ಈ ಭೂಮಿ ಮೇಲೆ ಸ್ವಚ್ಛಂದವಾಗಿ ಬದುಕಲು ಯಾರಿಗೂ ಯಾವ ಭಯವೂ ಇರಬಾರದು. ಕಾನೂನಾತ್ಮಕವಾಗಿ ಮನುಷ್ಯ ನೆಲದಲ್ಲಿ ತನ್ನ ಬದುಕಿನ ಜೀವನಕ್ಕೆ ಬೇಕಾದ ಮೂಲಭೂತ ಹಕ್ಕುಗಳನ್ನು ಪಡೆದುಕೊಂಡು ಎಲ್ಲ ಜನರನ್ನು ಪ್ರೀತಿಸುತ್ತಾ ಬದುಕಿದರೆ ಅದೇ ಆದರ್ಶ ದೇಶ. ಆದರೆ ಅದೇ ದೇಶದೊಳಗೆ ಜೀವನ ಹಾಗೂ ಬದುಕನ್ನು ಕೈಯಲ್ಲಿ ಹಿಡಿದುಕೊಂಡು ಜಾತಿ, ಜಾತಿ ಒಳಗಿನ ಅಸ್ಪೃಶ್ಯತೆಯ ಸಂಕೋಲೆಯಲ್ಲಿ ಸಿಲುಕಿ ಬದುಕುತ್ತಿದ್ದರೆ ನಿಜಾರ್ಥದಲ್ಲಿ ಇದು ಪ್ರತಿಕ್ಷಣದ ಭಯವನ್ನು ಉತ್ಪಾದನೆ ಮಾಡುವ ಭಯೋತ್ಪಾದನೆಯೇ ಸರಿ. ಅಸ್ಪೃಶ್ಯತೆ
– ಎನ್ ಚಿನ್ನಸ್ವಾಮಿ ಸೋಸಲೆ
ಇಂತಹ ಭಯೋತ್ಪಾದನೆಗೆ ಭಾರತದಲ್ಲಿ ಎರಡುವರೆ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಇಂಥ ಸುದೀರ್ಘ ಇತಿಹಾಸವಿರುವ ಮಾನಸಿಕ ಭಯೋತ್ಪಾದನೆ ಬಗ್ಗೆ ನಿಜ ‘ಅಸ್ಪೃಶ್ಯ ಮನಸ್ಸಿನ’ ವ್ಯಕ್ತಿಗಳು ಈವರೆಗೂ ಮಾತನಾಡಿಲ್ಲ. ಈ ಮನಸ್ಸಿನವರು ಮಾತನಾಡಿದ್ದೆಲ್ಲವೂ ಸಹ ಕೇವಲ ಇದಕ್ಕೆ ‘ತ್ಯಾಪೆ’ ಹಾಕುವ ಸಿದ್ಧಾಂತವನ್ನೇ. ಹೀಗೆ ತ್ಯಾಪೆ ಹಾಕುವ ಸಿದ್ಧಾಂತಗಳೇ ಇಂದು ಪರಮೋಚ್ಚ ಧಾರ್ಮಿಕ ಸಿದ್ಧಾಂತಗಳಾಗಿ ಅನಾವರಣಗೊಂಡಿರುವುದು ನಮ್ಮ ನಡುವಿನ ವಾಸ್ತವದ ದುರಂತ. ಈ ದುರಂತ ಕುರಿತೇ ವಸ್ತುನಿಷ್ಠವಾಗಿ ಬರೆದದ್ದು, ಹೋರಾಡಿದ್ದು, ಮಾತನಾಡಿದ್ದು ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಎಂಬುದನ್ನು ನಾವೆಲ್ಲರೂ ಸೂಕ್ಷ್ಮಾತಿಸೂಕ್ಷ್ಮ ಹಿನ್ನೆಲೆಯಿಂದ ಗಮನಿಸಬೇಕಾಗಿದೆ. ಅಸ್ಪೃಶ್ಯತೆ
ಭಾರತ – ಪಾಕಿಸ್ತಾನದ ಗಡಿ ಭಾಗದಲ್ಲಿ ಆಗುತ್ತಿರುವ ‘ದೈಹಿಕ’ ಭಯೋತ್ಪಾದನೆಗಿಂತ ಭಾರತದ ಒಳಗೆ ಶತಶತಮಾನಗಳಿಂದ ಆಗುತ್ತಿರುವ ಅಸ್ಪೃಶ್ಯತೆ ಎಂಬ ‘ಮಾನಸಿಕ’ ಭಯೋತ್ಪಾದನೆ ಅತ್ಯಂತ ಹೆಚ್ಚು ಅಪಾಯಕಾರಿ. ಈ ಅಸ್ಪೃಶ್ಯತೆಯನ್ನು ಸೃಷ್ಟಿ ಮಾಡಿದ ಭಯೋತ್ಪಾದನೆಗೆ ಸತ್ತವರು, ಸಾಯುತ್ತಿರುವವರು, ಈ ಮಾನಸಿಕ ಭಯೋತ್ಪಾದನೆಯಲ್ಲಿ ಪ್ರತಿನಿತ್ಯ ಪ್ರತಿಕ್ಷಣ ಸಿಲುಕಿ ನರಳುತ್ತಿರುವವರು, ಬದುಕಿದ್ದಾಗ ಅಥವಾ ಸತ್ತಾಗಲೂ ಬೆಲೆ ಇಲ್ಲದಂತಾದವರು, ಭಯೋತ್ಪಾದಕರ ವಿಕೃತ ಮನಸ್ಸುಗಳ ಕ್ರೂರತೆಗೆ, ಅತ್ಯಾಚಾರಕ್ಕೆ ಒಳಗಾದವರು ಕೋಟಿ ಕೋಟಿ ನನ್ನ ಜನ. ಈ ನಿತ್ಯ ಭಯೋತ್ಪಾದನೆಯ ಮುಂದೆ ಈಗ ಸಂಭವಿಸುತ್ತಿರುವ ಕೇವಲ ಭೌತಿಕ ಭಯೋತ್ಪಾದನೆ ಲೆಕ್ಕಕ್ಕೆ ಇಲ್ಲ. ಈಗ ಸಂಭವಿಸುತ್ತಿರುವ ಭಯೋತ್ಪಾದನೆಯಲ್ಲಿ ಜನ ಸಾಯುತ್ತಾರೆ. ಆದರೆ ಅಸ್ಪೃಶ್ಯತೆ ಹಿನ್ನೆಲೆಯಿಂದ ಮಾನಸಿಕವಾಗಿ ಉಂಟುಮಾಡುತ್ತಿರುವ ನಿತ್ಯ ಭಯೋತ್ಪಾದನೆ ಜೀವಂತ ಇದ್ದೂ ಸಹ ಸಾಯಿಸುತ್ತಿದೆ. ಅಸ್ಪೃಶ್ಯತೆ
ಇದನ್ನೂ ಓದಿ: 2 ತಿಂಗಳಲ್ಲಿ ವಿದ್ಯುತ್ ಮಾರಾಟದಿಂದ ಕರ್ನಾಟಕಕ್ಕೆ 423 ಕೋಟಿ ರೂ. ಆದಾಯ
ಭಯೋತ್ಪಾದನೆ ತಪ್ಪು ಎಂದು ಎಲ್ಲರಿಗೂ ತಿಳಿದಿರುವುದೇ ಆಗಿದೆ. ಇಂಥ ಕೃತ್ಯಗಳು ಆಗಲೇಬಾರದು. ಇದನ್ನು ನಾವೆಲ್ಲರೂ ಖಂಡಿಸುತ್ತೇವೆ. ಆದರೂ ಸಂಭವಿಸಿರುವ ಈ ಎರಡು ಭೀಕರ ಭಯೋತ್ಪಾದನೆಗಳಲ್ಲಿ ಅತ್ಯಂತ ಕ್ರೂರವಾದ ಭಯೋತ್ಪಾದನೆ ಯಾವುದೆಂದು ನೀವೇ ನಿರ್ಧರಿಸಿ. ಅಸ್ಪೃಶ್ಯತೆ
‘ಅಸ್ಪೃಶ್ಯತೆ’ ಎಂಬ ಭಯೋತ್ಪಾದನೆಗಿಂತ ಮತ್ತೊಂದು ಭಯೋತ್ಪಾದನೆ ಈ ನೆಲದಲ್ಲಿ ಇಲ್ಲ. ಇಂತಹ ಶಾಶ್ವತ ಭಯೋತ್ಪಾದನೆಗೆ ಈ ನೆಲದಲ್ಲಿ ಎರಡುವರೆ ಸಾವಿರ ವರ್ಷಗಳ ಇತಿಹಾಸವಿದೆ. ಭಾರತ ದೇಶದಲ್ಲಿ ಮೊಟ್ಟಮೊದಲ ಬಹುದೊಡ್ಡ ಭಯೋತ್ಪಾದನೆ ತಮ್ಮನ್ನು ತಾವೇ ಸ್ವ-ಪ್ರತಿಷ್ಠೆಯಿಂದ ‘ಸ್ಪೃಶ್ಯರು’ ಎಂದು ಕರೆದುಕೊಂಡು, ಹೀಗೆ ಕರೆದುಕೊಂಡವರೇ ತಮ್ಮ ಸ್ವಾರ್ಥಕ್ಕಾಗಿ ನೀವು ‘ಅಸ್ಪೃಶ್ಯರು’ ಎಂದು ಕರೆದು ಅವರಿಗೆ ಹಾಗೂ ಅವರ ಸ್ವಚ್ಛಂದ ಬದುಕಿಗೆ ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯ ನಿರ್ಬಂಧಗಳನ್ನು ವಿಧಿಸಿದ್ದೇ ಈ ನೆಲದ ಮೊದಲ ಭಯೋತ್ಪಾದನೆ ಆಗಿದೆ.
ಈ ಶಾಶ್ವತ ಭಯೋತ್ಪಾದನೆಯ ಮುಂದೆ ಇಂದು ಸಂಭವಿಸುತ್ತಿರುವ ತಾತ್ಕಾಲಿಕ ಭಯೋತ್ಪಾದನೆ ಲೆಕ್ಕಕ್ಕೆ ಇಲ್ಲ. ಭಾರತದ ನೆಲದಲ್ಲಿ ಇಂದು ಸಂಭವಿಸುತ್ತಿರುವ ಭಯೋತ್ಪಾದನೆಗೆ ಸಂವಿಧಾನಾತ್ಮಕ ಹಿನ್ನೆಲೆಯಿಂದ ಗಟ್ಟಿಮುಟ್ಟಾದ ಕಾನೂನು ಚೌಕಟ್ಟಿನ ಔಷಧಿ ಇದೆ. ಆ ಮೂಲಕ ಇದನ್ನು ಸಂಪೂರ್ಣವಾಗಿ ನಿರ್ಮೂಲನೆಯನ್ನುಮಾಡಬಹುದು. ಆದರೆ, ಭಾರತದ ನೆಲದಲ್ಲಿ ಶತಶತಮಾನಗಳಿಂದ ಮಾನಸಿಕವಾಗಿ ಎರಡೂವರೆ ಸಾವಿರ ವರ್ಷಗಳಿಂದ ಜಾರಿಯಲ್ಲಿರುವ ಮಾನಸಿಕ ಭಯೋತ್ಪಾದನೆಗೆ ಯಾರೂ ಸಹ ಔಷಧಿಯನ್ನು ಕಂಡುಹಿಡಿದಿಲ್ಲ. ಸೂಕ್ತ ಸಂದರ್ಭದಲ್ಲಿ ಅನೇಕ ಮಹನೀಯರು ಔಷಧಿ ಕಂಡುಹಿಡಿದರೂ ಸಹ, ಔಷಧಿ ಕಂಡು ಹಿಡಿದವರು ಹಾಗೂ ಅವರ ಔಷಧಿಯನ್ನು ಸಹ ತಮ್ಮ ಮಾನಸಿಕ ಭಯೋತ್ಪಾದನೆ ಒಳಗೆ ಸೇರಿಸಿಕೊಂಡು ಸಮಯಕ್ಕೆ ಸರಿಯಾಗಿ ತಮ್ಮ ಸಮಯ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡರು. ಈ ಹಿನ್ನೆಲೆಯಿಂದ ಈ ಮಹನೀಯರು ಕಂಡುಹಿಡಿದ ಔಷಧಿ ವ್ಯರ್ಥವಾಯಿತು. ಅಸ್ಪೃಶ್ಯತೆ
ಅಸ್ಪೃಶ್ಯತೆ ಎಂಬ ಶಾಶ್ವತ ಮಾನಸಿಕ ಭಯೋತ್ಪಾದನೆ – ತನ್ನೊಳಗೆ ಅಸ್ಪೃಶ್ಯರಿಗೆ ಜೀವಿಸಲು ವಿಧಿಸಿದ ಮಾನವ ವಿರೋಧಿ ನೀತಿಗಳು ವಿಶ್ವದಲ್ಲಿ ಸಂಭವಿಸುವ ಇನ್ಯಾವುದೇ ಭಯೋತ್ಪಾದನೆಯ ಭೀಕರತೆಗಳನ್ನು ಮೀರಿಸುವಂಥದ್ದು ಎಂದು ಅಂಬೇಡ್ಕರ್ ಅವರೇ ಅನೇಕ ಸಂದರ್ಭದಲ್ಲಿ ಹೇಳಿದ್ದಾರೆ. ಈ ಮಾತನ್ನು ಅಂಬೇಡ್ಕರ್ ಅವರು ಕೆಲವು ಮೂಲಭೂತವಾದಿಗಳನ್ನು ಕೇಳಿ – ನೋಡಿ ಹೇಳಿದ ರೀತಿಯದಲ್ಲ. ಬದಲಿಗೆ, ಸ್ವತಃ ಪಾರಂಪರಿಕವಾಗಿ ಈ ಭಾರತ ಸೃಷ್ಟಿ ಮಾಡಿದ ಅಸ್ಪೃಶ್ಯತೆಯ ಭಯೋತ್ಪಾದನೆಯಲ್ಲಿ ಸಿಲುಕಿ – ಅದರಿಂದಾದ ಕಷ್ಟ ನಷ್ಟಗಳನ್ನು ಅನುಭವಿಸಿ ಒಡಲಾಳದಿಂದ ಹೇಳಿದ ಮಾತು.
