ಬಿಜೆಪಿಗೆ ಶಾಕ್: ಅಣ್ಣಾಮಲೈ ರಾಜೀನಾಮೆ ಸಾದ್ಯತೆ

ಚೆನ್ನೈ: ಕರ್ನಾಟಕದ ಮಾಜಿ ಐಪಿಎಸ್‌ ಅಧಿಕಾರಿ, ಕೆ.ಅಣ್ಣಾಮಲೈ ಹೊಸ ಪಕ್ಷ ಕಟ್ಟುತ್ತಾರೆಂಬ ಊಹಾಪೋಹದ ಜತೆಗೆ ಅಣ್ಣಾಮಲೈ ಭಾರತೀಯ ಜನತಾ ಪಕ್ಷವನ್ನು ತೊರೆಯಲಿದ್ದಾರೆಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಮೂಲಗಳ ಪ್ರಕಾರ, ಮಂಗಳವಾರ ನವದೆಹಲಿಯಲ್ಲಿ ಪಕ್ಷದ ಅಧ್ಯಕ್ಷರಾದ ನಿತೀನ್‌ ನಬೀನ್‌ ಹಾಗೂ ಇತರ ಹಿರಿಯ ಮುಖಂಡರನ್ನು ಭೇಟಿಯಾಗಿ ಅಣ್ಣಾಮಲೈ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಸದ್ಯದ ಬೆಳವಣಿಗೆಯಲ್ಲಿ ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಮುಂದೇನು ಎಂಬ ಬಗ್ಗೆ ತಮ್ಮ ಬೆಂಬಲಿಗರ ಜತೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಣ್ಣಾಮಲೈ ನಾಲ್ಕು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಆದರೆ ಇದೀಗ ಇತ್ತೀಚೆಗೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್‌ ಅವರ ಟಿವಿಕೆ ಪಕ್ಷ ಜಯಭೇರಿ ಗಳಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ಇದರ ಪರಿಣಾಮ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಮನ್ನಣೆ ಇಲ್ಲ ಎಂಬುದು ಸಾಬೀತಾಗಿದೆ. ಈ ಎಲ್ಲಾ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಅಣ್ಣಾಮಲೈ ಬಿಜೆಪಿಗೆ ಗುಡ್‌ ಬೈ ಹೇಳಲು ಮುಂದಾಗಿದ್ದಾರೆನ್ನಲಾಗುತ್ತಿದೆ.

ಎಐಎಡಿಎಂಕೆ ಜತೆಗಿನ ಮೈತ್ರಿಗೆ ಅನುಕೂಲವಾಗುವಂತೆ ಅಣ್ಣಾಮಲೈ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿದ ನಂತರ ಯಾವ ಅಸಮಾಧಾನವನ್ನು ಬಹಿರಂಗಪಡಿಸದೇ ಕಾರ್ಯಪ್ರವೃತ್ತರಾಗಿದ್ದರು. ಅಲ್ಲದೇ ಎಐಎಡಿಎಂಕೆ ಎಡಪ್ಪಾಡಿ ಪಳನಿಸ್ವಾಮಿ ಜತೆಗೆ ಉತ್ತಮ ಬಾಂಧವ್ಯ ಹೊಂದಿಲ್ಲದಿರುವುದು ಅಣ್ಣಾಮಲೈಗೆ ತಿರುಗುಬಾಣವಾಗಲು ಕಾರಣವಾಗಿತ್ತು. ಅದಕ್ಕೆ ಉದಾಹರಣೆ ಎಂಬಂತೆ 2026ರ ವಿಧಾನಸಭೆ ಚುನಾವಣೆ ವೇಳೆ ಎಐಎಡಿಎಂಕೆ ಎನ್ ಡಿಎ ಮೈತ್ರಿ ಮಾತುಕತೆಯಾದಾಗ ಅಣ್ಣಾಮಲೈಗೆ ಟಿಕೆಟ್‌ ನೀಡಬಾರದು ಎಂಬ ಷರತ್ತು ವಿಧಿಸಲಾಗಿತ್ತಂತೆ!

‘ಇತ್ತೀಚಿನ ಚುನಾವಣೆಯಲ್ಲಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಭರ್ಜರಿ ಸಾಧನೆ ತೋರಿದ ಬಳಿಕ, ತಮಿಳುನಾಡಿನಲ್ಲಿ ರಾಜಕೀಯ ಚಿತ್ರಣವೇ ಬದಲಾಗಿದೆ ಎಂದು ಅಣ್ಣಾಮಲೈ ನಂಬಿದ್ದಾರೆ. ತಮ್ಮ ಭಾಷೆ ಮಾತನಾಡುವ, ತಮ್ಮ ಆಶೋತ್ತರಗಳಿಗೆ ಹೋರಾಡುವ ರಾಜಕೀಯ ನಾಯಕರು ಬೇಕು ಎಂದು ಯುವಕರು ಬಯಸುತ್ತಾರೆ. ರಾಷ್ಟ್ರೀಯ ಪಕ್ಷಗಳಿಗೆ ಅವಕಾಶ ಕಡಿಮೆಯಾಗುತ್ತಿದೆ ಎನ್ನುವುದನ್ನು ಈ ಫಲಿತಾಂಶ ತೋರಿಸಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ.

ಹೊಸ ಪ‍ಕ್ಷ ಸ್ಥಾ‍‍ಪಿಸಲು ಅಣ್ಣಾಮಲೈ ಆತುರ ತೋರರು. ತಮ್ಮ ಬೆಂಬಲಿಗರೊಂದಿಗೆ ಮುಂದಿನ ನಡೆ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮತ್ತೊಂದು ಮೂಲ ತಿಳಿಸಿದೆ.

ಅಣ್ಣಾಮಲೈ ಹುಟ್ಟುಹಬ್ಬದ ಮೊದಲು ಕೊಯಮತ್ತೂರಿನಾದ್ಯಂತ ಅವರ ಬೆಂಬಲಿಗರು ಹಾಕಿರುವ ಬೃಹತ್ ಪೋಸ್ಟರ್‌ಗಳಿಂದ ಈ ಊಹಾಪೋಹಗಳು ಮತ್ತಷ್ಟು ಬಲಗೊಂಡಿವೆ.

ನಮ್ಮ ನಾಯಕ, ಬನ್ನಿ ಮತ್ತು ನಮ್ಮನ್ನು ಮುನ್ನಡೆಸಿ ಎಂಬ ಘೋಷಣೆಗಳನ್ನು ಹೊಂದಿರುವ ಪೋಸ್ಟರ್‌ಗಳು ನಗರದ ಪ್ರಮುಖ ಸ್ಥಳಗಳಲ್ಲಿ ಕಾಣಿಸಿಕೊಂಡಿವೆ. ಅಲ್ಲದೆ ಬೆಂಬಲಿಗರು ಇದನ್ನು ಶಕ್ತಿ ಪ್ರದರ್ಶನವೆಂದು ವ್ಯಾಪಕವಾಗಿ ವ್ಯಾಖ್ಯಾನಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತಮಿಳುನಾಡಿನಲ್ಲಿ ಬಿಜೆಪಿಯ ಪ್ರಮುಖ ಮುಖಗಳಲ್ಲಿ ಒಬ್ಬರಾದ ಅಣ್ಣಾಮಲೈ, ತಮ್ಮ ಭವಿಷ್ಯದ ಕುರಿತ ವರದಿಗಳ ಬಗ್ಗೆ ಮೌನವಾಗಿದ್ದಾರೆ. ಅವುಗಳನ್ನು ದೃಢೀಕರಿಸುವುದಾಗಲಿ ಅಥವಾ ನಿರಾಕರಿಸುವುದಾಗಲಿ ಮಾಡುತ್ತಿಲ್ಲ. ಅವರ ಇತ್ತೀಚಿನ ಹೇಳಿಕೆಗಳು ಕುತೂಹಲವನ್ನು ಹೆಚ್ಚಿಸಿವೆ.

Donate Janashakthi Media

Leave a Reply

Your email address will not be published. Required fields are marked *