ಫ್ಯಾಕ್ಟ್‌ ಚೆಕ್ | ಕೀ ಚೈನ್‌ನಲ್ಲಿ ಟ್ರ್ಯಾಕಿಂಗ್ ಚಿಪ್‌, ಮನೆವರೆಗೂ ಹಿಂಬಾಲಿಸುತ್ತಾರೆ ಎಂಬ ವೈರಲ್ ಸಂದೇಶದ ಸತ್ಯವೇನು?

“ವಿಮಾನ ನಿಲ್ದಾಣಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸುಂದರ ಕೀ ಚೈನ್‌ಗಳನ್ನು ಉಚಿತವಾಗಿ ನೀಡುವ ಅಥವಾ ಮಾರಾಟ ಮಾಡುವ ಕ್ರಿಮಿನಲ್ ಗ್ಯಾಂಗ್ ಸಕ್ರಿಯವಾಗಿದೆ. ಆ ಕೀ ಚೈನ್‌ಗಳಲ್ಲಿ ಟ್ರ್ಯಾಕಿಂಗ್ ಚಿಪ್ ಅಳವಡಿಸಲಾಗಿದ್ದು, ಅದರಿಂದ ನಿಮ್ಮ ಮನೆ ಹಾಗೂ ವಾಹನದ ಸ್ಥಳವನ್ನು ಪತ್ತೆಹಚ್ಚಿ ಅಪರಾಧ ಕೃತ್ಯ ಎಸಗಲಾಗುತ್ತದೆ” ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುತ್ತಿದೆ.

– ಗುರುರಾಜ ದೇಸಾಯಿ

ಸಂದೇಶದಲ್ಲಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ನಿಯಂತ್ರಣ ಕೇಂದ್ರದ ಹೆಸರನ್ನು ಬಳಸಲಾಗಿದ್ದು, ಇದನ್ನು ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಕಡ್ಡಾಯವಾಗಿ ಹಂಚಿಕೊಳ್ಳುವಂತೆ ಮನವಿ ಮಾಡಲಾಗಿದೆ. ಆದರೆ ಈ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ಇದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುತ್ತಾಡುತ್ತಿರುವ ಹಳೆಯ ವದಂತಿ ಎಂಬುದು ಜನಶಕ್ತಿ ಮೀಡಿಯಾ ನಡೆಸಿದ ಫ್ಯಾಕ್ಟ್ ಚೆಕ್ ಮೂಲಕ ಬೆಳಕಿಗೆ ಬಂದಿದೆ.

ಫ್ಯಾಕ್ಟ್‌ ಚೆಕ್ ಏನು ಹೇಳುತ್ತದೆ?

ಈ ವೈರಲ್ ಸಂದೇಶ ಹೊಸದೇನಲ್ಲ. 2017ರಿಂದಲೇ ಇದೇ ಮಾದರಿಯ ಸಂದೇಶಗಳು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹರಿದಾಡುತ್ತಿವೆ. ಕೆಲವೊಮ್ಮೆ ವಿಮಾನ ನಿಲ್ದಾಣದ ಹೆಸರು ಬದಲಾಗುತ್ತದೆ, ಕೆಲವೊಮ್ಮೆ ಪೊಲೀಸ್ ಇಲಾಖೆಯ ಹೆಸರನ್ನು ಸೇರಿಸಲಾಗುತ್ತದೆ. ಆದರೆ ಸಂದೇಶದ ಮೂಲ ಕಥೆ ಮಾತ್ರ ಒಂದೇ ಆಗಿರುತ್ತದೆ. ಟ್ರ್ಯಾಕಿಂಗ್

