ ಬರುತ್ತಿವೆ.
ಹಿರಿಯರ ಅನುಭವ, ವಿವೇಕ ಎಲ್ಲವನ್ನೂ ಬದಿಗೊತ್ತಿ ಈಗೀಗ ಜೆನ್-ಝೀಗಳೇ ಮೀಮ್ಗಳಿಗೆ ಚಾಲನೆ ಕೊಡುತ್ತಿವೆ. ಸಾಲದ್ದಕ್ಕೆ ಹೊಸ ಮೀಮ್ಗಳನ್ನು ಸೃಷ್ಟಿಸಿ ಹಂಚುವ ಕೆಲಸವನ್ನು ಎಐಗಳೇ ಮಾಡುತ್ತಿವೆ.
ಅಂತೂ ಜಗತ್ತಿನ ಅತ್ಯಂತ ಬೆಲೆಬಾಳುವ ಸಂಪತ್ತು ಎನ್ನಿಸಿದ ಮನುಷ್ಯನ ಮಿದುಳಿನಲ್ಲಿ ಜಾಗ ಗಿಟ್ಟಿಸಲು ಮೀಮ್ಗಳ ತಾಂಡವವೇ ನಡೆಯುತ್ತಿದೆ.
ಈ ಮಧ್ಯೆ ಜೀನ್ಗಳ ಗತಿಯೇನು? ಅವಕ್ಕೂ ಭಲೇ ಸಂಕಟ ಒದಗಿದಂತಿದೆ! ವಿಜ್ಞಾನಿಗಳು ಎಂದೋ ಕಣ್ಮರೆಯಾದ ಜೀವಿಗಳಿಗೆ ಮರುಜೀವ ಕೊಡುತ್ತಿದ್ದಾರೆ. ಕ್ರಿಸ್ಪಾರ್ CRISPR ಕತ್ತರಿಯನ್ನು ಹಿಡಿದು ಮನುಷ್ಯ ಭ್ರೂಣಗಳ ಜೀನ್ಗಳನ್ನೇ ಎಡಿಟ್ ಮಾಡಿ ‘ಡಿಸೈನರ್ ಬೇಬಿ’ಗಳನ್ನು ಸೃಷ್ಟಿಸಲು ಜೀವವಿಜ್ಞಾನಿಗಳು ಕೂತಿದ್ದಾರೆ.
ಅದೂ ಸ್ವಾರ್ಥಿ ಜೀನ್ನ ಕೈವಾಡವೆ? ಚರ್ಚೆ ಜಾರಿಯಲ್ಲಿದೆ…
ಇದನ್ನೂ ನೋಡಿ: ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕೇ ಹೊರತು ಕೆಲಸದ ಉಪಕರಣಗಳಲ್ಲ Janashakthi Media
