ಚಿತ್ರದುರ್ಗ: ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.8ರಂದು ಬೆಂಗಳೂರಿನಲ್ಲಿ ‘ವಿಧಾನಸೌಧ ಚಲೋ’ ಹಮ್ಮಿಕೊಳ್ಳಲಾಗಿದೆ. ಚಿತ್ರದುರ್ಗ ಜಿಲ್ಲೆಯಿಂದ 1,500ಕ್ಕೂ ಹೆಚ್ಚು ಕಾರ್ಮಿಕರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಸೈಯದ್ ಮುಜೀಬ್ ತಿಳಿಸಿದರು. ಕಾರ್ಮಿಕರ
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಮಿಕರ ಹಕ್ಕುಗಳು ಮತ್ತು ಸಾಮಾಜಿಕ ಭದ್ರತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು, ಅಧಿಸೂಚಿತ ಕನಿಷ್ಠ ವೇತನ ಜಾರಿಗೊಳಿಸಬೇಕು, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಪಿಂಚಣಿ ಹಾಗೂ ಉಚಿತ ಚಿಕಿತ್ಸೆಯ ಸೌಲಭ್ಯ ಕಲ್ಪಿಸಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ ಎಂದು ಹೇಳಿದರು. ಕಾರ್ಮಿಕರ
ಇದನ್ನೂ ಓದಿ : ಸೆ.3ರಂದು ನೈಸ್ ಭೂ ಸಂತ್ರಸ್ತ ರೈತರ ರಾಜ್ಯ ಸಮಾವೇಶ
ಸ್ಕೀಂ ನೌಕರರನ್ನು ಖಾಯಂಗೊಳಿಸುವುದು, ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ಧತಿ ರದ್ದುಪಡಿಸುವುದು ಸೇರಿದಂತೆ ಒಟ್ಟು 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲೂಕುಗಳಿಂದ 1,500ಕ್ಕೂ ಹೆಚ್ಚು ಕಾರ್ಮಿಕರು ಬೆಂಗಳೂರಿನ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕ ಎಂ.ಡಿ. ಮಲಿಯಪ್ಪ, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಫೆಡರೇಷನ್ನ ಸಿ.ಕೆ. ಗೌಸ್ಪೀರ್, ಟಿ. ತಿಪ್ಪೇಸ್ವಾಮಿ ಹಾಗೂ ಕರ್ನಾಟಕ ರಾಜ್ಯ ಬಿಸಿಯೂಟ ನೌಕರರ ಸಂಘದ ನಿಂಗಮ್ಮ ಉಪಸ್ಥಿತರಿದ್ದರು.
ಇದನ್ನೂ ನೋಡಿ : ಸಾಮೂಹಿಕ ಮತ ಕಗ್ಗೊಲೆ ನಡೆಸುತ್ತಿರುವ SIR ವಿರುದ್ಧ ಚುನಾವಣಾ ಆಯೋಗ ಚಲೋ ನೇರಪ್ರಸಾರ