ಅಸ್ಪೃಶ್ಯತೆ ಹಿನ್ನೆಲೆಯ ಭಯೋತ್ಪಾದನೆಯ ಮಟ್ಟ ಹೇಗಿತ್ತೆಂದರೆ – ನಮ್ಮ ಸ್ವಾರ್ಥ ಸಾಧನೆಗಾಗಿ ಇವರೇ ಸೃಷ್ಟಿ ಮಾಡಿದ ‘ಅಸ್ಪೃಶ್ಯರು’ ಎಂಬ ಈ ನೆಲಮೂಲ ಸಂಸ್ಕೃತಿಯ ಬೆವರಿನ ಜನರು ಮನುಷ್ಯರಾಗಿ ಜೀವಿಸಲು ಬೇಕಾದ ಮೂಲಭೂತ ಹಕ್ಕುಗಳನ್ನು ಶಾಶ್ವತವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯ ಕಟ್ಟುಪಾಡುಗಳಿಂದ ಕಸಿದುಕೊಂಡಿದ್ದೇ ಭಾರತದ ಮೊದಲ ಭಯೋತ್ಪಾದನೆ. ಈ ಹಿನ್ನೆಲೆಯ ಭಯೋ ತ್ಪಾದನೆಯ ಚರಿತ್ರೆಗೆ ಭಾರತದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ. ಈ ಇತಿಹಾಸ ಶತಶತಮಾನಗಳಿಂದಲೂ ನಿಂತಲ್ಲೇ ನಿಂತು ಮಡುಗಟ್ಟಿಕೊಂಡಿದೆ. ಸಾವಿರಾರು ವರ್ಷ ಗಳಿಂದ ನಿಂತಲ್ಲೇ ನಿಂತಿರುವ ಈ ಕೊಳಕು ನೀರು ಪ್ರಜಾಪ್ರಭುತ್ವ ಭಾರತದಲ್ಲಿ ತನ್ನ ಸಾಮಾಜಿಕ ಹಿನ್ನೆಲೆಯ ಭೀಕರ ವಾಸನೆಯನ್ನು ಹೊರಚೆಲ್ಲುತ್ತಿದೆ. ಇದು ಹೊರ ಚೆಲ್ಲುತ್ತಿರುವ ಭೀಕರ ವಾಸನೆಯ ಮುಂದೆ ಇಂದಿನ ಧರ್ಮ ಅಂಧಕಾರದ ಭಯೋತ್ಪಾದನೆಗೆ ಶಕ್ತಿಯೇ ಇಲ್ಲ.
ಇಂದಿನ ಭಯೋತ್ಪಾದಕ ಚರಿತ್ರೆಗೆ ಸ್ವಾತಂತ್ರ್ಯಾನಂತರದ, ಭಾರತ – ಪಾಕಿಸ್ತಾನ – ಬಾಂಗ್ಲಾದೇಶಗಳು ಇಬ್ಬಾಗಗೊಂಡ ನಂತರದ ಚರಿತ್ರೆ ಮಾತ್ರ ಇದೆ. ಆದರೆ ‘ಅಸ್ಪೃಶ್ಯತೆ’ ಎಂಬ ಭಯೋತ್ಪಾದನಾ ಚರಿತ್ರೆಗೆ ಸಾಮ್ರಾಟರು, ರಾಜ ಮಹಾರಾಜರು, ಸಾಮಂತ ಅರಸರು, ಪಾಳೆಗಾರರು, ವಿದೇಶದಿಂದ ಬಂದು ಈ ದೇಶವನ್ನು ಆಳ್ವಿಕೆ ಮಾಡಿದವರ ಬಹುದೊಡ್ಡ ಸಾಲೇ ಇದೆ. ಇವರೆಲ್ಲರೂ ಪರಾಕ್ರಮಿಗಳಾಗಿ ಸುವರ್ಣಯುಗದ ರಾಜ್ಯವನ್ನು ಕಂಡದ್ದು ಹಾಗೂ ಅನುಭವಿಸಿದ್ದು ದುಡಿಯುವ ಜನರನ್ನು ಅಸ್ಪೃಶ್ಯರ ನ್ನಾಗಿಸಿಯೇ ಹೊರತು – ಅವರನ್ನು ಮಾನವರಾಗಿ ಕಂಡು ಮಾನವರಿಗೆ ಬೇಕಾದ ಮೂಲಭೂತ ಹಕ್ಕುಗಳನ್ನು ನೀಡುವುದರ ಮೂಲಕವಲ್ಲ ಎಂಬ ಅಂಶವನ್ನು ಪ್ರತಿಯೊಬ್ಬರೂ ಮನಗಾಣಬೇಕಾಗಿದೆ.

ಭಾರತದ ಇತಿಹಾಸದಲ್ಲಿ ಸುವರ್ಣಯುಗ ಕಂಡ ಸಾಮ್ರಾಜ್ಯಗಳ ದೀಪದ ಬುಡ ಶಾಶ್ವತವಾಗಿ ಅಸ್ಪೃಶ್ಯತೆಯ ಭೀಕರ ಭಯೋತ್ಪಾದನೆಯಿಂದ ಕತ್ತಲಾಗಿತ್ತು ಎಂಬುದಕ್ಕೆ ಇದೇ ನಿದರ್ಶನ. ಕುಡಿಯುವ ನೀರು, ವಾಸಿಸುವ ಮನೆ, ಉಣ್ಣುವ ಅನ್ನಕ್ಕೂ ಅಸ್ಪೃಶ್ಯತೆಯ ಕೊಳಕನ್ನು ಮತ್ತಿದ ಭಯೋತ್ಪಾದಕ ದೇಶ ನಮ್ಮ ಭಾರತ ದೇಶ, ಬಹುದೊಡ್ಡ ದುಡಿಯುವ ಈ ನೆಲದ ಮೂಲನಿವಾಸಿ ಜನವರ್ಗಕ್ಕೆ ವಿದ್ಯೆಯನ್ನು ಶಾಶ್ವತವಾಗಿ ಕಲಿಯಬಾರದು ಎಂಬ ನಿರ್ಬಂಧವನ್ನು ಧಾರ್ಮಿಕ ಹಾಗೂ ಸಾಮಾಜಿಕ ಕಟ್ಟುಪಾಡುಗಳ ಹಿನ್ನೆಲೆಯಿಂದ ವಿಧಿಸಿದ್ದೇ ಈ ನೆಲದ ಶಾಶ್ವತವಾದ ಭಯೋತ್ಪಾದನೆ, ದೇವರ ಭಾಷೆ ಎಂದು ಕರೆಸಿಕೊಳ್ಳುವ ಸಂಸ್ಕೃತವನ್ನು ಕಲಿಯಬಾರದು, ಇವರೇ ಕಟ್ಟಿದ ದೇವಸ್ಥಾನದ ಒಳಗೆ ಪ್ರವೇಶ ಮಾಡಬಾರದು ಎಂದು ಅಸ್ಪಶ್ಯ ಜನಾಂಗಕ್ಕೆ ನಿರ್ಬಂಧನೆ ಹೇರಿದ್ದೇ ಬಹುದೊಡ್ಡ ಭಯೋತ್ಪಾದನೆ.
ಅಸ್ಪೃಶ್ಯತೆಯ ಭಯಾನಕ ಭಯೋತ್ಪಾದನೆ ಹೇಗಿದೆ ಎಂದರೆ, ನಾವೆಲ್ಲರೂ ನಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಓದಿದವರು. ಊರಿನ ಸರ್ಕಾರಿ ಶಾಲೆಗೆ ಯಾವ್ಯಾವ ಕೇರಿಯಿಂದ ವಿದ್ಯಾರ್ಥಿಗಳು ಬರುತ್ತಾರೆ ಎಂಬ ಅರಿವು ಸ್ಪಷ್ಟವಾಗಿ ಎಲ್ಲಾ ಸಹಪಾಠಿ ಗಳಿಗೂ ಇದ್ದ ಕಾರಣ ಎಲ್ಲರ ಜಾತಿಯು ಎಲ್ಲರಿಗೂ ತಿಳಿದಿತ್ತು, ಇಲ್ಲಿ ನೀನು ಯಾವ ಜಾತಿ ಎಂದು ಕೇಳುವ ಪ್ರಮೇಯವೇ ಬರುತ್ತಿರಲಿಲ್ಲ. ಆದರೆ, ಇಂದು ಸರ್ಕಾರಿ ಶಾಲೆಗಳ ಸ್ವಚ್ಛಂದ ಬದುಕಿನ ಜೀವನ ಮುಗಿದು ಖಾಸಗಿ ಶಾಲೆಗಳ ಆರ್ಭಟ ಯಥೇಚ್ಛವಾಗಿ ಆರಂಭಗೊಂಡಿದೆ. ನಿಜ ಅರ್ಥದಲ್ಲಿ ಹೇಳಬೇಕೆಂದರೆ ಈಗ ಭಾರತ ನಿಂತಿರುವುದೇ ಖಾಸಗಿಯವರ ಕೈಯಲ್ಲಿ, ಖಾಸಗಿಯವರೇ ಈ ಭಾರತದಲ್ಲಿ ಪಾರಂಪರಿಕವಾಗಿ ಜಾತಿ ವ್ಯವಸ್ಥೆಯನ್ನು ಕಟ್ಟಿದವರು ಹಾಗೂ ಪೋಷಿಸಿದವರು.
ಖಾಸಗಿ ಶಾಲೆಗಳಲ್ಲಿ ಬಲಿಷ್ಠ ಜಾತಿಯ ಮಕ್ಕಳು ತಮ್ಮ ಜಾತಿಯನ್ನು ಹೇಳಿಕೊಳ್ಳಲು ಪಡುತ್ತಿರುವ ಅಂಜಿಕೆ ಹಾಗೂ ಭಯ. ನನ್ನ ಜಾತಿ ಗೊತ್ತಾದರೆ ಮುಂದೆ ಆಗುವ ಅಸ್ಪೃಶ್ಯತೆ ಹಿನ್ನೆಲೆಯ ದುಷ್ಟ ಪರಿಣಾಮವನ್ನು ಎದುರಿಸುವ ಸನ್ನಿವೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಬಹುದೊಡ್ಡ ಮಾನಸಿಕ ಭಯೋತ್ಪಾದನೆ.
