ಗಣೇಶ ಹಬ್ಬಕ್ಕೆ ಪಿಓಪಿ ಮೂರ್ತಿಗಳಿಗೆ ನಿಷೇಧ: ಮಣ್ಣಿನ ಗಣಪತಿಗೆ ಪ್ರೋತ್ಸಾಹ

ಜಲಮೂಲಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ: ಸಚಿವ ಖಂಡ್ರೆ ಸೂಚನೆ
ಬೆಂಗಳೂರು: ಸೆಪ್ಟೆಂಬರ್ 14ರಂದು ರಾಜ್ಯಾದ್ಯಂತ ಆಚರಿಸಲ್ಪಡುವ ಗಣೇಶ ಹಬ್ಬದ ವೇಳೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಮತ್ತು ರಾಸಾಯನಿಕ ಬಣ್ಣ ಬಳಸಿ ತಯಾರಿಸಿದ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡಬಾರದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.

ಈ ಕುರಿತು ಇಲಾಖೆಯ ಕಾರ್ಯದರ್ಶಿಗೆ ಲಿಖಿತ ನಿರ್ದೇಶನ ನೀಡಿರುವ ಸಚಿವರು, ಪರಿಸರ ಸಂರಕ್ಷಣೆ ದೃಷ್ಟಿಯಿಂದ ಮಣ್ಣಿನಿಂದ ತಯಾರಿಸಿದ, ಬಣ್ಣ ರಹಿತ ಅಥವಾ ಪರಿಸರ ಸ್ನೇಹಿ ಬಣ್ಣ ಬಳಕೆ ಮಾಡಿದ ಗಣೇಶ ಹಾಗೂ ಗೌರಿ ಮೂರ್ತಿಗಳ ಪೂಜೆ ಮತ್ತು ವಿಸರ್ಜನೆಗೆ ಮಾತ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅವಕಾಶ ನೀಡುವಂತೆ ತಿಳಿಸಿದ್ದಾರೆ.

ಹಬ್ಬದ ಸಂದರ್ಭದಲ್ಲಿ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ, ಪಿಓಪಿ ಮೂರ್ತಿಗಳ ತಯಾರಿಕೆ, ಸಂಗ್ರಹ, ಸಾಗಾಟ ಮತ್ತು ಮಾರಾಟಕ್ಕೆ ಈಗಿನಿಂದಲೇ ಕಡಿವಾಣ ಹಾಕುವಂತೆ ಸೂಚಿಸಲಾಗಿದೆ. ಈ ಕಾರ್ಯಾಚರಣೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರ ಪಡೆಯುವಂತೆ ಆದೇಶಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ SIR ಪ್ರಕ್ರಿಯೆತಂದೊಡ್ಡಿರುವ ಅವಾಂತರ; SIR ವಿರೋಧಿ ಜಾತ್ಯತೀತ ಪಕ್ಷಗಳ ತುರ್ತು ಆಗ್ರಹಗಳು

ಸಚಿವರು ತಮ್ಮ ಸೂಚನೆಯಲ್ಲಿ ಪಿಓಪಿ ಮೂರ್ತಿಗಳಲ್ಲಿ ಕ್ಯಾಲ್ಷಿಯಂ ಸಲ್ಫೇಟ್, ಜಿಪ್ಸಮ್, ಮ್ಯಾಗ್ನೀಷಿಯಂ ಸೇರಿದಂತೆ ಅಪಾಯಕಾರಿ ಅಂಶಗಳಿರುವುದನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ಪಾದರಸ, ಕ್ಯಾಡ್ಮಿಯಂ, ಸೀಸ ಮುಂತಾದ ಭಾರ ಲೋಹಗಳನ್ನು ಹೊಂದಿರುವ ರಾಸಾಯನಿಕ ಬಣ್ಣಗಳು ಪರಿಸರಕ್ಕೆ ಗಂಭೀರ ಹಾನಿ ಉಂಟುಮಾಡುತ್ತವೆ ಎಂದು ತಿಳಿಸಿದ್ದಾರೆ.

ಈ ಮೂರ್ತಿಗಳನ್ನು ಕೆರೆ, ನದಿ, ಬಾವಿ ಸೇರಿದಂತೆ ಜಲಮೂಲಗಳಲ್ಲಿ ವಿಸರ್ಜಿಸಿದಾಗ ಭಾರ ಲೋಹಗಳು ನೀರಿಗೆ ಕರಗಿ ಮಾನವ ಮತ್ತು ಪಶುಗಳ ಆರೋಗ್ಯಕ್ಕೆ ಹಾನಿಕಾರಕವಾಗುವುದಲ್ಲದೆ, ಜಲಚರಗಳ ಸಾವಿಗೂ ಕಾರಣವಾಗುತ್ತವೆ ಎಂದು ಎಚ್ಚರಿಸಿದ್ದಾರೆ.

ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ, 1974ರ ಕಲಂ 33(ಎ) ಪ್ರಕಾರ ರಾಜ್ಯದ ಎಲ್ಲಾ ಜಲಮೂಲಗಳಲ್ಲಿ ಪಿಓಪಿ ಮೂರ್ತಿಗಳ ವಿಸರ್ಜನೆ ಈಗಾಗಲೇ ನಿಷೇಧಿಸಲಾಗಿದೆ. ಅಲ್ಲದೆ, 2023ರ ಸೆಪ್ಟೆಂಬರ್ 15ರಂದು ಹೊರಡಿಸಿದ ಸರ್ಕಾರಿ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಉನ್ನತ ನ್ಯಾಯಾಲಯವೂ ನಿರ್ದೇಶನ ನೀಡಿದೆ.

ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಲಮೂಲಗಳ ಹಾಗೂ ಪರಿಸರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಇದನ್ನೂ ನೋಡಿ: ಜಂತರ್ ಮಂತರ್ ಪೋಲೀಸ್ ಅತಿರೇಕ-ಕಾನೂನು ಪಾಲನೆ- ಉಲ್ಲಂಘನೆ!!!! Janashakthi Media

Donate Janashakthi Media

Leave a Reply

Your email address will not be published. Required fields are marked *