ಇದನ್ನೂ ಓದಿ: ಬಾಲಕಾರ್ಮಿಕ ಮುಕ್ತ ಭಾರತ: ಕನಸಲ್ಲ, ಸಾಕಾರಗೊಳ್ಳಬೇಕಾದ ಗುರಿ

ಫ್ಯಾಕ್ಟ್‌ ಚೆಕ್ ಸಂಸ್ಥೆಗಳು ಹಾಗೂ ಮಾಧ್ಯಮ ವರದಿಗಳ ಪ್ರಕಾರ, ಈ ಸಂದೇಶಕ್ಕೆ ಯಾವುದೇ ಅಧಿಕೃತ ಆಧಾರ ಇಲ್ಲ. ಸಂಬಂಧಿತ ವಿಮಾನ ನಿಲ್ದಾಣಗಳ ಅಧಿಕಾರಿಗಳು ಸಹ ಇಂತಹ ಎಚ್ಚರಿಕೆಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸಂದೇಶದಲ್ಲಿ ಉಲ್ಲೇಖಿಸಿರುವ ದೂರವಾಣಿ ಸಂಖ್ಯೆ, ಕಚೇರಿ ವಿವರಗಳು ಹಾಗೂ ಅಧಿಕೃತತೆಯ ಭಾವ ಮೂಡಿಸುವ ಮಾಹಿತಿಗಳನ್ನು ಸೇರಿಸಿರುವುದರಿಂದ ಅದು ನಿಜವಾದಂತೆ ಕಾಣಬಹುದು. ಆದರೆ ಇದರಿಂದಲೇ ಅದರ ವಿಶ್ವಾಸಾರ್ಹತೆ ಸಾಬೀತಾಗುವುದಿಲ್ಲ.

ತಾಂತ್ರಿಕವಾಗಿ ಈ ವಾದ ಎಷ್ಟು ಸಮಂಜಸ?

ಇಂದಿನ ದಿನಗಳಲ್ಲಿ ಟ್ರ್ಯಾಕಿಂಗ್ ಸಾಧನಗಳು ಲಭ್ಯವಿರುವುದು ನಿಜ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೀ ಚೈನ್‌ಗಳನ್ನು ಹಂಚಿ ಅಥವಾ ಮಾರಾಟ ಮಾಡಿ ಜನರನ್ನು ಹಿಂಬಾಲಿಸಲಾಗುತ್ತಿದೆ ಎಂಬುದಕ್ಕೆ ಯಾವುದೇ ಅಧಿಕೃತ ದಾಖಲೆ, ಪೊಲೀಸ್ ವರದಿ ಅಥವಾ ದೃಢೀಕೃತ ಪ್ರಕರಣಗಳು ಲಭ್ಯವಿಲ್ಲ.

ಯಾವುದೇ ಅಪರಾಧದ ಬಗ್ಗೆ ಎಚ್ಚರಿಕೆ ನೀಡಬೇಕಾದರೆ ಅದಕ್ಕೆ ಸಂಬಂಧಿಸಿದ ಅಧಿಕೃತ ಪ್ರಕಟಣೆ, ಪೊಲೀಸ್ ಮಾಹಿತಿ ಅಥವಾ ದೃಢವಾದ ಸಾಕ್ಷ್ಯಗಳಿರಬೇಕು. ಈ ವೈರಲ್ ಸಂದೇಶದಲ್ಲಿ ಅಂತಹ ಯಾವುದೇ ಮಾಹಿತಿ ಕಾಣಿಸುವುದಿಲ್ಲ.

ವದಂತಿಗಳ ಇನ್ನೊಂದು ಮುಖ: ವ್ಯಾಪಾರಿಗಳ ಜೀವನೋಪಾಯ

ಇಂತಹ ಸಂದೇಶಗಳನ್ನು ಪರಿಶೀಲಿಸದೆ ಹಂಚುವುದರಿಂದ ಉಂಟಾಗುವ ಮತ್ತೊಂದು ಗಂಭೀರ ಸಮಸ್ಯೆ ಎಂದರೆ ಸಣ್ಣ ವ್ಯಾಪಾರಿಗಳ ಜೀವನೋಪಾಯಕ್ಕೆ ಆಗುವ ಹಾನಿ. ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ಜಾತ್ರೆಗಳು, ಪ್ರವಾಸಿ ತಾಣಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೀ ಚೈನ್‌, ಆಟಿಕೆ, ಕೈಗಾರಿಕಾ ವಸ್ತುಗಳು ಮತ್ತು ಸಣ್ಣ ಉಡುಗೊರೆಗಳನ್ನು ಮಾರಾಟ ಮಾಡಿ ಸಾವಿರಾರು ಕುಟುಂಬಗಳು ಬದುಕು ಸಾಗಿಸುತ್ತಿವೆ.

