ಬಿಹಾರ |ರಾಜಭವನ ಮೆರವಣಿಗೆಯಲ್ಲಿ ತೇಜಸ್ವಿ ಯಾದವ್ ವಶಕ್ಕೆ, ಪ್ರತಿಭಟನಾಕಾರರ ಮೇಲೆ ಜಲಫಿರಂಗಿ

ಪಾಟ್ನಾ: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ನಿರುದ್ಯೋಗದಂತಹ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಹಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ರಾಷ್ಟ್ರೀಯ ಜನತಾ ದಳದ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜಭವನದತ್ತ ಮೆರವಣಿಗೆ ನಡೆಸುತ್ತಿದ್ದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಸಂಸದೆ ಮಿಸಾ ಭಾರತಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿ ಬಳಸಲಾಗಿದೆ.

ಬಿಹಾರದಲ್ಲಿ ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು, ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕ್ರಮ ಸೇರಿದಂತೆ ಹಲವು ವಿಚಾರಗಳನ್ನು ವಿರೋಧಿಸಿ ತೇಜಸ್ವಿ ಯಾದವ್ ಆಗಸ್ಟ್ 19ರಂದು ರಾಜಭವನ ಮೆರವಣಿಗೆಗೆ ಕರೆ ನೀಡಿದ್ದರು. ಪರೀಕ್ಷಾ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಅವರು ಆರೋಪಿಸಿದ್ದರು.

ಇದರ ಭಾಗವಾಗಿ ಪಾಟ್ನಾದಲ್ಲಿ ಆರ್‌ಜೆಡಿ ನಾಯಕರು ಹಾಗೂ ಕಾರ್ಯಕರ್ತರು ರಾಜಭವನದತ್ತ ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಜಲಫಿರಂಗಿ ಪ್ರಯೋಗಿಸಲಾಯಿತು.

ಮೆರವಣಿಗೆಯನ್ನು ಮುಂದುವರಿಸಲು ಯತ್ನಿಸಿದ ತೇಜಸ್ವಿ ಯಾದವ್, ಮಿಸಾ ಭಾರತಿ ಸೇರಿದಂತೆ ಹಲವು ಆರ್‌ಜೆಡಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ವಶಕ್ಕೆ ಪಡೆದ ನಂತರ ತೇಜಸ್ವಿ ಯಾದವ್, ತಮ್ಮ ವಿರುದ್ಧದ ಪೊಲೀಸ್ ಕ್ರಮವನ್ನು ಖಂಡಿಸಿ, ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಸಮ್ರಾಟ್ ಚೌಧರಿ ಈ ಕ್ರಮಕ್ಕೆ ಹೊಣೆ ಹೊತ್ತುಕೊಳ್ಳಬೇಕು.  ಸರ್ಕಾರದ ವಿರುದ್ಧ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ತಮ್ಮನ್ನು ಜೈಲಿಗೆ ಕಳುಹಿಸುವುದಕ್ಕೆ ಯಾವುದೇ ಭಯವಿಲ್ಲ ಎಂದಿರುವ ಅವರು, ಬಿಹಾರ ಸರ್ಕಾರ ಕೊನೆಗೂ ಜನರ ಬೇಡಿಕೆಗಳಿಗೆ ಸ್ಪಂದಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ತಮಿಳುನಾಡು| ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಬಾರದು: ಟಿವಿಕೆ ಸರ್ಕಾರದ ಆದೇಶ; ಕೆಲವೇ ನಿಮಿಷಗಳಲ್ಲಿ ವಾಪಸ್

ಬಿಹಾರದಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳು ರಾಜಕೀಯ ಸಂಘರ್ಷದ ಪ್ರಮುಖ ಕೇಂದ್ರವಾಗಿವೆ. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವೇಳೆ ಪೊಲೀಸರು ಕ್ರಮ ಕೈಗೊಂಡಿರುವುದನ್ನು ತೇಜಸ್ವಿ ಯಾದವ್ ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ.

ಜುಲೈನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಸಂದರ್ಭದಲ್ಲಿ ಬಂಧಿಸಲಾದ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕು ಮತ್ತು ಅವರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ತೇಜಸ್ವಿ ಯಾದವ್ ಈ ಹಿಂದೆಯೇ ಒತ್ತಾಯಿಸಿದ್ದರು. ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು.

ತೇಜಸ್ವಿ ಯಾದವ್ ನೇತೃತ್ವದಲ್ಲಿ ನಡೆದ ರಾಜಭವನ ಮೆರವಣಿಗೆ ಇದೀಗ ಬಿಹಾರದ ರಾಜಕೀಯ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ವಿದ್ಯಾರ್ಥಿಗಳ ಸಮಸ್ಯೆ, ಪರೀಕ್ಷಾ ವ್ಯವಸ್ಥೆ ಮತ್ತು ಪೊಲೀಸ್ ಕ್ರಮಗಳನ್ನು ಮುಂದಿಟ್ಟುಕೊಂಡು ಆರ್‌ಜೆಡಿ ಸರ್ಕಾರದ ವಿರುದ್ಧ ಆಕ್ರಮಣಕಾರಿ ಹೋರಾಟಕ್ಕೆ ಮುಂದಾಗಿದ್ದರೆ, ಪ್ರತಿಭಟನೆ ನಿಯಂತ್ರಿಸಲು ಸರ್ಕಾರ ಪೊಲೀಸ್ ಬಲ ಬಳಸಿರುವುದು ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ಆರೋಪದಿಂದ ಆರಂಭವಾದ ಹೋರಾಟ ಇದೀಗ ಸರ್ಕಾರ–ವಿರೋಧ ಪಕ್ಷದ ನೇರ ಸಂಘರ್ಷವಾಗಿ ತಿರುಗಿದ್ದು, ಬಿಹಾರದ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಈ ವಿಚಾರ ಮತ್ತಷ್ಟು ಕಾವೇರುವ ಸಾಧ್ಯತೆ ಇದೆ.

ಇದನ್ನೂ ನೋಡಿ : ಮೋದಿಯವರ ಕೆಂಪುಕೋಟೆ ಭಾಷಣ: ಘನತೆಯೂ ಇಲ್ಲ, ವಿಶ್ವಾಸಾರ್ಹತೆಯೂ ಇಲ್ಲ… Janashakthi Media

Donate Janashakthi Media

Leave a Reply

Your email address will not be published. Required fields are marked *