ಮೋದಿಯವರ ʼಮಿತವ್ಯಯʼದ ಮಾತುಗಳ ಹಿಂದೆ ಅಪಾಯಕಾರಿ ಆರ್ಥಿಕ ಸೈರನ್ ಇದೆಯೇ?

ಸಿಕಂದರಾಬಾದ್‌ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೋದಿಯವರು, ಇಂಧನ ಉಳಿಸಿ, ಎಲೆಕ್ಟ್ರಿಕ್, ಮೇಟ್ರೋ, ಸಾರ್ವಜನಿಕ ಸಾರಿಗೆ ವಾಹನ ಬಳಸಿ. ವರ್ಕ್‌ ಫ್ರಮ್‌ ಹೋಂ ಜಾರಿಗೊಳಿಸಿ. ಆನ್‌ ಲೈನ್‌ ತರಗತಿ ನಡೆಸಿ, ಒಂದು ವರ್ಷದವರೆಗೂ ಚಿನ್ನಾಭರಣ ಖರೀದಿಸಬೇಡಿ, ರೈತರು ಹೆಚ್ಚು ರಸಗೊಬ್ಬರ ಬಳಸಬೇಡಿ ಎಂದು ದೇಶದ ಜನತೆಗೆ ಕರೆ ನೀಡಿದರು. ಮೋದಿಯವರ ಈ ಮಾತುಗಳ ಹಿಂದೆ ಅಪಾಯಕಾರಿ ಆರ್ಥಿಕ ಸೈರನ್‌ ಇದೆಯೇ? ಜನತೆ ಅದರಲ್ಲೂ, ಈಗಾಗಲೇ ಕೊಳ್ಳುವ ಶಕ್ತಿ ಕಡಿಮೆ ಇರುವ ದುಡಿಯುವ ವರ್ಗ ಮತ್ತಷ್ಟು ಸಂಕಷ್ಟಗಳಿಗೆ ಸಿಲುಕುವ ಸೂಚನೆ ಇದಾಗಿದೆಯೇ? ದೇಶದ ಆರ್ಥಿಕ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆಯೇ? ಜನರಲ್ಲಿ ಆತ್ಮವಿಶ್ವಾಸ ತುಂಬುವ, ಜನರಿಗೆ ಧೈರ್ಯ ತುಂಬುವ ಬದಲು ಪ್ರಧಾನಿಯವರೇ ಅನಗತ್ಯ ಭಯ ಸೃಷ್ಟಿಸುವುದು ಎಷ್ಟು ಸರಿ?

– ಸಿ. ಸಿದ್ದಯ್ಯ

2026ರ ಮೇ 10 ರಂದು ತೆಲಂಗಾಣ ರಾಜ್ಯದ ಸಿಕಂದರಾಬಾದ್‌ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ತಪ್ಪಿಸಲು ಮತ್ತು ವಿದೇಶಿ ವಿನಿಮಯ ರಕ್ಷಣೆಗಾಗಿ, ಮಿತವ್ಯಯದ ಬಗ್ಗೆ ದೇಶದ ಜನತೆಗೆ ಸಲಹೆ ನೀಡಿದರು. ಯುದ್ದದ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್, ಅನಿಲ ಮತ್ತು ರಸಗೊಬ್ಬರಗಳ ಕೊರತೆ ಉಂಟಾಗುತ್ತದೆ ಎಂದು ಹೇಳಿದರು.

“ಪೆಟ್ರೋಲ್, ಡೀಸೆಲ್ ವಾಹನ ಹೆಚ್ಚು ಬಳಸಬೇಡಿ, ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡಿ. ಜನರು ತಮ್ಮ ಸ್ವಂತ ವಾಹನಗಳ ಬದಲಿಗೆ ಮೆಟ್ರೋ ರೈಲು ಮತ್ತು ಬಸ್‌ ಗಳಂತಹ ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು. ರೈತರು ಹೆಚ್ಚು ರಸಗೊಬ್ಬರ ಬಳಸಬೇಡಿ, ನೈಸರ್ಗಿಕ ಕೃಷಿಗೆ ಒತ್ತು ನೀಡಿ ಭೂಮಿ ಫಲವತ್ತಾಗಿರುತ್ತದೆ. ವಿದೇಶಿ ವಸ್ತುಗಳನ್ನು ಖರೀದಿಸಬೇಡಿ, ಒಂದು ವರ್ಷದವರೆಗೂ ಚಿನ್ನಾಭರಣ ಖರೀದಿ ಮಾಡಬೇಡಿ, ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿದರೆ ದೇಹಕ್ಕೆ ಒಳ್ಳೆಯದು, ವಿದೇಶಿ ಪ್ರವಾಸಕ್ಕೆ ಕಡಿವಾಣ ಹಾಕಿ” ಹೀಗೆ… ಮೋದಿಯವರು ಜನರಿಗೆ ಮಿತವ್ಯಯದ ಸೂತ್ರಗಳನ್ನು ಉಪದೇಶಿಸಿದರು.

ಇದನ್ನೂ ಓದಿ: ಡೊನೆಷನ್ ಸುಲಿಗೆ, ಅನಧಿಕೃತ ಕಾಲೇಜ್‌ಗಳ ಮೇಲೆ ಕ್ರಮಕ್ಕೆ ಆಗ್ರಹ; ಎಸ್‌ಎಫ್‌ಐ ಮನವಿ

ಜನರು ಜಾಗೃತಿ ವಹಿಸಿ, ಸ್ವಯಂ ಶಿಸ್ತನ್ನು ಪ್ರದರ್ಶಿಸುವ ಮೂಲಕ ಪ್ರಸ್ತುತ ಬಿಕ್ಕಟ್ಟುಗಳಿಂದ ಹೊರಬರಲು ಸಲಹೆ ನೀಡಿದರು. ಒಟ್ಟಿನಲ್ಲಿ ಕೋವಿಡ್‌ ಕಾಲದ ಮಿತವ್ಯಯಕ್ಕೆ ಆದ್ಯತೆ ನೀಡಬೇಕು ಎಂದಿದ್ದಾರೆ. ಮೋದಿಯವರ ಈ ಮಾತುಗಳ ಹಿಂದೆ ಅಪಾಯಕಾರಿ ಆರ್ಥಿಕ ಸೈರನ್ ಇದೆಯೇ? ಅದಕ್ಕಾಗಿಯೇ ಈ ಹಿತವಚನವನ್ನು ಆಡಿದ್ದಾರೆಯೇ? ಇಂತಹ ಅನುಮಾನ ಹುಟ್ಟುತ್ತದೆ.

ಸಮರ್ಥನೆಗೆ ಮುಂದಾದ ಸಂಘಪರಿವಾರದ ಪಡೆ

ಇದರ ನಡುವೆ, ಮೋದಿಯವರು ಜನತೆಗೆ ನೀಡಿದ ಮಿತವ್ಯಯದ ಹಿತವಚನಗಳನ್ನು ಸಮರ್ಥಿಸಲು ಸಂಘಪರಿವಾರ ಟೊಂಕ ಕಟ್ಟಿ ನಿಂತಿದೆ. ಆಳುವ ವರ್ಗದ ಹಿಡಿತದಲ್ಲಿರುವ ಮಾದ್ಯಮಗಳು, ಸಂಘಪರಿವಾರದ ಬುದ್ದಿಜೀವಿಗಳು, ಲೇಖಕರು, ಬಿಜೆಪಿ ನಾಯಕರು ಮುಖ್ಯ ಮಾದ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲೇಖನಗಳ ಮೂಲಕ, ಮಾಧ್ಯಮಗಳಲ್ಲಿ ಚರ್ಚೆಗಳ ಮೂಲಕ ವ್ಯಾಪಕವಾಗಿ ಪ್ರಚಾರ ನಡೆಸುವ ಮೂಲಕ, ಜನಾಭಿಪ್ರಾಯ ಅದರ ಪರವಾಗಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.

2014ರ ಚುನಾವಣೆ ಸಂದರ್ಭದಲ್ಲಿ, ನೋಟು ರದ್ಧತಿ ಸಮಯದಲ್ಲಿ, ಜಿಎಸ್‌ ಟಿ ಜಾರಿ ಸಂದರ್ಭದಲ್ಲಿ, ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದುಗೊಳಿಸಿದ ಸಂದರ್ಭದಲ್ಲಿ ಈ ಪಡೆ ಏನೆಲ್ಲಾ ಕಟ್ಟು ಕತೆ ಕಟ್ಟಿ ಜನರನ್ನು ದಿಕ್ಕು ತಪ್ಪಿಸಿತ್ತು ಎಂಬುದನ್ನು ನೆನಪಿಸಿಕೊಳ್ಳುವುದು ಅಗತ್ಯವಾಗಿದೆ.

ನಿನ್ನೆಯವರೆಗೂ “ವಿಕಸಿತ ಭಾರತ”, ಇಂದು ಇದ್ದಕ್ಕಿದ್ದಂತೆ ಬಿಕ್ಕಟ್ಟಿನ ಮಾತುಗಳು!!

“ವಿಕಸಿತ ಭಾರತ” ಎನ್ನುತ್ತ ದೇಶದ ಆಭಿವೃದ್ಧಿಯ ಬಗ್ಗೆ ನಿನ್ನೆಯವರೆಗೂ ತುಂಬಾ ಹೆಮ್ಮೆಯಿಂದ ಮಾತನಾಡುತ್ತಿದ್ದ ಪ್ರಧಾನಿ ಮೋದಿಯವರು, ಈಗ ಇದ್ದಕ್ಕಿದ್ದಂತೆ ದೇಶ ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಮಾತನಾಡಲು ತೊಡಗಿದ್ದಾರೆ. ದೇಶವು ತುಂಬಾ ಕಿಷ್ಟ ಪರಿಸ್ಥಿತಿಯಲ್ಲಿದೆ, ಗಂಭೀರ ಬಿಕ್ಕಟ್ಟಿನಲ್ಲಿ ಮುಳುಗುತ್ತಿದೆ ಎಂಬ ಸೂಚನೆಯನ್ನು ಪ್ರಧಾನಿಯವರು ಕೊಟ್ಟಿದ್ದಾರೆ. ಜನರು ತಮ್ಮ ದೇಶಭಕ್ತಿಯನ್ನು ನಿರೂಪಿಸುವ ಸಮಯ

ಹತ್ತಿರದಲ್ಲಿದೆ ಎಂದಿದ್ದಾರೆ. ಕಳೆದ ಹನ್ನೆರಡು ವರ್ಷಗಳಿಂದ ಅಧಿಕಾರದಲ್ಲಿರುವ ಮೋದಿ, ಯುದ್ಧಗಳನ್ನು, ಅಂತರರಾಷ್ಟ್ರೀಯ ಸನ್ನಿವೇಶಗಳನ್ನು ಪ್ರಸ್ತಾಪಿಸುವ ಮೂಲಕ, ದೇಶದ ಆರ್ಥಿಕ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಅವರು ಇದನ್ನು ದೇಶದ ಜನರ ಮೇಲೆ ಹೊರಿಸುತ್ತ, ಸರ್ಕಾರವು ಮಾಡಲು ಹೆಚ್ಚಿನದೇನೂ ಇಲ್ಲ ಎಂಬ ಸೂಚನೆ ನೀಡಿದರು. ಜನರಲ್ಲಿ ಆತ್ಮವಿಶ್ವಾಸ ತುಂಬುವ ಮತ್ತು ಅವರಿಗೆ ಧೈರ್ಯ ತುಂಬುವ ಬದಲು ಅನಗತ್ಯ ಭಯ ಸೃಷ್ಟಿಸಿದರು.

ಯಾರಿಗೆ ಮಿತವ್ಯಯದ ಬೋಧನೆ?

ದುಂದುವೆಚ್ಚ ಕಡಿಮೆ ಮಾಡಿಕೊಳ್ಳಬೇಕು ಎಂಬ ಬೋಧನೆ ಯಾರಿಗೆ ಅನ್ವಯಿಸುತ್ತದೆ? ಉಳ್ಳವರಿಗೊ? ಅಥವಾ ಬಡವರಿಗೊ? ಭಾರತದಲ್ಲಿ ದಿನಕ್ಕೆ ಎರಡು ಹೊತ್ತು ಊಟಕ್ಕೂ ಗತಿಯಿಲ್ಲದ ಕೋಟ್ಯಾಂತರ ಜನರಿದ್ದಾರೆ. ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರಿಗೆ ಒಂದಷ್ಟು ಆಸರೆಯಾಗಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯನ್ನು ರದುಗೊಳಿಸಿ, ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ʻವಿಬಿ- ಗ್ರಾಮ್‌ ಜಿʼ ಎಂಬ ಕಾಯಿದೆಯನ್ನು ಮೋದಿ ಸರ್ಕಾರ ತಂದಿದೆ. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರ ಕನಿಷ್ಟ ವೇತನ ತೀರಾ ನಿಕೃಷ್ಟವಾಗಿದೆ.

ಕೋಟ್ಯಾಂತರ ಕಾರ್ಮಿಕರು ಕೆಲಸದ ಭದ್ರತೆಯೂ ಇಲ್ಲದೆ ಸದಾ ಆತಂಕದಿಂದ ಬದುಕು ಸಾಗಿಸುತ್ತಿದ್ದಾರೆ. ತಮಗೆ ಸಿಗುವ ವೇತನದಲ್ಲಿ ಬದುಕು ಸಾಗಿಸಲು ಕಾರ್ಮಿಕರು ಕಷ್ಟಪಡುತ್ತಿದ್ದಾರೆ. ಕನಿಷ್ಟ ವೇತನ ಹೆಚ್ಚಳ ಸೇರಿದಂತೆ ಇತರೆ ಕಾರ್ಮಿಕ ಹಕ್ಕುಗಳಿಗಾಗಿ ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಅಸಂಘಟಿತ ಕಾರ್ಮಿಕರು ಹೋರಾಟ ನಡೆಸುತ್ತಿದ್ದಾರೆ. ಇವರ ಬೇಡಿಕೆಗಳನ್ನು ಆಲಿಸುವ ಬದಲು ಅಲ್ಲಿನ ಸರ್ಕಾರಗಳು ಅವರ ಹೋರಾಟಗಳನ್ನೇ ಭೀಕರವಾಗಿ ಹತ್ತಿಕ್ಕುತ್ತಿವೆ.

ಸರ್ಕಾರದ ಸ್ಕೀಂ ನೌಕರರು ವೇತನ ಹೆಚ್ಚಳ ಮತ್ತು ಇತರೆ ಸೌಲಭ್ಯಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಗಿಗ್‌ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರ ಪರಿಸ್ಥಿತಿಯನ್ನಂತೂ ಹೇಳುವುದೇ ಬೇಡ. ಇಂತಹ ಜನರಿಗೆ ಅನಗತ್ಯ ವೆಚ್ಚ ಇರಲು ಹೇಗೆ ಸಾಧ್ಯ? ಅವರು ದುಂದುವೆಚ್ಚ ಮಾಡಲಾದೀತೆ? ಮೋದಿಯವರು ಉಳ್ಳವರಿಗೆ ಹಿತವಸಚನ ಬೋಧಿಸಿದರೆ ವಿನಃ, ಜನಸಾಮಾನ್ಯರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ಇಂದು ಮಾತನ್ನೂ ಹೇಳಲಿಲ್ಲ.

ಮರುದಿನವೇ ಅದ್ದೂರಿ ರೋಡ್‌ ಶೋ

ಬಹಿರಂಗ ಸಭೆಯಲ್ಲಿ ಜನತೆಗೆ ಮಿತವ್ಯಯದ ಹಿತವಚನ ಭೋದಿಸಿದ ಮರು ದಿನವೇ ಗುಜರಾತಿನ ಸೋಮನಾಥಪುರದಲ್ಲಿ ಮೋದಿ ಭರ್ಜರಿ ರೋಡ್‌ ಶೋ ಹಮ್ಮಿಕೊಂಡಿದ್ದರು. ಅದಾಗಿ ಕೆಲವೇ ಹೊತ್ತಿನಲ್ಲಿ ಮೋದಿ ಗುಜರಾತಿನ ಜಾಮ್‌ ನಗರದಲ್ಲಿ ರೇಂಜ್‌ ರೋವರ್‌ ನಲ್ಲಿ ರೋಡ್‌ ಶೋ ನಡೆಸಿದರು. ಅದೂ ಅತಿಯಾಗಿ ಇಂಧನ ಬಳಸುವ ಎಸ್‌ಯುವಿಯಲ್ಲಿ. ಜತೆಗೆ ಅವರ ಹಿಂದೆ ಬೆಂಗಾವಲು ಪಡೆಗಳ ಹಲವು ವಾಹನಗಳೂ ಇದ್ದವು. ಮೇ 15ರಿಂದ ಪ್ರಧಾನಿ ಮೋದಿ 5 ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದಾರೆ.

“ಸ್ವದೇಶಿ”ಎನ್ನುವುದು ಕೇವಲ ಸಾಮಾನ್ಯ ಜನರ ತ್ಯಾಗಗಳಿಗೆ ಸೀಮಿತವೇ?

“ಸ್ವದೇಶಿ ವಸ್ತುಗಳನ್ನು ಬಳಸಿ, ಆತ್ಮನಿರ್ಬರ ಭಾರತವನ್ನು ನಿರ್ಮಿಸಿ” ಎಂದು ಯುವಜನತೆಗೆ ಕರೆ ನೀಡಿದ ಮೋದಿ, “ದೇಶೀಯ ಸಮಸ್ಯೆಗಳನ್ನು ನಿರ್ಲಕ್ಷಿಸಿ, ವಿದೇಶಗಳಿಗೆ ಐಷಾರಾಮಿ ಪ್ರವಾಸಗಳನ್ನು ಕೈಗೊಳ್ಳುವ ಮೂಲಕ ಯುವಜನತೆ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಮಧ್ಯಮ ವರ್ಗದವರಲ್ಲಿ ವಿದೇಶಿ ಪ್ರಯಾಣದ ವ್ಯಾಮೋಹ ಗಮನಾರ್ಹವಾಗಿ ಬೆಳೆದಿದೆ” ಎಂದರು.

ದೇಶೀಯ ಪ್ರವಾಸೋದ್ಯಮ ಅಭಿವೃದ್ಧಿಗೊಂಡರೆ ದೇಶದ ಆದಾಯ ಹೆಚ್ಚಾಗುತ್ತದೆಂದು ಭವಿಷ್ಯ ನುಡಿದ ಅವರ ವಿದೇಶಿ ಪ್ರವಾಸಗಳ ವೆಚ್ಚವನ್ನು ನೋಡುತ್ತಿದ್ದರೆ, “ಸ್ವದೇಶಿ” ಎನ್ನುವುದು ಕೇವಲ ಸಾಮಾನ್ಯ ಜನರ ತ್ಯಾಗಗಳಿಗೆ ಸೀಮಿತವಾದ ಮಂತ್ರವಾಗಿ “ವಿದೇಶಿ” ಎಂಬುದು ಆಳುವವರ ಐಷಾರಾಮಿಯಾಗಿ ಮಾರ್ಪಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ನಿಜವಾದ ಸ್ವದೇಶಿ ವಾದ ಎಂದರೆ, ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವಂತೆ ಜನರಿಗೆ ಹೇಳುವುದಲ್ಲ, ದೇಶೀಯ ಸಂಪನ್ಮೂಲಗಳನ್ನು ವಿದೇಶಿ ಹಣಕಾಸು ಬಂಡವಾಳಕ್ಕೆ ಮಾರಾಟ ಮಾಡದಂತೆ ಕಾಪಾಡುವುದಾಗಿದೆ. ಆ ದಿಕ್ಕಿನಲ್ಲಿ ನಮ್ಮ ಆಡಳಿತಗಾರರು ಕ್ರಮ ಕೈಗೊಳ್ಳುತ್ತಾರೆಯೇ?

ತಮ್ಮ ವೈಫಲ್ಯವನ್ನು ಜನರ ಮೇಲೆ ಹೇರಿಕೆ

ದೇಶದಲ್ಲಿ ಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್ ಮತ್ತು ಅನಿಲದ ಬೆಲೆಗಳು ಸಾಮಾನ್ಯ ಜನರ ಬೆನ್ನು ಮುರಿಯುತ್ತಿದ್ದರೆ, ಅವುಗಳನ್ನು ನಿಯಂತ್ರಿಸಬೇಕಾದ ಪ್ರಧಾನಿ, ಅಂತರರಾಷ್ಟ್ರೀಯ ಯುದ್ಧದ ಪರಿಸ್ಥಿತಿಗಳನ್ನು ಒಂದು ನೆಪ ಮಾಡಿಕೊಂಡು ಮಾತನಾಡುವುದು ಅವರ ಬೇಜವಾಬ್ದಾರಿತನಕ್ಕೆ ನಿದರ್ಶನವಾಗಿದೆ. ಯುದ್ದ ಎನ್ನುವುದು ಜಾಗತಿಕ ಸಮಸ್ಯೆಯಾಗಿದೆ. ಆದರೂ, ಭಾರತದಲ್ಲಿ ಬೆಲೆಗಳು ವೇಗವಾಗಿ ಏರಿಕೆಯಾಗಲು ಕಾರಣ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ನೀತಿಗಳು. ಆದರೆ, ಯುದ್ಧದ ಹೆಸರನ್ನು ಉಲ್ಲೇಖಿಸುವ ಮೂಲಕ ತಮ್ಮ ವೈಫಲ್ಯವನ್ನು ಜನತೆಯ ಮೇಲೆ ಹೇರಲಾಗುತ್ತಿದೆ.

ಸರ್ಕಾರವು ಈಗಲಾದರೂ ಕಾರ್ಪೊರೇಟ್ ಲಾಭಗಳಿಗಾಗಿ ಕೆಲಸ ಮಾಡುವುದನ್ನು ಬಿಟ್ಟು, ಸಾಮಾನ್ಯ ಜನರ ಜೀವನ ಮಟ್ಟ ಹೆಚ್ಚಿಸುವ ಕೆಲಸ ಮಾಡಬೇಕು. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿ, ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸುವಲ್ಲಿ ಪ್ರಾಮಾಣಿಕತೆಯನ್ನು ತೋರಿಸಬೇಕು. ಯುದ್ಧದ ಹೆಸರಿನಲ್ಲಿ ಸಾಮಾನ್ಯ ಜನರ ಹಸಿವನ್ನು ನಿರ್ಲಕ್ಷಿಸುವುದು ಪ್ರಜಾಪ್ರಭುತ್ವ ಸರ್ಕಾರದ ಲಕ್ಷಣವಲ್ಲ.

47 ಟನ್ ಚಿನ್ನವನ್ನು ಠೇವಣಿ ಇಡಬೇಕಾದಾಗಲೂ ಈ ರೀತಿ ಕರೆ ನೀಡಲಿಲ್ಲ

ಕೊರೊನಾ ದಿನಗಳ ಬಿಕ್ಕಟ್ಟನ್ನು ನೆನಪಿಸಿಕೊಂಡ ಪ್ರಧಾನಿ, ಮತ್ತೆ ಆ ಕಾಲದ ವಿಧಾನಗಳನ್ನು ಅನುಸರಿಸುವ ಪರಿಸ್ಥಿತಿಗಳು ಬಂದಿವೆ ಎಂದು ಘೋಷಿಸಿದರು. ದೇಶವು ಯುದ್ಧದಲ್ಲಿ ನಿರತರಾಗಿರುವ ಸಮಯಗಳನ್ನು ಹೊರತುಪಡಿಸಿ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವುದೇ ಪ್ರಧಾನಿಯೂ ಈ ರೀತಿ ಬಹಿರಂಗ ಸಭೆಗಳಲ್ಲಿ ದೇಶದ ಆರ್ಥಿಕ ಬಿಕ್ಕಟ್ಟನ್ನು ಪ್ರಸ್ತಾಪಿಸಿ, ಪರಿಹಾರದ ಜವಾಬ್ದಾರಿಯನ್ನು ಜನರ ಮೇಲೆ ಹೇರಲಾಗಿಲ್ಲ.

ಬಹುಶಃ ಇದೇ ಮೊಟ್ಟಮೊದಲ ಬಾರಿಗೆ ಇದು ನಡೆದಿರುವುದು ಅತ್ಯಂತ ದುರದೃಷ್ಟಕರ ಘಟನೆಯಾಗಿದೆ. ಸಂಕೀರ್ಣ ಸಂದರ್ಭದಲ್ಲಿ, 1989 ರಲ್ಲಿ ವಿದೇಶಿ ವಿನಿಮಯ ಮೀಸಲು ಖಾಲಿಯಾಗಿ, 47 ಟನ್ ಚಿನ್ನವನ್ನು ಠೇವಣಿ ಇಡಬೇಕಾದಾಗಲೂ, ಅಂದಿನ ಪ್ರಧಾನಿ ಚಂದ್ರಶೇಖರ್ ಅವರು ಮೋದಿಯಂತೆ ಜನತೆಗೆ ಮಿತವ್ಯಯದ ಕರೆ ನೀಡಲಿಲ್ಲ.

ರಾಷ್ಟ್ರದ ಮುಖ್ಯಸ್ಥರಾಗಿ ಏನು ಮಾಡುತ್ತೇವೆ ಎಂಬುದನ್ನು ಹೇಳಿಲಿಲ್ಲ

ಆದರೆ ಮೋದಿ ಮಾತ್ರ, “ವರ್ಷದವರೆಗೂ ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮ ನಡೆದರೂ ಚಿನ್ನವನ್ನು, ಆಭರಣಗಳನ್ನು ಖರೀದಿಸಬೇಡಿ. ದೇಶಭಕ್ತಿ ನಮಗೆ ಸವಾಲು ಹಾಕುತ್ತಿದೆ. ಜನರೆಲ್ಲರೂ ಆ ಸವಾಲನ್ನು ಸ್ವೀಕರಿಸಬೇಕು” ಎಂದು ಹೊಸ ಮಾರ್ಗಸೂಚಿಗಳನ್ನು ದೇಶದ ಜನತೆಯ ಮುಂದಿಟ್ಟಿದ್ದಾರೆ. ಪ್ರಧಾನಿ ಈ ಕರೆ ನೀಡಿರುವುದು ದುರದೃಷ್ಟಕರ. ಚಿನ್ನಾಭರಣ ತಯ್ಯಾರಿಕೆ ವೃತ್ತಿಗಳನ್ನು ಅವಲಂಬಿಸಿ ಬದುಕುತ್ತಿರುವವರ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಮೋದಿ ಯೋಚಿಸಿದ್ದಾರೆಯೆ? ಈಗಾಗಲೇ ಈ ವೃತಿಯವರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮೋದಿಯವರ ಹೇಳಿಕೆಗಳು ಆಧ್ಯಾತ್ಮಿಕ ಗುರುಗಳು ಮಾಡಿದ ಹೇಳಿಕೆಗಳನ್ನು ಹೋಲುತ್ತವೆಯಷ್ಟೆ. ತಾವು ರಾಷ್ಟ್ರದ ಮುಖ್ಯಸ್ಥರಾಗಿ ಏನು ಮಾಡುತ್ತೇವೆ ಎಂಬುದನ್ನು ಮೋದಿ ಹೇಳದಿರುವುದನ್ನು ಗಮನಿಸಬೇಕು. ಪ್ರಧಾನಿಯವರ ಅಂತರಾತ್ಮವನ್ನು ಬುದ್ಧಿವಂತ ಜನರು ಈಗಲಾದರೂ ಗುರುತಿಸಬೇಕು.

ಇದನ್ನೂ ನೋಡಿ: “ತಮಿಳುನಾಡು | ವಿಜಯ್‌ ಗೆದ್ದದ್ದು ಹೇಗೆ? : ಟಿವಿಕೆ ಉದಯದ ಒಳನೋಟ” | ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *