ಬ್ಯಾಡಗಿ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು, ತಾಲ್ಲೂಕಿನಲ್ಲಿ ಕೈಗಾರಿಕೆ ಸ್ಥಾಪಿಸದಿರುವುದು, ನೀರಾವರಿ ಸೌಲಭ್ಯ ಕಲ್ಪಿಸದಿರುವುದು ಹಾಗೂ ಬಿತ್ತನೆ ಬೀಜ ಮತ್ತು ರಸ ಗೊಬ್ಬರದ ಬೆಲೆ ಏರಿಸಿರುವುದನ್ನು ಖಂಡಿಸಿ ಜೂನ್ 4ರಂದು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಬ್ಯಾಡಗಿ
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, ಭೂಮಿಯ ನೀರನ್ನೇ ನಂಬಿ ದುಡಿಯುವ ರೈತನಿಗೆ ಭದ್ರತೆ ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ತತ್ತರಿಸಿ ಹೋಗಿದ್ದು, ಮಾಡಿದ ಸಾಲ ತೀರಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಸರ್ಕಾರ ನದಿ ಜೋಡಣೆ ಮಾಡುವ ಮೂಲಕ ನೀರಾವರಿ ಸೌಲಭ್ಯವನ್ನು ಕಲ್ಪಿಸಬೇಕು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಜೂನ್ 10ರೊಳಗೆ ಬೇಡಿಕೆ ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಖಾಸಗಿ ಮಾರಾಟ ಮಳಿಗೆಯಲ್ಲಿ ರಸ ಗೊಬ್ಬರವನ್ನು ಹೆಚ್ಚಿನ ಬೆಲೆ ಮಾರಾಟ ಮಾಡುತ್ತಿದ್ದಾರೆ. ಡಿಎಪಿ ಮತ್ತು ಯೂರಿಯಾ ನೀಡುವಾಗ ಅದರ ಜೊತೆಗೆ ಬೇಡವಾದ ಲಿಕ್ವಿಡ್ ಟಾನಿಕ್, ಜೈವಿಕ ಪೌಡರ್ ಖರೀದಿಸುವಂತೆ ಒತ್ತಡ ಹಾಕುತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಗಂಗಣ್ಣ ಎಲಿ. ಚಿಕ್ಕಪ್ಪ ಚಿತ್ರದ. ಶಿವಯೋಗಿ ಹೊಸಗೌಡ್ರ, ಮೌನೇಶ ಕಮ್ಮಾರ, ಕೆ.ವಿ.ದೊಡ್ಡಗೌಡ್ರ, ಶಿವರುದ್ರಪ್ಪ ಮೂಡ್ವಿ, ಜಾನ್ ಪುನಿತ, ಸುಭಾಷ ಬನ್ನಿಹಟ್ಟಿ, ಈರನಗೌಡ ಪಾಟೀಲ, ಅಶೋಕ ಮುತ್ತೂರ ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ರಾಮಜನ್ಮಭೂಮಿ ತೀರ್ಪಿನಿಂದ ಎಸ್ ಐಆರ್ ತೀರ್ಪಿನವರೆಗೆ.. ನ್ಯಾಯಾಂಗದ ವಿಶ್ವಾಸಾರ್ಹತೆ ಏನು? ಎಂತ? Janashakthi Media
