ಟ್ರಂಪ್‌ನ 500% ತೆರಿಗೆ ಹೇರಿಕೆಯ ಬಗ್ಗೆ ಮೋದಿ ಮೌನ ವಿರೋಧಿಸಿ ಎಡಪಕ್ಷಗಳ ಪ್ರತಿಭಟನೆ

ತಮಿಳುನಾಡು: ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದಕ್ಕಾಗಿ ಭಾರತಕ್ಕೆ ಅಮೆರಿಕ 500 ಶೇಕಡಾ ತೆರಿಗೆ ವಿಧಿಸುವ ಪ್ರಸ್ತಾವನೆ ಖಂಡಿಸಿ ಹಾಗೂ ಅಮೆರಿಕದ ಒತ್ತಡದ ಎದುರು ಕೇಂದ್ರ ಸರ್ಕಾರ ಮೌನ ವಹಿಸಿರುವುದನ್ನು ವಿರೋಧಿಸಿ ಜನವರಿ 22ರಂದು ತಮಿಳುನಾಡಿನ 10 ನಗರಗಳಲ್ಲಿ ಎಡಪಕ್ಷಗಳು ಪ್ರತಿಭಟನೆ ನಡೆಸಿವೆ.

ಅಮೆರಿಕದ ಏಕಪಕ್ಷೀಯ ಹಾಗೂ ಸ್ವೈರಾಚಾರ ನಿಲುವು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳ ಪರಿಣಾಮವಾಗಿ ಆಟೋಮೊಬೈಲ್, ವಸ್ತ್ರ, ಸ್ಪೇರ್ ಪಾರ್ಟ್ಸ್, ಚರ್ಮ ಉದ್ಯಮ, ಮೋಟಾರ್ ಪಂಪ್‌ಗಳು, ತೂತುಕೂಡಿ ಬಂದರು ಮೂಲಕ ನಡೆಯುವ ಆಮದು–ರಫ್ತು, ರೆಡಿಮೇಡ್ ಗಾರ್ಮೆಂಟ್‌ಗಳು ಸೇರಿದಂತೆ ಹಲವು ಸಾಂಪ್ರದಾಯಿಕ ಕೈಗಾರಿಕೆಗಳು ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ಭಾರೀ ಸಂಕಷ್ಟಕ್ಕೆ ಸಿಲುಕಿವೆ. ಇದರಿಂದ ಲಕ್ಷಾಂತರ ಕಾರ್ಮಿಕರ ಜೀವನೋಪಾಯಕ್ಕೆ ಗಂಭೀರ ಧಕ್ಕೆಯಾಗುತ್ತಿದೆ.

ಚೆನ್ನೈ, ಕಾಂಚೀಪುರಂ, ಕೊಯಮತ್ತೂರು, ತಿರುಪ್ಪೂರು, ಈರೋಡ್, ಸೇಲಂ, ಕಾರೂರು, ವಿರುದುನಗರ ಹಾಗೂ ತೂತುಕೂಡಿ ಸೇರಿದಂತೆ ಪ್ರಮುಖ ನಗರಗಳು, ಟ್ರಂಪ್ ಆಡಳಿತವು 2025ರ ಆಗಸ್ಟ್‌ನಲ್ಲಿ ವಿಧಿಸಿದ್ದ 50 ಶೇಕಡಾ ಸುಂಕದ ಪರಿಣಾಮವನ್ನು ಈಗಾಗಲೇ ಅನುಭವಿಸುತ್ತಿವೆ. ಈ ತೆರಿಗೆಗಳಿಂದ ಉದ್ಯೋಗ ನಷ್ಟ ಉಂಟಾಗಿದ್ದು, ರಾಜ್ಯ ಹಾಗೂ ರಾಷ್ಟ್ರದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ.

ಇದನ್ನೂ ಓದಿ: ವಿಧಾನಂಡಲ ಜಂಟಿ ಅಧಿವೇಶನ: ಸರ್ಕಾರ ಸಿದ್ದಪಡಿಸಿದ ಭಾಷಣದಲ್ಲಿ ರಾಜ್ಯಪಾಲರ ಆಕ್ಷೇಪ ಯಾವುದಕ್ಕೆ?

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್–ಲೆನಿನಿಸ್ಟ್) ಲಿಬರೇಷನ್ ಪಕ್ಷಗಳು, ಕೈಗಾರಿಕೆಗಳ ಹಿತಾಸಕ್ತಿಯನ್ನು ರಕ್ಷಿಸುವ ಬದಲು ಅಮೆರಿಕದ ಟ್ರಂಪ್ ಆಡಳಿತದ ಮುಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಶರಣಾಗಿದೆ ಎಂದು ಆರೋಪಿಸಿವೆ.

