ಬಿಜೆಪಿ ವಿರೋಧಿ ಒಗ್ಗಟ್ಟನ್ನು ಕಾಂಗ್ರೆಸ್‌ ಪಕ್ಷ ದುರ್ಬಲಗೊಳಿಸುತ್ತಿದೆ-ಎಂ ಎ ಬೇಬಿ

ವಿಪಕ್ಷಗಳ ಬಗ್ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಹೊಂದಿರುವ ಮನೋಭಾವ ಆರ್‌ಎಸ್‌ಎಸ್- ಬಿಜೆಪಿ ಕೂಟದ ವಿರುದ್ಧ ಒಂದು ಸಂಯುಕ್ತ ಜಾತ್ಯತೀತ ರಂಗವನ್ನು ನಿರ್ಮಿಸುವ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿಯವರು ಟೀಕಿಸಿದ್ದಾರೆ. ಅವರು  ನವದೆಹಲಿಯಲ್ಲಿ ಮೇ ೨೨ರಿಂದ ೨೪ ರ ವರೆಗೆ ನಡೆದ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆಯ ನಂತರ ಪತ್ರಿಕಾಗೋ಼ಷ್ಠಿಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ರಾಜಕೀಯ ಅಭಿಯಾನಗಳಿಗೆ ಕರೆ ಪಕ್ಷದ ಕೇಂದ್ರ ಸಮಿತಿ ಕರೆ ನೀಡಿದೆ ಎಂದು ಅವರು ಹೇಳಿದರು.

 ಬಲಪಂಥೀಯ ಶಕ್ತಿಗಳ ಬೆಳವಣಿಗೆಯಿಂದಾಗಿ ಎಲ್ಲಾ ಎಡ, ಪ್ರಗತಿಪರ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಶಕ್ತಿಗಳ ಒಗ್ಗಟ್ಟು ಇಂದಿನ ಅಗತ್ಯವಾಗಿದೆ. ಆದರೆ ಇತರ ವಿರೋಧ ಪಕ್ಷಗಳ ಬಗ್ಗೆ ಕಾಂಗ್ರೆಸ್‌ನ ವರ್ತನೆ ಆರ್‌ಎಸ್‌ಎಸ್-ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟದಲ್ಲಿ ಜಾತ್ಯತೀತ ಶಕ್ತಿಗಳ ಒಗ್ಗಟ್ಟನ್ನು ನಿರ್ಮಿಸುವಲ್ಲಿ ಸಹಾಯಕವಾಗಿಲ್ಲ.

ಕೇರಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಯೊಂದಿಗೆ ಸಿಪಿಐ(ಎಂ) ವ್ಯವಹಾರ ನಡೆಸಿದ್ದಾರೆ ಎಂದು ಮಾಡಿದ ಆರೋಪಗಳನ್ನು ಪಕ್ಷದ ಕೇಂದ್ರ ಸಮಿತಿ  ಬಲವಾಗಿ ಖಂಡಿಸಿತು ಎಂದು ಬೇಬಿಯವರು ಹೇಳಿದರು. ಇವು “ದುರುದ್ದೇಶಪೂರಿತ ಹೇಳಿಕೆಗಳು”, ಕೋಮುವಾದದ ವಿರುದ್ಧ ಬದ್ಧ ಹೋರಾಟಗಾರ ಪಕ್ಷ ಮತ್ತು ʼಇಂಡಿಯʼ ಬಣದ ಒಂದು ಭಾಗದ ವಿರುದ್ಧ ಇಂತಹ ಆರೋಪ ಮಾಡಲಾಗಿದೆ ಎಂದು ಕೇಂದ್ರ ಸಮಿತಿ ಸಭೆಯ ನಂತರ ಪ್ರಕಟಿಸಿರುವ ಹೇಳಿಕೆ ಆಕ್ರೋಶ ವ್ಯಕ್ತಪಡಿಸಿದೆ.

