ಕಾರ್ಮಿಕರ ಸಹಾಯಧನ ಅರ್ಜಿಗಳ ಅರ್ಧಕ್ಕೂ ಹೆಚ್ಚು ತಿರಸ್ಕಾರ

ಯಾದಗಿರಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮದುವೆ ಸಹಾಯಧನ, ತಾಯಿ- ಮಗು ಸಹಾಯಹಸ್ತ, ಹೆರಿಗೆ ಸೌಲಭ್ಯ ಮತ್ತು ವೈದ್ಯಕೀಯ‌ ಸಹಾಯಧನಕ್ಕಾಗಿ 2,006 ಕಾರ್ಮಿಕರು ಅರ್ಜಿ ಸಲ್ಲಿಕೆ ಮಾಡಿದ್ದೂ, ಅವರಲ್ಲಿ ಅರ್ಧಕ್ಕೂ ಅಧಿಕ, ಕೆಲ ಯೋಜನೆಯಲ್ಲಿ ಶೇ 82ರಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ವರದಿಯಾಗಿದೆ.

‘ನೋಂದಾಯಿತ ಕಾರ್ಮಿಕ ಫಲಾನುಭವಿ ಅಥವಾ ಇಬ್ಬರು ಮಕ್ಕಳ ಮದುವೆಗೆ ತಲಾ ₹ 60 ಸಾವಿರ ಮದುವೆ ಸಹಾಯಧನ (ಗೃಹ ಲಕ್ಷ್ಮಿ ಬಾಂಡ್) ನೀಡಲಾಗುತ್ತದೆ. ಇದಕ್ಕಾಗಿ 2024-25 ಹಾಗೂ 2025-26ನೇ ಸಾಲಿನಲ್ಲಿ 1,350 ಮಂದಿ ಅರ್ಜಿ ಹಾಕಿದ್ದರು. ಅವರಲ್ಲಿ 503 ಫಲಾನುಭವಿಗಳಿಗೆ ಅನುಮೋದನೆ ನೀಡಿ, 799 ಅರ್ಜಿಗಳನ್ನು (ಶೇ 59ರಷ್ಟು) ತಿರಸ್ಕರಿಸಲಾಗಿದೆ. 48 ಅರ್ಜಿಗಳು ಬಾಕಿ ಇವೆ’ ಎನ್ನುತ್ತಾರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು.

ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮಿ ಬಾಂಡ್) ಯೋಜನೆಗೆ ಅರ್ಜಿ ಹಾಕಿದ ನೋಂದಾಯಿತ ಕಾರ್ಮಿಕ ಮಹಿಳೆಗೆ ಮೊದಲ ಎರಡು ಹೆರಿಗೆಗೆ ₹ 50 ಸಾವಿರ ಸಹಾಯಧನ ಪಾವತಿಸಲಾಗುತ್ತದೆ. ಇದಕ್ಕಾಗಿ ಕಳೆದ ಎರಡು ವರ್ಷಗಳಲ್ಲಿ 508 ಮಹಿಳೆಯರು ಅರ್ಜಿ ಹಾಕಿದ್ದರು. ಅವರಲ್ಲಿ 137 ಅರ್ಜಿಗೆ ಅನುಮೋದನೆ ಸಿಕ್ಕಿದ್ದರೆ, 351 (ಶೇ 69ರಷ್ಟು) ಅರ್ಜಿಗಳನ್ನು ನಿರಾಕರಿಸಲಾಗಿದೆ. 20 ಅರ್ಜಿಗಳು ಬಾಕಿ ಉಳಿದುಕೊಂಡಿವೆ.

ಇದನ್ನೂ ಓದಿ: ಕನ್ನಡ ಪುಸ್ತಕ ಸೊಗಸು ಬಹುಮಾನಗಳಿಗೆ ಅರ್ಜಿ ಆಹ್ವಾನ

ಶೇ 65ರಷ್ಟು ಅರ್ಜಿ ತಿರಸ್ಕೃತ

ತಾಯಿ ಮಗು ಸಹಾಯ ಹಸ್ತ ಯೋಜನೆಯಡಿ ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಮಗುವಿನ ಶಾಲಾ ಪೂರ್ವಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ₹ 6 ಸಾವಿರ ಸಹಾಯಧನ ಕೊಡಲಾಗುತ್ತದೆ. ಇದಕ್ಕಾಗಿ 120 ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 33 ಮಂದಿಗೆ ಅನುಮೋದನೆ ಕೊಟ್ಟು, 78 (ಶೇ 65ರಷ್ಟು) ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 9 ಅರ್ಜಿಗಳು ಬಾಕಿ ಇವೆ.

