ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮಾಯುಖ್ ಕುಂಡು ಸಾವಿನ ಘಟನೆಗೆ ಸಂಬಂಧಿಸಿ ಎಸ್‌ಎಫ್‌ಐ ಸೇರಿದಂತೆ ಹಲವು ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಎಬಿವಿಪಿ ಕಾರ್ಯಕರ್ತರ ದೌರ್ಜನ್ಯ ಮತ್ತು ವಿಶ್ವವಿದ್ಯಾಲಯ ಆಡಳಿತದ ನಿರ್ಲಕ್ಷ್ಯವೇ ವಿದ್ಯಾರ್ಥಿಯ ದುರಂತ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿ ಜಂಟಿ ಪ್ರಕಟಣೆ ಬಿಡುಗಡೆ ಮಾಡಿವೆ.
ಎಸ್‌ಎಫ್‌ಐ, ಎಐಎಸ್‌ಎ, ಎಎಸ್‌ಎ, ಬಿಆರ್‌ಎಸ್‌ವಿ, ಡಿಎಸ್‌ಯು, ಫ್ರಾಟರ್ನಿಟಿ, ಎಂಎಸ್‌ಎಫ್, ಪಿಡಿಎಸ್‌ಯು ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಈ ಪ್ರಕಟಣೆಗೆ ಸಹಿ ಹಾಕಿವೆ. ಮೇ 17ರ ರಾತ್ರಿ ಲ್ಯಾಪ್‌ಟಾಪ್ ಕಳವು ಆರೋಪದ ನೆಪದಲ್ಲಿ ಎಬಿವಿಪಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ಗುಂಪೊಂದು ಮಾಯುಖ್ ಕುಂಡು ವಿರುದ್ಧ ಗುಂಪು ದಾಳಿ ನಡೆಸಿದೆ ಎಂದು ಸಂಘಟನೆಗಳು ಆರೋಪಿಸಿವೆ.
ವಿದ್ಯಾರ್ಥಿಯನ್ನು ಹಾಸ್ಟೆಲ್ ಕೊಠಡಿಯಲ್ಲಿ ಬಲವಂತವಾಗಿ ತಡೆದು ನಿಲ್ಲಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಯೊಬ್ಬರನ್ನು ಜಾತಿ ಹಾಗೂ ಭಾಷೆಯ ಆಧಾರದ ಮೇಲೆ ಅವಮಾನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಘಟನೆ ಕ್ಯಾಂಪಸ್‌ನಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ದೂರಿವೆ.
ಇದನ್ನೂ ನೋಡಿ : ಕಮ್ಯೂನಿಸ್ಟ್‌ರೇ ನನ್ನ ದೊಡ್ಡ ಮಿತ್ರ ಶಕ್ತಿ – ಬಿ.ಆರ್. ಅಂಬೇಡ್ಕರ್ | ಬಿ.ಆರ್. ಮಂಜುನಾಥ್ Janashakthi Media
ಘಟನೆ ಕುರಿತು ಸ್ವತಂತ್ರ ತನಿಖಾ ಸಮಿತಿ ರಚಿಸಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನ್ಯಾಯಯುತ ಪರಿಹಾರ ನೀಡಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ವಿದ್ಯಾರ್ಥಿಗಳ ಭದ್ರತೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಶ್ವವಿದ್ಯಾಲಯ ಆಡಳಿತ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.
ಇದೇ ವೇಳೆ, ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ವಿದ್ಯಾರ್ಥಿ ರಾಜಕೀಯದಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಧೋರಣೆಗಳ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ವಿವಿಧ ವಿದ್ಯಾರ್ಥಿ ಸಂಘಟನೆಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವ ನಡುವೆ, ಘಟನೆಯ ನಿಷ್ಪಕ್ಷಪಾತ ತನಿಖೆಗೆ ಒತ್ತಾಯ ಹೆಚ್ಚಾಗಿದೆ.
ಇದನ್ನೂ ಓದಿ : ಬಿಡದಿ ಟೌನ್‌ಶಿಪ್ ಯೋಜನೆ ರದ್ದುಪಡಿಸಿ : ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ
