‘ಕಾಕ್ರೋಚ್ ಜನತಾ ಪಾರ್ಟಿ’ : ಯುವಜನರ ಅಸಮಾಧಾನದ ಧ್ವನಿಯಾದ ಡಿಜಿಟಲ್ ಚಳವಳಿ

ದೇಶದ ರಾಜಕೀಯ ವಲಯದಲ್ಲಿ ಹೊಸ ರೀತಿಯ ಡಿಜಿಟಲ್ ಚಳವಳಿಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. “ಕಾಕ್ರೋಚ್ ಜನತಾ ಪಾರ್ಟಿ” ಎಂಬ ಹೆಸರಿನ ಈ ಆನ್‌ಲೈನ್‌ ರಾಜಕೀಯ ವ್ಯಂಗ್ಯ ಚಳವಳಿ ಕೆಲವೇ ದಿನಗಳಲ್ಲಿ ಸಾವಿರಾರು ಯುವಜನರನ್ನು ಸೆಳೆದಿದೆ. ನಿರುದ್ಯೋಗ, ಪರೀಕ್ಷಾ ಅಕ್ರಮ, ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಅವಿಶ್ವಾಸ ಮತ್ತು ಯುವಜನರ ಮೇಲಿನ ಅಧಿಕಾರಿಗಳ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಈ ಚಳವಳಿ ಹುಟ್ಟಿಕೊಂಡಿದೆ.

ಈ ಚಳವಳಿಗೆ ಚಾಲನೆ ನೀಡಿದ್ದು 30 ವರ್ಷದ ಅಭಿಜಿತ್ ದಿಪ್ಕೆ. ಅವರು ಹಿಂದೆ ಆಮ್ ಆದ್ಮಿ ಪಕ್ಷದ ಸಾಮಾಜಿಕ ಜಾಲತಾಣ ತಂಡದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದ್ದರೆಂದು ವರದಿಗಳು ತಿಳಿಸಿವೆ. ಪ್ರಸ್ತುತ ಅವರು ಅಮೆರಿಕದ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ಮೇ 16ರಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅವರು “ಎಲ್ಲಾ ಕಾಕ್ರೋಚ್‌ಗಳಿಗೆ ಹೊಸ ವೇದಿಕೆ” ಎಂದು ಹೇಳಿ ಸದಸ್ಯತ್ವಕ್ಕಾಗಿ ಗೂಗಲ್ ಫಾರ್ಮ್ ಹಂಚಿಕೊಂಡಿದ್ದರು.

“ಉದ್ಯೋಗವಿಲ್ಲದವರು, ಸದಾ ಆನ್‌ಲೈನ್‌ನಲ್ಲಿ ಇರುವವರು, ವ್ಯವಸ್ಥೆಯನ್ನು ಪ್ರಶ್ನಿಸುವವರು” ಎಂಬ ವ್ಯಂಗ್ಯಭರಿತ ಅರ್ಹತೆಗಳನ್ನು ನೀಡಿದ್ದ ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಯಿತು. ಬಳಿಕ “ಕಾಕ್ರೋಚ್ ಜನತಾ ಪಾರ್ಟಿ” ಎಂಬ ಹೆಸರಿನಲ್ಲಿ ವೆಬ್‌ಸೈಟ್‌, ಸಂವಿಧಾನ, ಘೋಷಣಾಪತ್ರ ಮತ್ತು ಸದಸ್ಯತ್ವ ಅಭಿಯಾನವೂ ಆರಂಭವಾಯಿತು. ಕೆಲವೇ ದಿನಗಳಲ್ಲಿ 40 ಸಾವಿರದಿಂದ 80 ಸಾವಿರದವರೆಗೆ ಸದಸ್ಯತ್ವ ನೋಂದಣಿ ನಡೆದಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : ನಿರುದ್ಯೋಗಿ ಯುವಕರು ಜಿರಳೆಗಳಂತೆ ವ್ಯವಸ್ಥೆ ಮೇಲೆ ದಾಳಿ ನಡೆಸುತ್ತಾರೆ’ : ಮುಖ್ಯ ನ್ಯಾಯಮೂರ್ತಿ ವಿವಾದಾತ್ಮಕ ಹೇಳಿಕೆ

ಈ ಚಳವಳಿಯ ಹಿನ್ನೆಲೆ ದೇಶದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೀಡಿದ ಹೇಳಿಕೆಗೆ ಸಂಬಂಧಿಸಿದೆ. ಉದ್ಯೋಗವಿಲ್ಲದ ಕೆಲ ಯುವಕರು “ಕಾಕ್ರೋಚ್‌ಗಳಂತೆ” ಮತ್ತು “ಸಮಾಜದ ಪರೋಪಜೀವಿಗಳಂತೆ” ವರ್ತಿಸುತ್ತಾರೆ ಎಂಬ ಅರ್ಥದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ನ್ಯಾಯಮೂರ್ತಿಗಳು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಆದರೆ ಅಷ್ಟರೊಳಗೆ ಯುವಜನರ ಅಸಮಾಧಾನ ಡಿಜಿಟಲ್ ಪ್ರತಿಭಟನೆಯ ರೂಪ ಪಡೆದುಕೊಂಡಿತ್ತು.

‘ಕಾಕ್ರೋಚ್ ಜನತಾ ಪಾರ್ಟಿ’ ಪ್ರಣಾಳಿಕೆಯ ಐದು ಪ್ರಮುಖ ಅಂಶಗಳು

1. ನಿವೃತ್ತಿಯ ನಂತರ ಮುಖ್ಯ ನ್ಯಾಯಮೂರ್ತಿಗಳಿಗೆ ರಾಜ್ಯಸಭೆ ಸ್ಥಾನ ನೀಡಬಾರದು.

2. ಮತದಾರರ ಹೆಸರು ಅಕ್ರಮವಾಗಿ ಅಳಿಸಿದರೆ ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

3. ಸಂಸತ್ ಮತ್ತು ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ೫೦% ಮೀಸಲಾತಿ ನೀಡಬೇಕು.

4. ಕಾರ್ಪೊರೇಟ್ ಮತ್ತು “ಗೋದಿ” ಮಾಧ್ಯಮಗಳ ಮೇಲೆ ತನಿಖೆ ನಡೆಸಿ ಮಾಧ್ಯಮ ಪಾರದರ್ಶಕತೆ ಖಚಿತಪಡಿಸಬೇಕು.

5. ಪಕ್ಷ ಬದಲಾಯಿಸುವ ಶಾಸಕರು ಮತ್ತು ಸಂಸದರಿಗೆ ಜೀವಿತಾವಧಿ ರಾಜಕೀಯ ನಿಷೇಧ ಹೇರಬೇಕು.

“ಕಾಕ್ರೋಚ್ ಜನತಾ ಪಾರ್ಟಿ” ತನ್ನನ್ನು “ಮರೆತ ಜನರ ಧ್ವನಿ” ಎಂದು ಕರೆದುಕೊಳ್ಳುತ್ತಿದೆ. ಅದರ ಘೋಷಣಾಪತ್ರದಲ್ಲಿ ಮಹಿಳಾ ಮೀಸಲಾತಿ, ಚುನಾವಣಾ ಪಾರದರ್ಶಕತೆ, ಕಾರ್ಪೊರೇಟ್ ಮಾಧ್ಯಮಗಳ ವಿರುದ್ಧ ಕ್ರಮ, ರಾಜಕೀಯ ದ್ರೋಹಿಗಳಿಗೆ ಜೀವಿತಾವಧಿ ನಿಷೇಧ, ಅನಾಮಧೇಯ ದೇಣಿಗೆಗಳ ರದ್ದುಪಡಿಸುವಿಕೆ ಮುಂತಾದ ಬೇಡಿಕೆಗಳಿವೆ. ಇದರಲ್ಲಿ ಬಹುತೇಕ ವಿಷಯಗಳು ವ್ಯಂಗ್ಯಮಯ ಶೈಲಿಯಲ್ಲಿದ್ದರೂ, ಯುವಜನರ ಅಸಮಾಧಾನ ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಚಳವಳಿಗೆ ವಿವಿಧ ರಾಜಕೀಯ ನಾಯಕರೂ ಪ್ರತಿಕ್ರಿಯಿಸಿದ್ದಾರೆ. ಕೆಲವು ವಿರೋಧ ಪಕ್ಷದ ನಾಯಕರು ಸದಸ್ಯತ್ವಕ್ಕೆ ಆಸಕ್ತಿ ತೋರಿದರೆ, ಹಲವರು ಇದನ್ನು ಯುವಜನರ ನಿರಾಸೆಯ ಸಂಕೇತವೆಂದು ಹೇಳಿದ್ದಾರೆ. ಮತ್ತೊಂದೆಡೆ, ಕೆಲವರು ಇದನ್ನು ರಾಜಕೀಯವಾಗಿ ಪ್ರೇರಿತ ಡಿಜಿಟಲ್ ಅಭಿಯಾನವೆಂದು ಟೀಕಿಸುತ್ತಿದ್ದಾರೆ.

ಆದರೆ ಒಂದು ವಿಷಯ ಸ್ಪಷ್ಟವಾಗಿದೆ. ನಿರುದ್ಯೋಗ, ಪರೀಕ್ಷಾ ಅಕ್ರಮ, ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಬೆಳೆಯುತ್ತಿರುವ ಅನುಮಾನ ಮತ್ತು ಯುವಜನರ ಧ್ವನಿಯನ್ನು ತಿರಸ್ಕರಿಸುವ ಮನೋಭಾವಗಳ ವಿರುದ್ಧ ಹೊಸ ಪೀಳಿಗೆ ಸಾಮಾಜಿಕ ಜಾಲತಾಣಗಳನ್ನು ರಾಜಕೀಯ ಅಭಿವ್ಯಕ್ತಿಯ ವೇದಿಕೆಯಾಗಿಸಿಕೊಂಡಿದೆ. “ಕಾಕ್ರೋಚ್ ಜನತಾ ಪಾರ್ಟಿ” ಕೇವಲ ಹಾಸ್ಯವಲ್ಲ, ಅದು ಡಿಜಿಟಲ್ ಯುಗದ ಅಸಮಾಧಾನದ ಪ್ರತಿಧ್ವನಿಯಾಗಿದೆ ಎಂಬ ಚರ್ಚೆ ದೇಶದಾದ್ಯಂತ ಆರಂಭವಾಗಿದೆ.

ಇದನ್ನೂ ನೋಡಿ : ಕೋಗಿಲು ಲೇಔಟ್ ನಿವಾಸಿಗಳ ಹೋರಾಟ ತೀವ್ರ | “ಮನೆ ಕೊಡಿ ಅಥವಾ ಜೈಲಿಗಾದರೂ ಕಳುಹಿಸಿ” Janashakthi Media

Donate Janashakthi Media

Leave a Reply

Your email address will not be published. Required fields are marked *