‘ಕಾರ್ಮಿಕರೆಂದು ಸುಳ್ಳು ಮಾಹಿತಿ ನೀಡಿ ಕೆಲವರು ನೋಂದಾಯಿಸಿಕೊಂಡು ಕಾರ್ಡ್‌ಗಳನ್ನು ಪಡೆದಿದ್ದಾರೆ. ಯೋಜನೆಗಳಿಗಾಗಿ ಅರ್ಜಿ ಹಾಕಿದಾಗ ಪರಶೀಲನೆ ವೇಳೆ ಅನರ್ಹರು ಎಂಬುದು ಗೊತ್ತಾಗಿ ತಿರಸ್ಕೃತಗೊಂಡಿವೆ. ಕೆಲವರು ಸರಿಯಾದ ದಾಖಲೆ ನೀಡದಿರುವುದು, ನಿಗದಿಗಿಂತ ಹೆಚ್ಚು ಬಾರಿ ಅರ್ಜಿ ಸಲ್ಲಿಕೆ, ಅರ್ಜಿ ಸಲ್ಲಿಕೆಯಲ್ಲಿನ ಗೊಂದಲದಂತಹ ತಾಂತ್ರಿಕ ಕಾರಣಗಳಿಗೆ ತಿರಸ್ಕೃತಗೊಂಡಿವೆ. ಸರಿಯಾದ ದಾಖಲೆಗಳು ನೀಡಿದ ಅರ್ಹರಿಗೆ ಯೋಜನೆಗಳ ಲಾಭವನ್ನು ಕೊಡಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಕಾರ್ಮಿಕ ಅಧಿಕಾರಿ.

ಕೋವಿಡ್ ಅವಧಿಯಲ್ಲಿ 1.70 ಲಕ್ಷದಷ್ಟಿದ್ದ ಕಾರ್ಮಿಕ ಕಾರ್ಡ್‌ಗಳ ಸಂಖ್ಯೆಯನ್ನು ನಿರಂತರವಾಗಿ ಪರಿಶೀಲಿಸಿ, ಅನರ್ಹರ ಕಾರ್ಡ್‌ ರದ್ದು ಮಾಡಿದ್ದರಿಂದ ಪ್ರಸ್ತುತ 65,484 ಇಳಿಕೆಯಾಗಿದೆ ಎಂದರು.

ಶೇ 10 ಮಂದಿಗೆ ಮಾತ್ರ ವೈದ್ಯಕೀಯ ಸಹಾಯಧನ

ನೋಂದಾಯಿತ ಫಲಾನುಭವಿಗಳು ಹಾಗೂ ಅವಲಂಬಿತರು ಸಾಮಾನ್ಯ ಆರೋಗ್ಯ ಸಂಬಂಧಿತ ಚಿಕಿತ್ಸೆಗೆ ₹300 ರಿಂದ ₹ 20 ಸಾವಿರದವರೆಗೆ ವೈದ್ಯಕೀಯ ಸಹಾಯಧನವನ್ನು ಕೊಡಲಾಗುತ್ತದೆ. ಈ ಯೋಜನೆ ಪಡೆಯಲು ಚಿಕಿತ್ಸೆ ಸಂಬಂಧಿತ ದಾಖಲೆಗಳು ಸಹಿತ ಅರ್ಜಿ ಸಲ್ಲಿಸಬೇಕು.

ಕಳೆದ ಎರಡು ವರ್ಷಗಳಲ್ಲಿ ವೈದ್ಯಕೀಯ ಸಹಾಯನಧ ಕೋರಿ 28 ಅರ್ಜಿಗಳು ಸಲ್ಲಿಕೆಯಾಗಿದ್ದು, ಮೂವರಿಗೆ ಮಾತ್ರವೇ ಸಹಾಯಧನ ಸಿಕ್ಕಿದೆ. 23 (ಶೇ 82ರಷ್ಟು) ಮಂದಿಯ ಅರ್ಜಿಗಳು ತಿರಸ್ಕಾರವಾಗಿ, ಎರಡು ಅರ್ಜಿ ಬಾಕಿ ಇವೆ ಎನ್ನುತ್ತಿವೆ ಇಲಾಖೆಯ ಅಂಕಿಅಂಶಗಳು.

ಪೂರಕವಾದ ವೈದ್ಯಕೀಯ ದಾಖಲೆಗಳು ಇಲ್ಲದೆ ಇರುವುದು, ನಿಗದಿತ ಖರ್ಚಿಗಿಂತ ಹೆಚ್ಚಿನ ಹಣ ನಮೂದು, ವೈದ್ಯಕೀಯ ಸಹಾಯಧನ ಬದಲು ಪ್ರಮುಖ ವೈದ್ಯಕೀಯ ಚಿಕಿತ್ಸೆಗೆ ಅರ್ಜಿ ಸಲ್ಲಿಕೆಯಂತಹ ಮತ್ತಿತರೆ ಕಾರಣಗಳಿಗೆ ತಿರಸ್ಕೃತವಾಗಿವೆ ಎನ್ನುತ್ತಾರೆ ಸಂಬಂಧಪಟ್ಟ ಅಧಿಕಾರಿಗಳು.

ಇದನ್ನೂ ನೋಡಿ: ಕಮ್ಯೂನಿಸ್ಟ್‌ರೇ ನನ್ನ ದೊಡ್ಡ ಮಿತ್ರ ಶಕ್ತಿ – ಬಿ.ಆರ್. ಅಂಬೇಡ್ಕರ್ | ಬಿ.ಆರ್.‌ ಮಂಜುನಾಥ್‌ Janashakthi Media

Donate Janashakthi Media

Leave a Reply

Your email address will not be published. Required fields are marked *