ಕೇಂದ್ರದ ಅನುದಾನ ವಿಳಂಬದಿಂದ ರಾಜ್ಯದ ಅಭಿವೃದ್ಧಿ ಯೋಜನೆಗಳು ಅಪೂರ್ಣ : ಪ್ರಿಯಾಂಕ್ ಖರ್ಗೆ ಆರೋಪ

ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಂಡಿರುವ ಯೋಜನೆಗಳನ್ನು ಕೇಂದ್ರ ಸರ್ಕಾರವು ಸಕಾಲಕ್ಕೆ ಅನುದಾನ ಬಿಡುಗಡೆ ಮಾಡದ ಕಾರಣಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಅನುದಾನ ಬಿಡುಗಡೆ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಗ್ರಾಮ ಪಂಚಾಯಿತಿಗಳ ಪ್ರಸ್ತುತ ಅವಧಿ 2026ರ ಜನವರಿ-ಫೆಬ್ರುವರಿ ತಿಂಗಳಿನಲ್ಲಿ ಮುಕ್ತಾಯಗೊಳ್ಳಲಿದ್ದು, ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕರ್ನಾಟಕವು ಗ್ರಾಮೀಣ ವಿಕೇಂದ್ರೀಕರಣದಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿದೆ ಮತ್ತು ಪಂಚಾಯತಿ ಮಟ್ಟದ ಆಡಳಿತವನ್ನು ಉಳಿಸಿಕೊಳ್ಳಲು ಹಾಗೂ ಅವುಗಳ ಅವಧಿ ಮುಗಿಯುವ ಮೊದಲೇ ನಿರ್ಣಾಯಕ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ಸಕಾಲಕ್ಕೆ ಅನುದಾನಗಳನ್ನು ಬಿಡುಗಡೆ ಮಾಡಬೇಕು’ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸಾಮ್ರಾಜ್ಯಶಾಹಿಯ ದರೋಡೆಕೋರತನದ ಹಂತದಲ್ಲಿ ಜಗತ್ತಿನ ಯಾವ ದೇಶವೂ ಸುರಕ್ಷಿತವಾಗಿಲ್ಲ

ಕೇಂದ್ರ ಸರ್ಕಾರದಿಂದ ಬಾಕಿ ಇರುವ 15ನೇ ಹಣಕಾಸು ಆಯೋಗದ ಅನುದಾನವನ್ನು ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ತಕ್ಷಣ ಬಿಡುಗಡೆ ಮಾಡಲು ಗಮನಹರಿಸಬೇಕೆಂದು ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದಿದ್ದಾರೆ.

2025ರ ಆಗಸ್ಟ್‌ನಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆಗಳನ್ನು ಸಕಾಲಿಕವಾಗಿ ಅಪ್ಲೋಡ್ ಮಾಡಿರುವುದನ್ನು ಖಚಿತಪಡಿಸಿಕೊಂಡು, 2025ರ ಜುಲೈ 08 ಮತ್ತು ಸೆಪ್ಟೆಂಬರ್ 24ರಂದು ಅಗತ್ಯವಿರುವ ಅನುದಾನ ವರ್ಗಾವಣೆ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದರೂ ಸಹ ಕೇಂದ್ರ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿಲ್ಲ’ 2025–26ನೇ ಹಣಕಾಸು ವರ್ಷದ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಲ್ಲಿನ ನಿರಂತರ ವಿಳಂಬದ ಕುರಿತು 2025ರ ಡಿಸೆಂಬರ್ 8ರಂದು ಬರೆದ ಪತ್ರ ಬರೆಯಲಾಗಿತ್ತು ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಗ್ರಾಮಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಬಾಕಿ ಇರುವ 15ನೇ ಹಣಕಾಸು ಆಯೋಗದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡುವ ಮೂಲಕ ಗ್ರಾಮಗಳ ಸಬಲೀಕರಣಕ್ಕೆ ಸಹಕರಿಸಬೇಕು ಎಂದು ಪ್ರಿಯಾಂಕ್‌ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ನೋಡಿ : ಕೇಂದ್ರದ ಪ್ರಭಾವದ ನೆರಳಲ್ಲಿ ಕರ್ನಾಟಕದ ರಾಜಪಾಲರು? Janashakthi Media

Donate Janashakthi Media

Leave a Reply

Your email address will not be published. Required fields are marked *