ಮಹೇಶ್ ತಿಮರೋಡಿ ಗಡಿಪಾರು ಕ್ರಮದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ವಜಾ

ಬೆಂಗಳೂರು: ಬೆಳ್ತಂಗಡಿ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹೋರಾಟ ನಡೆಸಿದ್ದ ಮಹೇಶ್ ತಿಮರೋಡಿ ರನ್ನು ಗಡಿಪಾರು ಮಾಡಿದ ಕ್ರಮದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ.

ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಪೀಠ, ಏಕಸದಸ್ಯ ಪೀಠ ನೀಡಿದ್ದ ಹಿಂದಿನ ಆದೇಶದಲ್ಲಿ ತಲೆಹಾಕುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. “ಏಕಸದಸ್ಯ ಪೀಠದ ಆದೇಶ ಸಮರ್ಪಕವಾಗಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವ ಅವಶ್ಯಕತೆ ಇಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಈ ವೇಳೆ ಸರ್ಕಾರದ ಪರ ವಕೀಲರು, ಏಕಸದಸ್ಯ ಪೀಠದ ನಿರ್ದೇಶನದಂತೆ ಪುತ್ತೂರು ಉಪವಿಭಾಗಾಧಿಕಾರಿ ಈಗಾಗಲೇ ಪ್ರಕರಣವನ್ನು ಮರುಪರಿಶೀಲಿಸಿ ತಿಮರೋಡಿ ಅವರನ್ನು ಮೂರನೇ ಬಾರಿ ಗಡಿಪಾರು ಮಾಡುವಂತೆ ಹೊಸ ಆದೇಶ ಹೊರಡಿಸಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಇದನ್ನೂ ಓದಿ: ಎಸ್‌ಎಫ್‌ಐ 16ನೇ ಜಿಲ್ಲಾ ಸಮ್ಮೇಳನ ಮಾ.30ಕ್ಕೆ: ಸಾರ್ವಜನಿಕ ಶಿಕ್ಷಣ ಬಲಪಡಿಸಲು ಒತ್ತಾಯ

ಪ್ರಕರಣದ ಹಿನ್ನೆಲೆ ನೋಡಿದರೆ, ಬೆಳ್ತಂಗಡಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಹೋರಾಟದ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಭಂಗಕ್ಕೆ ಕಾರಣರಾದರೆಂಬ ಆರೋಪದ ಮೇರೆಗೆ ಮಹೇಶ್ ತಿಮರೋಡಿ ಅವರನ್ನು 2025ರ ಸೆಪ್ಟೆಂಬರ್ 18ರಂದು ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಗೆ ಒಂಭತ್ತು ತಿಂಗಳ ಕಾಲ ಗಡಿಪಾರು ಮಾಡುವಂತೆ ಆದೇಶಿಸಲಾಗಿತ್ತು.

ಈ ಕ್ರಮವನ್ನು ಪ್ರಶ್ನಿಸಿ ತಿಮರೋಡಿ ಹೈಕೋರ್ಟ್ ಮೊರೆ ಹೋಗಿದ್ದರು. 2025ರ ನವೆಂಬರ್ 17ರಂದು ಅರ್ಜಿಯನ್ನು ವಿಚಾರಿಸಿದ ಏಕಸದಸ್ಯ ಪೀಠ, ಸರಿಯಾದ ವಿಧಾನವನ್ನು ಅನುಸರಿಸಿ 15 ದಿನಗಳೊಳಗೆ ಹೊಸ ಆದೇಶ ನೀಡುವಂತೆ ಉಪವಿಭಾಗಾಧಿಕಾರಿಗೆ ಸೂಚಿಸಿತ್ತು.

ಅದರಂತೆ ಮರುಪರಿಶೀಲನೆ ನಡೆಸಿದ ಅಧಿಕಾರಿಗಳು 2025ರ ಡಿಸೆಂಬರ್ 16ರಂದು ಮತ್ತೆ ಗಡಿಪಾರು ಆದೇಶ ಹೊರಡಿಸಿದ್ದರು. ಇದನ್ನೂ ಪ್ರಶ್ನಿಸಿ ತಿಮರೋಡಿ ಮತ್ತೊಮ್ಮೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ನಂತರ, 2026ರ ಜನವರಿ 31ರಂದು ಏಕಸದಸ್ಯ ಪೀಠ ಅರ್ಜಿದಾರರ ಆಕ್ಷೇಪಣೆಗಳನ್ನು ಪರಿಗಣಿಸಿ, ಮೂರು ವಾರಗಳಲ್ಲಿ ಮರುಪರಿಶೀಲನೆ ನಡೆಸಿ ಹೊಸ ಆದೇಶ ನೀಡುವಂತೆ ಮತ್ತೆ ನಿರ್ದೇಶಿಸಿತ್ತು. ಈ ಆದೇಶವನ್ನೇ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಮೇಲ್ಮನವಿಯಲ್ಲಿ, ಪ್ರಕರಣವನ್ನು ಪುನಃ ಉಪವಿಭಾಗಾಧಿಕಾರಿಗೆ ಹಿಂತಿರುಗಿಸುವ ಅಗತ್ಯವಿರಲಿಲ್ಲ ಹಾಗೂ ಗಡಿಪಾರು ಕ್ರಮದಿಂದ ಸಂವಿಧಾನದ ವಿಧಿ 21 ಅಡಿಯಲ್ಲಿ ದೊರೆಯುವ ವೈಯಕ್ತಿಕ ಸ್ವಾತಂತ್ರ್ಯ ಹಕ್ಕು ಹರಣವಾಗುತ್ತಿದೆ ಎಂದು ತಿಮರೋಡಿ ಪರ ವಾದಿಸಲಾಯಿತು. ಆದಾಗ್ಯೂ, ಈ ವಾದಗಳನ್ನು ಪೀಠ ಸಮರ್ಥಿಸದೇ ಮೇಲ್ಮನವಿಯನ್ನು ತಿರಸ್ಕರಿಸಿದೆ.

Donate Janashakthi Media

Leave a Reply

Your email address will not be published. Required fields are marked *