ಮೋದಿ ಸರ್ಕಾರ ಆಂತರಿಕ ಆದ್ಯತೆಗಳನ್ನು ನಿರ್ಲಕ್ಷಿಸುತ್ತಿದೆ: ರಾಹುಲ್ ಗಾಂಧಿ ಆರೋಪ

ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದ ಆಂತರಿಕ ಆದ್ಯತೆಗಳನ್ನು ಬದಿಗಿಟ್ಟು ವಿದೇಶಿ ಹಿತಾಸಕ್ತಿಗಳ ಪರವಾಗಿ ಕೆಲಸ ಮಾಡುತ್ತಿದೆ ಮತ್ತು ದೇಶದ ಪ್ರಮುಖ ಸಾಮಾಜಿಕ-ಆರ್ಥಿಕ ರಕ್ಷಣಾ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಧ್ವಂಸಗೊಳಿಸುತ್ತಿದೆ ಎಂದು ಜೂನ್‌ 4ರಂದು ಉತ್ತರಾಖಂಡ್‌ನ ಆಲ್ಮೋರಾದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಪರಿವರ್ತನ್ ಕಾ ಶಂಖನಾದ್’ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಅವರು ದೂರವಾಣಿ(ಫೋನ್ ಕಾಲ್) ಮೂಲಕ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಗಮ್ಯಸ್ಥಾನ ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಅವರು ಪಂತನಗರ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಬೇಕಾಯಿತು. ಆ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕುಮಾರಿ ಶೆಲ್ಜಾ ಅವರ ಸಹಾಯದಿಂದ ಫೋನ್ ಕಾಲ್ ಮೂಲಕ ರಾಹುಲ್ ಅವರ ಭಾಷಣವನ್ನು ಜನರಿಗೆ ತಲುಪಿಸಿದರು.

ರೈತರು, ಸಣ್ಣ ಉದ್ಯಮಗಳ ನಾಶ

ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿಯು ಸಾಮಾನ್ಯ ಜನರನ್ನು ಸಬಲೀಕರಣಗೊಳಿಸಲು ಕಾಂಗ್ರೆಸ್ ಪಕ್ಷವು ನಿರ್ಮಿಸಿದ್ದ ಆರ್ಥಿಕ ಬುನಾದಿಯನ್ನೇ ಧ್ವಂಸಗೊಳಿಸಿದೆ.

ಇದನ್ನೂ ಓದಿ: ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ: ಕುವೈತ್‌ನಲ್ಲಿ ವಿಮಾನ ಸಂಚಾರ ಸ್ಥಗಿತ; ಒಬ್ಬ ಮೃತ

ನೋಟು ಅಮಾನ್ಯೀಕರಣವು ತುರ್ತು ಪರಿಸ್ಥಿತಿಗಾಗಿ ಮನೆಯಲ್ಲಿ ಇಟ್ಟಿದ್ದ ಹಣವನ್ನು ಕಿತ್ತುಕೊಂಡರೆ, ಜಿಎಸ್‌ಟಿ ದೇಶದಾದ್ಯಂತ ಸಣ್ಣ ಉದ್ಯಮಗಳನ್ನು ನಾಶಪಡಿಸಿದೆ. ಜವಳಿ ಮತ್ತು ಆಹಾರ ಸಂಸ್ಕರಣಾ ವಲಯದ ಸಣ್ಣ ಉದ್ಯಮಿಗಳು ಜಿಎಸ್‌ಟಿಯಿಂದ ತತ್ತರಿಸಿದ್ದಾರೆ. ರೈತರ ಕೃಷಿ ರಕ್ಷಣಾ ವ್ಯವಸ್ಥೆಯನ್ನು ಸರ್ಕಾರ ದುರ್ಬಲಗೊಳಿಸಿದೆ” ಎಂದು ದೂರಿದರು.

ಅಮೆರಿಕಕ್ಕೆ ಮಣಿದ ವಿದೇಶಾಂಗ ನೀತಿ

ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದ ರಾಹುಲ್, ಇಂದು ಭಾರತದ ಇಂಧನ ಭದ್ರತೆಯು ಬಾಹ್ಯ ಭೌಗೋಳಿಕ ರಾಜಕೀಯ ಒತ್ತಡಗಳಿಗೆ ಸಿಲುಕಿದೆ. ಅಮೆರಿಕ ಅನುಮೋದಿಸುವ ದೇಶಗಳಿಂದ ಮಾತ್ರ ನಾವು ತೈಲವನ್ನು ಖರೀದಿಸುವಂತಾಗಿದೆ. ಪ್ರಸ್ತುತ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಹೊರ್ಮುಜ್‌ ಜಲಸಂಧಿ ಮುಚ್ಚಲ್ಪಟ್ಟಿದ್ದು, ಇದು ಭಾರತದಂತಹ ದೇಶಕ್ಕೆ ಆರ್ಥಿಕ ಸುನಾಮಿ ತರಬಲ್ಲದು.

ಇಂತಹ ಪರಿಸ್ಥಿತಿಯಲ್ಲೂ ಮೋದಿ ಸರ್ಕಾರ ಭಾರತದ ಹಿತಾಸಕ್ತಿ ಕಾಯುವ ಬದಲು ಅಮೆರಿಕ ಮತ್ತು ದೇಶದ ಕೆಲವು ಶ್ರೀಮಂತ ಉದ್ಯಮಿಗಳ ಹಿತಾಸಕ್ತಿ ಕಾಯಲು ನಿಂತಿದೆ” ಎಂದು ಆರೋಪಿಸಿದರು.

ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ಉತ್ತರಾಖಂಡ್‌ನ ಜನತೆ ತಮಗಾಗಿ ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಹೊಂದಲು ಭಾರಿ ಬಲಿದಾನ ನೀಡಿ ಈ ರಾಜ್ಯವನ್ನು ರೂಪಿಸಿದ್ದಾರೆ.

ಆದರೆ ಇಂದು ಉತ್ತರಾಖಂಡ್ ಅನ್ನು ಇಲ್ಲಿನ ಜನ ಆಳುತ್ತಿಲ್ಲ, ಬದಲಿಗೆ ದಿಲ್ಲಿಯಿಂದ ರಿಮೋಟ್ ಕಂಟ್ರೋಲ್ ಮೂಲಕ ಆಡಳಿತ ನಡೆಸಲಾಗುತ್ತಿದೆ ಮತ್ತು ಹೊರಗಿನವರು ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುತ್ತಿದ್ದಾರೆ. ಪ್ರಸ್ತುತ ಇರುವ ಪುಷ್ಕರ್ ಸಿಂಗ್ ಧಾಮಿ ಸರ್ಕಾರಕ್ಕೆ ರಾಜ್ಯದ ಹಿತಾಸಕ್ತಿಗಿಂತ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ” ಎಂದು ರಾಹುಲ್ ಕಿಡಿಕಾರಿದರು.

ಆಲ್ಮೋರಾಗೆ ಬರಲು ಸಾಧ್ಯವಾಗದ್ದಕ್ಕೆ ಜನತೆಯ ಕ್ಷಮೆಯಾಚಿಸಿದ ರಾಹುಲ್, ಶೀಘ್ರದಲ್ಲೇ ಭೇಟಿ ನೀಡುವುದಾಗಿ ಭರವಸೆ ನೀಡಿದರು. ಮುಂಬರುವ ವಿಧಾನಸಭಾ ಚುನಾವಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಯಶ್‌ಪಾಲ್ ಆರ್ಯ ಸೇರಿದಂತೆ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು. ರಾಹುಲ್ ಗಾಂಧಿ ಅವರು ಎರಡು ದಿನಗಳ ಉತ್ತರಾಖಂಡ್ ಪ್ರವಾಸದಲ್ಲಿದ್ದು, ಮಾಜಿ ಸೈನಿಕರ ಕುಟುಂಬಗಳು ಹಾಗೂ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ.

ಇದನ್ನೂ ನೋಡಿ: ಸರಕಾರಕ್ಕೆ ತೈಲದ ಆಟ, ಜನರಿಗೆ ಜೇಬಿನ ದರೋಡೆ! | ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *