ಬೆಂಗಳೂರು: ಎಂಟು ವರ್ಷಗಳ ಬಳಿಕ ರಾಜ್ಯ ಸರ್ಕಾರ ಪರಿಷ್ಕರಿಸಿರುವ ಕನಿಷ್ಠ ವೇತನದ ಆದೇಶವನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಎಐಯುಟಿಯುಸಿ ಕರ್ನಾಟಕ ರಾಜ್ಯ ಸಮಿತಿ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದೆ. ಪರಿಷ್ಕೃತ
ರಾಜ್ಯದ ವಿವಿಧ ಜಿಲ್ಲೆಗಳಿಂದ ಸರ್ಕಾರಿ ಇಲಾಖೆಗಳು, ನಿಗಮ–ಮಂಡಳಿಗಳು, ವಿಶ್ವವಿದ್ಯಾಲಯಗಳು, ವೈದ್ಯಕೀಯ ಕಾಲೇಜುಗಳು, ವಿದ್ಯುತ್ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳ ಗುತ್ತಿಗೆ, ಹೊರಗುತ್ತಿಗೆ ಹಾಗೂ ಇತರ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಯುಟಿಯುಸಿ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್, ಬೆಲೆ ಏರಿಕೆ ಮತ್ತು ಹಣದುಬ್ಬರದ ನಡುವೆ ಕಾರ್ಮಿಕ ಕುಟುಂಬಗಳು ಜೀವನ ನಿರ್ವಹಿಸುವುದು ಕಷ್ಟವಾಗಿದೆ. ಹಲವು ವರ್ಷಗಳ ವಿಳಂಬದ ಬಳಿಕ ಪರಿಷ್ಕರಿಸಲಾದ ಕನಿಷ್ಠ ವೇತನವನ್ನು ಸರ್ಕಾರ ಜಾರಿಗೊಳಿಸದೆ ತಡೆಹಿಡಿದಿರುವುದು ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನಿಷ್ಠ ವೇತನ ಪರಿಷ್ಕರಣೆಯು ವೇತನ ಸಂಹಿತೆ–2019ಕ್ಕೆ ಅನುಗುಣವಾಗಿಲ್ಲ ಎಂಬ ಕಾರಣ ಮುಂದಿಟ್ಟು ಜಾರಿ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಕೌಶಲ ಆಧಾರದ ಮೇಲೆ ಕನಿಷ್ಠ ವೇತನ ನಿಗದಿಪಡಿಸುವ ಅಂಶವನ್ನು ವೇತನ ಸಂಹಿತೆಯೇ ಪ್ರತಿಪಾದಿಸುತ್ತದೆ. ರಾಜ್ಯದಲ್ಲಿ ಇದೀಗ ಮಾಡಿರುವ ಪರಿಷ್ಕರಣೆ ಕೂಡ ಕೌಶಲ ಆಧಾರಿತವಾಗಿದ್ದು, ಕಾನೂನಿನ ಆಶಯಕ್ಕೆ ಅನುಗುಣವಾಗಿದೆ ಎಂದು ಅವರು ಹೇಳಿದರು.
ಉದ್ಯಮಪತಿಗಳ ಒತ್ತಡಕ್ಕೆ ಮಣಿದು ಸರ್ಕಾರವೇ ತನ್ನ ಆದೇಶವನ್ನು ತಡೆಹಿಡಿದಿರುವುದು ಖಂಡನೀಯ. ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವುದು ಸರ್ಕಾರ ಅಥವಾ ಮಾಲೀಕರು ಮಾಡುವ ದಯೆಯಲ್ಲ; ಅದು ಕಾರ್ಮಿಕರ ಕಾನೂನುಬದ್ಧ ಹಕ್ಕು ಎಂದು ಸೋಮಶೇಖರ್ ಹೇಳಿದರು.
ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್ ಯಾದಗಿರಿ, ಹಲವು ವರ್ಷಗಳಿಂದ ಗುತ್ತಿಗೆ ಮತ್ತು ಹೊರಗುತ್ತಿಗೆ ವ್ಯವಸ್ಥೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನವೇ ಪ್ರಮುಖ ಆಸರೆಯಾಗಿದೆ. ಪರಿಷ್ಕೃತ ವೇತನ ಜಾರಿಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಮಿಕರಿಗೆ ಸರ್ಕಾರದ ನಿರ್ಧಾರ ನಿರಾಸೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ :ಕಾರ್ಮಿಕರ ಹಕ್ಕಿಗಾಗಿ ಬೆಂಗಳೂರಿನತ್ತ ಪಯಣ: ಚಿತ್ರದುರ್ಗದಿಂದ 1,500ಕ್ಕೂ ಹೆಚ್ಚು ಮಂದಿ ವಿಧಾನಸೌಧ ಚಲೋ
ಹಿರಿಯ ಸಾಮಾಜಿಕ ಹೋರಾಟಗಾರ ಉಗ್ರನರಸಿಂಹೇಗೌಡ ಮಾತನಾಡಿ, ಕಾರ್ಮಿಕರ ಪರವಾದ ನಿರ್ಧಾರಗಳನ್ನು ಕೈಗೊಳ್ಳಬೇಕಿದ್ದ ಸರ್ಕಾರವೇ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಪರಿಷ್ಕೃತ ಕನಿಷ್ಠ ವೇತನ ಜಾರಿಗಾಗಿ ಕಾರ್ಮಿಕರು ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಹಾಗೂ ಕರ್ನಾಟಕ ಯುನೈಟೆಡ್ ಶುಗರ್ ವರ್ಕರ್ಸ್ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ಮೇಟಿ, ಸಕ್ಕರೆ ಕಾರ್ಮಿಕರ ಕನಿಷ್ಠ ವೇತನ, ಗುತ್ತಿಗೆ ಕಾರ್ಮಿಕರಿಗೆ ಗ್ರಾಚ್ಯುಟಿ ಸೇರಿದಂತೆ ಹಲವು ಬೇಡಿಕೆಗಳು ಇನ್ನೂ ಬಗೆಹರಿದಿಲ್ಲ ಎಂದು ಹೇಳಿದರು. ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ನಾಯಕರಾದ ಕೆ.ವಿ. ಭಟ್, ಎಂ. ಉಮಾದೇವಿ, ಡಿ. ನಾಗಲಕ್ಷ್ಮಿ, ಎಂ. ದೇವದಾಸ್, ವೀರೇಶ್ ಎನ್.ಎಸ್., ಮಂಜುನಾಥ್ ಕೈದಾಳ್, ಗಂಗಾಧರ ಬಡಿಗೇರ್, ಡಾ. ಪ್ರಮೋದ್ ಹಾಗೂ ಮಹೇಶ್ ಚಿಕಲಪರ್ವಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಮಾತನಾಡಿದರು. ನಾಗಲಕ್ಷ್ಮಿ, ಟಿ.ಸಿ. ರಮಾ, ಬಿಸಿಯೂಟ ಕಾರ್ಮಿಕರ ಸಂಘದ ಸಂಧ್ಯಾ ಹಾಗೂ ಕಟ್ಟಡ ಕಾರ್ಮಿಕರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಪಿ.ಎಸ್. ಷಣ್ಮುಗಂ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
‘₹17 ಸಾವಿರ ಕೋಟಿ ಹೆಚ್ಚುವರಿ ಹೊರೆ’
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಕಾರ್ಮಿಕರ ಮನವಿ ಸ್ವೀಕರಿಸಿದರು. ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಸುಮಾರು ₹17 ಸಾವಿರ ಕೋಟಿ ಹೆಚ್ಚುವರಿ ಹಣದ ಅಗತ್ಯವಿದೆ ಎಂದು ಅವರು ತಿಳಿಸಿದರು.
ಕನಿಷ್ಠ ವೇತನದ ವಿಚಾರ ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿ ರಚನೆಯಾಗಿದ್ದು, ಸಮಿತಿ ಇನ್ನೂ ಸಭೆ ನಡೆಸಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ. ಕಾರ್ಮಿಕರ ಮನವಿಯನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಮುಂದಿನ ಕ್ರಮದ ಕುರಿತು ಚರ್ಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಈ ನಡುವೆ ಪರಿಷ್ಕೃತ ಕನಿಷ್ಠ ವೇತನದ ಆದೇಶವನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಹೋರಾಟ ಮುಂದುವರಿಸಲು ಎಐಯುಟಿಯುಸಿ ನಿರ್ಧರಿಸಿದೆ. ರಾಜ್ಯದಾದ್ಯಂತ ಹೆಚ್ಚಿನ ಸಂಖ್ಯೆಯ ಗುತ್ತಿಗೆ ಕಾರ್ಮಿಕರನ್ನು ಒಂದೇ ವೇದಿಕೆಗೆ ತಂದು ಹೋರಾಟವನ್ನು ಬಲಪಡಿಸಲು ‘ಕನಿಷ್ಠ ವೇತನ ಜಾರಿ ಹೋರಾಟ ಸಮಿತಿ’ ರಚಿಸುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ.
ಫ್ರೀಡಂ ಪಾರ್ಕ್‌ನಲ್ಲಿ ಆರಂಭವಾಗಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ಸಂಘಟನೆ ತಿಳಿಸಿದೆ.
ಇದನ್ನೂ ನೋಡಿ :ಬೈಕ್–ಆಟೊ ನೋ ಎಂಟ್ರಿ | ಫ್ಲೈಓವರ್ ಯಾರಿಗಾಗಿ? ವೇಗದ ಕಾರುಗಳಿಗೆ ಮಾತ್ರವಾ?ವಿಶ್ಲೇಷಣೆ: ಗುರುರಾಜ ದೇಸಾಯಿ