ಸಿಪಿಐ(ಎಂ) ಕೇಂದ್ರ ಸಮಿತಿ ಹಲವಾರು ರಾಜ್ಯಗಳಲ್ಲಿನ ಹಿನ್ನಡೆಗಳು ಆಗಿವೆ ಎಂದು ಒಪ್ಪಿಕೊಳ್ಳುತ್ತ ,  ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಅಸ್ಸಾಂನಲ್ಲಿ ವಿವರವಾದ ವಿಮರ್ಶೆಗಳನ್ನು ನಡೆಸಲಾಗುವುದು ಎಂದು ಬೇಬಿಯವರು ಹೇಳಿದರು. ಕೇರಳದಲ್ಲಿ, ರಾಜ್ಯ ಸಮಿತಿಯು ಈಗಾಗಲೇ ಪಕ್ಷದ ಎಲ್ಲಾ ಹಂತಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ, ಜೂನ್ 5 ರಿಂದ 8 ರವರೆಗೆ ತಿರುವನಂತಪುರದಲ್ಲಿ ಪೊಲಿಟ್ ಬ್ಯೂರೋ ಸದಸ್ಯರ ಸಮ್ಮುಖದಲ್ಲಿ ಚರ್ಚೆಗಳು ನಡೆಯಲಿವೆ.

ಇದನ್ನೂ ಓದಿ : ದೆಹಲಿ ಕರೆ ಹಿನ್ನೆಲೆ: ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್‌ರಚನೆ ಚರ್ಚೆಗೆ ವೇಗ

“ಇತ್ತೀಚಿನ ಚುನಾವಣಾ ಫಲಿತಾಂಶಗಳ ಹಿಂದಿನ ರಾಜಕೀಯ, ಸಾಂಸ್ಥಿಕ ಮತ್ತು ಸೈದ್ಧಾಂತಿಕ ಕಾರಣಗಳ ಕುರಿತು ಕೇಂದ್ರ ಸಮಿತಿಯು ಪ್ರಾಥಮಿಕ ಚರ್ಚೆ ನಡೆಸಿತು. ಗುರುತಿಸಲಾದ ದೌರ್ಬಲ್ಯಗಳ ಸರಿಪಡಿಕೆಯನ್ನು ಮೇಲಿನಿಂದ ಕೆಳಕ್ಕೆ ತಕ್ಷಣವೇ ಕೈಗೊಳ್ಳಲಾಗುವುದು” ಎಂದು ಕೇಂದ್ರ ಸಮಿತಿಯ ಹೇಳಿಕೆಯನ್ನು ಉದ್ಧರಿಸುತ್ತ ಬೇಬಿಯವರು ಹೇಳಿದರು.

ದೇಶದಲ್ಲಿನ ಆರ್ಥಿಕ ಪರಿಸ್ತಿತಿಯ ಬಗ್ಗೆ ಕೇಂದ್ರ ಸಮಿತಿ ಚರ್ಚೆ ನಡೆಸಿತು. ಸರ್ಕಾರದ ಪ್ರಚಾರದ ಹೊರತಾಗಿಯೂ, ಭಾರತೀಯ ಅರ್ಥವ್ಯವಸ್ಥೆಯು ಬಿಕ್ಕಟ್ಟಿನಲ್ಲಿದೆ, ಇದನ್ನು ಪ್ರಧಾನ ಮಂತ್ರಿಗಳೇ ಮಿತವ್ಯಯದ ಕ್ರಮಗಳನ್ನು ಜಾರಿಗೆ ತರುವಂತೆ ಜನರಿಗೆ ಮನವಿ ಮಾಡಿದಾಗ ಸ್ವತಃ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ, ನಿರುದ್ಯೋಗ ಹೆಚ್ಚುತ್ತಿದೆ, ಎಲ್ಲ ವಲಯಗಳಲ್ಲಿಯೂ ಉದ್ಯೋಗ ನಷ್ಟಗಳು ಹೆಚ್ಚುತ್ತಿವೆ. ಅನೇಕ ಮಧ್ಯಮ ಮತ್ತು ಸಣ್ಣ ಗಾತ್ರದ ಉದ್ದಿಮೆಗಳು ಅಪಾರ ಸಂಕಷ್ಟದಲ್ಲಿವೆ. ಹೆಚ್ಚುತ್ತಿರುವ ವೆಚ್ಚಗಳು ಮತ್ತು ರಸಗೊಬ್ಬರಗಳ ಕೊರತೆಯಿಂದಾಗಿ ಕೃಷಿಯೂ ಸಹ ಬಿಕ್ಕಟ್ಟಿನತ್ತ ದಿಟ್ಟಿಸುತ್ತಿದೆ ಎಂದು ಕೇಂ<ದ್ರ ಸಮಿತಿ ಗಮನಿಸಿರುವುದಾಗಿ ಬೇಬಿಯವರು ಹೇಳಿದರು.

ಭಾರತವು ವಿಶ್ವದ ಅತ್ಯಂತ ಅಸಮಾನ ದೇಶವಾಗಿ ಮುಂದುವರೆದಿದ್ದು, ಅತಿ ಹೆಚ್ಚು ಆದಾಯ ಮತ್ತು ಸಂಪತ್ತಿನ ಅಸಮಾನತೆಯ ದರಗಳನ್ನು ಹೊಂದಿದೆ. ಭಾರೀ ವೇತನ ವ್ಯತ್ಯಾಸಗಳು ಮತ್ತು ಅಸಮಾನ ಮತ್ತು ಸಂಬಳವಿಲ್ಲದ ಆರೈಕೆ ಕೆಲಸಗಳಿಂದಾಗಿ ಲಿಂಗ ಅಸಮಾನತೆಯ ದರಗಳು ಸಹ ಅತ್ಯಧಿಕವಾಗಿವೆ. ರೂಪಾಯಿ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಮತ್ತು ವಿದೇಶಿ ಮೀಸಲು ವೇಗವಾಗಿ ಕ್ಷೀಣಿಸುತ್ತಿದೆ.

ಯುದ್ಧದ ನೆಪದಲ್ಲಿ, ಸರ್ಕಾರವು ಇಂಧನದ ಬೆಲೆಗಳನ್ನು, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು, ವಿಶೇಷವಾಗಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳನ್ನು ಹೆಚ್ಚಿಸಿದೆ ಮತ್ತು ಬಳಕೆಯ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಿದೆ. ಈ ಎಲ್ಲಾ ಕ್ರಮಗಳು ಆಹಾರ ಮತ್ತು ಇತರ ಅಗತ್ಯ ಸರಕುಗಳ ಬೆಲೆಗಳಲ್ಲಿ ತೀವ್ರ ಏರಿಕೆಗಳನ್ನು ಉಂಟು ಮಾಡಿವೆ. ಇವು ಮಧ್ಯಮ ಮತ್ತು ಸಣ್ಣ ಗಾತ್ರದ ಉದ್ದಿಮೆಗಳ ಮೇಲೆ  ಸಹ ತೀವ್ರವಾಗಿ ಪರಿಣಾಮ ಬೀರಿವೆ ಮತ್ತು ಅನೇಕ ಸಣ್ಣ ಸಂಸ್ಥೆಗಳು ಬಾಗಿಲು ಮುಚ್ಚಿವೆ.

 ಫಲಿತಾಂಶಗಳ ಘೋಷಣೆಯ ನಂತರ ನಾಲ್ಕು ದಿನಗಳೊಳಗೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಮಿಕ ಸಂಹಿತೆಗಳನ್ನು ಕಾರ್ಯಗತಗೊಳಿಸಿದೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಂಚಕ ಕಾರ್ಯವಿಧಾನವನ್ನು ಬಹಿರಂಗಪಡಿಸುತ್ತದೆ