ಯಾವುದೇ ಸಾಕ್ಷ್ಯವಿಲ್ಲದೆ “ಕೀ ಚೈನ್ ಮಾರುವವರು ಕಳ್ಳರ ಗ್ಯಾಂಗ್”, “ಉಚಿತ ಉಡುಗೊರೆ ಕೊಡುವವರು ಅಪರಾಧಿಗಳು” ಎಂಬ ರೀತಿಯ ಸಂದೇಶಗಳು ಜನರಲ್ಲಿ ಭಯ ಮತ್ತು ಅನುಮಾನ ಹುಟ್ಟಿಸುತ್ತವೆ. ಇದರ ಪರಿಣಾಮವಾಗಿ ಪ್ರಾಮಾಣಿಕವಾಗಿ ವ್ಯಾಪಾರ ನಡೆಸುವ ಬೀದಿಬದಿ ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಿಗಳು ಗ್ರಾಹಕರನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಒಂದು ಸುಳ್ಳು ಸಂದೇಶ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರನ್ನು ತಲುಪುತ್ತದೆ. ಆದರೆ ಅದರ ದುಷ್ಪರಿಣಾಮವನ್ನು ಅನುಭವಿಸುವವರು ಸಾಮಾನ್ಯವಾಗಿ ದಿನನಿತ್ಯದ ಆದಾಯದ ಮೇಲೆ ಬದುಕುವ ಸಣ್ಣ ವ್ಯಾಪಾರಿಗಳೇ ಆಗಿರುತ್ತಾರೆ.

ತೀರ್ಪು

ವಿಮಾನ ನಿಲ್ದಾಣಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟವಾಗುವ ಕೀ ಚೈನ್‌ಗಳಲ್ಲಿ ಟ್ರ್ಯಾಕಿಂಗ್ ಚಿಪ್ ಅಳವಡಿಸಿ ಅಪರಾಧಿಗಳು ಜನರನ್ನು ಹಿಂಬಾಲಿಸುತ್ತಿದ್ದಾರೆ ಎಂಬ ವೈರಲ್ ಸಂದೇಶಕ್ಕೆ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯ ದೊರೆತಿಲ್ಲ. ಫ್ಯಾಕ್ಟ್‌ ಚೆಕ್ ವರದಿಗಳು ಮತ್ತು ಲಭ್ಯ ಮಾಹಿತಿಗಳ ಪ್ರಕಾರ ಇದು ಹಳೆಯ ಹಾಗೂ ಪುನರಾವರ್ತಿತ ವದಂತಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಇಂತಹ ಎಚ್ಚರಿಕೆ ಸಂದೇಶಗಳನ್ನು ಹಂಚುವ ಮೊದಲು ಅದರ ಮೂಲವನ್ನು ಪರಿಶೀಲಿಸುವುದು ಅಗತ್ಯ. ಇಲ್ಲದಿದ್ದರೆ ಅನಗತ್ಯ ಭಯ ಹರಡುವುದರ ಜೊತೆಗೆ ನಿರಪರಾಧ ವ್ಯಾಪಾರಿಗಳ ಜೀವನೋಪಾಯಕ್ಕೂ ಧಕ್ಕೆ ಉಂಟಾಗಬಹುದು.

ಇದನ್ನೂ ನೋಡಿ: ದೇವದಾಸಿ ಮಕ್ಕಳಿಗೂ ತಂದೆಯ ಹೆಸರಿನ ಹಕ್ಕು: ದಶಕಗಳ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ | ಬಿ. ಮಾಳಮ್ಮ | ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *