ನವದೆಹಲಿ: ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್, ಹಿಂದುಳಿದ ವರ್ಗಗಳ ನಾಯಕ ವೆಲ್ಲಪಳ್ಳಿ ನಟೇಶನ್, ನಟ ಮಮ್ಮುಟಿ ಸೇರಿದಂತೆ ಒಟ್ಟು 131 ಸಾಧಕರಿಗೆ ಕೇಂದ್ರ ಸರ್ಕಾರವು ಗಣರಾಜ್ಯೋತ್ಸವದ ಮುನ್ನಾದಿನ (ಭಾನುವಾರ) ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಇದರ ಹಿಂದೆ, ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳನ್ನು ಗೆಲ್ಲುವ ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ.
ಈ ವರ್ಷದ ಪದ್ಮ ಪ್ರಶಸ್ತಿಗಳ ಪಟ್ಟಿಯಲ್ಲಿ ಕೇಂದ್ರ ಸರ್ಕಾರವು ರಾಜಕೀಯವಾಗಿ ವಿಭಿನ್ನ ಸಿದ್ಧಾಂತಗಳು, ಆಲೋಚನೆಗಳು ಮತ್ತು ಹಿನ್ನೆಲೆಗಳನ್ನು ಪ್ರತಿನಿಧಿಸುವ ವ್ಯಕ್ತಿಗಳಿಗೆ ಗೌರವ ನೀಡಿರುವುದು ಗಮನ ಸೆಳೆದಿದೆ. ಪರಸ್ಪರ ವಿರುದ್ಧ ರಾಜಕೀಯ ನಿಲುವುಗಳನ್ನು ಹೊಂದಿರುವ ನಾಯಕರು, ಸಾಮಾಜಿಕ ಹೋರಾಟಗಾರರು, ಸಾಂಸ್ಕೃತಿಕ ಕ್ಷೇತ್ರದ ಸಾಧಕರು, ಆರ್ಎಸ್ಎಸ್ ಹಿನ್ನೆಲೆಯುಳ್ಳವರನ್ನು ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿರುವುದು ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ.
ದಿ ನ್ಯೂ ಇಂಡಿಯನ್ ಎಕ್ಸಪ್ರಸ್ ವರದಿಯಂತೆ, ಕೇರಳದಿಂದ ರಾಜಕೀಯ, ಸಾಹಿತ್ಯ, ಸಾಮಾಜಿಕ ಸೇವೆ, ವೈದ್ಯಕೀಯ ಮತ್ತು ಕಲೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಹಲವಾರು ಪ್ರಮುಖ ವ್ಯಕ್ತಿಗಳು ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಶೇಷವಾಗಿ ಕೇರಳ ರಾಜ್ಯದ ಮೇಲೆ ಈ ಬಾರಿ ‘ವಿಶೇಷ ಗಮನ’ ಹರಿಸಿರುವುದು ಪ್ರಶಸ್ತಿ ಪಟ್ಟಿಯಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಇದು ಕೇರಳದ ಬೌದ್ಧಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೊಡುಗೆಗೆ ನೀಡಿದ ಗೌರವವೆಂದು ಕೇಂದ್ರ ಸರ್ಕಾರದ ವಲಯಗಳು ಹೇಳುತ್ತಿವೆ.
ಇದನ್ನೂ ಓದಿ : ಕೇರಳ | ಪಕ್ಷದ ಚೌಕಟ್ಟಿನಲ್ಲೇ ಮಾತು: ವೈಯಕ್ತಿಕ ನಿಲುವಲ್ಲ ಸಿಂಧೂರ’ ಕುರಿತು ಶಶಿ ತರೂರ್ ಹೇಳಿಕೆ
ಆದರೆ, ಕೆಲ ಪ್ರತಿಪಕ್ಷ ವಲಯಗಳು ಈ ಆಯ್ಕೆ ಪ್ರಕ್ರಿಯೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದು, ಪ್ರಶಸ್ತಿಗಳಲ್ಲಿ ರಾಜಕೀಯ ಸಮತೋಲನದ ಲೆಕ್ಕಾಚಾರವೂ ಅಡಗಿದೆ ಎಂಬ ವಾದವನ್ನು ಮುಂದಿಟ್ಟಿವೆ. ಇತ್ತ ಆಡಳಿತ ಪಕ್ಷದ ನಾಯಕರು, ಇದು “ಭಾರತದ ವೈವಿಧ್ಯಮಯ ಚಿಂತನೆಗಳಿಗೆ ನೀಡಿದ ಗೌರವ” ಎಂದು ಸಮರ್ಥಿಸಿಕೊಂಡಿದ್ದಾರೆ.
131 ಸಾಧಕರ ಪೈಕಿ, ಐವರಿಗೆ ಪದ್ಮ ವಿಭೂಷಣ, 13 ಮಂದಿಗೆ ಪದ್ಮ ಭೂಷಣ ಹಾಗೂ ಉಳಿದ 113 ಮಂದಿಗೆ ಪದ್ಮಶ್ರೀ ಪ್ರಕಟಿಸಲಾಗಿದೆ.ಶೀಘ್ರದಲ್ಲೇ ಚುನಾವಣೆ ನಡೆಯಲಿರುವ ತಮಿಳುನಾಡಿನ ಒಟ್ಟು 13 ಮಂದಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿದ್ದಾರೆ. ಪಶ್ಚಿಮ ಬಂಗಾಳದ 11 ಮಂದಿ, ಅಸ್ಸಾಂನ ಐವರು, ಪುದುಚೇರಿಯ ಒಬ್ಬರು ಹಾಗೂ ಕೇರಳದ ಎಂಟು ಸಾಧಕರಿಗೆ ಪ್ರಶಸ್ತಿ ಘೋಷಣೆಯಾಗಿದೆ. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳದ ವಿಧಾನಸಭೆಗಳಿಗೆ ಇದೇ ವರ್ಷ ಏಪ್ರಿಲ್–ಮೇ ವೇಳೆಗೆ ಚುನಾವಣೆ ನಡೆಯಲಿದೆ.
ಇದನ್ನೂ ನೋಡಿ : ಬೀದಿ ನಾಟಕ | ಫಾರ್ ಸೇಲ್ – ರಚನೆ,ನಿರ್ದೇಶನ:ಡಾ.ಟಿ ಎಚ್ ಲವಕುಮಾರ್Janashakthi Media