ನಿಜಾರ್ಥದಲ್ಲಿ ಅಂಬೇಡ್ಕರ್ ಅವರು ಹೇಳಿದಂತೆ ಇವರು ತನ್ನ ತಾಯಿ ನೆಲದಲ್ಲಿಯೇ ಅನಾಥರಾಗಿ ದ್ದಾರೆ. ಅಸ್ಪೃಶ್ಯತೆ ಎಂಬ ಕಳಂಕ ಈ ದೇಶದ ಮೂಲನಿವಾಸಿ ಜನವರ್ಗವನ್ನೇ ಅವರ ಸ್ವಂತ ನೆಲದಲ್ಲಿಯೇ ನಿರ್ಗತಿಕರನ್ನಾಗಿ ಮಾಡಿದೆ. ನನ್ನ ಮಕ್ಕಳನ್ನು ಒಳಗೊಂಡಂತೆ ಈ ಭಾಗದಲ್ಲಿ ನನಗೆ ತಿಳಿದಿರುವ ಹಾಗೂ ನಮ್ಮ ಬಂಧು ಬಳಗದ ಅನೇಕ ದಲಿತ ಸಮುದಾಯದ ಖಾಸಗಿ ಶಾಲೆಯಲ್ಲಿ ಓದುವ ವಿದ್ಯಾರ್ಥಿ – ವಿದ್ಯಾರ್ಥಿನಿಯರನ್ನು ಈ ಸಂಬಂಧ ನಾನು ಸಂದರ್ಶನ ಮಾಡಿ ಕೇಳಿದಾಗ “ಅವರ ಭೌತಿಕ ಹಾಗೂ ಬೌದ್ಧಿಕ ಆಕ್ಟಿವಿಟೀಸ್ಗೆ ಜಾತಿ ಎಂಬುವುದು ಹೇಗೆ ಬಹುದೊಡ್ಡ ಭಯೋತ್ಪಾದಕ ಶಕ್ತಿಯಾಗಿ ಕೆಲಸ ಮಾಡುತ್ತಿದೆ” ಎಂಬುದನ್ನು ಮಾಹಿತಿ ಸಹಿತ ಪಡೆದುಕೊಂಡು ನನ್ನ ನೆಲದಲ್ಲಿ ನನ್ನ ಸ್ಥಿತಿಯನ್ನು ಕಂಡು ನಾಡಿನ ಬೆಳಕಾಗಬೇಕಾದ ನಮ್ಮ ವಿದ್ಯಾರ್ಥಿಗಳು ಎದುರಿಸುತ್ತಿರುವ ಮಾನಸಿಕ ಭಯೋತ್ಪಾದನೆ ಕಂಡು ಅತೀವ ಬೇಸರಗೊಂಡೆ, ಈ ದೇಶದ ಸತ್ಪಜೆಗಳಾಗಿ, ಈ ರಾಷ್ಟ್ರದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿ ನಿಲ್ಲಬೇಕಾದ ಇಂತಹ ಫಲವತ್ತಾದ ಸಸಿಗಳನ್ನು ಅಸ್ಪೃಶ್ಯತೆ ಎಂಬ ವಿಷಪೂರಿತ ಕೀಟಾಣುಗಳ ದಾಳಿಯ ಭಯೋತ್ಪಾದನೆ ಕುಗ್ಗಿಸುತ್ತಿದೆ.
ಇದು ಇಂದು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಖಾಸಗಿ ಕಂಪನಿಗಳಲ್ಲಿ ಯಥೇಚ್ಛ ವಾಗಿಯೇ ನಡೆಯುತ್ತಿದೆ. ಇಂತಹ ಮಾನಸಿಕ ಭಯೋತ್ಪಾದನೆಯ ಮುಂದೆ ಬೇರ್ಯಾವ ಭಯೋತ್ಪಾದನೆಯೂ ಸಮನಾಗದು. ಅಸ್ಪೃಶ್ಯತೆ ಎಂಬ ಭಯೋತ್ಪಾದನೆ ಈ ದೇಶದಲ್ಲಿ ‘ಬೆಳೆಯುವ ಪೈರು ಮೊಳಕೆಯಲ್ಲಿಯೇ ಚಿವುಟಿ ಹಾಕಿದಂತೆ’ ಎಂಬಂಥ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಈ ನೆಲೆಯಿಂದ ಎಷ್ಟು ಜನರು ಹಾಗೂ ವಿದ್ಯಾರ್ಥಿಗಳು ತಮ್ಮ ಜಾತಿಯನ್ನು ಹೆಮ್ಮೆಯಿಂದ ಎದೆಯುಬ್ಬಿಸಿ, ತಲೆಯೆತ್ತಿ ಹೇಳುವ ಬದಲು ತಲೆತಗ್ಗಿಸಿ ಅಪರಾಧವನ್ನು ಮಾಡಿರುವ ರೀತಿಯಲ್ಲಿ ತಮ್ಮ ಜಾತಿಯನ್ನು ಮೆಲುಧ್ವನಿಯಲ್ಲಿ ಹೇಳಬೇಕಾಗಿದೆ. ಸಮಾಜದಲ್ಲಿ ಸುಳ್ಳು ಜಾತಿಯನ್ನು ಹೇಳಿಕೊಂಡು ಬದುಕಬೇಕಾಗಿದೆ.
ಒಂದು ಮಾತನ್ನು ಹೇಳಲೇಬೇಕು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕ
ಕೆಲವು ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಪರಿಶಿಷ್ಟ ಜಾತಿಗೆ ಸೇರ್ಪಡೆ ಗೊಳ್ಳದ ಕೆಲವು ಜನವರ್ಗ ಯಾವುದೇ ಮಾನ – ಮರ್ಯಾದೆಗೆ ಅಂಜದೆ ಪರಿಶಿಷ್ಟ ಜಾತಿ ಎಂದು ಹೇಳಿಕೊಂಡು ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ.ನಾವು ಸಹ ಮೂಲದಲ್ಲಿ ಪರಿಶಿಷ್ಟ ಜಾತಿ ಎಂದು ಹೇಳಿಕೊಳ್ಳಲು ತಮ್ಮ ಶಾಶ್ವತ ಕೊಳಕು ಮನಸ್ಸಿನ ಹಿನ್ನೆಲೆಯಿಂದ ಮುಂದಾಗುತ್ತಿದ್ದಾರೆ. ಆದರೆ ನಿಜ ಪರಿಶಿಷ್ಟ ಜಾತಿಯ ಜನ ತಮ್ಮ ಜಾತಿಯನ್ನು ಹೇಳಿಕೊಳ್ಳಲು ಮಾನಸಿಕ ಭಯೋತ್ಪಾದನೆ ಹಿನ್ನೆಲೆಯಿಂದ ಹಿಂಜರಿಯುತ್ತಿದ್ದಾರೆ. ಇದು ಭಾರತ ಬಹುದೊಡ್ಡ ಪ್ರಮಾಣದಲ್ಲಿ ನಗರೀಕರಣಗೊಂಡ, ನಗರೀಕರಣಗೊಳ್ಳುತ್ತಿರುವ ನಂತರದ ಪ್ರಕ್ರಿಯೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಈ ಸಮಸ್ಯೆ ಇಲ್ಲ. ಏಕೆಂದರೆ ಗ್ರಾಮ ‘ಜಾತೀಯತೆಯನ್ನು ಪೋಷಿಸುವ ರಕ್ಷಿಸುವ ಕೊಂಪೆಗಳು’ ಎಂದು ಅಂಬೇಡ್ಕರ್ ಅವರೇ ಹೇಳಿರುವುದು ನಿಮಗೆ ತಿಳಿದಿರುವುದೇ ಆಗಿದೆ.
ಗ್ರಾಮದಲ್ಲಿ ಯಾವ ಕೇರಿಯಲ್ಲಿ ಮಗು ಜನನ ಪಡೆಯುತ್ತದೆಯೋ, ತನ್ನ ಜನನದೊಂದಿಗೆ ಆ ಕೇರಿಯ ಜಾತಿಯನ್ನು ಅಂಟಿಸಿಕೊಂಡೇ ಹೊರಬರುತ್ತದೆ. ಈ ಹಿನ್ನೆಲೆಯಿಂದ ಮುಂದೆ ಈ ಜಾತಿ ವ್ಯವಸ್ಥೆಯ ಸಂಕೋಲೆಯಿಂದ ಸ್ವಲ್ಪ ಪ್ರಮಾಣದಲ್ಲಿ ಇವರು ಮುಕ್ತರಾಗಬಹುದು. ಆದರೆ, ನಗರ ಪ್ರದೇಶಗಳಲ್ಲಿ ವಾಸಿಸುವ ಇದೇ ಹಳ್ಳಿಗಾಡಿನ ದಲಿತ ಸಮುದಾಯದವರ ಬದುಕು ಇದಕ್ಕೆ ವ್ಯತಿರಿಕ್ತವಾದದ್ದು. ಬಾಡಿಗೆ ಮನೆ ಪಡೆಯುವುದರಿಂದ ಮೊದಲ್ಗೊಂಡು. ಮಕ್ಕಳನ್ನು ಶಾಲೆಗೆ ಸೇರಿಸಿ ಅವರನ್ನು ವಿದ್ಯಾಭ್ಯಾಸದಲ್ಲಿ ತೊಡಗಿಸುವವರೆಗೂ ಅಸ್ಪೃಶ್ಯತೆ ಎಂಬ ಜಾತಿ ವ್ಯವಸ್ಥೆಯು ಉಂಟುಮಾಡುವ ಭಯೋತ್ಪಾದನೆ ಬಹು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಪ್ರಜಾಪ್ರಭುತ್ವ ಭಾರತದ ಬಹುದೊಡ್ಡ ದುರಂತ.

ನೀನು ಯಾವ ಜಾತಿ..? ನೀನು ಹೊಲೆಯ- ನೀನು ಮಾದಿಗ ಎಂಬ ಜಾತಿಯ ಹೆಸರನ್ನು ಕೇಳಿ ದೇವಾಲಯದೊಳಗೆ ಅಥವಾ ಊರಿನ ಒಳಗಡೆ ಪ್ರವೇಶ ಮಾಡಲು ನಿರಾಕರಿಸಿದ ಮನಸ್ಸುಗಳು ನಿಜವಾಗಲೂ ‘ಭಯೋತ್ಪಾದಕ’ ಮನಸ್ಸುಗಳಲ್ಲವೇ…? ಇಂತಹ ಭಯೋತ್ಪಾದನೆಯನ್ನು ಮೀರಿಸುವ ಭಯೋತ್ಪಾದನೆ ಈ ನೆಲದಲ್ಲಿ ಇನ್ನೆಂದಿಗೂ ಸಂಭವಿಸಲು ಸಾಧ್ಯವೇ ಇಲ್ಲ. ಏಕೆಂದರೆ ಇದು ಶಾಶ್ವತ ಮನಸ್ಸಿನ ಭಯೋತ್ಪಾದನೆ.
‘ಅಸ್ಪೃಶ್ಯತೆ’ಗಿಂತ ಭೀಕರ ಭಯೋತ್ಪಾದನೆ ಈ ನಾಡಿನಲ್ಲಿ ಮತ್ತೊಂದು ಇಲ್ಲ. ಈಗ ನೆರೆ ರಾಷ್ಟ್ರಗಳಿಂದ ಆಗುತ್ತಿರುವ ಭಯೋತ್ಪಾದನೆಗಳು ತಾತ್ಕಾಲಿಕವಾದವುಗಳು. ಈ ಭಯೋತ್ಪಾದನೆ ನಿರ್ಮೂಲನೆಗೆ ಸಂವಿಧಾನಾತ್ಮಕವಾದ ನೀತಿ – ನಿಯಮಗಳು ಇವೆ. ಅವುಗಳನ್ನು ಜಾರಿಗೊಳಿಸುವ ಮೂಲಕ ಶಾಶ್ವತವಾಗಿ ನಿರ್ಮೂಲನೆ ಮಾಡಿಕೊಳ್ಳ ಬಹುದು. ಮಾಡಿಕೊಳ್ಳೋಣ.
ಆದರೆ ಅಸ್ಪೃಶ್ಯತೆ ಸೃಷ್ಟಿ ಮಾಡಿದ – ಮಾಡುವ ಹಾಗೂ ಮಾಡುತ್ತಿರುವ ಭಯೋತ್ಪಾದನೆ ಸಂವಿಧಾನದ ಚೌಕಟ್ಟನ್ನು ಮೀರಿ ಅಸಂವಿಧಾನಾತ್ಮಕ ಚೌಕಟ್ಟಿನ ಒಳಗೆ ಮೆರೆಯುತ್ತಿರುವ ಶಾಶ್ವತವಾದ ಅಜ್ಞಾನದ ಭಯೋತ್ಪಾದನೆ ಆಗಿದೆ. ನಾವೆಲ್ಲರೂ ಭಾರತೀಯರಾಗಿ ಭಾರತವನ್ನು ಇಂದು ಆಳ್ವಿಕೆ ಮಾಡುತ್ತಿರುವ ಸಂವಿಧಾನದ ಚೌಕಟ್ಟಿನ ಪ್ರಜೆಗಳಾಗಿ ಒಗ್ಗಟ್ಟಾಗಿ ಹೊರಬಂದಾಗ ಮಾತ್ರ ಇಂತಹ ಅಸ್ಪೃಶ್ಯತಾ ಭಯೋತ್ಪಾದನೆಯನ್ನು ತಡೆಗಟ್ಟಬಹುದು. ಅಸ್ಪೃಶ್ಯತೆ ನಿವಾರಣೆ ಮಾಡಿದ ಸಂವಿಧಾನವನ್ನೇ ಒಪ್ಪದ ಅಸ್ಪೃಶ್ಯತಾ ನಿವಾರಣಾ ಕಾನೂನನ್ನು ಜಾರಿಗೆ ತಂದಿದ್ದೇ ಈ ಸಂವಿಧಾನ ಎಂಬ ಕಾರಣಕ್ಕಾಗಿ ಅದನ್ನೇ ಬದಲಾವಣೆ ಮಾಡಬೇಕು ಎಂದು ಹೇಳುವ ಅಬೌದ್ಧಿಕ ಭಯೋತ್ಪಾದಕರ ಸಂದರ್ಭದಲ್ಲಿ ನಾವು ಇಂದು ಇದ್ದೇವೆ. ಭಾರತ ಮೊದಲು ಮನಸ್ಸಿನ ಅಸ್ಪೃಶ್ಯತೆಯ ಭಯೋತ್ಪಾದನೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಿಕೊಂಡರೆ ಈಗ ಎದುರಾಗುತ್ತಿರುವ ದೈಹಿಕ ಭಯೋತ್ಪಾದನಾ ಚಟುವಟಿಕೆಗಳ ಶಾಶ್ವತ ನಿರ್ಮೂಲನೆಗೆ ಮುಂದಾಗಬಹುದು.
