ಛತ್ರಪತಿ ಸಂಭಾಜಿನಗರ: ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಈಗಿನ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷವಾಗಿ ಅಲ್ಲ, ಒತ್ತಡ ಗುಂಪಾಗಿ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥಾಪಕ ಅಭಿಜೀತ್ ದೀಪ್ಕೆ ಆಗಸ್ಟ್ 5ರಂದು ಹೇಳಿದರು.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಪ್ರಮುಖ ಸಭೆಗೆ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ದೀಪ್ಕೆ, “ಈ ಸಂದರ್ಭದಲ್ಲಿ ಭಾರತಕ್ಕೆ ರಾಜಕೀಯ ಪಕ್ಷಕ್ಕಿಂತ ಒತ್ತಡ ಗುಂಪು ಅಗತ್ಯ,” ಎಂದು ಅಭಿಪ್ರಾಯಪಟ್ಟರು.
ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಅವರು, ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಸಂಸ್ಥೆಯ ಮಾರ್ಗದರ್ಶಕರಾಗಿಯೇ ಮುಂದುವರಿಯಲಿದ್ದಾರೆ ಎಂದು ತಿಳಿಸಿದರು. ಪ್ರಮುಖ ವಿಷಯಗಳಲ್ಲಿ ಅವರ ಸಲಹೆ ಪಡೆಯಲಾಗುತ್ತದೆ ಎಂದರು.
ಇದನ್ನೂ ಓದಿ: NEET-UG: OMR ವ್ಯತ್ಯಾಸ ಆರೋಪ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 6 ಅಭ್ಯರ್ಥಿಗಳು
ಇತ್ತೀಚಿನ ನೀಟ್-ಯುಜಿ (NEET-UG) ಪರೀಕ್ಷೆ ಸಂಬಂಧಿತ ಪೇಪರ್ ಲೀಕ್ ಹಾಗೂ ಅಕ್ರಮಗಳ ಆರೋಪಗಳ ವಿರುದ್ಧ ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂತೆಗೆದುಕೊಳ್ಳುವಂತೆ ಸಂಸ್ಥೆ ಒತ್ತಾಯಿಸಲಿದೆ ಎಂದು ದಾಸ್ ಹೇಳಿದರು. ಈ ಕುರಿತು ಸರ್ಕಾರದ ಪ್ರತಿನಿಧಿಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.
ಇದೇ ವೇಳೆ, ದೇಶದಾದ್ಯಂತ ನಡೆದ ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ಗಾಯಗೊಂಡವರಿಗೆ ಕಾನೂನು ಮತ್ತು ವೈದ್ಯಕೀಯ ನೆರವು ಒದಗಿಸುವ ಕೆಲಸದಲ್ಲೂ ಸಿಜೆಪಿ ತೊಡಗಿದೆ.
ಸಂಸ್ಥೆಯ ಪ್ರಮುಖ ಸಭೆಯಲ್ಲಿ ಮಾಧ್ಯಮ ಮತ್ತು ನ್ಯಾಯಾಂಗ ಸೇರಿದಂತೆ ವಿವಿಧ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆ ಕುಸಿತ, ಇಥನಾಲ್ ಮಿಶ್ರಿತ ಇಂಧನ, ಹಾಗೂ ಹೆಚ್ಚುತ್ತಿರುವ ನಿರುದ್ಯೋಗದಂತಹ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.
ಅಭಿಜೀತ್ ದೀಪ್ಕೆ ಅವರು ಜೂನ್ ತಿಂಗಳಲ್ಲಿ ಅಮೆರಿಕದಿಂದ ಭಾರತಕ್ಕೆ ಮರಳಿ, ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದಿರುವುದಾಗಿ ಆರೋಪಿಸಲಾದ ಅಕ್ರಮಗಳ ವಿರುದ್ಧ ಅಭಿಯಾನ ಆರಂಭಿಸಿದ್ದರು. ಈ ಹೋರಾಟದಲ್ಲಿ ದೇಶದ ವಿವಿಧ ಭಾಗಗಳಿಂದ ಯುವಕರು ದೆಹಲಿಗೆ ಸೇರಿ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.
ಈ ಚಳುವಳಿ ದೇಶದ ಜನರೇಷನ್ Z ಯುವಕರಲ್ಲಿ ಹೆಚ್ಚು ಬೆಂಬಲ ಗಳಿಸಿ, ನಂತರ ಹಲವು ನಗರಗಳಿಗೆ ವಿಸ್ತರಿಸಿತು. ಆದರೆ, ಕೆಲವು ಸ್ಥಳಗಳಲ್ಲಿ ಪ್ರತಿಭಟನೆಗಳು ಹಿಂಸಾತ್ಮಕವಾಗಿದ್ದು, ದೆಹಲಿ, ಮುಂಬೈ, ಕೊಲ್ಕತ್ತಾ ಹಾಗೂ ಬಿಹಾರದಲ್ಲಿ ಪೊಲೀಸ್ ಕ್ರಮ ಜರುಗಿದ ಪರಿಣಾಮ ಹಲವು ವಿದ್ಯಾರ್ಥಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಇದನ್ನೂ ನೋಡಿ: ಕಥೆ ಮೊಗಳ್ಳಿ ಗಣೇಶ್ ಅವರನ್ನು ಬೆಳೆಸಿತು; ಮೊಗಳ್ಳಿ ಗಣೇಶ್ ಕೂಡ ಕಥೆಯನ್ನು ಬೆಳೆಸಿದರು – ಪ್ರೊ.ನಟರಾಜ್ ಹುಳಿಯಾರ್