ತಿರುಪ್ಪೂರು ನಿಟ್‌ವೇರ್ ಉದ್ಯಮಕ್ಕೆ ಬಿಗಿತ

ಭಾರತದ ನಿಟ್‌ವೇರ್ ರಾಜಧಾನಿ ತಿರುಪ್ಪೂರು ದೇಶದ ಒಟ್ಟು ಕಾಟನ್ ನಿಟ್‌ವೇರ್ ರಫ್ತುಗಳಲ್ಲಿ ಶೇ.68ರಷ್ಟು ಪಾಲು ಹೊಂದಿದೆ. ಅಮೆರಿಕದ ಹೆಚ್ಚುವರಿ ಸುಂಕಗಳಿಂದ ಕಾರ್ಮಿಕರ ಸಂಕಷ್ಟ ಮತ್ತಷ್ಟು ತೀವ್ರಗೊಂಡಿದೆ. ಸುಮಾರು 6 ಲಕ್ಷ ಕಾರ್ಮಿಕರನ್ನು ಉದ್ಯೋಗಕ್ಕೆ ಹೊಂದಿರುವ ಈ ನಗರದಲ್ಲಿ ಸಾವಿರಾರು ಜನ ಉದ್ಯೋಗ ಕಳೆದುಕೊಂಡಿದ್ದು, ಹಲವರು ಮತ್ತೆ ಕೆಲಸಕ್ಕೆ ಮರಳುವ ಅನಿಶ್ಚಿತತೆಯಲ್ಲಿದ್ದಾರೆ.

ತಿರುಪ್ಪೂರು ರಫ್ತುಗಾರರ ಸಂಘದ (TEA) ಪ್ರಕಾರ, ಸುಮಾರು ₹15,000 ಕೋಟಿ ಮೌಲ್ಯದ ದೃಢೀಕೃತ ಆರ್ಡರ್‌ಗಳು ಹೊಸ ತೆರಿಗೆ ವ್ಯವಸ್ಥೆಯಿಂದ ರದ್ದಾಗಿವೆ. ಶೇ.90ರಷ್ಟು ಕಂಪನಿಗಳು MSME ವಲಯಕ್ಕೆ ಸೇರಿದ್ದು, ತಿಂಗಳ ಆರ್ಡರ್‌ಗಳ ಮೇಲೆ ಅವಲಂಬಿತವಾಗಿವೆ. 2,500 ದೊಡ್ಡ ಕಂಪನಿಗಳಲ್ಲಿ ಶೇ.20ರಷ್ಟು ಕಂಪನಿಗಳು ನೋಟು ಅಮಾನ್ಯೀಕರಣ, ಅಸಂಯೋಜಿತ ಜಿಎಸ್‌ಟಿ ಜಾರಿ ಹಾಗೂ ಕೋವಿಡ್ ಲಾಕ್‌ಡೌನ್ ಪರಿಣಾಮವಾಗಿ ಕಳೆದ ಕೆಲ ವರ್ಷಗಳಲ್ಲಿ ಬಂದ್ ಆಗಿವೆ.

ಕೊಯಮತ್ತೂರು ಮತ್ತು ಈರೋಡ್ ಜಿಲ್ಲೆಗಳ ಸ್ಪಿನ್ನಿಂಗ್ ಮಿಲ್‌ಗಳು ಬಹುತೇಕ ನಿಶ್ಶಬ್ದ ಸ್ಥಿತಿಗೆ ತಲುಪಿವೆ. ಈ ಉದ್ಯಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳಾ ಕಾರ್ಮಿಕರು ಅತ್ಯಧಿಕವಾಗಿ ಬಾಧಿತರಾಗಿದ್ದಾರೆ.

ಆಟೋಮೊಬೈಲ್, ಸ್ಪೇರ್ ಪಾರ್ಟ್ಸ್ ಮತ್ತು ಚರ್ಮ ಉದ್ಯಮ ಸಂಕಷ್ಟದಲ್ಲಿ

ಚೆನ್ನೈ ಮತ್ತು ಕಾಂಚೀಪುರಂ ದೇಶದ ಪ್ರಮುಖ ಆಟೋಮೊಬೈಲ್ ಕೇಂದ್ರಗಳಾಗಿದ್ದು, ವೆಲ್ಲೂರು, ತಿರುಪಟ್ಟೂರು ಹಾಗೂ ದಿಂಡಿಗಲ್ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದ ಚರ್ಮ ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿಂದ ಉತ್ಪಾದನೆಯಾಗುವ ವಾಹನಗಳು ಮತ್ತು ಸ್ಪೇರ್ ಪಾರ್ಟ್ಸ್ ಜಾಗತಿಕ ಮಾರುಕಟ್ಟೆಗೆ ರಫ್ತು ಆಗುತ್ತವೆ.

