ಬೆಂಗಳೂರು: ಪ್ರಸ್ತಾವಿತ 2,000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಪರಿಸರ ಹೋರಾಟಗಾರರಿಗೆ ದೊಡ್ಡ ಬೆಂಬಲ ದೊರೆತಿದೆ. ಕರ್ನಾಟಕ ಹೈಕೋರ್ಟ್ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಮಾಹಿತಿಯಲ್ಲಿ, ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL)ಯ ತಜ್ಞರ ಸಮಿತಿ ಈ ಕೆಪಿಸಿಎಲ್ ಯೋಜನೆಗೆ ವನ್ಯಜೀವಿ ಅನುಮತಿ ನೀಡದಂತೆ ಶಿಫಾರಸು ಮಾಡಿದೆ ಎಂದು ತಿಳಿಸಿದೆ. ಶರಾವತಿ
ಕೇಂದ್ರದ ಈ ನಿಲುವು ರಾಜ್ಯ ಸರ್ಕಾರದ ಯೋಜನೆಗೆ ದೊಡ್ಡ ಹಿನ್ನಡೆಯಾಗಿದೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಈ ಯೋಜನೆಗೆ ಸಂರಕ್ಷಣಾವಾದಿಗಳು ಹಾಗೂ ಪರಿಸರ ಹೋರಾಟಗಾರರಿಂದ ನಿರಂತರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜೂನ್ 2025ರಲ್ಲಿ NBWL ತಜ್ಞರ ಸಮಿತಿಯನ್ನು ರಚಿಸಿತ್ತು. ಶರಾವತಿ
ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು ತಜ್ಞರ ಸಮಿತಿಯ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಿದರು.
ಇದನ್ನೂ ಓದಿ: ಫ್ಯಾಕ್ಟ್ಚೆಕ್ | ಯುರೋಪಿನ ಬಿಸಿಗೆ ಟ್ರಾಫಿಕ್ ಸಿಗ್ನಲ್ ಕರಗಿತೇ? ವೈರಲ್ ವಿಡಿಯೊ ಹಿಂದಿನ ಸತ್ಯ ಏನು?
ಯೋಜನೆಗೆ ಅನುಮೋದನೆ ನಿರಾಕರಿಸಿರುವ ಸಮಿತಿ, “ಈ ಪ್ರಸ್ತಾವನೆಗೆ ಸಮರ್ಥ ತಾಂತ್ರಿಕ ಆಧಾರ, ಪರಿಸರ ಸುಸ್ಥಿರತೆ ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಹೊಂದಾಣಿಕೆ ಕಂಡುಬರುವುದಿಲ್ಲ,” ಎಂದು ಸ್ಪಷ್ಟಪಡಿಸಿದೆ.
ಇದಾದ ಬಳಿಕ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ಯೋಜನೆಗೆ ಸಂಬಂಧಿಸಿದ ಯಾವುದೇ ಕಾಮಗಾರಿ ನಡೆಸದಂತೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದುವರಿಸಿತು. ಅಲ್ಲದೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಿತು.
ಯೋಜನೆಯ ಪರಿಣಾಮಕಾರಿತ್ವದ ಬಗ್ಗೆಯೂ ಪ್ರಶ್ನೆ ಎತ್ತಿರುವ ತಜ್ಞರ ಸಮಿತಿ, “ಈ ಯೋಜನೆಯಿಂದ ವಾಸ್ತವಿಕ ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯ ನಷ್ಟ ಉಂಟಾಗಲಿದೆ. ಏಕೆಂದರೆ ಇದು ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ ಬದಲು, ವಿದ್ಯುತ್ ಲಭ್ಯತೆಯನ್ನು ರಾತ್ರಿ ಸಮಯಕ್ಕೆ ಮಾತ್ರ ವರ್ಗಾಯಿಸುತ್ತದೆ,” ಎಂದು ಹೇಳಿದೆ.
ಪಶ್ಚಿಮ ಘಟ್ಟಗಳಲ್ಲಿರುವ ಅಪರೂಪದ ಹಾಗೂ ಸ್ಥಳೀಯ ಜೀವ ಪ್ರಭೇದಗಳ ಉಳಿವಿಗೆ ಈ ಯೋಜನೆ ಅಪಾಯಕಾರಿಯಾಗಬಹುದು ಎಂದು ಸಮಿತಿ ಎಚ್ಚರಿಸಿದೆ.
ಈ ಯೋಜನೆಯಿಂದ ವನ್ಯಜೀವಿಗಳ ಆವಾಸಸ್ಥಾನಗಳು ವಿಭಜನೆಯಾಗುವ ಸಾಧ್ಯತೆ ಇದೆ. ಪ್ರಾಣಿಗಳ ಚಲನವಲನಕ್ಕೆ ಅಡ್ಡಿಯಾಗಬಹುದು ಹಾಗೂ ಅರಣ್ಯ ಮತ್ತು ನದಿ ಪರಿಸರ ವ್ಯವಸ್ಥೆಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಬಹುದು ಎಂದು ತಜ್ಞರ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಇದನ್ನೂ ನೋಡಿ: ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುತ್ತಿರುವ ಜಿಬಿಎ? ಬದುಕಿನ ಹಕ್ಕಿಗಾಗಿ ಫ್ರೀಡಂ ಪಾರ್ಕ್ನಲ್ಲಿ ಹೋರಾಟ!
