ಮಾರ್ಕ್ಸ್‌ವಾದಿ ಇತಿಹಾಸಕಾರ ಕೆ.ಎನ್‌.ಪಣಿಕ್ಕರ್‌ ನಿಧನ

ತಿರುವನಂತಪುರಂ: ಪ್ರಮುಖ ಮಾರ್ಕ್ಸ್‌ವಾದಿ ಇತಿಹಾಸಕಾರ, ಚಿಂತಕ ಕೆ.ಎನ್‌. ಪಣಿಕ್ಕರ್‌ (89) ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಸೋಮವಾರ ನಿಧನರಾದರು.

ಜಾತ್ಯತೀತ ಮೌಲ್ಯಗಳ ಪ್ರತಿಪಾದಕರಾಗಿದ್ದ, ಪಣಿಕ್ಕರ್ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (JNU) ದೀರ್ಘಕಾಲ ಸೇವೆ ಸಲ್ಲಿಸಿದ್ದರು, ಅಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ, ಸಮಾಜ ವಿಜ್ಞಾನ ನಿಕಾಯದ ಡೀನ್‌ ಆಗಿ ಕಾರ್ಯನಿರ್ವಹಿಸಿದ್ದರು. ಪಣಿಕ್ಕರ್‌ ಅವರು ಕೇರಳದಲ್ಲಿನ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಯಾಗಿ, ಕೇರಳದ ಐತಿಹಾಸಿಕ ಸಂಶೋಧನಾ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಆಧುನಿಕ ಭಾರತೀಯ ಇತಿಹಾಸದ ಬರವಣಿಗೆಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ವಸಾಹತುಶಾಹಿ ಸಮಾಜ, ಸಾಮಾಜಿಕ ಚಳವಳಿಗಳು, ಸಂಸ್ಕೃತಿ, ಧರ್ಮ ಮತ್ತು ರಾಜಕೀಯದ ನಡುವಿನ ಸಂಬಂಧಗಳ ಕುರಿತು ಬೆಳಕು ಚೆಲ್ಲಿದ್ದಾರೆ.

ವಸಾಹತುಶಾಹಿ ಭಾರತದಲ್ಲಿನ ಜನಪ್ರಿಯ ಚಳವಳಿಗಳು ಮತ್ತು ನಿರ್ಲಕ್ಷಿತ ಸಮುದಾಯಗಳನ್ನು ಇವರ ಬರಹಗಳು ಕೇಂದ್ರೀಕರಿಸಿದ್ದವು.
‘ಎಗೇನ್ಸ್ಟ್‌ ಲಾರ್ಡ್‌ ಅಂಡ್‌ ಸ್ಟೇಟ್‌: ರಿಲಿಜನ್‌ ಅಂಡ್‌ ಪೆಸೆಂಟ್‌ ಅಪ್ರೈಸಿಂಗ್ಸ್‌ ಇನ್‌ ಮಲಬಾರ್‌’, ‘ಕಲ್ಚರ್‌ ಅಂಡ್‌ ಕಾನ್ಷಿಯಸ್‌ನೆಸ್‌ ಇನ್‌ ಮಾಡರ್ನ್‌ ಇಂಡಿಯಾ’, ‘ಎ ಕನ್ಸರ್ನ್ಡ್ ಇಂಡಿಯನ್ಸ್ ಗೈಡ್‌ ಟು ಕಮ್ಯುನಲಿಸಂ’ ಇವರ ಪ್ರಮುಖ ಕೃತಿಗಳಾಗಿವೆ. ಜಾತ್ಯತೀತ ವ್ಯವಸ್ಥೆಯ ರಕ್ಷಣೆ ಮತ್ತು ದಾಖಲೆ ಆಧಾರಿತ ಇತಿಹಾಸ ರಚನೆಗೆ ಅವರು ಹೆಸರುವಾಸಿಯಾಗಿದ್ದರು.

ಕೇರಳದ ಗುರುವಾಯೂರ್‌ನಲ್ಲಿ ಕೃಷ್ಣನ್‌ ನಾಯರ್‌ ಮತ್ತು ಇಚ್ಚುಟಿ ಅಮ್ಮ ದಂಪತಿಗೆ 1936ರ ಏಪ್ರಿಲ್‌ 26ರಂದು ಜನಿಸಿದ ಅವರು, ಶಾಲಾ ಶಿಕ್ಷಣವನ್ನು ಚಾವಕ್ಕಾಡ್‌ನಲ್ಲಿ, ಕಾಲೇಜು ಶಿಕ್ಷಣವನ್ನು ಪಾಲಕ್ಕಾಡಿನಲ್ಲಿ ಪೂರ್ಣಗೊಳಿಸಿದರು. ಜೈಪುರದ ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಪೂರ್ಣಗೊಳಿಸಿ ಮತ್ತು ಪಿಎಚ್‌.ಡಿ ಪದವಿ ಪಡೆದರು.

 

 

 

Donate Janashakthi Media

Leave a Reply

Your email address will not be published. Required fields are marked *