ಇದು ಸಂವಿಧಾನಾತ್ಮಕವಾಗಿ ಮಾತ್ರ ಸಾಧ್ಯ. ನೆರೆಯ ದೇಶದವರು ಭಾರತದ ಮೇಲೆ ಭಯೋತ್ಪಾದನಾ ಚಟುವಟಿಕೆಯನ್ನು ಮಾಡುತ್ತಿರುವುದಕ್ಕೂ ಭಾರತದೊಳಗೆ ಶತಶತಮಾನಗಳಿಂದ ಇರುವ ಇಂತಹ ಶಾಶ್ವತ ಭಯೋತ್ಪಾದನೆಗಳನ್ನು ಸೂಕ್ಷ್ಮವಾಗಿ ಮನಗಾಣಬೇಕು ಎಂಬುವುದನ್ನು ನಾವು ತಿಳಿಯಬೇಕಾಗಿದೆ. ಏಕೆಂದರೆ ಪಾಕಿಸ್ತಾನವು ಸಹ ಎರಡುವರೆ ಸಾವಿರ ವರ್ಷಗಳವರೆಗೆ ಭಾರತದ ಅವಿಭಾಜ್ಯ ಅಂಗವೇ ಆಗಿತ್ತು. ಭಾರತದ ಒಳಗಿನ ಸಾಮಾಜಿಕ ಸಂರಕ್ಷಣೆಯನ್ನು ಪಾಕಿಸ್ತಾನಕ್ಕೆ ಪ್ರತ್ಯೇಕವಾಗಿ ತಿಳಿಸುವ ಅವಶ್ಯಕತೆ ಇಲ್ಲ. ಭಾರತದಂತೆ ಅಸ್ಪೃಶ್ಯತೆ ಇಲ್ಲದ ಚೀನಾ ಅಥವಾ ನೆರೆಯ ರಾಷ್ಟ್ರಗಳಲ್ಲಿ ಇಂಥ ಭಯೋತ್ಪಾದನೆಗೆ ಅವಕಾಶವೇ ಇಲ್ಲ. ಇಂತಹ ಮಾನಸಿಕ ಭಯೋತ್ಪಾದನೆ ಈ ನೆಲದಲ್ಲಿ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಸರ ಇವತ್ತು ನಡೆಯುತ್ತಿರುವ ಹಾಗೆ ಅನೇಕ ದೈಹಿಕ ಭಯೋತ್ಪಾದನೆಗಳು ನಡೆಯುತ್ತಲೇ ಇರುತ್ತವೆ. ನಾವು ಇಂತಹ ಭಯೋತ್ಪಾದನೆಗಳಿಗೆ ಧರ್ಮದ ಹಿನ್ನೆಲೆಯ ಬಣ್ಣದ ಲೇಪವನ್ನು ಬಳಿದು ಉತ್ತರ ಹುಡುಕುತ್ತೇವೆಯೇ ಹೊರತು ವಾಸ್ತವದ ಹಿನ್ನೆಲೆಯ ವಸ್ತುನಿಷ್ಠವಾದ ಉತ್ತರವನ್ನು ಹುಡುಕುವುದೇ ಇಲ್ಲ.

ಕಡೆಯದಾಗಿ ಒಂದೇ ಮಾತು… ಭಾರತದಲ್ಲಿ ದೈಹಿಕ ಭಯೋತ್ಪಾದನೆಗಿಂತ ಮಾನಸಿಕ ಭಯೋತ್ಪಾದನೆ ಬಹುಅಪಾಯಕಾರಿ. ಈ ಹಿನ್ನೆಲೆಯಿಂದ ಭಾರತದ ಒಳಗೆ ಇರುವ ಮನಸ್ಸಿನ ಭಯೋತ್ಪಾದನೆಯನ್ನು ನಾವೆಲ್ಲರೂ ನಿರ್ಮೂಲನೆ ಮಾಡೋಣ. ಸಮಸಮಾಜದ ಗಟ್ಟಿ ಭಾರತವನ್ನು ಕಟ್ಟೋಣ. ಇಂತಹ ನೂರಾರು ದೈಹಿಕ ಭಯೋತ್ಪಾದಕರನ್ನು ಒಗ್ಗಟ್ಟಿನಿಂದ ಎದುರಿಸಿ ನಿರ್ಮೂಲನೆ ಮಾಡೋಣ. ಸಂವಿಧಾನದ ಹಿನ್ನೆಲೆಯಲ್ಲಿ ಭದ್ರ ಭಾರತವನ್ನು ಕಟ್ಟಿ ಪ್ರಪಂಚದಲ್ಲೇ ಬಲಿಷ್ಠ ರಾಷ್ಟ್ರ ವನ್ನಾಗಿಸೋಣ.
ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ಸಮಸಮಾಜದ ಹಿನ್ನೆಲೆಯಿಂದ ಮಾನವನ ಸಂಪತ್ತು ವೃದ್ಧಿಯಾಗಿಸಿದ ದೇಶವೇ ಶ್ರೀಮಂತ ದೇಶ ಹೊರತು ಮಾನವ, ಮಾನವನ ವರಮಾನ ಹಾಗೂ ಸಂಪತ್ತನ್ನು ಕುಂಠಿತಗೊಳಿಸಿ, ಸಾಮಾಜಿಕ ಹಿನ್ನೆಲೆಯಿಂದ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಶಾಶ್ವತ ಅಸ್ಪೃಶ್ಯರನ್ನಾಗಿಸಿ ಇವುಗಳೆಲ್ಲದರ ಮೇಲೆ ಕೇವಲ ವರ್ಣರಂಜಿತ ಭೌತಿಕ ಭಾರತವನ್ನು ಕಟ್ಟಿದರೆ ಅದು ಗಟ್ಟಿತನದ ರಾಷ್ಟ್ರ ಆಗುವುದಿಲ್ಲ. ಈ ಮಾದರಿಯದ್ದು ತಳಪಾಯ ಗಟ್ಟಿಯಿಲ್ಲದೆ, ಹೊರಗೆ ನಮ್ಮೆಲ್ಲರಿಗೂ ಕಾಣುತ್ತಿರುವ ಸುಂದರ ಕಟ್ಟಡದ ಲಕ್ಷಣದಂತೆಯೇ ಸರಿ. ಇಂತಹ ಕಟ್ಟಡಗಳ ಆಯಸ್ಸು ಏನು ಎಂಬುದು ತಮಗೆಲ್ಲ ತಿಳಿದಿರುವುದೇ ಆಗಿದೆ.
ಈ ಹಿನ್ನೆಲೆಯಿಂದ ನಾವೆಲ್ಲರೂ ಭಾರತೀಯರಾಗಿ ಅಂಬೇಡ್ಕರ್ ಅವರು ಭಾರತ ಹಾಗೂ ಭಾರತೀಯರಾಗಿ ಒಡಲಾಳದಿಂದ ಪ್ರಪಂಚಕ್ಕೆ ಮಾದರಿಯಾಗುವ ರೀತಿಯಲ್ಲಿ ಗಟ್ಟಿತನದಿಂದ ಬರೆದಿರುವ ಸಂವಿಧಾನದ ಅಡಿಯಲ್ಲಿ ಭಾರತವನ್ನು ಗಟ್ಟಿತನದಿಂದ ಕಟ್ಟಬೇಕಾಗಿದೆ. ಅಜ್ಞಾನದ ಅಸ್ಪೃಶ್ಯತೆ ಎಂಬ ಭೀಕರ ಭಯೋತ್ಪಾದನೆಯನ್ನು ಸಂವಿಧಾನ ಎಂಬ ಅಸ್ತ್ರದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಾಗಿದೆ. ಸಂವಿಧಾನದ ಕಾನೂನುಗಳ ಮುಂದೆ ಯಾವುದೇ ಭಯೋತ್ಪಾದಕರ ‘ಗನ್ನು’ ಹಾಗೂ ‘ಬಾಂಬು’ಗಳು ನಿಷ್ಕ್ರಿಯಗೊಳ್ಳುತ್ತವೆ ಎಂಬ ಸತ್ಯವನ್ನು ಸಾರಿ ಸಾರಿ ಹೇಳಬೇಕಾಗಿದೆ. ಈ ನನ್ನ ಒಡಲಾಳದ ಸತ್ಯದ ಬರಹ ಅತ್ಯಂತ ಹೆಚ್ಚು ಮೊನಚಾಗಿರುತ್ತದೆ. ಅದಕ್ಕಾಗಿ ಇದು ಸುಳ್ಳಿನ ಆಧಾರದ ಮೇಲೆ ಮಾತನಾಡುವವರ ಎದೆಯನ್ನು ನೇರವಾಗಿ ಚುಚ್ಚುತ್ತದೆ. ಸತ್ಯ ಪ್ರತಿಪಾದನೆ ಮಾಡುವವರಿಗೆ ವಾಸ್ತವದ ಅರಿವಿನ ಮುದ ನೀಡುತ್ತದೆ. ಈ ಅರ್ಥದಲ್ಲಿಯೇ ಅಂಬೇಡ್ಕರ್ ಹೇಳಿರುವುದು ‘ಇತಿಹಾಸವನ್ನು ಮರೆತವರು-ಇತಿಹಾಸವನ್ನು ನಿರ್ಮಿಸಲಾರರು’ ಎಂದು. ಅಸ್ಪೃಶ್ಯತೆ ಎಂಬ ಶಾಶ್ವತ ಮಾನಸಿಕ ಭಯೋತ್ಪಾದನೆಯನ್ನು ಈ ದೇಶದಲ್ಲಿ ಶಾಶ್ವತವಾಗಿ ನಿರ್ಮೂಲನೆ ಮಾಡಬೇಕಾಗಿದೆ. ಆಗ ಭಾರತವೇ ಸಂಪೂರ್ಣ ಶ್ರೀಮಂತಿಕೆಯ ಸಮಸಮಾಜ ಹಿನ್ನೆಲೆಯ ‘ಸ್ಪೃಶ್ಯ’ ರಾಷ್ಟ್ರವಾಗುತ್ತದೆ.

ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ನಮ್ಮ ಬದುಕಿನ ಭಾಗವಾಗಿ ಅಳವಡಿಸಿಕೊಳ್ಳುವಾಗ ಇಂತಹ ಅಬೌದ್ಧಿಕ ಹಾಗೂ ಅಪಚಾರಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆಗಲೇಬಾರದು. ಈ ನನ್ನ ಒಡಲಾಳದ ಮಾತು ಕೆಲವರಿಗೆ ಮಾತ್ರ ನೇರವಾಗಿ ಅನ್ವಯವಾಗುತ್ತದೆಯೇ ಹೊರತು ಎಲ್ಲರಿಗೂ ಅಲ್ಲ. ನಾನು ಈವರೆಗೆ ಅಂಬೇಡ್ಕರ್ ಅವರ ೧೩೪ನೇ ಜಯಂತಿ ಕುರಿತು ೧೩ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದೆ. ಕನ್ನಡ ವಿಶ್ವವಿದ್ಯಾಲಯವು ಒಳಗೊಂಡಂತೆ ಅಕ್ಕಮಹಾದೇವಿ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡಿದ್ದೆ.
ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ಕೊಪ್ಪಳ ಹಾಗೂ ಗಂಗಾವತಿ ಭಾಗಗಳಲ್ಲಿ ಅಂಬೇಡ್ಕರ್ ಅವರ ಜಯಂತಿ ಕುರಿತು ಉಪನ್ಯಾಸ ಕಾರ್ಯಕ್ರಮ ನೀಡಲು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೆ. ಈ ಭಾಗಗಳಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದವರು ದಲಿತ ಸಂಘರ್ಷ ಸಮಿತಿಯ ನಾಯಕರು ಹಾಗೂ ಒಂದಷ್ಟು ರಾಜಕೀಯ ಪಕ್ಷ ಸಿದ್ಧಾಂತಕ್ಕೆ ಮಾರಿ ಹೋಗಿರುವಂತಹ ನಮ್ಮ ದಲಿತ ಮುಖಂಡರು. ಇವರೊಂದಿಗೆ ಬಹುಮುಖ್ಯವಾಗಿ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಈ ಮುಖಂಡ ರೊಂದಿಗೆ ಕೆಲವು ಅಧಿಕಾರಕ್ಕಾಗಿ ಅಂಬೇಡ್ಕರ್, ಅಂಬೇಡ್ಕರ್ ಅವರ ಚಿಂತನೆಗಳನ್ನು ರಾಜಕೀಯವಾಗಿ ಹೊಂದಾಣಿಕೆ ಮಾಡಿಕೊಂಡು ತೊಡಗಿರುವುದನ್ನು ನಾನು ನೇರವಾಗಿ ಕಂಡೆ. ಇಂಥ ನನ್ನ ಬಂಧುಗಳ ಕುರಿತು ಕೆಲವು ಮಾತುಗಳು.
ಶಿಕ್ಷಣ ತಜ್ಞ ಎಚ್. ನರಸಿಂಹಯ್ಯನವರು ಹೇಳಿದಂತೆ ‘ವಿದ್ಯಾವಂತರ ಮೌಡ್ಯ – ಅವಿದ್ಯಾವಂತರ ಮೌಡ್ಯಕ್ಕಿಂತಲೂ ಬಹುಅಪಾಯಕಾರಿ’ ಎಂಬ ವಸ್ತುನಿಷ್ಠ ಮಾತು ಎಷ್ಟು ಸತ್ಯವೋ, ಅದೇ ಮಾದರಿಯಲ್ಲಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಇಂದು ತಮ್ಮ ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುವ ‘ಕೆಲವು’ ದಲಿತ ಮೂಲಭೂತವಾದಿ ವಿದ್ಯಾವಂತರು, ಸಂಘಟಕರು ಹಾಗೂ ಪಕ್ಷ ಸಿದ್ಧಾಂತಗಳಿ ಜೋತುಬಿದ್ದಿರುವ ಸಮಯಸಾಧಕ ‘ರಾಜಕಾರಣದ’ ರಾಜಕಾರಣಿ ದಲಿತರಿಂದ ಅಂಬೇಡ್ಕರ್ ಹಾಗೂ ಅಂಬೇಡ್ಕರ್ವಾದಕ್ಕೆ ಆಗುತ್ತಿರುವುದು ಬಹುಅಪಾಯಕಾರಿ ಯಾಗಿದೆ.
ಆದರೆ ಸಾಂಪ್ರದಾಯಿಕವಾಗಿ ಶಿಕ್ಷಣವನ್ನು ಪಡೆಯದೆ ಜೀವನ ಹಾಗೂ ಜೀವನ ನಿರ್ವಹಣೆಗಾಗಿ ಬದುಕಲು ನಿತ್ಯ “ನೋಡಿ ಕಲಿ – ಮಾಡಿ ಕಲಿ – ಕೇಳಿ ಕಲಿ’ ಮೂಲಕ ಬಹುದೊಡ್ಡ ಜ್ಞಾನವಂತರಾಗಿದ್ದರೂ ಸಹ ‘ಶಿಕ್ಷಣ ಪಡೆಯಲಿಲ್ಲ’ ಎಂಬ ಕಾರಣಕ್ಕಾಗಿ ಅವಿದ್ಯಾವಂತರು ಎಂದು ಕರೆಸಿಕೊಳ್ಳುವ ದಲಿತರಿಂದ ಆಗುತ್ತಿರುವ ಅಂಬೇಡ್ಕರ್ ಅವರ ಭೌತಿಕ ಮೆರವಣಿಗೆ, ಪೂಜೆ ಹಾಗೂ ಅಂಬೇಡ್ಕರ್ ಹೆಸರಿನ ಮೇಲೆ ಇರುವ ಅತಿಯಾದ ಅಭಿಮಾನವೇ ವಾಸಿ.
ಇವರ ಅಂಬೇಡ್ಕರ್ ಪ್ರೀತಿಗೆ ಬದ್ಧತೆ ಇದೆ. ಆದರೆ ವಿದ್ಯಾವಂತರ ಅಂಬೇಡ್ಕರ್ ಪ್ರೀತಿಗೆ ಬದ್ಧತೆ ಇಲ್ಲ. ಕೆಲವು ದಲಿತ ಸಮುದಾಯದ ವಿದ್ಯಾವಂತರಲ್ಲಿ – ರಾಜಕಾರಣಿ ಹಾಗೂ ಸಂಘಟಕರಲ್ಲಿ ಅಂಬೇಡ್ಕರ್ ಜೀವಂತಿಕೆಯಾಗಿಲ್ಲ. ಸಮಯ ಸಂದರ್ಭಕ್ಕೆ ಬಳಸಿಕೊಳ್ಳುವ ಕಾಯಿನ್ ಆಗಿದ್ದಾರೆ. ಆದರೆ, ಶಿಕ್ಷಣ ಪಡೆಯದ ಶತಶತಮಾನಗಳಿಂದ ಪಾರಂಪರಿಕವಾಗಿ ಅಸ್ಪೃಶ್ಯತೆಯ ನೋವನ್ನು ಉಂಡು ಹಾಗೂ ಇಂದಿಗೂ ಗ್ರಾಮಗಳಲ್ಲಿ ಅನುಭವಿಸುತ್ತಿರುವ ಅವಿದ್ಯಾವಂತರಲ್ಲಿ ಭೌತಿಕವಾಗಿಯಾದರೂ ಪ್ರಜ್ಞಾಪೂರ್ವಕವಾಗಿ ‘ಜ್ಞಾನದ’ ಅಂಬೇಡ್ಕರ್ ಪ್ರತಿನಿತ್ಯ – ಪ್ರತಿಕ್ಷಣ ಜೀವಂತವಾಗಿ ಇರಿಸಿಕೊಂಡಿದ್ದಾರೆ. ಅಂದರೆ, ಇಂತಹ ನಂಬಿಕೆಯಿಂದಲೇ ಇವರು ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದಾರೆ. ಇವರನ್ನು ನಂಬಬಹುದು. ಆದರೆ, ವಿದ್ಯಾವಂತರು ಎಂದು ಹೇಳಿಕೊಳ್ಳುವ ಕೆಲವೇ ಕೆಲವು ಅಂಬೇಡ್ಕರ್ ವಾದಿಗಳು ಕಣ್ಣು ಮುಚ್ಚಿಕೊಂಡು ಮಲಗಿದಂತೆ ನಾಟಕ ಮಾಡುತ್ತಿದ್ದಾರೆ ಅಷ್ಟೇ. ಆದರೆ ಅವರು ಮಲಗಿಲ್ಲ.
ನಿದ್ದೆ ಮಾಡುವವರನ್ನು ಎಚ್ಚರಗೊಳಿಸಬಹುದು ಆದರೆ – ನಿದ್ದೆ ಮಾಡುವ ಹಾಗೆ ನಟಿಸುವವರನ್ನು ಎಚ್ಚರಗೊಳಿಸಲು ಸಾಧ್ಯವಿಲ್ಲ. ಇಂತಹವರ ನಂಬಿಕೆ ಹಾಗೂ ಸಿದ್ಧಾಂತಗಳು ಬಹುಅಪಾಯಕಾರಿ. ಇಂಥವರನ್ನು ನಾನು ಕೆಲವು ಕಡೆ ನೇರವಾಗಿಯೇ ಕಂಡಿದ್ದೇನೆ. ಅಂಬೇಡ್ಕರ್ ಅವರ ೧೩೪ನೇ ಜಯಂತಿ ಆಚರಣೆ ಮಾಡುತ್ತಿರುವ, ಒಳ ಮೀಸಲಾತಿ ಕೂಗು ಹೆಚ್ಚಾಗಿದ್ದ ಈ ಸಂದರ್ಭದಲ್ಲಿ ಇಂತಹ ಪ್ರಕರಣಗಳಂತೂ ನನಗೆ ಹೆಜ್ಜೆಹೆಜ್ಜೆಗೂ ಗೋಚರಿಸಿದವು. ಜಾತಿ, ಒಳಜಾತಿ, ಉಪಜಾತಿಗಳ ಒಳಗೆ ಬಾಬಾಸಾಹೇಬರು ಭೌತಿಕ ಹಾಗೂ ಬೌದ್ಧಿಕ ಎರಡೂ ಪ್ರಕಾರಗಳಲ್ಲೂ ಸಿಲುಕಿ ಅವರು ಬದುಕಿದ್ದಾಗ ಅನುಭವಿಸಿದ ನೋವಿಗಿಂತಲೂ ಈಗ ಹೆಚ್ಚು ನೋವು ಸಂಕಟವನ್ನು ಅನುಭವಿಸುತ್ತಿದ್ದಾರೆ.
ಕೆಲವು ಸನ್ನಿವೇಶಗಳಲ್ಲಿ ಅಂಬೇಡ್ಕರ್ ಹಾಗೂ ಅವರ ಚಿಂತನೆಗಳನ್ನು ಸ್ವ-ಪ್ರತಿಷ್ಠೆ ಹಿನ್ನೆಲೆಯ ದಲಿತರು ಸಿಲುಕಿಸಿದರೆ, ಮತ್ತೊಂದು ಪ್ರಮುಖ ಸನ್ನಿವೇಶದಲ್ಲಿ ತತ್ವ ಧಾರ್ಮಿಕ ಹಿನ್ನೆಲೆಯ ಮೂಲಭೂತವಾದ ಸಿದ್ಧಾಂತವನ್ನು ಶತಶತಮಾನಗಳಿಂದ ಪಾಲಿಸಿಕೊಂಡು ಬಂದ ಮೂಲಭೂತವಾದಿಗಳು ಕೆಲವು ವಿದ್ಯಾವಂತ ಹಾಗೂ ಸಂಘಟಿತ ದಲಿತ ಮುಖಂಡರನ್ನು ಪುರಾಣದ ಅಜ್ಞಾನದ ಹಿನ್ನೆಲೆಯ ಚಕ್ರವ್ಯೂಹಕ್ಕೆ ಕಳುಹಿಸಿ ಹೊರಬರಲಾಗದ ವ್ಯೂಹವನ್ನು ನಿರ್ಮಾಣ ಮಾಡಿ ಶಾಶ್ವತವಾಗಿ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ತತ್ವ ಸಿದ್ಧಾಂತವನ್ನು ತಮ್ಮ ಸ್ವಾರ್ಥ ಧರ್ಮರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಇತಿಹಾಸದ ಅರಿವಿಲ್ಲದ ಇವರು ಬೂಟಾಟಿಕೆ ಇತಿಹಾಸಕಾರರ ಮಾತನ್ನೇ ಕೇಳಿಕೊಂಡು ಬಾಬಾಸಾಹೇಬರನ್ನು ಮೀರಿಸುವ ಹಾಗೆ ಭಾರತದ ಇತಿಹಾಸದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಾರೆ. ಅಕ್ಷರವನ್ನು ಪಾರಂಪರಿಕವಾಗಿ ತಮ್ಮ ಸ್ವತ್ತಾಗಿಸಿಕೊಂಡಿದ್ದವರು ತಮಗಾಗಿ, ತಮ್ಮ ಪ್ರತಿಷ್ಠೆಗಾಗಿ ತಾವೇ ಸೃಷ್ಟಿಸಿದ ಪುರಾಣ ಹಾಗೂ ಬರೆದುಕೊಂಡ ಪುರಾಣ ಕೇಂದ್ರಿತ ಬರಹಗಳನ್ನು ಕಿಂಚಿತ್ತೂ ಪ್ರಶ್ನೆ ಮಾಡದೆ ಅಂಬೇಡ್ಕರ್ ವಾದದೊಂದಿಗೆ ಸಮೀಕರಿಸಿಕೊಂಡು ವಾದ ಪ್ರತಿವಾದಕ್ಕೆ ಇಳಿಯುತ್ತಾರೆ. ಇವತ್ತಿನ ಅಂಬೇಡ್ಕರ್, ಅಂಬೇಡ್ಕರ್ವಾದಕ್ಕೆ ವಿರುದ್ಧವಾಗಿ ಅಂಬೇಡ್ಕರ್ ಅವರು ಯಾವ ಜನರ ಪರವಾಗಿ ಮಾತನಾಡಿದರೋ ಅದೇ ಜನರನ್ನೇ ಕೆಲವು ಸಾಂಪ್ರದಾಯಿಕ ಮೂಲಭೂತವಾದಿಗಳು ಅವರ ವಿರುದ್ಧವೇ ಕ್ರಮಬದ್ಧವಾಗಿ ಎತ್ತಿಕಟ್ಟಿ ತಾತ್ಕಾಲಿಕ ಜಯ ಪಡೆಯಲು ಮುಂದಾಗುತ್ತಿರುವುದು ನಮ್ಮ ನಡುವಿನ ಬಹುದೊಡ್ಡ ವಾಸ್ತವ ದುರಂತವೇ ಆಗಿದೆ.

ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಇಂದು ಸಂಪೂರ್ಣವಾಗಿ ವೈದಿಕೀಕರಣ ಹಿನ್ನೆಲೆಯ ಶಾಸ್ತ್ರಬದ್ಧವಾದ ಹಿನ್ನೆಲೆಯ ಅಧ್ಯಯನಕ್ಕೆ ಒಳಪಡುತ್ತಿರುವುದು ಇಂದು ನಮ್ಮೆಲ್ಲರಿಗೂ ಎಚ್ಚರಿಕೆ ಗಂಟೆಯಾಗಿದೆ. ಒಂದಷ್ಟು ದಲಿತೇತರ ಸ್ವ-ಘೋಷಿತ ವಿದ್ವಾಂಸರು “ಅಂಬೇಡ್ಕರ್ ಅವರು ಹಿಂದೂ ಧರ್ಮದ ಪ್ರವರ್ಧಕರು – ಹಿಂದೂ ಧರ್ಮವನ್ನು ರಕ್ಷಣೆ ಮಾಡುವುದಕ್ಕಾಗಿಯೇ ಅವರು ವಿದೇಶಿ ಧರ್ಮಕ್ಕೆ ಮತಾಂತರ ಗೊಳ್ಳದೆ – ದೇಶೀಯ ಬೌದ್ಧಧರ್ಮಕ್ಕೆ ಮತಾಂತರಗೊಂಡರು – ಬೌದ್ಧಧರ್ಮ ಒಂದಾನೊಂದು ಕಾಲದಲ್ಲಿ ಹಿಂದೂ ಧರ್ಮದ ಹಾಗೂ ಸನಾತನ ಧರ್ಮದ ಒಂದು ಭಾಗ” ಎಂದು ಅಜ್ಞಾನದ ಹೇಳಿಕೆಗಳನ್ನು ಹೇಳುತ್ತಾ ಬಾಬಾಸಾಹೇಬರ ತತ್ವ ಸಿದ್ಧಾಂತಗಳಿಗೆ ನೇರವಾಗಿಯೇ ಮಸಿ ಬಳಿಯುತ್ತಿದ್ದಾರೆ. ವರ್ಣರಂಜಿತವಾದ ಇವರ ಪುರಾಣ ನಿಶ್ಚಿತ ಹಾಗೂ ಮಿಶ್ರಿತ ಮಾತುಗಳು ಒಂದಷ್ಟು ವಿದ್ಯಾವಂತ ದಲಿತರಿಗೆ ರಂಜಿಸುತ್ತಿವೆ.
ಇಂಥ ಮಾತುಗಳನ್ನು ಖಂಡಿಸುತ್ತಿರುವವರು ನೂರಕ್ಕೆ ನೂರು ಅವಿದ್ಯಾವಂತ ದಲಿತರೇ, ಕೆಲವು ವಿದ್ಯಾವಂತ ದಲಿತರು ನನ್ನೊಂದಿಗೂ ಈ ವಿಷಯ ಕುರಿತು ವಾದ ಮಾಡಿರುವುದು ಉಂಟು. ನಾನು ಇಂಥವರಿಗೆ ಸ್ಪಷ್ಟವಾದ ಅಂಬೇಡ್ಕರ್ ಬಾಡದ ಸಾರವನ್ನು, ಅದರ ಅಂತರಾಳದ ತಿರುಳನ್ನು ಬೋಧಿಸಿರುವ ಕಾರ್ಯವನ್ನು ಮಾಡಿರುವುದು ಉಂಟು.
ಬಹುಮುಖ್ಯವಾಗಿ ಅವಿದ್ಯಾವಂತ ದಲಿತರು ಅಂಬೇಡ್ಕರ್ ಅವರನ್ನು ‘ಭೌತಿಕ’ವಾಗಿ ಕಂಡು ‘ಬೌದ್ಧಿಕ’ವಾಗಿ ಗ್ರಹಿಸದೆ ಇರಬಹುದು. ಆದರೆ ಇವರಿಗೆ ‘ಒಂದರ’ ಬಗ್ಗೆ ಅದರೂ ಸ್ಪಷ್ಟತೆ ಇದೆ. ಆದರೆ ವಿದ್ಯಾವಂತರು ಹಾಗೂ ಸಂಘಟಕರು ಎಂದು ಹೇಳಿಕೊಳ್ಳುವ ಬಣ್ಣ ಬಣ್ಣದ ಮಾತನಾಡುವ ದಲಿತರಲ್ಲಿ ಅಂಬೇಡ್ಕರ್ ಅವರು ಬೌದ್ಧಿಕವಾಗಿಯೂ ಇಲ್ಲ, ಭೌತಿಕವಾಗಿಯೂ ಇಲ್ಲ, ಕೇವಲ ಸಣ್ಣಪುಟ್ಟ ಅಥವಾ ಕೆಲವು ಸಂದರ್ಭಗಳಲ್ಲಿ ಒಂದಷ್ಟು ಉನ್ನತ ಮಟ್ಟದ ಲಾಭಕ್ಕಾಗಿ ಅಂಬೇಡ್ಕರ್ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ನಮಗೆ ನಾವೇ ಮಾಡಿಕೊಳ್ಳುತ್ತಿರುವ ಬಹುದೊಡ್ಡ ಸಾಂಸ್ಕೃತಿಕ ಅಧಃಪತನ. ಕುಡಿಯಲು ನೀರು ಸಿಗದ, ವಾಸಿಸಲು ಮನೆ ಸಿಗದ, ಜೀವಿಸಲು ಅಹಾರ ಇಲ್ಲದ, ಬದುಕಲು ಮೂಲಭೂತ ಹಕ್ಕುಗಳು ಇಲ್ಲದ ಈ ದೇಶ ‘ನನ್ನ ತಾಯಿನೆಲ ಅಲ್ಲ’ ಎಂದು ಹೇಳಿದ ಅಂಬೇಡ್ಕರ್ ಅವರು. ಈ ಎಲ್ಲಾ ನೋವುಗಳನ್ನು ಸ್ವತಃ ಅನುಭವಿಸಿ -ಶತಶತಮಾನಗಳಿಂದ ತನ್ನವರು ಕಳೆದುಕೊಂಡಿದ್ದ ತನ್ನ ಜನರ ಶಾಶ್ವತ ‘ತಾಯಿ ನೆಲ’ವನ್ನು ಸಂವಿಧಾನಾತ್ಮಕವಾಗಿ ಒದಗಿಸಿಕೊಟ್ಟವರು.
ಇಂತಹ ಮಹಾನ್ ಭಾರತದ ಸುಪುತ್ರನ ಇತಿಹಾಸವನ್ನು ವಾಸ್ತವವಾಗಿ ಗ್ರಹಿಸದೆ ಕೇವಲ ಪುರಾಣದ ಹಿನ್ನೆಲೆಯಿಂದ ನೋಡುವುದಾದರೆ ಅಂತಹ ಚರಿತ್ರೆಗೆ ತಳಬುಡ ಇಲ್ಲ. ಅಂಬೇಡ್ಕರ್ ಅವರ ಚರಿತ್ರೆಗೆ ಭದ್ರವಾದ ತಳ ಇದೆ. ಬುಡ ಇದೆ. ಇದನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಯಾವ ಬಿರುಗಾಳಿ – ಸುನಾಮಿಗಳಿಂದ ಇದನ್ನು ತಗ್ಗಿಸಲು ಸಾಧ್ಯವಿಲ್ಲ. ಆದರೆ ಅಜ್ಞಾನದ ‘ಪುರಾಣ’ ಇದನ್ನು ಸಾಧ್ಯ ಮಾಡಬಹುದು. ಈ ಅಜ್ಞಾನದ ಪುರಾಣದ ಚರಿತ್ರೆಯ ವಿರುದ್ಧವೇ ಬಾಬಾಸಾಹೇಬರು ಪ್ರಜ್ಞಾಪೂರ್ವಕವಾಗಿ ದಾಖಲೆ ಸಹಿತ ಖಂಡಿಸಿ ಬರೆದದ್ದು, ಹೇಳಿದ್ದು. ಜೀವಿಸಿದ್ದು ಹಾಗೂ ಸಂವಿಧಾನದಲ್ಲಿ ಕಾನೂನು ಪ್ರಕಾರ ಅದನ್ನು ನಿರ್ಮೂಲನೆ ಮಾಡಿದ್ದು, ಆದರೆ ಇಂತಹ ನನ್ನ ಬಂಧುಗಳಿಗೆ ಸಂವಿಧಾನದ ಅರಿವಿಲ್ಲ, ಅಂಬೇಡ್ಕರ್ ಅವರ ಚಿಂತನೆಯ ಜ್ಞಾನವಿಲ್ಲ. ಒಂದಷ್ಟು ಯಾರು ಹೇಳಿದ್ದನ್ನು ಕೇಳಿದ್ದನ್ನು.
ವಾಟ್ಸಪ್ಗಳಲ್ಲಿ ಬಂದ ಮಾಹಿತಿಯನ್ನು ಇನ್ಯಾರನ್ನೋ ಸಮಯಕ್ಕೆ ತಕ್ಕಂತೆ ತಾತ್ಕಾಲಿಕವಾಗಿ ಮೆಚ್ಚಿಸಿಕೊಳ್ಳಲು ವೇದಿಕೆ ಮೇಲೆ ಮಾತನಾಡುತ್ತಾರೆ.ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಮೂಲಭೂತವಾದಿಗಳ ಪ್ರೀತಿಗೆ ಪಾತ್ರರೂ ಆಗುತ್ತಾರೆ. ಈ ನೆಲ ಸಂಸ್ಕೃತಿಯ ಚಿಂತನೆಯನ್ನು ಅಂಬೇಡ್ಕರ್ ಚಿಂತನೆಯ ಮೂಲಕ ಬೆಳೆಸ ಬೇಕಾದವರು ಮತ್ತೆ ಎರಡು ಸಾವಿರ ವರ್ಷಗಳ ಪುರಾಣದ ಇತಿಹಾಸಕ್ಕೆ ಕೊಂಡೊಯ್ದು ನಿಲ್ಲಿಸುತ್ತಾರೆ.

ಇಂಥ ಮನೋಭಾವನೆಯಿಂದ ದಲಿತೇತರರು ಮಾತನಾಡಿದರೆ ‘ಸೂಕ್ತ” ಸಂದರ್ಭದಲ್ಲಿ ಉತ್ತರ ಕೊಡಬಹುದು. ಆದರೆ ಇಂಥ ದಲಿತೇತರರ ಧಾರ್ಮಿಕ ಹಾಗೂ ಪುರಾಣ ಹಿನ್ನೆಲೆಯ ಉಪದೇಶದ ಮನಸ್ಸುಗಳಿಂದ ಪ್ರೇರಿತರಾಗಿ ದಲಿತರೇ ಮಾತನಾಡಲು ಮುಂದಾದಾಗ ಇವರಿಗೆ ‘ಕಠಿಣ’ ಸಂದರ್ಭದಲ್ಲಿ ಮಾತ್ರ ಉತ್ತರ ಕೊಡಬೇಕು. ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಅವರ ಸಂತತಿ ಅವರಿಗೆ (ಈ ನೆಲದ ಮೂಲ ನಿವಾಸಿಗಳಾದ ದಲಿತರಿಗೆ) ಈ ಭರತ ಭೂಮಿಯಲ್ಲಿ ಭದ್ರ ನೆಲೆ ಇದೆ.
ಎರಡುವರೆ ಸಾವಿರ ವರ್ಷಗಳ ಸಾಂಪ್ರದಾಯಿಕ ಚರಿತ್ರೆ ಹೊಂದಿರುವ ಈ ದೇಶದಲ್ಲಿ ಅಂಬೇಡ್ಕರ್ ಅವರ ಜನಸಿದ್ಧಾಂತಕ್ಕೆ ತಾತ್ಕಾಲಿಕವಾಗಿ ಒಂದಿಷ್ಟು ಗಾಯಗಳು ಆಗಬಹುದು.ಮುಂದುವರೆದು ಅಂಬೇಡ್ಕರ್ (ಸ್ವಾಚು – ಸರ್ಕಲ್ ಫೋಟೋ.. ಇತ್ಯಾದಿ) ಹಾಗೂ ಅಂಬೇಡ್ಕರ್ ಸಿದ್ಧಾಂತಗಳಿಗೆ(ಅವರ ಆಲೋಚನೆಗಳನ್ನು ವೈದಿಕೀಕರಣಗೊಳಿಸುವ ಹಿನ್ನೆಲೆಯಲ್ಲಿ) ಒಂದಷ್ಟು ಗಾಯವಾಗಬಹುದು. ಪ್ರಜ್ಞಾವಂತ ಈ ರಾಷ್ಟ್ರದ ಮೂಲನಿವಾಸಿಗಳು ಇಂಥ ಗಾಯಗಳಿಗೆ ಅಂಬೇಡ್ಕರ್ ಸಿದ್ಧಾಂತದ ಮೂಲಕ ಗಟ್ಟಿತನದ ಮುಲಾಮನ್ನು ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಸಿದ್ಧಾಂತದ ಹಿನ್ನೆಲೆಯಿಂದ ಅರಿವು ಮೂಡಿಸಿದಾಗ ಈ ಗಾಯ ಹಾಗೂ ರೋಗವನ್ನು ನಿವಾರಣೆ ಖಂಡಿತ ಮಾಡಬಹುದು.
