ರಾಜಸ್ಥಾನ : ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹೊಸ ಹೊಸ ಮಾಹಿತಿಗಳು ಬಹಿರಂಗವಾಗುತ್ತಿದ್ದು, ಇದೀಗ ರಾಜಸ್ಥಾನದ ಬಿಜೆಪಿ ಯುವ ಘಟಕದೊಂದಿಗೆ ಸಂಪರ್ಕ ಹೊಂದಿದ್ದ ದಿನೇಶ್ ಬಿವಾಲ್ ಮತ್ತು ಅವರ ಸಹೋದರ ಮಂಗೀಲಾಲ್ ಬಿವಾಲ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಇಬ್ಬರನ್ನೂ ಮೊದಲು ರಾಜಸ್ಥಾನ ಪೊಲೀಸ್ ವಿಶೇಷ ಕಾರ್ಯಾಚರಣೆ ದಳ ವಶಕ್ಕೆ ಪಡೆದು ಬಳಿಕ ಸಿಬಿಐಗೆ ಒಪ್ಪಿಸಲಾಗಿದೆ.
ಸಿಬಿಐ ಮತ್ತು ತನಿಖಾ ಸಂಸ್ಥೆಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ಗುರುಗ್ರಾಮದ ವೈದ್ಯರೊಬ್ಬರಿಂದ ಸುಮಾರು ₹30 ಲಕ್ಷ ನೀಡಿ ಪ್ರಶ್ನೆಪತ್ರಿಕೆಯನ್ನು ಖರೀದಿಸಲಾಗಿದೆ ಎಂದು ಹೇಳಲಾಗಿದೆ. ನಂತರ ಅದನ್ನು ತಮ್ಮ ಕುಟುಂಬದ ವಿದ್ಯಾರ್ಥಿಗಳಿಗೆ ನೀಡಿದ ಬಳಿಕ ಇತರ ವಿದ್ಯಾರ್ಥಿಗಳಿಗೂ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಜಾಲದ ಮೂಲಕ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ತಲುಪಿರಬಹುದೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ದಿನೇಶ್ ಬಿವಾಲ್ ಬಿಜೆಪಿ ಯುವ ಮೋರ್ಚಾ ಸದಸ್ಯರಾಗಿದ್ದರೆಂಬ ಮಾಹಿತಿ ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಕೆಲ ಬಿಜೆಪಿ ನಾಯಕರೊಂದಿಗೆ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ರಾಜಕೀಯ ವಾಗ್ವಾದವೂ ತೀವ್ರಗೊಂಡಿದೆ. ಕಾಂಗ್ರೆಸ್ ನಾಯಕರು ಈ ಪ್ರಕರಣದಲ್ಲಿ “ಸತ್ತಾಧಿಕಾರಿಗಳ ರಕ್ಷಣೆ ಇದೆಯೇ?” ಎಂದು ಪ್ರಶ್ನೆ ಎತ್ತಿದ್ದಾರೆ.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರಾಕೇಶ್ ಕುಮಾರ್ ಮಂಡವಾರಿಯಾ ಎಂಬ ಕೌನ್ಸೆಲಿಂಗ್ ಏಜೆಂಟ್ ಕೂಡ ಬಂಧನಕ್ಕೊಳಗಾಗಿದ್ದಾನೆ. ಪ್ರಶ್ನೆಪತ್ರಿಕೆಯನ್ನು ವಾಟ್ಸ್ಆ್ಯಪ್ ಹಾಗೂ ಟೆಲಿಗ್ರಾಂ ಮೂಲಕ ವಿವಿಧ ರಾಜ್ಯಗಳಿಗೆ ಹರಡಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಶಿಕ್ನ ಮುದ್ರಣ ಕೇಂದ್ರದಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ.
ಈ ಬೆಳವಣಿಗೆಯ ಬಳಿಕ ದೇಶದಾದ್ಯಂತ ನೀಟ್ ಪರೀಕ್ಷೆಯ ವಿಶ್ವಾಸಾರ್ಹತೆ ಕುರಿತು ಮತ್ತೆ ಪ್ರಶ್ನೆಗಳು ಕೇಳಿಬಂದಿವೆ. ಪ್ರಕರಣದ ತನಿಖೆಯನ್ನು ಸಿಬಿಐ ವಿಸ್ತೃತ ಮಟ್ಟದಲ್ಲಿ ಮುಂದುವರಿಸಿದ್ದು, ಇನ್ನಷ್ಟು ಬಂಧನಗಳ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