ಕೇಂದ್ರೀಯ ನಿಯಮಗಳ ಪ್ರಕಾರ ಅವುಗಳನ್ನು ಕಾರ್ಯಗತಗೊಳಿಸುವ ಬದಲು, ರಾಜ್ಯ ಸರ್ಕಾರಗಳು ಕಾರ್ಮಿಕ ಸಂಹಿತೆಗಳಿಗೆ ಸರಿಪಡಿಕೆ ತಿದ್ದುಪಡಿಗಳನ್ನು ತರಲು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಸಂವಿಧಾನದ ಅಡಿಯಲ್ಲಿ ತಮ್ಮ ಶಾಸಕಾಂಗ ಅಧಿಕಾರಗಳನ್ನು ಚಲಾಯಿಸಬೇಕೆಂದು ಒತ್ತಾಯಿಸುವ ಒಂದು ಅಭಿಯಾನಕ್ಕೆ ಪಕ್ಷ ನೇತೃತ್ವ ನೀಡುತ್ತದೆ. ರಾಜ್ಯ ಸರ್ಕಾರಗಳು ಕೇರಳಂನಲ್ಲಿ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು  ಕಾನೂನು ವಿಧಾನಗಳನ್ನೂ ಸೂಚಿಸುವ ಹಿಂದಿನ ಎಲ್‌ಡಿಎಫ್‌ ಸರಕಾರಕ್ಕೆ ವರದಿ ಸಲ್ಲಿಸಿದ ನ್ಯಾಯಮೂರ್ತಿ ಗೋಪಾಲ ಗೌಡರ ಶಿಫಾರಸುಗಳನ್ನು ಪರಿಗಣಿಸಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಅಭಿಪ್ರಾಯ ಪಟ್ಟಿದೆ.

ಅದೇ ರೀತಿಯಲ್ಲಿ ಗ್ರಾಮೀಣ ಉದ್ಯೋಗ ಖಾತರಿ ನೀಡಿರುವ ಮನರೆಗ(MGNREGA) ವನ್ನು ನಿಲ್ಲಿಸುವಂತೆ ಸೂಚಿಸಿರುವ ಕೇಂದ್ರ ಸರ್ಕಾರವು ಅದರ ಬದಲಿಗೆ ತಂದಿರುವ ವಿಬಿ ಜಿಗ್ರಾಮ್‌ಜಿ (VBGRAMG) ಕಾಯ್ದೆಯ ಕರಡು ನಿಯಮಗಳು ಮತ್ತು. ಹೊಸ ಕಾಯ್ದೆಯ ವಿರುದ್ಧ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳನ್ನು ಬೆಂಬಲಿಸುತ್ತ ತಮ್ಮ ಪಕ್ಷವು  VBGRAMG ಯನ್ನು ರದ್ದುಗೊಳಿಸಿ ಅದರ ಬದಲು  MGNREGA ವನ್ನು ಖಾತರಿಪಡಿಸಿದ ಕೆಲಸ ಮತ್ತು ಕೂಲಿಹೆಚ್ಚಳದ ಮೂಲಕ ಬಲಪಡಿಸಬೇಕು ಎಂಬ  ಬೇಡಿಕೆಯನ್ನು ಪುನರುಚ್ಚರಿಸಿದೆ ಎಂದು ಎಂ ಎ ಬೇಬಿಯವರು ಹೇಳಿದರು.

ತಮ್ಮ ಪಕ್ಷವು  ಮಹಿಳಾ ಮೀಸಲಾತಿ ಅನುಷ್ಠಾನಕ್ಕಾಗಿ , ಮತದಾನದ ಹಕ್ಕಿಗಾಗಿ, ಕಾರ್ಮಿಕ ಸಂಹಿತೆಗಳ ಅಧಿಸೂಚನೆಯ ವಿರುದ್ಧ  ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಅಭಿಯಾನಗಳನ್ನು ನಡೆಸಲು ನಿರ್ಧರಿಸಿರುವುದಾಗಿ ಎಂ ಎ  ಬೇಬಿಯವರು ಹೇಳಿದರು.

ಇದನ್ನೂ ಓದಿ : ಹಾಸ್ಟೆಲ್‌ ನೌಕರರ ಕಣ್ಣೀರ ಕಥೆ | ಬೆಂಗಳೂರಿನಲ್ಲಿ ಸಾವಿರಾರು ಜನರ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *