ಮೆಟ್ರೋ ಬೇಕೋ, ಕಾಂಕ್ರೀಟ್ ರಸ್ತೆ ಬೇಕೋ? ಬೆಂಗಳೂರಿನ ಐಟಿ ಕಾರಿಡಾರ್‌ನಲ್ಲಿ ಧೂಳು, ಟ್ರಾಫಿಕ್‌ ಕಿರಿಕಿರಿ

ಬೆಂಗಳೂರು: ಒಂದೆಡೆ ಮೆಟ್ರೋ ಕಾಮಗಾರಿ, ಮತ್ತೊಂದೆಡೆ ರಸ್ತೆ ಕಾಂಕ್ರೀಟೀಕರಣ—ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿನ ಮೂಲಸೌಕರ್ಯ ಕಾಮಗಾರಿಗಳು ಇದೀಗ ಐಟಿ ಕಂಪನಿಗಳ ಆಕ್ರೋಶಕ್ಕೆ ಕಾರಣವಾಗಿವೆ. ಸುಮಾರು 450 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಮೊದಲು ನಮ್ಮ ಮೆಟ್ರೋದ ಬ್ಲೂ ಲೈನ್ ಕಾಮಗಾರಿ ಪೂರ್ಣಗೊಳಿಸುವಂತೆ ಹೊರವರ್ತುಲ ರಸ್ತೆ ಕಂಪನಿಗಳ ಸಂಘ ಒತ್ತಾಯಿಸಿದೆ.

ಕೇಂದ್ರೀಯ ರೇಷ್ಮೆ ಮಂಡಳಿ ಜಂಕ್ಷನ್‌ನಿಂದ ಕೆ.ಆರ್.ಪುರದವರೆಗೆ ಸುಮಾರು 17.1 ಕಿ.ಮೀ. ಉದ್ದದ ರಸ್ತೆಯಲ್ಲಿ ವೈಟ್‌ಟಾಪಿಂಗ್ ಸೇರಿದಂತೆ ವಿವಿಧ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಇದೇ ಮಾರ್ಗದಲ್ಲಿ ಮೆಟ್ರೋ ಕಾಮಗಾರಿಯೂ ನಡೆಯುತ್ತಿರುವುದರಿಂದ ಎರಡೂ ಕಾಮಗಾರಿಗಳು ಏಕಕಾಲಕ್ಕೆ ನಡೆದರೆ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿ, ಐಟಿ ಕಂಪನಿಗಳ ಕಾರ್ಯಾಚರಣೆಗೂ ತೊಂದರೆಯಾಗಬಹುದು ಎಂಬುದು ಉದ್ಯಮ ವಲಯದ ಆತಂಕ.

ಹೊರವರ್ತುಲ ರಸ್ತೆ ಬೆಂಗಳೂರು ನಗರದ ಪ್ರಮುಖ ಐಟಿ ಕಾರಿಡಾರ್‌ಗಳಲ್ಲಿ ಒಂದಾಗಿದೆ. ಈ ಪ್ರದೇಶದಲ್ಲಿ ಸುಮಾರು 500 ಕಂಪನಿಗಳು ಮತ್ತು 10 ಲಕ್ಷ ಉದ್ಯೋಗಿಗಳು ಇದ್ದಾರೆ ಎಂದು ಹೊರವರ್ತುಲ ರಸ್ತೆ ಕಂಪನಿಗಳ ಸಂಘ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ತಿಂಗಳುಗಟ್ಟಲೆ ರಸ್ತೆ ಕಾಮಗಾರಿ ನಡೆದರೆ ಉದ್ಯೋಗಿಗಳ ಸಂಚಾರ, ಕಚೇರಿ ಕಾರ್ಯಾಚರಣೆ ಮತ್ತು ಕಂಪನಿಗಳ ಉತ್ಪಾದಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈಗಾಗಲೇ ಮೆಟ್ರೋ ಕಾಮಗಾರಿಯಿಂದ ಸಂಚಾರ ವ್ಯವಸ್ಥೆ ಒತ್ತಡದಲ್ಲಿದ್ದು, ಅದರ ಜತೆಗೆ ರಸ್ತೆ ಕಾಮಗಾರಿ ಆರಂಭಿಸುವುದು ಸೂಕ್ತವಲ್ಲ ಎಂದು ಸಂಘ ವಾದಿಸಿದೆ.

ರಸ್ತೆ ಕಾಮಗಾರಿ ನಡೆಯುವ ಅವಧಿಯಲ್ಲಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಕಂಪನಿಗಳಿಗೆ ಸಲಹೆ ನೀಡಿರುವುದಕ್ಕೂ ಉದ್ಯಮ ಸಂಘ ವಿರೋಧ ವ್ಯಕ್ತಪಡಿಸಿದೆ.

ಈಗಾಗಲೇ ಸಾಕಷ್ಟು ಪ್ರಯತ್ನಗಳ ಬಳಿಕ ಉದ್ಯೋಗಿಗಳನ್ನು ಕಚೇರಿಗಳಿಗೆ ಮರಳಿ ಕರೆತರಲಾಗಿದೆ. ಮತ್ತೆ ಸಾವಿರಾರು ಉದ್ಯೋಗಿಗಳಿಗೆ ತಿಂಗಳುಗಟ್ಟಲೆ ಮನೆಯಿಂದ ಕೆಲಸ ಮಾಡುವಂತೆ ಹೇಳುವುದು ಕಾರ್ಯಸಾಧ್ಯವಲ್ಲ ಎಂದು ಸಂಘ ಹೇಳಿದೆ. ರಸ್ತೆ ಕಾಮಗಾರಿಯಿಂದ ಉಂಟಾಗುವ ಸಮಸ್ಯೆಗೆ ಮನೆಯಿಂದ ಕೆಲಸ ಮಾಡುವುದು ಪರಿಹಾರವಲ್ಲ; ಉತ್ತಮ ಮೂಲಸೌಕರ್ಯ ಯೋಜನೆ ಮತ್ತು ಸಂಚಾರ ನಿರ್ವಹಣೆಯೇ ಅಗತ್ಯ ಎಂಬುದು ಸಂಘದ ನಿಲುವು.

ಇದನ್ನೂ ಓದಿ : ಜೈಲಿನಲ್ಲಿ ವಿಐಪಿ, ಸಾಮಾನ್ಯ ಕೈದಿ ಎಂಬ ಭೇದವಿಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಆಗಸ್ಟ್ 4ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಉದ್ಯಮ ಪ್ರತಿನಿಧಿಗಳ ನಡುವೆ ಸಭೆ ನಡೆದಿತ್ತು. ಈ ಸಭೆಯಲ್ಲಿ ರಸ್ತೆ ಕಾಮಗಾರಿಯನ್ನು ಸಮಾಲೋಚನಾ ಪ್ರಕ್ರಿಯೆಯ ಮೂಲಕ ಕೈಗೆತ್ತಿಕೊಳ್ಳಲಾಗುವುದು ಮತ್ತು ಮೆಟ್ರೋ ಕಾಮಗಾರಿಗೆ ಆದ್ಯತೆ ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು ಎಂದು ಸಂಘ ಹೇಳಿದೆ.

ಆದರೆ ಬಳಿಕ ರಸ್ತೆ ಕಾಮಗಾರಿಯನ್ನು ಅಕ್ಟೋಬರ್‌ನಲ್ಲಿ ಆರಂಭಿಸುವುದಾಗಿ ತಿಳಿಸಿ, ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಕಂಪನಿಗಳು ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ಸಲಹೆ ನೀಡಲಾಗಿದೆ. ಇದು ಸಭೆಯಲ್ಲಿ ನಡೆದ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಸಂಘ ಆಕ್ಷೇಪಿಸಿದೆ.

ಹೊರವರ್ತುಲ ರಸ್ತೆ ಸುಧಾರಣೆಗೆ ಸಂಘ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ 450 ಕೋಟಿ ರೂ. ಹೂಡಿಕೆಯ ಯೋಜನೆಯನ್ನು ಸರಿಯಾದ ಕ್ರಮದಲ್ಲಿ ಕೈಗೊಳ್ಳಬೇಕು ಎಂಬುದು ಅದರ ಮುಖ್ಯ ಬೇಡಿಕೆ. ಮೆಟ್ರೋ ಕಾಮಗಾರಿ ಪೂರ್ಣಗೊಳ್ಳುವವರೆಗೆ ರಸ್ತೆ ಕಾಮಗಾರಿಗೆ ಸಂಬಂಧಿಸಿದ ಟೆಂಡರ್, ಗುತ್ತಿಗೆ ಹಾಗೂ ಇತರ ಪ್ರಕ್ರಿಯೆಗಳನ್ನು ತಡೆಹಿಡಿದು, ಸಂಚಾರ ಮತ್ತು ಕಾಮಗಾರಿಗಳ ಸಮಗ್ರ ಯೋಜನೆ ರೂಪಿಸಬೇಕು ಎಂದು ಸಂಘ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮನವಿ ಮಾಡಿದೆ.

ಹೊರವರ್ತುಲ ರಸ್ತೆಯ ಸಂಚಾರ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ನೀಡುವ ನಿರೀಕ್ಷೆಯಲ್ಲಿರುವ ಬ್ಲೂ ಲೈನ್ ಮೆಟ್ರೋ ಯೋಜನೆಯ ವಿಳಂಬವೂ ಪ್ರಯಾಣಿಕರ ಆತಂಕ ಹೆಚ್ಚಿಸಿದೆ. ಹೀಗಾಗಿ ಒಂದೇ ಮಾರ್ಗದಲ್ಲಿ ಮೆಟ್ರೋ ಮತ್ತು ಭಾರಿ ರಸ್ತೆ ಕಾಮಗಾರಿಗಳನ್ನು ಏಕಕಾಲದಲ್ಲಿ ನಡೆಸುವ ಬದಲು, ಮೊದಲು ಮೆಟ್ರೋ, ನಂತರ ರಸ್ತೆ ಅಭಿವೃದ್ಧಿ ಎಂಬ ಕ್ರಮ ಅನುಸರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಈ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಉದ್ಯಮ ಸಂಘದ ಪತ್ರ ತಮ್ಮ ಗಮನಕ್ಕೆ ಇನ್ನೂ ಬಂದಿಲ್ಲ ಎಂದು ಹೇಳಿದ್ದು, ಸಂಘ ಎತ್ತಿರುವ ವಿಚಾರಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಪರಿಶೀಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 450 ಕೋಟಿ ರೂ. ಖರ್ಚು ಮಾಡುವುದು ಸಮಸ್ಯೆಯಲ್ಲ; ಆದರೆ ಒಂದೇ ರಸ್ತೆಯಲ್ಲಿ ಹಲವು ಬೃಹತ್ ಕಾಮಗಾರಿಗಳನ್ನು ಏಕಕಾಲದಲ್ಲಿ ನಡೆಸಿ, ಲಕ್ಷಾಂತರ ಜನರನ್ನು ಸಂಚಾರ ಸಂಕಷ್ಟಕ್ಕೆ ಸಿಲುಕಿಸುವುದೇ ಈಗಿನ ಪ್ರಮುಖ ಪ್ರಶ್ನೆಯಾಗಿದೆ.

ಇದನ್ನೂ ನೋಡಿ : ಮೋದಿಯವರ ಕೆಂಪುಕೋಟೆ ಭಾಷಣ: ಘನತೆಯೂ ಇಲ್ಲ, ವಿಶ್ವಾಸಾರ್ಹತೆಯೂ ಇಲ್ಲ… Janashakthi Media

Donate Janashakthi Media

Leave a Reply

Your email address will not be published. Required fields are marked *