ಎನ್‌ಡಿಎ ಮೈತ್ರಿಕೂಟ ಬಿಹಾರದಲ್ಲಿ ನಮ್ಮ ಮಾದರಿಯನ್ನು ಅನುಸರಣೆ ಮಾಡಿದೆ: ಸಿಎಂ ಸಿದ್ದರಾಮಯ್ಯ

ಮೈಸೂರು: “ಎನ್‌ಡಿಎ ಮೈತ್ರಿಕೂಟ ಬಿಹಾರದಲ್ಲಿ ನಮ್ಮ ಮಾದರಿಯನ್ನು ಅನುಸರಣೆ ಮಾಡಿದೆ. ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಮಾದರಿಯಾಗಿಟ್ಟುಕೊಂಡು ಭರವಸೆಗಳನ್ನು ಕೊಟ್ಟಿದೆ” ಎಂದು ನಗರದ ವಿಮಾನ ನಿಲ್ದಾಣದಲ್ಲಿ ನವೆಂಬರ್‌ 3ರಂದು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

“ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರವನ್ನು ನಡೆಸಲು ಕರೆ ಬಂದರೆ ಖಂಡಿತವಾಗಿಯೂ ಹೋಗುತ್ತೇನೆ” ಎಂದರು.

“ನನಗೆ ಭರವಸೆ ಇದೆ. ವಿರೋಧ ಪಕ್ಷಗಳ ಮೈತ್ರಿಕೂಟ ಈ ಚುನಾವಣೆಯನ್ನು ಗೆಲ್ಲಲಿದೆ. ಆಡಳಿತ ವಿರೋಧಿ ಅಲೆ ಬಿಹಾರದಲ್ಲಿದೆ. ಬಿಜೆಪಿಯ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯ ಪ್ರಮುಖ ಪಾತ್ರ ವಹಿಸಲಿದೆ” ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: 2026ರ ಮೇನಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್ ಕಾರ್ಯಾರಂಭ: ಡಿಕೆಶಿ

“ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾವ ಪಕ್ಷದ ಜೊತೆ ಬೇಕಾದರೂ ಮೈತ್ರಿ ಮಾಡಿಕೊಳ್ಳುತ್ತಾರೆ. ಅವರಿಗೆ ತತ್ವ, ಸಿದ್ಧಾಂತವೇ ಇಲ್ಲ. ಬಿಹಾರದಲ್ಲಿ ಬಡತನ ಕಡಿಮೆಯಾಗಿಲ್ಲ. ಬಡವರು, ಹಿಂದುಳಿದವರು, ದಲಿತರು, ಅಲ್ಪ ಸಂಖ್ಯಾತರು ಕಾಂಗ್ರೆಸ್‌ಗೆ ಮತ ನೀಡುತ್ತಾರೆ ಎಂಬ ಭರವಸೆ ಇದೆ” ಎಂದು ಸಿದ್ದರಾಮಯ್ಯ ತಿಳಿಸಿದರು.

“ಎನ್‌ಡಿಎ ಮೈತ್ರಿಕೂಟ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಮಾದರಿಯಾಗಿಟ್ಟುಕೊಂಡು ಭರವಸೆಗಳನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಗೃಹಲಕ್ಷ್ಮಿ 1.24 ಕೋಟಿ ಮಹಿಳೆಯರಿಗೆ ಮಾಸಿಕ 2,000 ರೂ. ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಇದುವರೆಗೂ 1 ಲಕ್ಷ ಕೋಟಿ ರೂ. ಖರ್ಚು ಮಾಡಲಾಗಿದೆ” ಎಂದು ಸಿದ್ದರಾಮಯ್ಯ ವಿವರಣೆ ನೀಡಿದರು.

2 ಹಂತದಲ್ಲಿ ಮತದಾನ: ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ 2 ಹಂತದಲ್ಲಿ ನವೆಂಬರ್ 6, 11ರಂದು ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ನವೆಂಬರ್ 14ರಂದು ಪ್ರಕಟವಾಗಲಿದೆ.

ಬಿಹಾರದಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತು ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ ನೇರ ಎದುರಾಳಿಗಳು. ಆಮ್‌ ಆದ್ಮಿ ಸೇರಿ ಇತರ ಪಕ್ಷಗಳು ಸಹ ಚುನಾವಣಾ ಕಣದಲ್ಲಿದೆ.

ಚುನಾವಣೆಯಲ್ಲಿ ಆರ್‌ಜೆಡಿ 143, ಕಾಂಗ್ರೆಸ್ 61, ಸಿಪಿಐ(ಎಂಎಲ್‌) 20 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. ಉಳಿದ ಕ್ಷೇತ್ರವನ್ನು ವಿಐಪಿ, ಸಿಪಿಐ(ಎಂ) ಪಕ್ಷಕ್ಕೆ ಬಿಟ್ಟುಕೊಡಲಾಗಿದೆ. ಮಹಾಘಟಬಂಧನ್ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮುಖ್ಯಮಂತ್ರಿ ಅಭ್ಯರ್ಥಿ, ವಿಕಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮುಕೇಶ್ ಸಹಾನಿ ಡಿಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.

ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಈಗಾಗಲೇ ಹಲವು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ರಾಜ್ಯದಿಂದ ತೆರಳಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 3 ದಿನಗಳ ಕಾಲ ಬಿಹಾರ ರಾಜ್ಯದಲ್ಲಿ ಪ್ರಚಾರವನ್ನು ನಡೆಸಲಿದ್ದಾರೆ.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಆಹ್ವಾನ ನೀಡಿದರೆ ಖಂಡಿತವಾಗಿಯೂ ತೆರಳುತ್ತೇನೆ ಎಂದು ಹೇಳಿದ್ದಾರೆ. ಬಿಹಾರದ ಚುನಾವಣೆ ಬಳಿಕ ಕರ್ನಾಟಕ ರಾಜಕೀಯದಲ್ಲಿ ಕ್ರಾಂತಿ ಆಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ. ಆದ್ದರಿಂದ ಚುನಾವಣಾ ಫಲಿತಾಂಶ ರಾಜ್ಯ ರಾಜಕೀಯದ ಮೇಲೆ ಸಹ ಪರಿಣಾಮ ಬೀರುವ ನಿರೀಕ್ಷೆ ಇದೆ.

ಭಾನುವಾರ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಹಾರದಲ್ಲಿ ಚುನಾವಣಾ ಪ್ರಚಾರವನ್ನು ನಡೆಸಿದ್ದಾರೆ. ಕಾಂಗ್ರೆಸ್‌ನ ಮತಗಳ್ಳತನ ಆರೋಪದ ಬಳಿಕ ನಡೆಯುತ್ತಿರುವ ಮೊದಲ ರಾಜ್ಯದ ವಿಧಾನಸಭೆ ಚುನಾವಣೆ ಇದಾಗಿದೆ. ಆದ್ದರಿಂದ ಚುನಾವಣಾ ಫಲಿತಾಂಶ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ.

61 ಸೀಟುಗಳಲ್ಲಿ ಬಿಹಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 58 ಸೀಟುಗಳಲ್ಲಿ ಬಿಜೆಪಿ ಮತ್ತು ಜೆಡಿಯು ಅಭ್ಯರ್ಥಿಗಳು ನೇರ ಎದುರಾಳಿಗಳು. 18 ಜಿಲ್ಲೆಗಳ 121 ಸೀಟುಗಳಲ್ಲಿ ಮೊದಲ ಹಂತದ ಮತದಾನ ನವೆಂಬರ್ 6ರಂದು ನಡೆಯಲಿದೆ. ಕಾಂಗ್ರೆಸ್‌ನ ನಾಯಕರು, ಯುವ ಕಾಂಗ್ರೆಸ್‌ನ ಸದಸ್ಯರು ಈಗಾಗಲೇ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ನೋಡಿ: ನಿರಂಜನ ಶತಮಾನ ಸಮಾರೋಪ | ʻನಿರಂಜನ ಮರು ಓದುʼ ಸರಣಿ ಬಿಡುಗಡೆ

Donate Janashakthi Media

Leave a Reply

Your email address will not be published. Required fields are marked *