ಅಮೆರಿಕದ ಹೆಚ್ಚುವರಿ ಕಸ್ಟಮ್ಸ್ ಸುಂಕದಿಂದ ಚೆನ್ನೈ ಹಾಗೂ ಸುತ್ತಮುತ್ತಲ ಕಂಪನಿಗಳೊಂದಿಗೆ ಅಮೆರಿಕದ ಸಂಸ್ಥೆಗಳು ವ್ಯವಹರಿಸಲು ಹಿಂದೇಟು ಹಾಕುತ್ತಿವೆ. ಇದರ ಪರಿಣಾಮವಾಗಿ ಅಮೆರಿಕಕ್ಕೆ ನಡೆಯುತ್ತಿದ್ದ ರಫ್ತು ಸ್ಥಗಿತಗೊಂಡಿದೆ ಎಂದು ಆಟೋಮೊಟಿವ್ ಕಾಂಪೋನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ACMA) ತಿಳಿಸಿದೆ.

ತಮಿಳುನಾಡು ದೇಶದ ಶೇ.60ರಷ್ಟು ಚರ್ಮ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದು, ಈ ವಲಯದಲ್ಲಿ ಸುಮಾರು 2 ಲಕ್ಷ ಕಾರ್ಮಿಕರು ಉದ್ಯೋಗದಲ್ಲಿದ್ದಾರೆ. ಅವರಲ್ಲಿ ಶೇ.80ರಷ್ಟು ಮಹಿಳೆಯರಾಗಿದ್ದು, ಬಹುಪಾಲು ಅಲ್ಪಸಂಖ್ಯಾತ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸೇರಿದ್ದಾರೆ. ಟ್ರಂಪ್ ಆಡಳಿತದ ತೆರಿಗೆ ನೀತಿಗಳು ಉತ್ಪಾದಕರಿಗೂ ಕಾರ್ಮಿಕರಿಗೂ ಸಮಾನ ಹೊಡೆತ ನೀಡಿವೆ.

ಪಂಪ್ ಮತ್ತು ಸಾಂಪ್ರದಾಯಿಕ ಉದ್ಯಮಗಳಿಗೆ ಹಿನ್ನಡೆ

‘ಪಂಪ್ ಸಿಟಿ’ ಎಂದೇ ಖ್ಯಾತಿ ಪಡೆದಿರುವ ಕೊಯಮತ್ತೂರಿನಲ್ಲಿ ಪಂಪ್ ಮತ್ತು ವಾಲ್ವ್ ತಯಾರಿಸುವ ಸುಮಾರು 800 ಕಂಪನಿಗಳಿದ್ದು, ಕನಿಷ್ಠ 800 ಕಂಪನಿಗಳು ಅಮೆರಿಕಕ್ಕೆ ರಫ್ತು ಮಾಡುತ್ತಿವೆ. ಈ ವಲಯದಲ್ಲಿ ಸುಮಾರು 3 ಲಕ್ಷ ಜನರು ಉದ್ಯೋಗದಲ್ಲಿದ್ದಾರೆ.

ಕೊಯಮತ್ತೂರು ಕಂಪ್ರೆಸರ್ಸ್ ಇಂಡಸ್ಟ್ರೀಸ್ ಅಸೋಸಿಯೇಷನ್ ಪ್ರಕಾರ, 2008ರ ಆರ್ಥಿಕ ಮಂದಿಯ ನಂತರ ಈ ತೆರಿಗೆ ವಿಧಿಸುವಿಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಇತ್ತೀಚೆಗೆ ಸಂಸತ್ತಿನ ಸ್ಥಾಯಿ ಸಮಿತಿ ಭೇಟಿ ವೇಳೆ ಮನವಿ ಸಲ್ಲಿಸಿದ್ದರೂ, ಬಿಜೆಪಿ ನೇತೃತ್ವದ ಸರ್ಕಾರ ಕೈಗಾರಿಕೆ ಹಾಗೂ ಕಾರ್ಮಿಕರ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಕಾರೂರು, ಈರೋಡ್ ಮತ್ತು ಸೇಲಂ ಜಿಲ್ಲೆಗಳಲ್ಲಿ ಗೃಹೋಪಯೋಗಿ ವಸ್ತ್ರ ನೆಯುವ ಉದ್ಯಮದಿಂದ ಸುಮಾರು ₹9,000 ಕೋಟಿ ಆದಾಯ ಸಿಗುತ್ತದೆ. ಆದರೆ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದ ಮಿಲ್‌ಗಳು ಈಗ ವಾರಕ್ಕೆ ಕೇವಲ ಮೂರು ದಿನಗಳಷ್ಟೇ ಕಾರ್ಯನಿರ್ವಹಿಸುತ್ತಿವೆ. ಅಮೆರಿಕ ಮಾರುಕಟ್ಟೆಯಲ್ಲಿ ರೇಷ್ಮೆ ಸೀರೆಗಳ ಬೆಲೆ ಶೇ.50ಕ್ಕಿಂತ ಹೆಚ್ಚು ಏರಿಕೆಯಾಗಿ, ದೇಶೀಯ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ.

ಬಂದರುಗಳಲ್ಲಿ ಸಿಲುಕಿದ ಸರಕುಗಳು

ಹೆಚ್ಚಿದ ತೆರಿಗೆ ಮತ್ತು ಡಿಮರೇಜ್ ಶುಲ್ಕಗಳ ಕಾರಣದಿಂದ ಚೆನ್ನೈ ಹಾಗೂ ತೂತುಕೂಡಿ ಅಂತರಾಷ್ಟ್ರೀಯ ಬಂದರುಗಳಲ್ಲಿ ಕಂಟೈನರ್‌ಗಳು ರಾಶಿ ರಾಶಿಯಾಗಿ ನಿಂತಿವೆ. ಸಂಸ್ಕರಿಸಿದ ಮೀನು, ಮಾಂಸ ಮತ್ತು ಚರ್ಮ ಉತ್ಪನ್ನಗಳು ಬಂದರುಗಳಲ್ಲಿ ಸಿಲುಕಿದ್ದು, ರಫ್ತುಗಾರರು ಹಾಗೂ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಅಮೆರಿಕದ ತೀವ್ರ ಸುಂಕ ನೀತಿಗಳು ವಲಸೆ ಕಾರ್ಮಿಕರಿಂದ ಹಿಡಿದು ನಿಪುಣ ಕಾರ್ಮಿಕರ ತನಕ ಸಮಾಜದ ವಿವಿಧ ವರ್ಗಗಳ ಮೇಲೆ ಪರಿಣಾಮ ಬೀರುತ್ತಿದ್ದು, ಲಕ್ಷಾಂತರ ಜನರು ಈ ತೆರಿಗೆ ಯುದ್ಧ ಮತ್ತು ಬಿಜೆಪಿ ಸರ್ಕಾರದ ಮೌನದಿಂದ ಸಂಕಷ್ಟಕ್ಕೀಡಾಗಿದ್ದಾರೆ.

ಸಿಪಿಐ(ಎಂ) ತಮಿಳುನಾಡು ರಾಜ್ಯ ಕಾರ್ಯದರ್ಶಿ ಪಿ. ಶಣ್ಮುಗಂ, ತಮಿಳುನಾಡಿನಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಜನರ ಜೀವನೋಪಾಯದ ಸಮಸ್ಯೆಗಳನ್ನು ಮೋದಿ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ಚೆನ್ನೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು,
“ಅಮೆರಿಕದ ಸಾಮ್ರಾಜ್ಯವಾದಿ ನಿಲುವಿನಿಂದ ದೇಶದ ಆರ್ಥಿಕತೆಗೆ ಭಾರೀ ಹೊಡೆತ ಬೀಳಲಿದೆ. ಬಿಜೆಪಿ ಸರ್ಕಾರ ಅಮೆರಿಕದ ದೌರ್ಜನ್ಯಗಳಿಗೆ ಶರಣಾಗುವ ಬದಲು ಜನರ ಪರವಾಗಿ ನಿಂತು ಮಾತನಾಡಬೇಕು” ಎಂದು ಹೇಳಿದರು.

ಎಡಪಕ್ಷಗಳ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿ, ಟ್ರಂಪ್ ಆಡಳಿತದ ಏಕಪಕ್ಷೀಯ ಕ್ರಮಗಳಿಗೆ ಅಂತ್ಯ ಹಾಗೂ ಮೋದಿ ಸರ್ಕಾರದಿಂದ ತಕ್ಷಣದ ಹಸ್ತಕ್ಷೇಪಕ್ಕೆ ಆಗ್ರಹಿಸಿದರು.

ಇದನ್ನೂ ನೋಡಿ: ಉತ್ತರ ಪ್ರದೇಶ | ಮತದಾರರ “ಪರಿಷ್ಕರಣೆಯೋ? ಹರಣವೋ? | ಗುರುರಾಜ ದೇಸಾಯಿ| Janashakthi Media #upsir

Donate Janashakthi Media

Leave a Reply

Your email address will not be published. Required fields are marked *