ಇದಕ್ಕೆ ಪ್ರತಿಯೊಬ್ಬರಲ್ಲಿಯೂ ಅಂಬೇಡ್ಕರ್ ಎಂಬ ಔಷಧಿ ಶಾಶ್ವತ ಹಿನ್ನೆಲೆಯಿಂದ ಪ್ರಜ್ಞಾಪೂರ್ವಕವಾಗಿ – ಎಂಥದ್ದೇ ಸಂದರ್ಭದಲ್ಲಿಯೂ ವಿಚಲಿತ ಗೊಳ್ಳದೇ ನೆಲೆ ನಿಂತಿರಬೇಕು. ಭಾರತದಲ್ಲಿ ಈ ಔಷಧಿಗೆ ಕೊರತೆ ಇಲ್ಲ. ಬುದ್ಧ, ಬಸವ, ಅಲ್ಲಮ, ಶರಣ-ಶರಣೆಯರು, ಕನಕ, ಪೆರಿಯಾರ್ ಅವರೆಲ್ಲರೂ ಈ ಪ್ರಜ್ಞಾಪೂರ್ವಕ ಗಟ್ಟಿತನದ ಔಷಧಿಯನ್ನು ಈ ನೆಲದಲ್ಲಿ ಕಂಡುಹಿಡಿದು ಜನರಿಗೆ ಉಣಬಡಿಸಿರುತ್ತಾರೆ. ಈ ಔಷಧಿಯನ್ನು ಶಾಶ್ವತವಾಗಿ ನಾವೆಲ್ಲರೂ ಜ್ಞಾನದ ಹಿನ್ನೆಲೆ ಯಿಂದ ಸ್ವೀಕರಿಸಿದರೆ ಮಾತ್ರ ಅಜ್ಞಾನದ ರೋಗವು ಶಾಶ್ವತವಾಗಿ ನಿವಾರಣೆಯಾಗುತ್ತದೆ.
ಆದರೆ ವಿದ್ಯಾವಂತರು ಎಂದು ಹೇಳಿಕೊಳ್ಳುವ ‘ಕೆಲವು’ ದಲಿತರು, ಸಂಘಟಕರು ಹಾಗೂ ಒಂದಷ್ಟು ಪ್ರಜಾಪ್ರಭುತ್ವ ವ್ಯವಸ್ಥೆಯ ರಾಜಕೀಯ ಪಕ್ಷಗಳ ಸಿದ್ಧಾಂತಗಳಿಗೆ ಒಳಪಡುವ ರಾಜಕಾರಣಿಗಳು ಅಂಬೇಡ್ಕರ್ ಮತ್ತು ಅವರ ತತ್ವ ಸಿದ್ಧಾಂತಗಳಿಗೆ ಮಾಡುತ್ತಿರುವ ‘ಗಾಯ’ ಮಾನಸಿಕವಾದದ್ದು. ಎರಡುವರೆ ಸಾವಿರ ವರ್ಷಗಳ ಬೃಹತ್ ಚರಿತ್ರೆ ಹೊಂದಿರುವ ಭಾರತದ ನೆಲದಲ್ಲಿ ಮಾತ್ರ ಈವರೆಗೂ ಇಂತಹ ಮನಸ್ಸಿನ ರೋಗ ಅಥವಾ ಗಾಯಕ್ಕೆ ಯಾವ ವಿಶ್ವಪ್ರಸಿದ್ಧ ‘ಧನ್ವಂತರಿ’ಗಳು ಸಹ ಔಷಧಿ ಅಥವಾ ಭಾರತ ಬಹುದೊಡ್ಡ ನಾಟಿ ಔಷಧಿ ಪಂಡಿತರು ಹೊಂದಿರುವ ದೇಶವಾಗಿರುವ ಕಾರಣ ಇವರ್ಯಾರೂ ಸಹ ಗಿಡಮೂಲಿಕೆಗಳನ್ನು ಕಂಡುಹಿಡಿದಿಲ್ಲ.
ಆದರೆ, ಭಾರತದಲ್ಲಿ ಅಂಬೇಡ್ಕರ್ ವಾದವನ್ನು ನಿರ್ಮೂಲನೆ ಮಾಡಲು ಬಹುದೊಡ್ಡ ಅಜ್ಞಾನದ ಆಸ್ಪತ್ರೆ ಹಾಗೂ ಆಸ್ಪತ್ರೆಯಲ್ಲಿ ಯಥೇಚ್ಛವಾಗಿ ಔಷಧಿಗಳು ಮಾತ್ರ ಎಗ್ಗಿಲ್ಲದೆ ದೊರಕುತ್ತವೆ. ಇವುಗಳಿಗೆ ಯಾವ ಹಣಕಾಸಿನ ಅವಶ್ಯಕತೆಯೂ ಇಲ್ಲ, ಉಚಿತವಾಗಿ ಇದನ್ನು ಸರಬರಾಜು ಮಾಡಲಾಗುತ್ತದೆ. ಉಚಿತಕ್ಕೆ ತಲೆಬಾಗುವ ಈ ಭಾರತದ ಜನಸಮುದಾಯ ಇದಕ್ಕೂ ಶಾಶ್ವತವಾಗಿ ತಲೆಬಾಗುತ್ತಿದೆ. ಇವೆಲ್ಲವೂ ನಮ್ಮ ನಡುವಿನ ದುರಂತವೇ ಸರಿ.
ಇಂದು ಸ್ವಾತಂತ್ರ್ಯ ಬಂದು 78 ವರ್ಷಗಳು, ಸಂವಿಧಾನ ಬಂದು ೭೫ ವರ್ಷಗಳಾದರೂ ಸಹ ಸರಿಯಾದ ಕ್ರಮದಲ್ಲಿ ಅಂಬೇಡ್ಕರ್, ಅಂಬೇಡ್ಕರ್ ವಾದವನ್ನು ಭಾರತದ ಪ್ರತಿಯೊಬ್ಬ ಜನತೆಯ ಮನ ಹಾಗೂ ಮನೆಗಳಿಗೆ ಪ್ರಸಾರ ಮಾಡುವ ಆಸ್ಪತ್ರೆ ಹಾಗೂ ಔಷಧಿಯೇ ಇಲ್ಲ. ಹೌದು ಇದು ಕಾಳಿಂಗ ಸರ್ಪದ ವಿಷಕ್ಕಿಂತಲೂ ವಿಷಕಾರಿಯಾದ ಅಸ್ಪೃಶ್ಯತೆ ಎಂಬ ವಿಷ. ಅಪಾಯಕಾರಿ ವಿಷ ಕಾಳಿಂಗ ಸರ್ಪವನ್ನು ಬೇಕಾದರೆ ತಬ್ಬಿಕೊಳ್ಳಬಹುದು. ಆದರೆ ಕೆಲವು ಮೂಲಭೂತವಾದಿಗಳಿಗೆ ಕಾಳಿಂಗ ಸರ್ಪಕ್ಕಿಂತಲೂ ಅಸ್ಪೃಶ್ಯ ಜನರು ಭೀಕರ ವಿಷವಾಗಿ ಕಾಣುತ್ತಾರೆ. ವಿಷದ ದೇವರೆಂದು ಪೂಜಿಸಿದರೆ, ತನ್ನಂತೆ ಇರುವ ಮನುಷ್ಯರನ್ನು ಅಸ್ಪೃಶ್ಯರನ್ನಾಗಿಸಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬದುಕಿದ್ದರೂ ಸತ್ತಂತೆ ಇರುವ ಹಾಗೆ ಸಾಯಿಸುತ್ತಾರೆ.
ಕೆಲವು ಭಾಗಗಳಲ್ಲಿ ಕೆಲವು ಮೂಲಭೂತವಾದಿ ತತ್ವವನ್ನು ಪ್ರತಿಪಾದನೆ ಮಾಡುವ ಇವರಿಗೆ ಎಷ್ಟು ಮಾಡಿದರೂ ಇಷ್ಟೇ ಎಂಬ ಸಿದ್ಧಾಂತವನ್ನು ಮೈಗೂಡಿಸಿಕೊಂಡು ದಲಿತರೂ ಸಹ ಇಂತಹ ಕೃತ್ಯಕ್ಕೆ ಕಾರಣೀಭೂತರಾಗುತ್ತಿರುವುದು ನಮ್ಮ ನಡುವಿನ ಬಹುದೊಡ್ಡ ಸಾಂಸ್ಕೃತಿಕ ಹಾಗೂ ಸಂವಿಧಾನಾತ್ಮಕ ದುರಂತ. ಭಾರತದಂತಹ ದೇಶದಲ್ಲಿ ಧರ್ಮ, ಧರ್ಮ ತನ್ನ ಉಳಿವಿಗಾಗಿ ಸೃಷ್ಟಿ ಮಾಡಿದ ಕಸುಬು. ಕಸುಬು ಆಧಾರಿತ ಜಾತಿ ಹಾಗೆ ಈ ಜಾತೀಯ ಪರಮೋಚ್ಚ ಇಕ್ಕಳದಲ್ಲಿ ಸಿಲುಕಿರುವ ಜನರು ಜಾತಿ ಹಾಗೂ ಧರ್ಮ ಶ್ರೇಷ್ಠತೆಯ ಅಂಧಕಾರದ ಅಜ್ಞಾನವನ್ನೇ ತಮ್ಮ ಪಾರಂಪರಿಕ ಸ್ವತ್ತಾಗಿಸಿಕೊಂಡು ಮೆರೆದಾಡುತ್ತಿರುವ ಮಾನಸಿಕ ರೋಗಕ್ಕೆ ಕಾಲಕಾಲಕ್ಕೆ ಬಹುದೊಡ್ಡ ಸಾಮಾಜಿಕ ವೈದ್ಯರು ಬಂದು (ಬುದ್ಧ, ಬಸವ, ಶರಣರು, ಕನಕ, ಸೂಫಿ ಸಂತರು, ಆಧುನಿಕ ಭಾರತದಲ್ಲಿ ಅಂಬೇಡ್ಕರ್) ಔಷಧಿಯನ್ನು ಕಂಡುಹಿಡಿದು ಕಾಲಕಾಲಕ್ಕೆ ಭಾರತೀಯರ ಮನಸ್ಸಿಗೆ ಲಸಿಕೆ ಹಾಕಿದ್ದರೂ ಈ ಲಸಿಕೆ ಮನಸ್ಸಿನ ಬಹುದೊಡ್ಡ ಅಜ್ಞಾನ ಎಂಬ ರೋಗನಿರೋಧಕದ ಮುಂದೆ ತನ್ನ ರೋಗನಿರೋಧಕ ಶಕ್ತಿಯನ್ನು ಪ್ರದರ್ಶನ ಮಾಡಲು ಸಾಧ್ಯವೇ ಆಗಲಿಲ್ಲ.
ಕಾಲ ಬದಲಾದಂತೆ ಇವರು ಯಾವ ಔಷಧಿಯ ವಿರುದ್ಧ ಪ್ರಬಲ ಆಂಟಿ ಬಯೋಟಿಕ್ ಔಷಧಿ ಕಂಡುಹಿಡಿದಿದ್ದರೂ ಅದೇ ಔಷಧಿಯ ಒಳಗೆ ಇವರನ್ನು ಸಿಲುಕಿಸಲಾಯಿತು. ಇವರೆಲ್ಲರೂ ವೈದಿಕ ಧರ್ಮ ಹಾಗೂ ಹಿಂದೂ ಧರ್ಮವನ್ನು ರಕ್ಷಣೆ ಮಾಡಿದವರು ಎಂಬ ಕಿರೀಟವನ್ನು ಕೊಟ್ಟು ಕೂರಿಸಲಾಯಿತು. ಭಾರತದ ನೆಲದಲ್ಲಿ ಮಾತ್ರ ಸಮಸಮಾಜ ನಿರ್ಮಾಣದ ಅಂಬೇಡ್ಕರ್ ಅವರು ಒಡಲಾಳದಿಂದ ಕಂಡುಹಿಡಿದ ಆಂಟಿಬಯೋಟಿಕ್ನ ಔಷಧಿಯ ಶ್ರೇಷ್ಠ ಅಂಶಗಳನ್ನು ಒಳಗೊಂಡಿರುವ ‘ಜ್ಞಾನದ’ ಔಷಧಿಗಿಂತ ‘ಅಜ್ಞಾನದ’ ಔಷಧಿಯೇ ಬಹುಶಕ್ತಿವಂಥದ್ದು ಎಂಬುವುದು ಇಂದಿನ ಕೆಲವು ದಲಿತರಲ್ಲಿ ಮನೆಮಾಡಿದೆ.
ಇವರಿಗೆ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ರೂಪಿಸಿದ ಸಂವಿಧಾನಕ್ಕಿಂತಲೂ ಇವರ ತಾತ ಮುತ್ತಾತನ ಕಾಲದಿಂದಲೂ ಪಾರಂಪರಿಕವಾಗಿ ದೇವರ ಹೆಸರಲ್ಲಿ ಜೋತುಬಿದ್ದಿದ್ದ ತಿರುಪತಿ ವೆಂಕಟರಮಣ, ಮಾದಪ್ಪ, ಬಿಳಿಗಿರಿ ರಂಗನಾಥ… ಅನೇಕ ಶಕ್ತಿ ದೇವತೆಗಳ ನೀತಿ-ನಿಯಮಗಳೇ ಇಷ್ಟ. ಇದನ್ನು ಶಾಶ್ವತವಾಗಿ ಮನಗಂಡೇ ದಲಿತೇತರರು ಪ್ರಜಾಪ್ರಭುತ್ವ ಭಾರತದ ಪಕ್ಷ ರಾಜಕಾರಣ ಹಾಗೂ ಸ್ವಾರ್ಥಕ್ಕಾಗಿನ ಓಲೈಕೆ ರಾಜಕಾರಣಗಳೆರಡೂ ಸಮ್ಮಿಲನ ಗೊಂಡು ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಸಿದ್ಧಾಂತಗಳನ್ನು ತಮ್ಮ ಸ್ವಾರ್ಥಕ್ಕೆ ತಕ್ಕಂತೆ ‘ಯೂಸ್ ಅಂಡ್ ಥೋ’ ಮಾಡಿಕೊಳ್ಳುತ್ತಿರುವ ಸಂಗತಿಗಳು ಸತ್ಯವಾಗುತ್ತಿವೆ. ಇದಾಗಬಾರದು. ಇದಾಗಬಾರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿ.

ಇವತ್ತಿನ ಜಾತಿ, ಒಳಜಾತಿ, ಉಪಜಾತಿಗಳೆಂಬ ಬಹುದೊಡ್ಡ ಕಂದಕಗಳ ವಿಚಿತ್ರ ಮನಸ್ಸುಗಳ ಒಳಗೆ ಅಂಬೇಡ್ಕರ್ ಅವರನ್ನು ನಾವು ಸಿಲುಕಿಸಿ ನಾವೇ ನರಳುತ್ತಿದ್ದೇವೆ.ಅಂಬೇಡ್ಕರ್ ಅವರ ಬೌದ್ಧಿಕ ಚಿಂತನೆಗಳನ್ನು ಸಂವಿಧಾನಾತ್ಮಕವಾಗಿ ನಾವು ಬಳಸಿ ಕೊಳ್ಳುವಲ್ಲಿ ಸೊರಗುತ್ತಿದ್ದೇವೆ. ನಿಜ ಅರ್ಥದಲ್ಲಿ ಅಂಬೇಡ್ಕರ್ ಅವರ ಚಿಂತನೆಯ ಒಳಗೂ ಇರಲಾರದೆ – ಹೊರಗೂ ಬರಲಾಗದೆ ನಡುವೆ ಸಿಲುಕಿ ನಲುಗುತ್ತಿದ್ದೇವೆ. ಮೊದಲೇ ಶತಶತಮಾನಗಳ ಜಾತಿಯ ಅಜ್ಞಾನದ ಅಂಧಕಾರದಲ್ಲಿ ಸಿಲುಕಿ ನಲುಗಿರುವ ನಮ್ಮನ್ನು ಮತ್ತೆ ಜಾತಿ, ಜಾತಿ ಒಳಗೆ ಒಳಜಾತಿಗಳಾಗಿ ಸೃಷ್ಟಿಸಿ. ಇವುಗಳ ನಡುವೆ ಬಹುದೊಡ್ಡ ಕಂದಕವನ್ನು ನಿರ್ಮಾಣ ಮಾಡಿ. ಇದರ ನಿರ್ಮಾಣದಲ್ಲಿ ಸೃಷ್ಟಿಯಾದ ‘ಅಧರ್ಮೀಯವಾದ ತೀರ್ಥದೊಳಗೆ’ ಸಿಲುಕಿಸಲಾಗಿದೆ.
ಇಂತಹ ಅಜ್ಞಾನದ ತೀರ್ಥದಿಂದಲೇ ಉರಿಯುವ ಬೆಂಕಿಯಲ್ಲಿ ಹದವಾದ ಅಡುಗೆಯನ್ನು ಮಾಡಿಕೊಂಡು ಮೃಷ್ಟಾನ್ನ ಭೋಜನವನ್ನು ಸವಿಯುತ್ತಿರುವವರು ಯಾರು..? ಯಾಕಾಗಿ ಇಂತಹ ಅಡುಗೆಯನ್ನು ಮಾಡಿಕೊಂಡು ಸಂತೋಷವಾಗಿ ಸಾಂಪ್ರದಾಯಿಕ ಸಹಭೋಜನ ಮಾಡುತ್ತಿದ್ದಾರೆ ಎಂಬ ಪರಿಜ್ಞಾನವೂ ದಲಿತ ವಿದ್ಯಾವಂತರಿಗೆ, ಸಂಘಟಕರಿಗೆ ಹಾಗೂ ದಲಿತ ರಾಜಕಾರಣಿಗಳಿಗೆ ಇರಬೇಕಾಗಿದೆ. ಇದು ಇಲ್ಲ. ಇನ್ನೂ… ಕೆಲವು ದಲಿತ ವಿದ್ಯಾವಂತರು ತಮ್ಮ ಸ್ವಾರ್ಥ ಸಾಧನೆಗಾಗಿ ತಮ್ಮ ಗ್ರಾಮದಲ್ಲಿನ ಅನೇಕ ಬಂಧುಗಳು ಹಾಗೂ ಊರಿನ ಅವಿದ್ಯಾವಂತ ದಲಿತರನ್ನು ಬಳಸಿಕೊಳ್ಳುತ್ತಿರುವುದು ಬಹು ಅಪಾಯಕಾರಿ.
ಇಂದು ದಲಿತರಿಗಿಂತಲೂ ದಲಿತೇತರರೇ ಅಂಬೇಡ್ಕರ್ ಅವರನ್ನು ತಮ್ಮ ತಮ್ಮ ಲಾಭಕ್ಕೆ ತಕ್ಕಂತೆ ಬಹುಮೆಚ್ಚುಗೆಯಿಂದ ಅಕ್ಕರೆಯಿಂದ ಮಾತನಾಡುತ್ತಾರೆ. ಏಕೆಂದರೆ ಅವರಿಗೆ ಧರ್ಮ ರಕ್ಷಣೆಗೆ ಹಾಗೂ ರಾಜಕೀಯ ಬೆಳವಣಿಗೆಗೆ ದಲಿತರು ಬೆನ್ನೆಲುಬಾಗಲೇ ಬೇಕು ಎಂಬ ಪರಿಜ್ಞಾನ ಇದೆ ಅವರಿಗೆ. ಇಂದಿನ ಚುನಾವಣೆಯ ಭಾರತದಲ್ಲಿ ಅಂಬೇಡ್ಕರ್ ಚಲಾವಣೆಯಲ್ಲಿರುವ ಬಹುಬೆಲೆಯ ೨೪ ಕ್ಯಾರಟ್ ಹೊಂದಿರುವ ಚಿನ್ನದ ನಾಣ್ಯ ನನ್ನ ಪ್ರಕಾರ ಈ ಭಾರತದಲ್ಲಿ ಅತ್ಯಂತ ಹೆಚ್ಚು ಚಲಾವಣೆಯಲ್ಲಿರುವ ಎರಡು ನಾಣ್ಯಗಳು. ಅದರಲ್ಲಿ ಮೊದಲನೆಯದು ಅಜ್ಞಾನದ ‘ರಾಮ’ ಎಂಬ ಬಣ್ಣ ಬಣ್ಣದ ಪುರಾಣದ ನಾಣ್ಯ ಈ ನಾಣ್ಯಕ್ಕೆ ಬಹುದೊಡ್ಡ ಪುರಾಣದ ವೈಭವದ ಹಿನ್ನೆಲೆ ಇದೆ. ಇನ್ನೊಂದು, ಜ್ಞಾನದ ಅಂಬೇಡ್ಕರ್ ಎಂಬ ವಾಸ್ತವದ ನಾಣ್ಯ. ಇದಕ್ಕೆ ಬಣ್ಣ ಬಣ್ಣದ ತೋರಿಕೆಗಳು ಇಲ್ಲ ಏಕೆಂದರೆ ಇದು ವಾಸ್ತವ. ವಾಸ್ತವಕ್ಕೆ ಇಂದಿಗೂ ಬಣ್ಣ ಇಲ್ಲದಿದ್ದರೂ ಸಹ ರಾಜಕೀಯ ಆಮಿಷಗಳ ಬಣ್ಣ ಅಂತೂ ಸಮಯ ಸಂದರ್ಭಕ್ಕೆ ತಕ್ಕಂತೆ ಬಳಿಯಲಾಗುತ್ತದೆ. ಈ ಆಮಿಷ ನಾಣ್ಯ ಚುನಾವಣೆ ಹಾಗೂ ಪ್ರತಿ ರಾಜಕೀಯ ತೀರ್ಮಾನಗಳ ಸಂದರ್ಭದಲ್ಲಿಯೂ ಸಹ ಬಹುಶ್ರೀಮಂತವಾಗಿಯೇ ಚಲಾವಣೆ ಗೊಳ್ಳುತ್ತದೆ.
ನಿಜಾರ್ಥದಲ್ಲಿ ವಿದ್ಯಾವಂತರು ಎಂದು ಹೇಳಿಕೊಳ್ಳುವ ಒಂದಷ್ಟು ದಲಿತರು ಅಂಬೇಡ್ಕರ್ ಅವರನ್ನು ‘ತೋರಿಸಿ’ ತಮ್ಮ ಸ್ವಾರ್ಥ ಸಾಧನೆಯನ್ನು ಗಳಿಸಿಕೊಂಡು ನಾನು ಅಪ್ಪಟ ಅಂಬೇಡ್ಕರ್ ವಾದಿ ಎಂದು ಹೇಳಿಕೊಂಡರೆ, ಅವಿದ್ಯಾವಂತರು ಅಂಬೇಡ್ಕರ್ ಅವರನ್ನು ‘ಪೂಜಿಸಿ’ ತಮ್ಮ ಸಂವಿಧಾನಾತ್ಮಕ ಮೂಲಭೂತ ಹಕ್ಕುಗಳನ್ನು ಅಪ್ರಜ್ಞಾ ಪೂರ್ವಕವಾಗಿ ಕಳೆದುಕೊಳ್ಳುತ್ತಿದ್ದಾರೆ. ಈ ಎರಡು ಪ್ರಕ್ರಿಯೆಗಳು ಸಹ ಅವೈಜ್ಞಾನಿಕ ವಾದವುಗಳೇ.
ದಯವಿಟ್ಟು ಅಂಬೇಡ್ಕರ್ ಹಾಗೂ ಅಂಬೇಡ್ಕರ್ ತತ್ತ್ವ ಸಿದ್ಧಾಂತಗಳನ್ನು ತಮ್ಮ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಬೇಡ. ಜನರ ಹಿತಾಸಕ್ತಿಗೆ ಸಂವಿಧಾನಾತ್ಮಕವಾಗಿ ಬಳಸಿಕೊಳ್ಳೋಣ. ಆ ಮೂಲಕ ಭದ್ರ ಭಾರತವನ್ನು ಕಟ್ಟೋಣ. ಅಂದು ಬೆವರಿನ ಭಾರತವನ್ನು ನಾವೇ ಗಟ್ಟಿಯಾಗಿ ಕಟ್ಟಿದ್ದು. ಇಂದು ನಾವೇ ಅಂಬೇಡ್ಕರ್ ಸಿದ್ಧಾಂತದ ಸಂವಿಧಾನದ ಭಾರತವನ್ನು ಗಟ್ಟಿಯಾಗಿ ಕಟ್ಟೋಣ. ಅಸಂವಿಧಾನದ ಭಾರತವನ್ನು ಬಯಸುವವರನ್ನು ಹಾಗೂ ಅಸಂವಿಧಾನಾತ್ಮಕ ನೀತಿಗಳನ್ನು ಅಪೇಕ್ಷೆಪಡುವವರನ್ನು ಸಂವಿಧಾನದ ಹಿನ್ನೆಲೆಯಿಂದ ಪ್ರಜ್ಞಾಪೂರ್ವಕವಾಗಿ ಬದಲಾಯಿಸೋಣ. ಇದೇ ಅಂಬೇಡ್ಕರ್ವಾದದ ಜೀವಾಳ.
ಇದನ್ನೂ ನೋಡಿ: ಹಾಸನ | ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಮೋದಿ ಪ್ರತಿಕೃತಿ ದಹನ Janashakthi Media
